ದಾವಣಗೆರೆ(ಜು.31): ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ 1094 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 90 ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲಾಗಿದೆ. ಹಾಗೆಯೇ ಇನ್ನುಳಿದ ಮಕ್ಕಳನ್ನೂ ಶಾಲೆಗೆ ಕರೆ ತರುವ ಕೆಲಸವಾಗಲಿ ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್‌.ಬಡಿಗೇರ್‌ ಕರೆ ನೀಡಿದರು.

ನಗರದ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ(ಡಯಟ್‌)ಯಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ನ್ಯಾಯ ಸಂಯೋಗ ಮತ್ತು ಸಂತ್ರಸ್ಥ ಪರಿಹಾರ ಯೋಜನೆ ಹಾಗೂ ಶಿಕ್ಷಣ ಅದಾಲತ್‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

18 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಶಿಕ್ಷಣ ನೀಡಬೇಕು. ಇಂದಿನ ದಿನಗಳಲ್ಲಿ ಸುಶಿಕ್ಷಿತರೇ ವಂಚನೆಗೊಳಗಾಗುತ್ತಿದ್ದು, ಈ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಶಿಕ್ಷಣ ಸಿಗದಿದ್ದರೆ ಸಮಾಜಘಾತುಕರಿಂದ ತೊಂದರೆಗೊಳಗಾಗುವ ಸಾಧ್ಯತೆಯೇ ಹೆಚ್ಚು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸ್ವಯಂಪ್ರೇರಿತ ದೂರು ದಾಖಲು:

ಮಕ್ಕಳಿಗೆ ತಿಳಿ ಹೇಳಿ ಶಾಲೆಗೆ ಕಳಿಸುವುದು ಪ್ರತಿಯೊಬ್ಬ ಪಾಲಕರ ಆದ್ಯ ಕರ್ತವ್ಯ. ಮಕ್ಕಳನ್ನು ಶಾಲೆಗೆ ಕಳಿಸದ ಪಾಲಕರ ವಿಳಾಸ, ಮಾಹಿತಿಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನೀಡಿದಲ್ಲಿ ನಾವು ಶಿಕ್ಷಣ ಹಕ್ಕು ಕಾಯ್ದೆಯಡಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತೇವೆ. ಸುಮೋಟೋ ಕೇಸ್‌ ದಾಖಲಾಗಿ, ವಿಚಾರಣೆ ನಂತರ ಪಾಲರು ನಿಯಮ ಪಾಲಿಸದಿದ್ದರೆ 3 ವರ್ಷಗಳ ಕಾಲ ಶಿಕ್ಷೆ ಹಾಗೂ ದಂಡ ವಿಧಿಸುತ್ತೇವೆ ಎಂದು ಮಕ್ಕಳನ್ನು ಶಾಲೆಗೆ ಕಳಿಸದ ಪಾಲಕರಿಗೆ ಎಚ್ಚರಿಸಿದರು.

ಸಂತ್ರಸ್ಥ ಪರಿಹಾರ ಯೋಜನೆಯು ಕೇಂದ್ರ, ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಇದರಡಿ ಅತ್ಯಾಚಾರಕ್ಕೊಳಗಾದ ಮಕ್ಕಳಿಗೆ, ಗಲಭೆಯಲ್ಲಿ ಹತ್ಯೆಯಾದವರ ಕುಟುಂಬಕ್ಕೆ ಅಪಘಾತ, ಹೊಡೆದಾಟದಲ್ಲಿ ಅಂಗ ನೂನ್ಯತೆಯಾದವರಿಗೆ 5ರಿಂದ 7 ಲಕ್ಷ ರು.ವರೆಗೆ ಪರಿಹಾರ ನೀಡಲಾಗುವುದು. ಹೆಣ್ಣು ಮಕ್ಕಳು, ವಯೋವೃದ್ಧರು, ಮಹಿಳೆಯರಿಗೆ ಉಚಿತ ಕಾನೂನು ಅರಿವು ನೀಡಲಾಗುವುದು. ಅಪರಾಧಗಳ ಸಂಖ್ಯೆ ಕಡಿಮೆ ಮಾಡಲು ಪ್ರಾಧಿಕಾರ ಸದಾ ಸಿದ್ಧವಿರುತ್ತದೆ ಎಂದು ನ್ಯಾ.ಪ್ರಭು ತಿಳಿಸಿದರು.

ಆರೆಸ್ಸೆಸ್‌ನಿಂದ ಸೈನಿಕ ಶಾಲೆ ಆರಂಭ

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ, ವಕೀಲರಾದ ಮಂಜುಳ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ.ಮಂಜುನಾಥ, ಡಯಟ್‌ ಉಪ ನಿರ್ದೇಶಕ ಎಚ್‌.ಕೆ.ಲಿಂಗರಾಜು, ಉಪ ಯೋಜನಾಧಿಕಾರಿ ಎಸ್‌.ಎಂ.ವೀರಭದ್ರಯ್ಯ, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಕೊಟ್ರೇಶ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಸಿದ್ದಪ್ಪ, ಪ್ಯಾನಲ್‌ ವಕೀಲರು, ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ