ಹುಬ್ಬಳ್ಳಿ(ಅ.3): ಹುಬ್ಬಳ್ಳಿ- ಧಾರವಾಡ ಜನತೆಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ಎಂಬ ಭಾವನೆ ಸಾಕಷ್ಟಿದೆ. ಇದನ್ನು ಬದಿಗಿಡಬೇಕು. ಸಮಗ್ರ ಕರ್ನಾಟಕ ಕಲ್ಪನೆ ಎಲ್ಲರೂ ತಂದುಕೊಳ್ಳಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮನವಿ ಮಾಡಿದ್ದಾರೆ.

ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ರೈಲ್ವೆ ಅಭಿವೃದ್ಧಿ ಕುರಿತ ಸಂವಾದ’ದಲ್ಲಿ ಮಾತನಾಡಿದ ಅವರು, ಸಮಗ್ರ ಕರ್ನಾಟಕ ಅಭಿವೃದ್ಧಿಯಾಗಬೇಕು. ಯಾವುದೇ ಕಾರಣಕ್ಕೂ ಉತ್ತರ ಕರ್ನಾಟಕ ಪ್ರತ್ಯೇಕ ಎಂಬ ಕೂಗು ಸರಿಯಲ್ಲ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಇಲ್ಲಿನ ಜನತೆ ಪ್ರಾಮಾಣಿಕವಾಗಿ ದುಡಿದ ಪರಿಣಾಮವಾಗಿಯೇ ಬೆಂಗಳೂರು ಅಷ್ಟೊಂದು ಅಭಿವೃದ್ಧಿಯಾಗಲು ಸಾಧ್ಯವಾಗಿದೆ. ಈ ಭಾಗದಲ್ಲೂ ಬಂಡವಾಳ ಹೂಡಿಕೆ ದಾರರನ್ನು ಆಕರ್ಷಿಸುವ ಕೆಲಸವಾಗಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರಗಳು ಕೆಲಸ ಮಾಡುತ್ತಿವೆ. ಯಾವುದೇ ಕಾರಣಕ್ಕೂ ಪ್ರತ್ಯೇಕತೆಯ ಕೂಗು ಬೇಡ. ಎಲ್ಲರೂ ಸೇರಿಕೊಂಡು ಈ ಭಾಗವನ್ನು ಅಭಿವೃದ್ಧಿ ಪಡಿಸೋಣ ಎಂದು ಕರೆ ನೀಡಿದರು. 

ಈ ಹಿಂದೆ ರೈಲ್ವೆ ಇಲಾಖೆ ರಾಜಕೀಯ ಬಳಕೆಗೆ ಸೀಮಿತವಾಗಿತ್ತು. 70 ವರ್ಷಗಳ ಕಾಲ ಆಡಳಿತ ನಡೆಸಿದ ಸರ್ಕಾರಗಳು ಜನರ ದಾರಿ ತಪ್ಪಿಸಿವೆ. ಆದರೆ ಈಗ ಆಗಿಲ್ಲ, ಪ್ರತ್ಯೇಕ ಬಜೆಟ್ ಮಂಡನೆ ಮಾಡುತ್ತಿಲ್ಲ. ಒಂದೇ ಬಜೆಟ್ ಮಾಡಲಾಗುತ್ತಿದೆ. ಆದರೆ ಹಿಂದೆ ಯಾವ ಸರ್ಕಾರಗಳು ನೀಡದಷ್ಟು ಅನುದಾನವನ್ನು ರೈಲ್ವೆ ಖಾತೆಗೆ ನೀಡಲಾಗುತ್ತಿದೆ ಎಂದರು. 

ಹುಬ್ಬಳ್ಳಿ- ಧಾರವಾಡ ಹಾಗೂ ಬೆಳಗಾವಿ ತ್ರಿವಳಿ ನಗರ ಮಾಡುವ ಯೋಚನೆ ಇದೆ ಎಂದ ಅವರು, ಬೆಂಗಳೂರಿನಿಂದ ಬೆಳಗಾವಿಗೆ 4 ರಿಂದ 5 ತಾಸಿನಲ್ಲಿ ರೈಲು ಸಂಚರಿಸಬೇಕು. ಆ ನಿಟ್ಟಿನಲ್ಲಿ ಕಾರ್ಯ ಮಾಡಲಾಗುತ್ತಿದೆ. ಸಣ್ಣ ಕೈಗಾರಿಕೆಗಳೊಂದಿಗೆ ರೈಲ್ವೆ ಇಲಾಖೆ ಇದೆ. ರೈಲ್ವೆ ಇಲಾಖೆಯಲ್ಲಿ ಉಪಯೋಗವಾಗುವಂತಹ ವಸ್ತುಗಳನ್ನು ಸಣ್ಣ ಕೈಗಾರಿಕೆಗಳಿಂದ ಖರೀದಿಸಲಾಗುತ್ತಿದೆ. ಆದರೆ ಸಣ್ಣ ಕೈಗಾರಿಕೋದ್ಯಮಿಗಳು ನಿಯಮ ಮೀರದಂತೆ ನೋಡಿಕೊಳ್ಳ ಬೇಕು ಎಂದರು. 

ಈ ವೇಳೆ ಸಂಸ್ಥೆಯ ನೂತನ ಅಧ್ಯಕ್ಷ ಮಹೇಂದ್ರ ಲದ್ದಡ ಅವರು ವಿವಿಧ ರೈಲ್ವೆ ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿದರು. ಉಪಾಧ್ಯಕ್ಷ ವಿನಯ ಜವಳಿ, ಗೌರವ ಕಾರ್ಯ ದರ್ಶಿ ಅಶೋಕ ಗಡಾದ, ವಿ.ಪಿ.ಲಿಂಗನಗೌಡರ, ಶಂಕರಣ್ಣ ಮುನವಳ್ಳಿ, ಎ.ಕೆ. ಸಿಂಗ್ ಸದಸ್ಯರು ಇದ್ದರು.