ಸಚಿವ ಗಡ್ಕರಿ ಭೇಟಿ ಮಾಡಿದ ಕೈ ಸಂಸದ ಡಿ.ಕೆ.ಸುರೇಶ್
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ ಅವರು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೆಟಿ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ.
ಚನ್ನಪಟ್ಟಣ [ನ.30]: ರಾಷ್ಟ್ರೀಯ ಹೆದ್ದಾರಿ 275ಕ್ಕೆ ನಗರದ ಹೊರವಲಯದಲ್ಲಿ ನಿರ್ಮಿಸುತ್ತಿರುವ ಬೈಪಾಸ್ ರಸ್ತೆಗೆ ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಎಕ್ಸಿಟ್(ಲಿಂಕ್ ರಸ್ತೆ) ನಿರ್ಮಾಣ ಮಾಡಬೇಕು ಎಂಬ ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಿರುವ ಸಂಸದ ಡಿ.ಕೆ. ಸುರೇಶ್ ಈ ಸಂಬಂಧ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಡಿ.ಕೆ. ಸುರೇಶ್, ತಿಟ್ಟಮಾರನಹಳ್ಳಿ ಬಳಿ ಎಕ್ಸಿಟ್ ನಿರ್ಮಿಸುವುದರಿಂದ ಸಾರ್ವಜನಿಕರಿಗೆ ಆಗುವ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ರಸ್ತೆಯ ಎರಡೂ ಬದಿ 10 ಕಿ.ಮೀ ದೂರದಲ್ಲಿ ಯಾವುದೇ ಎಕ್ಸಿಟ್ ಇಲ್ಲದ ಕಾರಣ ಪ್ರಯಾಣಿಕರಿಗೆ ಸಮಸ್ಯೆಯಾಗಲಿದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪೂರಕ ಸ್ಪಂದನೆ: ಸಂಸದ ಡಿ.ಕೆ.ಸುರೇಶ್ ಅವರ ಮನವಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಪೂರಕವಾಗಿ ಸ್ಪಂದಿಸಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮೊದಲು ರಾಜ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಹ ಕೇಂದ್ರ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಸಾರ್ವಜನಿಕರಿಗೆ ಅನುಕೂಲ:
ಬೆಂಗಳೂರು-ಹಾಸನ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಸಾವಿರಾರು ಪ್ರಯಾಣಿಕರು ಪ್ರತಿ ನಿತ್ಯ ಸಂಚರಿಸುತ್ತಿರುತ್ತಾರೆ. ಹೊಸ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ನೀಲನಕ್ಷೆಯ ಪ್ರಕಾರ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಪಡೆಯಲು ಸರ್ವಿಸ್ ರಸ್ತೆಯಲ್ಲಿ ಸುಮಾರು 10 ಕಿ.ಮೀ ದೂರ ಅಂತರವಿರುವ ಕಾರಣ ಪ್ರಯಾಣಿಕರಿಗೆ ಸಾಕಷ್ಟುಅನಾನುಕೂಲವಾಗುತ್ತಿದ್ದು, ತಿಟ್ಟಮಾರನಹಳ್ಳಿ ಗ್ರಾಮದ ಬಳಿ ಸಂಪರ್ಕ ಕಲ್ಪಿಸಿದಲ್ಲಿ ಪ್ರಯಾಣಿಕರಿಗೆ ಉಪಯೋಗವಾಗಲಿದೆ.