ಹುಬ್ಬಳ್ಳಿ(ಅ.22): ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕೆಐಎಡಿಬಿ ಸಹಾಯಕ ಕಾರ್ಯದರ್ಶಿ ಹರೀಶ್‌ ಹಳೆಪೇಟ್‌ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತಂಡವು ಏಕಕಾಲಕ್ಕೆ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿದೆ. ಈ ವೇಳೆ 1.60 ಕೋಟಿ ಆಸ್ತಿ ಪತ್ತೆಯಾಗಿದ್ದು ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗುತ್ತಿದೆ.

ಇಲ್ಲಿನ ಕೋಟಿಲಿಂಗನಗರದಲ್ಲಿನ ಹರೀಶ ಅವರ ನಿವಾಸ, ಮೇದಾರ ಓಣಿಯಲ್ಲಿನ ಹರೀಶ ಸ್ನೇಹಿತ ಪ್ರಮೋದ ಸವಣೂರು ವಾಸವಾಗಿರುವ ಮನೆ, ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿನ ಕೆಐಎಡಿಬಿ ಕಚೇರಿ, ಹರೀಶ ಅವರ ಅಳಿಯ ಮಹಾಂತೇಶ ತೆವರೆ ಅವರ ಬೆಂಗಳೂರಿನ ಯಲಹಂಕ ಅನಂತಪುರದಲ್ಲಿನ ಮನೆ. ಹೀಗೆ ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿತು. ಸುಮಾರು 4ಗಂಟೆಗೂ ಹೆಚ್ಚು ಕಾಲ ನಡೆದ ದಾಳಿಯಲ್ಲಿ ಹಲವು ದಾಖಲೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆಯಲಾಗಿದೆ.

ಬಳ್ಳಾರಿ: ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು

1.30 ಕೋಟಿಗೂ ಅಧಿಕ ಸ್ಥಿರಾಸ್ತಿ ಹಾಗೂ 30 ಲಕ್ಷ ಮೌಲ್ಯದ ಚರಾಸ್ತಿ ಪತ್ತೆಯಾಗಿದ್ದು, ಇದರ ಮೂಲದ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಬೆಳಗಾವಿ ಉತ್ತರ ವಲಯದ ವಿವಿಧ ಎಸಿಬಿ ತಂಡಗಳಿಂದ ಈ ದಾಳಿ ನಡೆದಿತ್ತು. ಇವರ ವಿರುದ್ಧ ಮೂಲಗಳಿಗಿಂತ ಹೆಚ್ಚಿನ ಅಸಮತೋಲ ಆಸ್ತಿ ಗಳಿಸಿದ್ದಾರೆ ಎಂಬ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ತನಿಖೆ, ದಾಖಲೆಗಳ ಪರಿಶೀಲನೆ ಇನ್ನು ಮುಂದುವರಿದಿದೆ.