ಕನಕಪುರ [ಮಾ.12] :  2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ಸಾತನೂರು ಮರೆಯಾಗುತ್ತಿದ್ದಂತೆ ಡಿ.ಕೆ.ಶಿವಕುಮಾರ್‌ ಕನಕಪುರ ಕ್ಷೇತ್ರಕ್ಕೆ ವಲಸೆ ಬಂದರು. ಕನಕಪುರಕ್ಕೆ ಬರುವ ಮೊದಲು ಸಾತನೂರು ಕ್ಷೇತ್ರದಿಂದ ಡಿ.ಕೆ. ಶಿವಕುಮಾರ್‌ ಸತತ 4 ಬಾರಿ ಗೆದ್ದಿದ್ದರು.

1985ರಲ್ಲಿ ಸಾತನೂರಿನಲ್ಲಿ ಎದುರಿಸಿದ ಮೊದಲ ಚುನಾವಣೆಯಲ್ಲಿ ಡಿಕೆಶಿ 16 ಸಾವಿರ ಮತಗಳಿಂದ ದೇವೇಗೌಡರ ವಿರುದ್ಧ ಸೋಲುಂಡರು. ಆ ನಂತರ ತಿರುಗಿ ನೋಡದ ಡಿಕೆಶಿ 1989, 1994, 1999, 2004ರಲ್ಲಿ ಸಾತನೂರಿನಿಂದ ಸತತ ನಾಲ್ಕು ಚುನಾವಣೆ ಗೆದ್ದಿದ್ದರು. ಅದರಲ್ಲೂ 1994ರಲ್ಲಿ ಕಾಂಗ್ರೆಸ್‌ ಟಿಕೆಚ್‌ ನಿರಾಕರಿಸಿದಾಗ ಸ್ವತಂತ್ರವಾಗಿ ಕಣಕ್ಕಿಳಿದು ಕೇವಲ 568 ಮತಗಳಿಂದ ಜನತಾದಳದ ಯು.ಕೆ. ಸ್ವಾಮಿ ಅವರನ್ನು ಸೋಲಿಸಿ ಅಗ್ನಿ ಪರೀಕ್ಷೆಯಲ್ಲಿ ಗೆದ್ದಿದ್ದರು. 1999ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನೂ ಮಣಿಸಿದ್ದರು.

ಕೆಪಿಸಿಸಿಗೆ ಡಿಕೆಶಿ ಹೊಸ ಸಾರಥಿ: ಜೆಡಿಸ್, ಬಿಜೆಪಿಗೆ ಶುರುವಾಯ್ತಾ ಭೀತಿ?...

ಸದ್ಯ ಕನಕಪುರದಲ್ಲಿ ತಮ್ಮದೇ ಕೋಟೆ ಕಟ್ಟಿಕೊಂಡಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಚುನಾವಣೆಗಳು ಎದುರಾದಾಗ ನಿದ್ದೆಗೆಡಿಸುತ್ತಿದ್ದವರು ಎಂದರೆ ಜೆಡಿಎಸ್‌ ಮುಖಂಡ ಡಿ.ಎಂ. ವಿಶ್ವನಾಥ್‌.

2004ರಲ್ಲಿ ಸಾತನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ (51,603) ಎದುರು ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಡಿ.ಎಂ. ವಿಶ್ವನಾಥ್‌ (37,675)13,928 ಮತಗಳ ಅಂತರದಿಂದ ಸೋಲು ಕಂಡಿದ್ದರು.

2008ರ ಕನಕಪುರ ಕ್ಷೇತ್ರ ಚುನಾವಣೆಯಲ್ಲಿ ವಿಶ್ವನಾಥ್‌ ಸೋಲಿನ ಮತಗಳ ಅಂತರ ಕೇವಲ 7,179 ಮತಗಳಿಗೆ ಕುಸಿಯಿತು. ಈ ಚುನಾವಣೆಯಲ್ಲಿ ಜೆಡಿಎಸ್‌ ವರಿಷ್ಠರು ವಿಶ್ವನಾಥ್‌ಗೆ ಒಂದಿಷ್ಟುಆರ್ಥಿಕ ಶಕ್ತಿ ತುಂಬಿದ್ದರೆ ಡಿಕೆಶಿಗೆ ಸೋಲಾಗುತ್ತಿತ್ತು.

2013ರಲ್ಲಿ ಸಿಂಧ್ಯಾ ಅವರು ಜೆಡಿಎಸ್‌ಗೆ ಮರಳಿದ ಹಿನ್ನೆಲೆಯಲ್ಲಿ ವಿಶ್ವನಾಥ್‌ ಅವರಿಗೆ ಟಿಕೆಟ್‌ ತಪ್ಪಿತು. ಆಗಲೇ ವಿಶ್ವನಾಥ್‌ ಅವರಿಗೆ ಟಿಕೆಟ್‌ ನೀಡಿದ್ದರೆ ಡಿಕೆಶಿ ಗೆಲವು ಕಷ್ಟಸಾಧ್ಯವಾಗುತ್ತಿತ್ತು ಎನ್ನುತ್ತಾರೆ ರಾಜಕೀಯ ಪಂಡಿತರು.