ಡಿಕೆಶಿ ಕಾಂಗ್ರೆಸ್‌ಗೆ ಕರೆದಿದ್ದಾರೆ : ಜೆಡಿಎಸ್ ನಾಯಕ ಮಧು ಬಂಗಾರಪ್ಪ
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾಂಗ್ರೆಸ್‌ಗೆ ಕರೆದಿದ್ದಾರೆ ಎಂದು ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಹೇಳಿದ್ದಾರೆ.
ಕೋಲಾರ (ನ.20): ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಸೋತ ಬಳಿಕ ರಾಜಕೀಯವಾಗಿ ಬಹುತೇಕ ನಿಷ್ಕ್ರೀಯವಾಗಿದ್ದ, ಜೆಡಿಎಸ್ ಪಕ್ಷದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಇದೀಗ, ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಕಾಂಗ್ರೆಸ್‌ಗೆ ಆಹ್ವಾನಿಸಿದ್ದು, ನಾನಿನ್ನೂ ಹೋಗುವ ಬಗ್ಗೆ ತೀರ್ಮಾನ ಮಾಡಿಲ್ಲ’ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕೋಲಾರಕ್ಕೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ನಮ್ಮ ಫ್ಯಾಮಿಲಿ ಫ್ರೆಂಡ್, ಅವರು ನಮ್ಮ ತಂದೆ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ತುಂಬಾ ಹತ್ತಿರದವರಾಗಿದ್ದರು. ಹೀಗಾಗಿ ನಮಗೂ ಅವರಿಗೂ ಒಂದು ನಿಕಟವಾದ ಸಂಬಂಧವಿದೆ. ಇದರ ಜತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ನನ್ನ ಗೆಲುವಿಗೆ ಕಾಂಗ್ರೆಸ್‌ನವರೂ ಹೆಚ್ಚಿಗೆ ಶ್ರಮ ಪಟ್ಟಿದ್ದೂ ಇದೆ. ಹೀಗಾಗಿ ನಾನು ಸಿಕ್ಕಿದಾಗೆಲ್ಲಾ ನನ್ನನ್ನು ಕಾಂಗ್ರೆಸ್‌ಗೆ ಬಂದು ಬಿಡು ಎಂದು ಡಿ.ಕೆ.ಶಿವಕುಮಾರ್ ಕರೆಯುತ್ತಿದ್ದರು. ಅದು ಬಿಟ್ಟರೆ ಬೇರೇನೂ ಇಲ್ಲ ಎಂದರು.
ಜೇನಿಗೆ ಕಲ್ಲು ಹೊಡೆಯೋ ಕೆಲಸ ಬೇಡ : ಮಧು ಬಂಗಾರಪ್ಪ ...
ಡಿ.ಕೆ.ಶಿವಕುಮಾರ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಎರಡು ಕಣ್ಣುಗಳಿದ್ದಂತೆ, ನನಗೆ ಇಬ್ಬರೂ ಬೇಕು ಎಂದ ಮಧು ಬಂಗಾರಪ್ಪ, ನಾನು ಸದ್ಯ ಇನ್ನು ಜೆಡಿಎಸ್ ಪಕ್ಷದಲ್ಲೆ ಇದ್ದೇನೆ ಎಂದು ತಿಳಿಸಿದರು.
ಇದೇವೇಳೆ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿಮತ್ತು ಎಚ್.ವಿಶ್ವನಾಥ್ ಅವರಿಗೂ ಮಂತ್ರಿ ಸ್ಥಾನ ಕೊಡಬೇಕಿತ್ತು ಅಭಿಪ್ರಾಯಪಟ್ಟರು. ಅಧಿಕಾರದಲ್ಲಿದ್ದಾಗ ನಮ್ಮ ಪಕ್ಷದಲ್ಲಿದ್ದವರಿಗೆ ಸ್ಥಾನಮಾನ ನೀಡಿಲ್ಲ. ಇದರಿಂದಾಗಿ ಕೆಲವು ಏರುಪೇರುಗಳಿಗೆ ಕಾರಣವಾಯಿತು ಎಂದರು.