ವೈದ್ಯರು ಜವಾಬ್ದಾರಿಯಿಂದ ನುಣುಚಿಕೊಳ್ಳದಿರಿ: ಸಚಿವ
ವೈದ್ಯರು ತಮ್ಮ ಶಕ್ತಿಯನ್ನು ಅರಿತು ಅದರ ಪೂರ್ಣ ಸದ್ವಿನಿಯೋಗಕ್ಕೆ ಮುಂದಾದರೆ ದೇವರ ಮಕ್ಕಳಾದ ಬಡವರ ಕಣ್ಣಿಗೆ ನೀವೇ ದೇವರಾಗುತ್ತೀರಿ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ತುಮಕೂರು : ವೈದ್ಯರು ತಮ್ಮ ಶಕ್ತಿಯನ್ನು ಅರಿತು ಅದರ ಪೂರ್ಣ ಸದ್ವಿನಿಯೋಗಕ್ಕೆ ಮುಂದಾದರೆ ದೇವರ ಮಕ್ಕಳಾದ ಬಡವರ ಕಣ್ಣಿಗೆ ನೀವೇ ದೇವರಾಗುತ್ತೀರಿ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿರುವ ಡಾ.ಎಚ್.ಎಂ.ಗಂಗಾಧರಯ್ಯ ಮೆಮೊರಿಯಲ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ 30ನೇ ರಾಜ್ಯ ಮಟ್ಟದ ಸಮ್ಮೇಳನ ಕಲ್ಪತರು ವೈದ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರಿ ವೈದ್ಯರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ರೋಗಿಗಳನ್ನು ಮೇಲ್ಮಟ್ಟದ ಆಸ್ಪತ್ರೆಗೆ ರೆಫರ್ ಮಾಡಿ, ಪೋಸ್ಟ್‌ಮನ್ ಕೆಲಸ ಮಾಡದೆ, ತಮ್ಮ ಶಕ್ತಿಯನ್ನು ಅರಿತು ಅದರ ಪೂರ್ಣ ಸದ್ವಿನಿಯೋಗಕ್ಕೆ ಮುಂದಾಗಬೇಕು. ನೀವು ನಿಮ್ಮ ಕಲಿತ ವಿದ್ಯೆಯ ಸಂಪೂರ್ಣ ಬಳಕೆಗೆ ಮುಂದಾದರೆ ನಿಮ್ಮ ಪರವಾಗಿ ಕಾನೂನು ಮಂತ್ರಿಯಾಗಿ ನಾನು ನಿಲ್ಲಲು ಸಿದ್ಧ ಎಂದು ಅಭಯ ನೀಡಿದರು.
ವೈದ್ಯರ ಕೆಲಸ ಅವಿರತ ಶ್ರಮವಿರುವ ಕೆಲಸ. ಕೋವಿಡ್ ಸಂದರ್ಭದಲ್ಲಿ ನಮ್ಮ ಸರ್ಕಾರಿ ವೈದ್ಯರು ಹಾಗೂ ಅವರ ಸಿಬ್ಬಂದಿ ವರ್ಗ ತೆಗದುಕೊಂಡು ನಿರಂತರ ಪರಿಶ್ರಮದ ಫಲವಾಗಿ ಬಹುಬೇಗ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರಲು ಸಾಧ್ಯವಾಯಿತು. ಇದಕ್ಕಾಗಿ ನಾನು ನಾಡಿನ ಎಲ್ಲ ವೈದ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಸರ್ಕಾರಿ ಆಸ್ಪತ್ರೆಯ ವೈದ್ಯರು ಪ್ರತಿಭಾವಂತರು. ಆದರೆ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲು ಹಿಂದೇಟು ಹಾಕುವ ಪರಿಣಾಮ, ಈ ವಲಯದಲ್ಲಿ ಖಾಸಗಿ ಶಾಲೆಗಳು, ಆಸ್ಪತ್ರೆಗಳು ವಿಜೃಂಭಿಸುತ್ತಿವೆ. ನಿಮ್ಮ ಬಳಿ ಬರುವ ದೇವರ ಮಕ್ಕಳಿಗೆ ಒಳ್ಳೆಯ ಸೇವೆ ನಿಮ್ಮಿಂದ ದೊರೆತರೆ, ಅದು ಭಗವಂತನಿಗೆ ಪ್ರೀತಿಯಾಗುತ್ತದೆ. ಜನರ ಹೃದಯದಲ್ಲಿ ಸ್ಥಾನಗಳಿಸುತ್ತೀರಿ. ರೋಗಿಗಳ ಬಗ್ಗೆ ಅಸಡ್ಡೆ ತೋರದೆ, ಆತನನ್ನು ಪರೀಕ್ಷಿಸಿದ ನಾಲ್ಕು ಸಾಂತ್ವನದ ಮಾತುಗಳನ್ನು ಹೇಳುವುದರಿಂದ ನೀವು ನೀಡುವ ಚಿಕಿತ್ಸೆ ದೇಹಕ್ಕಿಂತ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಜೆ.ಸಿ.ಮಾಧುಸ್ವಾಮಿ ಕಿವಿ ಮಾತು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕೋವಿಡ್ ಸಮಯದಲ್ಲಿ ಎರಡು ವರ್ಷಗಳ ನಿಮ್ಮ ಜೊತೆ ಕೆಲಸ ಮಾಡಿ, ನಿಮ್ಮ ಕಷ್ಟ, ಸುಖಗಳ ಅರಿವಿದೆ. ಸಿಬ್ಬಂದಿ ಕೊರತೆಯ ನಡುವೆಯೂ ನಿಮ್ಮ ಸೇವೆ ಶ್ಲಾಘನೀಯ. ಆರೋಗ್ಯ ಕ್ಷೇತ್ರ ಆದ್ಯತಾ ವಲಯ. ಮುಖ್ಯಮಂತ್ರಿಗಳಿಗೆ ನಿಮ್ಮ ಕಷ್ಟದ ಅರಿವಿದೆ. ನಿಮ್ಮ ನೆರವಿಗೆ ಬರಲಿದ್ದಾರೆ ಎಂಬ ನಂಬಿಕೆ ನಮಗಿದೆ ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಎ.ಎನ್.ದೇಸಾಯಿ ಮಾತನಾಡಿ, ಸರ್ಕಾರ ಈಗಾಗಲೇ ವೈದ್ಯರು ನೀಡಿದ ಪ್ರಮುಖ ಬೇಡಿಕೆಗಳಲ್ಲಿ ಎರಡನ್ನು ಈಡೇರಿಸಿದೆ. ಜುಲೈ 1ನೇ ತಾರೀಕನ್ನು ವೈದ್ಯರ ದಿನವಾಗಿ ವಿಧಾನಸೌಧದ ಬ್ವಾಂಕೆಟ್ ಹಾಲ್‌ನಲ್ಲಿ ಆಯೋಜಿಸಬೇಕು ಹಾಗೂ ಶಿಥಿಲವಾಗಿರುವ ಆರೋಗ್ಯ ಭವನವನ್ನು 6 ಕೋಟಿ ರು. ವೆಚ್ಚದಲ್ಲಿ ಹೊಸದಾಗಿ ಕಟ್ಟಲು ತೀರ್ಮಾನಿಸಿದೆ. ಅವುಗಳು ಶೀಘ್ರವಾಗಿ ಕಾರ್ಯರೂಪಕ್ಕೆ ಬರಬೇಕು. ಸರ್ಕಾರಿ ವೈದ್ಯಾಧಿಕಾರಿಗಳ ಸಿಆರ್ ರೂಲ್ಸ್ 20 ವರ್ಷಗಳಿಂದ ಪರಿಷ್ಕರಣೆಗೊಂಡಿಲ್ಲ. ಇದು ವೈದ್ಯರ ಮುಂಬಡ್ತಿಗೆ ತೊಂದರೆಯಾಗಿದೆ. ಐಪಿಎಚ್‌ಎಸ್ ಮಾನದಂಡಕ್ಕೆ ಅನುಗುಣವಾಗಿ ವೈದ್ಯಕೀಯ ಸಿಬ್ಬಂದಿ ನೇಮಕ, ಕೌನ್ಸಿಲಿಂಗ್ ಮೂಲಕ ವೈದ್ಯರ ವರ್ಗಾವಣೆ ಮತ್ತಿತರರ ಬೇಡಿಕೆಗಳ ಮನವಿಯನ್ನು ಸಚಿವ ಮಾಧುಸ್ವಾಮಿಯವರಿಗೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಡಾ.ಎಂ.ಇಂದುಮತಿ, ಡಾ.ಪ್ರಮಿಳಾ ಮರೂರ್ ಮಾತನಾಡಿದರು. ವೇದಿಕೆಯಲ್ಲಿ ವೀಕ್ಷಕರಾದ ಡಾ.ರವಿ, ಮಾಜಿ ಅಧ್ಯಕ್ಷ ಡಾ.ರಂಗನಾಥ್, ಡಾ.ಸೈಯದ್ ಮದಿನಿ, ಡಾ.ಮೇಟಿ, ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಚೇತನ್, ಡಾ.ಡಿ.ಎಂ.ಗೌಡ, ಡಾ.ಚಂದನ್, ಡಿಎಚ್‌ಓ ಡಾ. ಮಂಜುನಾಥ್, ಡಿ.ಎಸ್. ಡಾ.ವೀಣಾ, ಡಾ.ರಜಿನಿ ಡಾ.ದಿನೇಶ್, ಡಾ.ಸನತ್, ಡಾ.ಚಂದ್ರಶೇಖರ್ ಇತರರಿದ್ದರು.ಸರ್ಕಾರಿ ವೈದ್ಯರು ಹಾಗೂ ಸರ್ಕಾರಿ ಶ್ರುಶೂಷಕ ಕಾಲೇಜಿನ ವಿದ್ಯಾರ್ಥಿನಿಯರು ನಾಡಗೀತೆ ಪ್ರಸ್ತುತ ಪಡಿಸಿದರು. ವೀರಗಾಸೆ,ಡೊಳ್ಳು ಮತ್ತು ಚಂಡೆ ವಾದ್ಯಕ್ಕೆ ವೈದ್ಯರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.
ಒಂದೇ ವಾರದಲ್ಲಿ ಆದೇಶ ಮಾಡಲು ಸಿದ್ಧ: ಸಚಿವ
ವೈದ್ಯರು ಸಲ್ಲಿಸಿರುವ ಮನವಿಯನ್ನು ಸರ್ಕಾರದ ಸಂಬಂಧ ಪಟ್ಟಮಂತ್ರಿಗಳಿಗೆ ಸಲ್ಲಿಸುವ ಕೆಲಸ ಮಾಡುತ್ತೇನೆ. ಅಲ್ಲದೆ ಸರ್ಕಾರ ಸಿಆರ್ ನಿಯಮ ರೂಪಿಸಿ ಕಾನೂನು ಇಲಾಖೆಗೆ ಕಳುಹಿಸಿದರೆ ಒಂದೇ ವಾರದಲ್ಲಿ ಅದನ್ನು ಮಂಜೂರು ಮಾಡಿ ಕಳುಹಿಸಲು ನಾವು ಸಿದ್ಧರಿದ್ದೇವೆ. ಸರ್ಕಾರ ಕೋವಿಡ್ ನಂತರದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚು ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದೆ. ಪ್ರತಿ ತಾಲೂಕಿನಲ್ಲಿ ಕನಿಷ್ಠ 100 ಬೆಡ್ ಹಾಸಿಗೆಯ ಆಸ್ಪತ್ರೆಯ ಜೊತೆಗೆ, ಆಕ್ಸಿಜನ್ ಪ್ಲಾಂಟ್ ಕಡ್ಡಾಯಗೊಳಿಸಿದೆ. ಇದರ ಜೊತೆÜಗೆ ಸಮುದಾಯ ಆಸ್ಪತ್ರೆಗಳನ್ನು ಶಕ್ತಿ ಶಾಲಿಯಾಗಿಸಲು ಎಲ್ಲಾ ರೀತಿ ಕ್ರಮ ಕೈಗೊಂಡಿದೆ. ಆದರೆ ಮಾನವ ಸಂಪನ್ಮೂಲದ ಕೊರತೆಯನ್ನು ಸರಿದೂಗಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಸರ್ಕಾರ ಮುಂದಿನ ದಿನಗಳಲ್ಲಿ ಕೈಗೊಳ್ಳಲಿದೆ. ತಾವುಗಳು ಸಹ ವಿಜ್ಞಾನ ತಂತ್ರಜ್ಞಾನದ ಜೊತೆ ಜೊತೆಗೆ ಕೆಲಸ ಮಾಡಿದರೆ ಗುಣಮಟ್ಟದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಸರ್ಕಾರಿ ಆಸ್ಪತ್ರೆ ವೈದ್ಯರ ಜವಾಬ್ದಾರಿ ಹೆಚ್ಚು: ಶ್ರೀ
ಸಾನಿಧ್ಯ ವಹಿಸಿದ್ದ ಹಿರೇಮಠಾಧ್ಯಕ್ಷ ಡಾ.ಶಿವಾನಂದಶಿವಾಚಾರ್ಯಸ್ವಾಮೀಜಿ ಮಾತನಾಡಿ, ಆಮಂತ್ರಣ ವಿಲ್ಲದೆ ಹೋಗುವ ಎರಡು ಜಾಗಗಳೆಂದರೆ ಒಂದು ಆಸ್ಪತ್ರೆ, ಮತ್ತೊಂದು ಸ್ಮಶಾನ. ಆಸ್ಪತ್ರೆಗೆ ಅಶಕ್ತನಾಗಿ ಬಂದ ವ್ಯಕ್ತಿಯನ್ನು ನಿಮ್ಮ ಸೇವೆಯಿಂದ ಶಕ್ತನಾಗಿ ಹೊರಬರುತ್ತಾನೆ. ತಾಯಿ ಜನ್ಮ ನೀಡಿದರೆ, ವೈದ್ಯರು ಮರು ಜನ್ಮ ನೀಡುತ್ತಾರೆ ಹಾಗಾಗಿ ವೈದ್ಯರನ್ನು ನಾರಾಯಣನಿಗೆ ಹೋಲಿಸಲಾಗಿದೆ. ಖಾಸಗಿ ವೈದ್ಯರಿಗಿಂತ ಸರ್ಕಾರಿ ವೈದ್ಯರ ಜವಾಬ್ದಾರಿ ಹೆಚ್ಚಿದೆ. ಸರ್ಕಾರಿ ಶಾಲೆ,ಬಸ್ಸು, ಆಸ್ಪತ್ರೆ ಚನ್ನಾಗಿಲ್ಲ ಎಂಬ ಟ್ರಂಡ್ ಹೆಚ್ಚಾಗಿದೆ. ಇದನ್ನು ಹೋಗಲಾಡಿಸುವ ಕೆಲಸವನ್ನು ನೀವೆಲ್ಲರೂ ಮಾಡಬೇಕೆಂದರು.