ಸಿಎಂ ಕುರ್ಚಿ ಮೇಲೆ ಕಣ್ಣು, ಚನ್ನಪಟ್ಟಣದಿಂದ ಡಿಕೆಶಿ ಸ್ಪರ್ಧೆ?!
ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಬೊಂಬೆನಾಡಿಗೆ ಗ್ರ್ಯಾಂಡ್ ಎಂಟ್ರಿ ನೀಡುತ್ತಿದ್ದು, ಜೂ.19ರಂದು ಬುಧವಾರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಟೆಂಪಲ್ ರನ್ ಸಜ್ಜಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
-ವಿಜಯ್ ಕೇಸರಿ
ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಬೊಂಬೆನಾಡಿಗೆ ಗ್ರ್ಯಾಂಡ್ ಎಂಟ್ರಿ ನೀಡುತ್ತಿದ್ದು, ಜೂ.19ರಂದು ಬುಧವಾರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಟೆಂಪಲ್ ರನ್ ಸಜ್ಜಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕುಮಾರಸ್ವಾಮಿ ರಾಜೀನಾಮೆ ನೀಡಿದ ಬೆನ್ನಲ್ಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ಚುನಾವಣೆ ರಣಕಹಳೆ ಮೊಳಗಿಸುವ ಮೊದಲ ಹೆಜ್ಜೆಯಾಗಿ ಚನ್ನಪಟ್ಟಣದ ನಗರ ಹಾಗೂ ಗ್ರಾಮೀಣ ಭಾಗದ ದೇವಾಲಯಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಸಹೋದರನ ಸೋಲಿನ ಸೇಡು ತೀರಿಸಿಕೊಳ್ಳುವ ತವಕ?:
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿ.ಕೆ.ಶಿವಕುಮಾರ್ ಸಹೋದರ, ಮಾಜಿ ಸಂಸದ ಡಿ.ಕೆ.ಸುರೇಶ್ ಪರಾಭವಗೊಂಡಿದ್ದಾರೆ. ಸುರೇಶ್ ಸೋಲಿಗೆ ಪಣತೊಟ್ಟಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕ್ಷೇತ್ರದಲ್ಲಿ ಡಾ.ಮಂಜುನಾಥ್ ಅವರನ್ನು ಅಭ್ಯರ್ಥಿಯಾಗಿಸಿ ಗೆಲ್ಲಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣದ ಕಣದಲ್ಲೇ ಇಬ್ಬರಿಗೂ ಠಕ್ಕರ್ ನೀಡಲು ಖುದ್ದು ಡಿ.ಕೆ.ಶಿವಕುಮಾರ್ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎನ್ನಲಾಗಿದೆ.
ಉಪಚುನಾವಣೆಗೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯನ್ನು ಚುರುಕುಗೊಳಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದೇವಾಲಯಗಳಿಗೆ ಪ್ರದಕ್ಷಣೆ ಹಾಕುವ ಜತೆಗೆ ಪಕ್ಷ ಸಂಘಟನೆಯನ್ನು ಚುರುಕುಗೊಳಿಸುವ ಕಾರ್ಯಕ್ರಮವನ್ನು ಡಿ.ಕೆ.ಶಿವಕುಮಾರ್ ಹಮ್ಮಿಕೊಂಡಿದ್ದಾರೆ. ತಾಲೂಕಿನ ಸುಮಾರು ೧೫ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.
ತಮ್ಮನ ಸ್ಪರ್ಧೆಗೆ ವೇದಿಕೆ ಸಜ್ಜು?:
ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಡಿ.ಕೆ.ಸುರೇಶ್ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಣಕ್ಕೆ ಇಳಿಯಲಿದ್ದಾರೆ ಎಂಬ ಚರ್ಚೆ ಹಲವಾರು ದಿನಗಳಿಂದ ಹರಿದಾಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸುರೇಶ್ ಸ್ಪರ್ಧೆಗೆ ಒತ್ತಡ ಹಾಕುತ್ತಿದ್ದಾರೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ೮೫ ಸಾವಿರಕ್ಕೂ ಅಧಿಕ ಮತ ಪಡೆದಿದ್ದು, ವಿಧಾನಸಭೆ ಚುನಾವಣೆಯಲ್ಲಿ ಸುರೇಸ್ ಸ್ಪರ್ಧಿಸಿದರೆ ಗೆಲುವು ಸಾಧಿಸಬಹುದು ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯವಾಗಿದೆ. ಆದರೆ, ಈ ಪ್ರಸ್ತಾಪಕ್ಕೆ ಉತ್ತರಿಸದ ಸುರೇಶ್ ಕ್ಷೇತ್ರದಲ್ಲಿ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ.
ಆದರೆ, ಕ್ಷೇತ್ರದ ಶಾಸಕತ್ವಕ್ಕೆ ಕುಮಾರಸ್ವಾಮಿ ರಾಜೀನಾಮೆ ಸಲ್ಲಿಸಿದ ನಾಲ್ಕೇ ದಿನಕ್ಕೆ ತಾಲೂಕಿನಲ್ಲಿ ಡಿ.ಕೆ.ಶಿವಕುಮಾರ್ ಟೆಂಪಲ್ ರನ್‌ಗೆ ಮುಂದಾಗಿರುವುದು ಸಾಕಷ್ಟು ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ. ತಮ್ಮನ ಸ್ಪರ್ಧೆಗೆ ವೇದಿಕೆ ಸಿದ್ಧಪಡಿಸುವ ಉದ್ದೇಶದೊಂದಿಗೆ ಡಿಕೆಶಿ ಚನ್ನಪಟ್ಟಣ ಕಾರ್ಯಕ್ರಮ ನಿಗದಿಯಾಗಿದ್ದು, ಉಪಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸುರೇಶ್ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕುತೂಹಲ ಮೂಡಿಸಿದ ಕಾರ್ಯಕ್ರಮ
ಇನ್ನು ಒಂದೇ ದಿನ ತಾಲೂಕಿನ ಇಷ್ಟೊಂದು ದೇವಾಲಯಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡುತ್ತಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ನಂತರ ಮೂರು ಹಾಗೂ ಡಿಸಿಎಂ ಆದ ನಂತರ ಎರಡು ಬಾರಿ ತಾಲೂಕಿಗೆ ಭೇಟಿ ನೀಡಿದ್ದಾರೆ. ಡಿಸಿಎಂ ಆದ ನಂತರ ನಗರದಲ್ಲಿ ನಡೆದಿದ್ದ ಗೃಹಲಕ್ಷ್ಮೀ ಸಮಾವೇಶದಲ್ಲಿ ಭಾಗಿಯಾಗಿದ್ದರೆ, ಮತ್ತೊಮ್ಮೆ ಡಿ.ಕೆ.ಸುರೇಶ್ ಪರ ಲೋಕಸಭೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಅದು ಬಿಟ್ಟರೆ ತಾಲೂಕಿನಲ್ಲಿ ಒಂದೇ ದಿನ ಇಷ್ಟೊಂದು ದೇವಾಲಯಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿರಲಿಲ್ಲ.
ಅಚ್ಚರಿ ಅಭ್ಯರ್ಥಿ ಕುರಿತು ವ್ಯಾಪಕ ಚರ್ಚೆ!
ಡಿಸಿಎಂ ಡಿ.ಕೆ.ಶಿವಕುಮಾರ್ ಚನ್ನಪಟ್ಟಣದ ದೇವಾಲಯಗಳ ಭೇಟಿ ಕಾರ್ಯಕ್ರಮ ನಿಗದಿಯಾಗುತ್ತಲೇ ಮತ್ತೆ ಅಚ್ಚರಿ ಅಭ್ಯರ್ಥಿ ಚರ್ಚೆ ಮುನ್ನೆಲೆಗೆ ಬಂದಿದೆ.
ಚನ್ನಪಟ್ಟಣದ ಉಪಚುನಾವಣೆಯಲ್ಲಿನ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಸುವ ಕುರಿತು ಡಿ.ಕೆ.ಸುರೇಶ್ ರಾಮನಗರದಲ್ಲಿ ಒಮ್ಮೆ ಹಾಗೂ ಚನ್ನಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮತದಾರರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಒಮ್ಮೆ ಹೇಳಿಕೆ ನೀಡುವ ಮೂಲಕ ಚರ್ಚೆಗೆ ನಾಂದಿ ಹಾಡಿದ್ದರು. ಇದೀಗ ಕುಮಾರಸ್ವಾಮಿ ರಾಜೀನಾಮೆ ಬೆನ್ನಲ್ಲೆ ಡಿ.ಕೆ.ಶಿವಕುಮಾರ್ ಚನ್ನಪಟ್ಟಣಕ್ಕೆ ಭೇಟಿ ನೀಡುತ್ತಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಒಂದು ಕಡೆ ತಮ್ಮನಿಗೆ ವೇದಿಕೆ ಕಲ್ಪಿಸಲು ಶಿವಕುಮಾರ್ ಚನ್ನಪಟ್ಟಣಕ್ಕೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದ್ದರೆ, ಮತ್ತೊಂದು ಕಡೆ ಶಿವಕುಮಾರ್ ಅವರೇ ಚನ್ನಪಟ್ಟಣದಿಂದ ಕಣಕ್ಕೆ ಇಳಿದರೂ ಆಶ್ಚರ್ಯವಿಲ್ಲ ಎಂಬ ಹೊಸದೊಂದು ಚರ್ಚೆ ಮಂಗಳವಾರ ಬೆಳಗ್ಗಿನಿಂದ ತಾಲೂಕಿನಲ್ಲಿ ವ್ಯಾಪಕವಾಗಿದೆ.
ಇಂದಿನ ಡಿ.ಕೆ.ಶಿವಕುಮಾರ್ ಕಾರ್ಯಕ್ರಮ
ಬುಧವಾರ ಬೆಳಗ್ಗೆ ೧೧ಗಂಟೆಗೆ ಇತಿಹಾಸ ಪ್ರಸಿದ್ಧ ತಾಲೂಕಿನ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಆ ನಂತರ ನಗರದ ಕೋಟೆಯ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಾಲಯ, ಶ್ರೀ ಕಾಳಮ್ಮ ದೇವಾಲಯ, ಶ್ರೀ ವರದರಾಜ ಸ್ವಾಮಿ ದೇವಾಯಲ, ತಾಲೂಕಿನ ದೊಡ್ಡ ಮಳೂರು ಗ್ರಾಮದಲ್ಲಿನ ಶ್ರೀ ಅಪ್ರಮೇಯ ಸ್ವಾಮಿ ದೇವಾಲಯ, ದೇವರಹಳ್ಳಿಯ ಶ್ರೀ ಬೀರೇಶ್ವರ ದೇವಾಲಯ, ಗೌಡಗೆರೆಯ ಶ್ರೀ ಚಾಮುಂಡೇಶ್ವರಿ ದೇವಾಲಯ, ದೇವಹೊಸಹಳ್ಳಿ ಗ್ರಾಮದ ಶ್ರೀ ಸಂಜೀವರಾಯಸ್ವಾಮಿ ದೇವಾಲಯ, ನಗರದ ಹೌಸಿಂಗ್ ಬೋರ್ಡ್‌ನಲ್ಲಿನ ಶ್ರೀ ಮಹದೇಶ್ವರ ದೇವಾಲಯ, ಬಿ.ವಿ.ಹಳ್ಳಿಯ ಶ್ರೀ ಧರ್ಮರಾಯಸ್ವಾಮಿ ದೇವಾಲಯ, ಹುಣಸನಹಳ್ಳಿಯ ಶ್ರೀ ಬಿಸಿಲೇಶ್ವರಿ ದೇವಾಲಯ, ನೇರಳೂರಿನ ಶ್ರೀ ವೈದ್ಯನಾಥಶ್ವೇರ ದೇವಾಲಯ, ಕೂರಣಗೆಯ ಶ್ರೀ ಯೋಗನರಸಿಂಹಸ್ವಾಮಿ ದೇವಾಲಯ, ಕೂಡ್ಲೂರಿನ ಶ್ರೀ ರಾಮಮಂದಿಕ್ಕೆ ಭೇಟಿ ನೀಡಲಿದಾರೆ. ಆ ನಂತರ ನಗರದ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ದೇವಾಲಯಗಳ ಭೇಟಿ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ಪ್ರಮೋದ್, ಸುನೀಲ್ ಮನವಿ ಮಾಡಿದ್ದಾರೆ.