ಕೆಆರ್‌ಎಸ್ ಬಳಿ ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡದಿರಿ: ಪ್ರಮೋದಾದೇವಿ ಒಡೆಯರ್
ಕೃಷ್ಣರಾಜಸಾಗರ ಅಣೆಕಟ್ಟು ಬಳಿ ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್‌ಗೆ ಅವಕಾಶ ನೀಡಬಾರದು ಎಂದು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.
ಮಂಡ್ಯ (ಜು.13): ಕೃಷ್ಣರಾಜಸಾಗರ ಅಣೆಕಟ್ಟು ಬಳಿ ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್‌ಗೆ ಅವಕಾಶ ನೀಡಬಾರದು ಎಂದು ಮೈಸೂರಿನ ರಾಜಮಾತೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ. ಟ್ರಯಲ್ ಬ್ಲಾಸ್ಟ್ ನಡೆಸಲುದ್ದೇಶಿಸಿರುವ ಬೇಬಿ ಬೆಟ್ಟ ಸರ್ವೇ ನಂ.1ರಲ್ಲಿರುವ ಅಮೃತ್ ಮಹಲ್ ಕಾವಲ್‌ನ 1623 ಎಕರೆ 7 ಗುಂಟೆ ಪ್ರದೇಶ ಮೈಸೂರು ಅರಸು ಮನೆತನಕ್ಕೆ ಸೇರಿದ ಖಾಸಗಿ ಆಸ್ತಿಯಾಗಿದೆ. ಇಲ್ಲಿ ಯಾವುದೇ ರೀತಿಯ ಗಣಿ ಚಟುವಟಿಕೆ, ಟ್ರಯಲ್ ಬ್ಲಾಸ್ಟ್ ಸೇರಿ ಇನ್ನಿತರ ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಆಣೆಕಟ್ಟು ಸುರಕ್ಷತಾ ಸಮಿತಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.
ಮೈಸೂರು ಸಂಸ್ಥಾನವಿದ್ದ ಸಮಯದಲ್ಲೇ ಭಾರತ ಸರ್ಕಾರ ಈ ಆಸ್ತಿಯನ್ನು ನನ್ನ ಪತಿ ಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ತಂದೆಗೆ ನೀಡಿದ್ದು, ನನ್ನ ಪತಿ 2013ರ ಡಿಸೆಂಬರ್ 10ರಂದು ನಿಧನರಾಗಿದ್ದು, ಆನಂತರ ಈ ಆಸ್ತಿಗೆ ನಾನು ವಾರಸುದಾರಳಾಗಿದ್ದೇನೆ ಎಂದು ತಿಳಿಸಿದ್ದಾರೆ. ಈ ಪ್ರದೇಶವನ್ನು ನನ್ನ ಹೆಸರಿಗೆ ಖಾತೆ ಮಾಡಿಕೊಡುವಂತೆ ಕಂದಾಯ ಇಲಾಖೆಯವರಿಗೆ ಅರ್ಜಿ ಸಲ್ಲಿಸಿದ್ದರೂ, ನಾನಾ ಕಾರಣಗಳನ್ನು ಹೇಳುತ್ತಲೇ ಇದುವರೆಗೂ ನನ್ನ ಹೆಸರಿಗೆ ಖಾತೆ ಮಾಡಿಕೊಟ್ಟಿಲ್ಲ. ಅದಕ್ಕಾಗಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ ಬೇಬಿಬೆಟ್ಟ ಕಾವಲ್‌ನ ಸರ್ವೇ ನಂ.1ರ ಪ್ರದೇಶವನ್ನು ನನ್ನ ಹೆಸರಿಗೆ ಖಾತೆ ಮಾಡಿಕೊಡುವಂತೆ ಕೋರಿದ್ದೇನೆ.
ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿ ಸರ್ಕಾರದ ಹಲವು ಇಲಾಖೆ ಅಧಿಕಾರಿಗಳು ನ್ಯಾಯಾಲಯದ ಎದುರು ಹಾಜರಾಗಿಲ್ಲ. ಸರ್ಕಾರಿ ವಕೀಲರ ಮೂಲಕ ಆಕ್ಷೇಪಣೆಯನ್ನೂ ಸಲ್ಲಿಸಿಲ್ಲ. ಹಾಗಾಗಿ ನನ್ನ ಖಾಸಗಿ ಆಸ್ತಿಯಾಗಿದೆ. ಯಾವುದೇ ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯ ಸೇರಿದಂತೆ ಇತರರ ಪರಿಶ್ರಮದಿಂದ ಕೃಷ್ಣರಾಜಸಾಗರ ಅಣೆಕಟ್ಟು ತಲೆ ಎತ್ತಿತ್ತು. ಅಣೆಕಟ್ಟೆಗೆ 92 ವರ್ಷ ವಯಸ್ಸಾಗಿದೆ.
ಎಚ್‌ಡಿಕೆ ಜನತಾದರ್ಶನಕ್ಕೆ ಸಚಿವ ಚಲುವರಾಯಸ್ವಾಮಿ ಜನಸ್ಪಂದನ ಸಡ್ಡು!
ಎಲ್ಲರ ಪರಿಶ್ರಮದಿಂದ ನಿರ್ಮಾಣಗೊಂಡಿರುವ ಅಣೆಕಟ್ಟೆಯನ್ನು ಜೋಪಾನ ಮಾಡಬೇಕಿದ್ದು, ಇದು ನಾಲ್ಕು ಜಿಲ್ಲೆಗಳಲ್ಲಿರುವ ಕುಡಿಯುವ ನೀರಿಗೆ, ಕೃಷಿಗೆ ಪ್ರಮುಖ ಆಧಾರವಾಗಿದೆ. ಅಣೆಕಟ್ಟು ನಿರ್ಮಿಸಿದವರ ಪರಿಶ್ರಮವನ್ನು ಹಾಳುಗೆಡುವಬಾರದು. ಸಮಿತಿ ಕೂಡಲೇ ಕ್ರಮ ವಹಿಸಿ ನನಗೆ ಸೇರಿದ ಬೇಬಿಬೆಟ್ಟ ಸರ್ವೇ ನಂ.1ರಲ್ಲಿರುವ 1623 ಎಕರೆ 7 ಗುಂಟೆ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡಬಾರದು ಎಂದು ಕೋರಿದ್ದಾರೆ.