Asianet Suvarna News Asianet Suvarna News

ಕಾವೇರಿ ನದಿ ನೀರಿನ ಮಾಲಿನ್ಯದ ಬಗ್ಗೆ ವರದಿಗೆ ಡಿಕೆಶಿ ಆದೇಶ

ನಾಡಿನ ಜೀವನದಿ ಕಾವೇರಿ ನದಿಗೆ ತ್ಯಾಜ್ಯ ನೀರು ಬಿಡುವ ದೂರಿನ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅದನ್ನು ತಡೆಯಲು ಸ್ಥಳೀಯ ಪ್ರಾಧಿಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಿ ವರದಿ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದ್ದಾರೆ.

DK SHivakumar orders report on Cauvery river water pollution    snr
Author
First Published Jun 26, 2024, 12:22 PM IST | Last Updated Jun 26, 2024, 12:22 PM IST

 ಮಂಡ್ಯ : ನಾಡಿನ ಜೀವನದಿ ಕಾವೇರಿ ನದಿಗೆ ತ್ಯಾಜ್ಯ ನೀರು ಬಿಡುವ ದೂರಿನ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಅದನ್ನು ತಡೆಯಲು ಸ್ಥಳೀಯ ಪ್ರಾಧಿಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಿ ವರದಿ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದ್ದಾರೆ.

ನದಿಗೆ ತ್ಯಾಜ್ಯ ನೀರು ಸೇರ್ಪಡೆಯಾಗಿ ಕಲುಷಿತಗೊಳ್ಳುತ್ತಿದ್ದು ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳಬೇಕೆಂಬ ಶಾಸಕ ದಿನೇಶ್ ಗೂಳಿಗೌಡ ಅವರ ಮನವಿಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.

ನದಿ ನೀರು ಮಲೀನಗೊಳ್ಳದಂತೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಲಿಖಿತವಾಗಿ ಆದೇಶಿಸಿದ್ದಾರೆ.

ಅರಣ್ಯ ಮತ್ತು ಪರಿಸರ ಸಚಿವರಾದ ಈಶ್ವರ ಖಂಡ್ರೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಸಮಿತಿ ರಚಿಸಿ ಎರಡು ವಾರದಲ್ಲಿ ವಿಸ್ತಾರವಾದ ವರದಿ ಸಲ್ಲಿಸಲು ಕ್ರಮಕೈಗೊಳ್ಳುವಂತೆ ಅರಣ್ಯ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ.

ಕಾವೇರಿ ನದಿಗೆ ತ್ಯಾಜ್ಯ ಮಿಶ್ರಿತ ನೀರು ಪೂರೈಕೆ ಆಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಶಾಸಕ ದಿನೇಶ್ ಗೂಳಿಗೌಡ ಅವರು, ಈ ಸಂಬಂಧ ತ್ಯಾಜ್ಯ ಮಿಶ್ರಿತ ನೀರು ತಡೆಗೆ ಕ್ರಮವಹಿಸಿ ತನಿಖಾ ತಂಡ ರಚನೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದರು. ಈ ಮನವಿಗೆ ಸರ್ಕಾರ ತ್ವರಿತವಾಗಿ ಸ್ಪಂದಿಸುವ ಮೂಲಕ ಮಾಲಿನ್ಯಗೊಳ್ಳುತ್ತಿರುವ ಕಾವೇರಿ ನದಿಯ ಶುದ್ಧೀಕರಣಕ್ಕೆ ಸರ್ಕಾರ ಕಾರ್ಯ ಪ್ರವೃತ್ತವಾದಂತಿದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದ ಶಾಸಕ ದಿನೇಶ್ ಗೂಳಿಗೌಡ ಅವರ ಪ್ರಯತ್ನ ಫಲಿಸಿದಂತಾಗಿದೆ.

ಡಿಸಿಎಂ ಮತ್ತು ಕೈಗಾರಿಕಾ ಸಚಿವರ ಆದೇಶದ ಕುರಿತಂತೆ ಪ್ರತಿಕ್ರಿಯಿಸಿರುವ ಕಾವೇರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಈ ಕುರಿತು ಪರಿಶೀಲಿಸಿ, ಚರ್ಚಿಸಿ ಕಡತ ಮಂಡಿಸುವುದಾಗಿ ತಿಳಿಸಿದ್ದಾರೆ.

ಕೇಂದ್ರ ಮಾಲಿನ್ಯ ವರದಿಯಲ್ಲೂ ಉಲ್ಲೇಖ

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನದಿಗಳ ಮಾಲಿನ್ಯದ ಬಗ್ಗೆ ೨೦೨೩ರಲ್ಲಿ ವರದಿ ನೀಡಿದ್ದು, ಅದರಲ್ಲಿ ಕಾವೇರಿ ನದಿಯ ನೀರೂ ಕಲುಷಿತವಾಗಿರುವ ಬಗ್ಗೆಯೂ ಪ್ರಸ್ತಾಪಿಸಲಾಗಿತ್ತು. ಕಾವೇರಿ ಕರ್ನಾಟಕದ ಜೀವ ನದಿಯಾಗಿದೆ. ಕುಡಿಯುವ ನೀರು ಪೂರೈಸುವುದು ಮಾತ್ರವಲ್ಲದೇ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಹಸನು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಕೂಡಲೇ ತಾಂತ್ರಿಕ ಪರಿಣಿತರ ತನಿಖಾ ತಂಡವನ್ನು ರಚಿಸಬೇಕು ಎಂದು ದಿನೇಶ್ ಗೂಳಿಗೌಡ ಸರ್ಕಾರವನ್ನು ಒತ್ತಾಯಿಸಿದ್ದರು.

ಮನವಿಯಲ್ಲೇನಿತ್ತು..?

ಕಾವೇರಿ ನದಿಯಿಂದ ಬೆಂಗಳೂರು ನಗರದ ಕುಡಿಯುವ ನೀರು ಪೂರೈಕೆಗಾಗಿ ೧೯ ಟಿಎಂಸಿ ನೀರನ್ನು ಬಳಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಪ್ರಸ್ತುತ ಬೆಂಗಳೂರು ಜಲಮಂಡಳಿಯು ಕಾವೇರಿ ನೀರು ಸರಬರಾಜು ಯೋಜನೆಯ ಮೂಲಕ ೧೪೪೦ ಎಂಎಲ್‌ಡಿಯಷ್ಟು ನೀರನ್ನು ನಗರಕ್ಕೆ ಪೂರೈಸುತ್ತಿದೆ.

ಬೆಂಗಳೂರು ನಗರ ಮಾತ್ರವಲ್ಲದೆ ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಜಿಲ್ಲೆಯ ಜನತೆಗೆ ಕುಡಿಯುವ ನೀರಿನ ದಾಹವನ್ನು ನೀಗಿಸುತ್ತಿರುವ ಕಾವೇರಿ ನದಿ ನೀರು ವಿಷವಾಗಿ ಮಾರ್ಪಡುತ್ತಿದೆ. ಒಳಚರಂಡಿ ನೀರು ಹಾಗೂ ಹಲವು ಕೈಗಾರಿಕೆಗಳ ತ್ಯಾಜ್ಯದಿಂದ ನದಿಯು ನೈಸರ್ಗಿಕ ಗುಣ ಕಳೆದುಕೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಉಗಮಿಸುವ ಕಾವೇರಿ ಹರಿಯುವ ಮಾರ್ಗದ ಕುಶಾಲನಗರ, ಹುಣಸೂರು, ಪಿರಿಯಾಪಟ್ಟಣ, ಕೆ.ಆರ್‌.ನಗರ, ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ, ನಂಜನಗೂಡು, ಟಿ.ನರಸೀಪುರ, ಕೊಳ್ಳೇಗಾಲ ಮುಂತಾದ ಪ್ರಮುಖ ನಗರ-ಪಟ್ಟಣಗಳ ಭಾಗದಲ್ಲಿ ಹಲವು ಕಾರ್ಖಾನೆಗಳು ತಲೆ ಎತ್ತಿದ್ದು ಅದರ ತ್ಯಾಜ್ಯವನ್ನು ಸರಿಯಾಗಿ ಸಂಸ್ಕರಿಸದೆ ನೇರವಾಗಿ ನದಿಗೆ ಹರಿಯ ಬೀಡುತ್ತಿರುವುದರಿಂದ ನದಿಯ ನೀರು ಸಂಪೂರ್ಣ ಕಲುಷಿತಗೊಂಡು ಮಲಿನಗೊಳ್ಳುತ್ತಿದೆ. ಕೈಗಾರಿಕಾ ಪ್ರದೇಶದಿಂದ ಶುದ್ದೀಕರಿಸದ ತ್ಯಾಜ್ಯ ನೀರು ನದಿ ಸೇರುತ್ತಿದ್ದು ಕೆಮಿಕಲ್ ಮಿಶ್ರಿತ ನೀರಿನಿಂದ ನೊರೆ ಸೃಷ್ಟಿಯಾಗಿ, ಜಲಚರಗಳಿಗೆ ಮಾರಣಾಂತಿಕವಾಗುತ್ತಿದೆ ಎಂದೂ ಹೇಳಿದ್ದರು.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ೨೦೨೩ರಲ್ಲಿ ನದಿಗಳ ಮಾಲಿನ್ಯದ ಬಗ್ಗೆ ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಕಾವೇರಿ ಕೂಡ ಸೇರಿದೆ. ನದಿ ನೀರನ್ನು ಪರೀಕ್ಷೆಗೆ ಒಳಪಡಿಸಬೇಕು. ಅದರ ಗುಣಮಟ್ಟದ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕಿದೆ ಎಂದು ಕೂಡ ವರದಿ ತಿಳಿಸಿತ್ತು.

ಸಿಪಿಸಿಬಿ ವರದಿ ಪ್ರಕಾರ, ಶುದ್ಧ ನೀರಿನಲ್ಲಿ ಪ್ರತಿ ಲೀಟರ್ ನೀರಿನಲ್ಲಿ ೧ ಎಂಜಿಗಿಂತ ಕಡಿಮೆ ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್ (ಬಿಒಡಿ) ಪ್ರಮಾಣ ಇರಬೇಕು. ಆದರೆ, ಕಾವೇರಿ ನದಿಯಲ್ಲಿ ೬ ಎಂಜಿಯಷ್ಟಿದೆ ಎಂಬುದನ್ನು ತಿಳಿಸಿದ್ದು, ಇದು ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ.

ತನಿಖಾ ತಂಡ ರಚನೆಗೆ ಒತ್ತಾಯ:

ಕೈಗಾರಿಕೆ ತ್ಯಾಜ್ಯ, ಘನ ತ್ಯಾಜ್ಯ ಅಪಾಯದ ಪ್ರಮಾಣ ಮೀರಿ ನದಿ ನೀರಿಗೆ ಸೇರ್ಪಡೆಯಾಗುತ್ತಿರುವುದರಿಂದ ಇದರ ತಡೆಗೆ ಸರ್ಕಾರ ಕ್ರಮವಹಿಸಬೇಕಿದೆ. ಇದಕ್ಕಾಗಿಯೇ ತಾಂತ್ರಿಕ ಪರಿಣಿತರ ತನಿಖಾ ತಂಡವನ್ನು ರಚನೆ ಮಾಡುವುದರಿಂದ ಕೈಗಾರಿಕಾ ಪ್ರದೇಶ, ಯುಜಿಡಿ ಮಿಕ್ಸಿಂಗ್ ಲಿಂಕ್, ಹೋಟೆಲ್ ಹಾಗೂ ರೆಸಾರ್ಟ್ ಇತರ ಪ್ರದೇಶಗಳಿಂದ ಬರುವ ಮಲಿನ ನೀರು ಪವಿತ್ರ ಕಾವೇರಿ ನದಿ ಒಡಲು ಸೇರದಂತೆ ನಿಗಾವಹಿಸಬಹುದು ಎಂದು ತಿಳಿಸಿದ್ದರು.

ಇದರಿಂದ ಸರ್ಕಾರ ಬೆಂಗಳೂರಿನ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ಆರೋಗ್ಯವನ್ನು ಕಾಪಾಡಲು ಸಹಾಯಕವಾಗಲಿದೆ. ನದಿ ನೀರು ಸ್ವಚ್ಛವಾಗಿ ಜಲಚರಗಳು, ನದಿ ನೀರು ಅವಲಂಬಿತ ಪ್ರದೇಶಗಳ ಜನರ ಆರೋಗ್ಯ ಕೂಡ ಸುಧಾರಿಸಲಿದೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಮನವಿ ಮಾಡಿದ್ದರು.

Latest Videos
Follow Us:
Download App:
  • android
  • ios