ಮೈಸೂರು (ಫೆ.05):  ಬೇಗ ಪತ್ತೆ ಮಾಡಿದರೆ ಕ್ಯಾನ್ಸರ್‌ ಗುಣಪಡಿಸಬಹುದು ಎಂದು ಸುಯೋಗ್‌ ಆಸ್ಪತ್ರೆ ಅಧ್ಯಕ್ಷ ಡಾ.ಎಸ್‌.ಪಿ.ಯೋಗಣ್ಣ ಹೇಳಿದರು.

ಸುಯೋಗ್‌ ಆಸ್ಪತ್ರೆ, ಸಂಜೀವಿನಿ ಕ್ಯಾನ್ಸರ್‌ ಕೇರ್‌ ಟ್ರಸ್ಟ್‌ ಸಹಯೋಗದಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಗುರುವಾರ ವಿಶ್ವ ಕ್ಯಾನ್ಸರ್‌ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕ್ಯಾನ್ಸರ್‌ ಎಂದರೇ ಕ್ಯಾನ್ಸಲ್‌ ಅಲ್ಲ ಕೇರ್‌ (ಮುನ್ನೆಚ್ಚರಿಕೆ) ಅಷ್ಟೇ.ಕ್ಯಾನ್ಸರ್‌ ಬೇಗ ಪತ್ತೆಯಾದಲ್ಲಿ ಆ ಭಾಗವನ್ನು ತೆಗೆದು ಜೀವ ಉಳಿಸಬಹುದು. ಈಗ ಕೀಮೋಥೆರಪಿ ಮತ್ತಿತರ ಚಿಕಿತ್ಸಾ ವಿಧಾನಗಳು ಇವೆ ಎಂದರು.

ಶ್ರೀಮಂತರು ಕಲಿಯುವ ಎಲ್ಲ ದುಶ್ಚಟಗಳನ್ನು ಬಡವರು ಕಲಿಯುತ್ತಿರುವುದರಿಂದ ಈಗ ಎಲ್ಲರಿಗೂ ಕ್ಯಾನ್ಸರ್‌ ರೋಗ ಬರುತ್ತಿದೆ. ವಂಶವಾಹಿನಿಂದಲೂ ರೋಗಗಳು ಬರುತ್ತವೆ. ಕ್ಯಾನ್ಸರ್‌ ಜೀವಕೋಶ ಒಂದು ರೀತಿಯಲ್ಲಿ ಉಗ್ರಗಾಮಿ ಇದ್ದಂತೆ. ಉಗ್ರಗಾಮಿ ಹೇಗೆ ಇತರರ ಮೇಲೆ ದಾಳಿ ಮಾಡುತ್ತಾನೋ ಅದೇ ರೀತಿ ಕ್ಯಾನ್ಸರ್‌ ಜೀವಕೋಶ ಇತರೆ ಜೀವಕೋಶಗಳ ಮೇಲೆ ದಾಳಿ ಮಾಡಿ, ಎಲ್ಲವನ್ನು ಬಲಿತೆಗೆದುಕೊಂಡು ತಾನೂ ಬಲಿಯಾಗುತ್ತದೆ ಎಂದು ವಿಶ್ಲೇಷಿಸಿದರು.

ಸ್ತನ ಕ್ಯಾನ್ಸರ್‌ಗೆ ‘ ಔಷಧ ಬೀಜ ‘ ಆವಿಷ್ಕಾರ, ಮೂಡಿಸಿದೆ ಭರವಸೆಯ ಬೆಳಕು

ಮಹಿಳೆಯರು ಸ್ತನ, ಗರ್ಭಕೋಶ ಹಾಗೂ ಅಂಡಾಶಯ ಕ್ಯಾನ್ಸರ್‌ ಬಗ್ಗೆ ಎಚ್ಚರಿಕೆ ವಹಿಸಬೇಕು. ಸ್ತನ ಕ್ಯಾನ್ಸರ್‌ ಯುವತಿಯರಿಗೂ ಬರಬಹುದು. ಗರ್ಭಕೋಶ ಕ್ಯಾನ್ಸರ್‌ ವಿವಾಹದ ನಂತರ ಬರಬಹದು. ಮುಟ್ಟಿನ ಸಮಯದಲ್ಲಿ ತೀವ್ರ ರಕ್ತಸ್ರಾವ, ಬಿಳಿ ಸೆರಗು ಬಗ್ಗೆಯೂ ಜಾಗರೂಕತೆಯಿಂದ ಇರಬೇಕು. ಸ್ವಯಂ ಪರೀಕ್ಷೆ ಮಾಡಿಕೊಂಡು, ಗಂಟು ಇದ್ದಲ್ಲಿ ವೈದ್ಯರ ಬಳಿ ತೋರಿಸಿಕೊಳ್ಳಬೇಕು. ಅಕ್ಕಪಕ್ಕದವರಿಗೂ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.

ಮನುಷ್ಟನಿಗಿಂತ ಕೆಟ್ಟಪ್ರಾಣಿ ಮತ್ತೊಂದಿಲ್ಲ. ಏಕೆಂದರೆ ಪರಿಸರವನ್ನು ಹಾಳು ಮಾಡುತ್ತಿರುವವರು ಮನುಷ್ಯರು. ಮನುಷ್ಯರು ಕಾರ್ಬನ್‌ ಡಯಾಕ್ಸೈಡ್‌ ಅನ್ನು ಹೊರಗೆ ಹಾಕಿದರೆ, ಸಸ್ಯಗಳು ಆಮ್ಲಜನಕವನ್ನು ಹೊರಹಾಕುತ್ತವೆ. ನಮಗೆ ಉಸಿರಾಡಲು ಆಮ್ಲಜನಕ ಬೇಕು. ಇದಕ್ಕಾಗಿ ಪರಿಸರವನ್ನು ಕಾಪಾಡಬೇಕು. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇಡೀ ಪರಿಸರದ ಮೇಲೆ ತಾನೊಬ್ಬನೇ ಇರಬೇಕು. ಬೇರೆ ಯಾರೂ ಇರಬಾರದು ಎಂಬಂತೆ ದೌರ್ಜನ್ಯ ಎಸಗುತ್ತಿದ್ದಾನೆ. ಇದು ತೊಲಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಎಂಡಿಎ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಮಾತನಾಡಿ, ಮೊದಲೆಲ್ಲಾ ಕ್ಯಾನ್ಸರ್‌ ಎಂದರೇ ಕ್ಯಾನ್ಸಲ್‌ ಎಂದು ಹೇಳಲಾಗುತ್ತಿತ್ತು. ಅಂದರೆ ಕ್ಯಾನ್ಸರ್‌ ಬಂದಲ್ಲಿ ಸಾವು ಖಚಿತ ಎಂಬ ಭಯವಿತ್ತು. ಆದರೆ ಈಗ ಉತ್ತಮವಾದ ಆಧುನಿಕ ಚಿಕಿತ್ಸಾ ಪದ್ಧತಿಗಳಿಂದ ಗುಣಪಡಿಸಬಹುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ. ಶ್ರೀನಿವಾಸ್‌ ಮಾತನಾಡಿ, ಗೋಬಿ ಮಂಚೂರಿ, ನ್ಯೂಡಲ್ಸ್‌ ಸೇರಿದಂತೆ ಹೊರಗೆ ರಾಸಾಯನಿಕ ಬಣ್ಣ ಹಾಕಿರುವ ಆಹಾರ, ಧೂಮಪಾನ, ಮದ್ಯಪಾನದಿಂದ ದೂರವಿರಬೇಕು. ಆಗ ಮಾತ್ರ ಕ್ಯಾನ್ಸರ್‌ ತಡೆಗಟ್ಟಬಹುದು ಎಂದರು.

ಸಂಜೀವಿನಿ ಕ್ಯಾನ್ಸರ್‌ ಕೇರ್‌ ಟ್ರಸ್ಟಿನ ಸಂಸ್ಥಾಪಕ ರಮೇಶ್‌ ಬಿಳಿಕೆರೆ ಪ್ರಾಸ್ತಾವಿಕ ಭಾಷಣ ಮಾಡಿ, ಮೊದಲೆಲ್ಲಾ ಕ್ಯಾನ್ಸರ್‌, ಶುಗರ್‌ ಶ್ರೀಮಂತರಿಗೆ ಬರುವ ರೋಗಗಳಾಗಿದ್ದವು. ಈಗ ಬಡವರಿಗೂ ಬರುತ್ತಿದೆ. ಮೊದಲು ಕಡಿಮೆ ಜನಕ್ಕೆ ಬರುತ್ತಿತ್ತು. ಹೆಚ್ಚು ಜನ ಸಾಯುತ್ತಿದ್ದರು. ಈಗ ಹೆಚ್ಚು ಜನಕ್ಕೆ ಬರುತ್ತಿದೆ. ಕಡಿಮೆ ಜನ ಸಾಯುತ್ತಿದ್ದಾರೆ. ಇದಕ್ಕೆ ಅತ್ಯಾಧುನಿಕ ಚಿಕಿತ್ಸಾ ಪದ್ಧತಿ ಕಾರಣ. ಆದ್ದರಿಂದ ಕ್ಯಾನ್ಸರ್‌ ಬಂದಲ್ಲಿ ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.

ಮುಖ್ಯ ಅತಿಥಿಗಳಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಉರಗತಜ್ಞ ಸ್ನೇಕ್‌ ಶ್ಯಾಮ್‌ ಮಾತನಾಡಿದರು. ಯುವ ರೆಡ್‌ ಕ್ರಾಸ್‌ ಸಂಚಾಲಕ ಡಾ.ಆರ್‌.ಡಿ. ಶ್ರೀನಿವಾಸ್‌, ಐಕ್ಯೂಐಸಿ ಸಂಯೋಜಕ ಡಾ.ಪಿ.ಎನ್‌. ಹೇಮಚಂದ್ರ ಇದ್ದರು. ಯುವ ರೆಡ್‌ಕ್ರಾಸ್‌ ಸಂಯೋಜಕ ಡಾ.ಟಿ. ಎಲ್‌. ಜಗದೀಶ್‌ ಸ್ವಾಗತಿಸಿದರು. ಟ್ರಸ್ಟಿಗಿರೀಶ್‌ ನಿರೂಪಿಸಿದರು. ಪ್ರೊ.ಮಹಾದೇವಯ್ಯ, ಡಾ.ಎಸ್‌.ಜಿ. ರಾಘವೇಂದ್ರ, ಮೈ.ನಾ. ಲೋಕೇಶ್‌, ಆಕಾಶವಾಣಿ ಶ್ರೋತೃಗಳ ಬಳಗದ ಗೋವಿಂದಾಚಾರಿ, ಮೈ.ನಾ. ಲೋಕೇಶ್‌ ಮೊದಲಾದವರು ಪಾಲ್ಗೊಂಡಿದ್ದರು. ಭವತಾರಿಣಿ ಮತ್ತು ತಂಡದವರು ಸುಗಮ ಸಂಗೀತ ನಡೆಸಿಕೊಟ್ಟರು. ಹಿರಿಯ ಪತ್ರಕರ್ತರಾಗಿದ್ದ ದಿವಂಗತ ಕೃಷ್ಣ ವಟ್ಟಂ ಅವರು ಬರೆದಿರುವ ಕ್ಯಾನ್ಸರ್‌ ಕುರಿತ ಕೃತಿಯನ್ನು ಅವರ ಪುತ್ರಿ ಪಾರ್ವತಿ ವಟ್ಟಂ ವಿತರಿಸಿದರು.