ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಾಟಕಕಾರ,ತಾನು ಅಧ್ಯಕ್ಷನೆಂದು ತೋರಿಸಿಕೊಳ್ಳಲು ಈ ರೀತಿ ನಾಟಕ ಆಡುತ್ತಿದ್ದಾರೆ. ಅವರಿಗೆ ಮುಸಲ್ಮಾನರನ್ನು ಬಿಟ್ಟರೆ ರಾಜಕೀಯ ಜೀವನವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದ್ದಾರೆ. 

ಕೋಲಾರ(ಏ.28): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಾಟಕಕಾರ,ತಾನು ಅಧ್ಯಕ್ಷನೆಂದು ತೋರಿಸಿಕೊಳ್ಳಲು ಈ ರೀತಿ ನಾಟಕ ಆಡುತ್ತಿದ್ದಾರೆ. ಅವರಿಗೆ ಮುಸಲ್ಮಾನರನ್ನು ಬಿಟ್ಟರೆ ರಾಜಕೀಯ ಜೀವನವಿಲ್ಲ. ಅದಕ್ಕಾಗಿ ಮುಸಲ್ಮಾನರು ಬೇಕಾಗಿದ್ದಾರೆ, ಅವರ ಓಲೈಕೆಗಾಗಿ ನಿಮ್ಮ ಪರ ನಾವಿದ್ದೇವೆ ಎನ್ನುವ ನಾಟಕೀಯ ಹೇಳಿಕೆ ನೀಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದರು.

ಕೋಲಾರಕ್ಕೆ ಸೋಮವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೋಹನ್‌ಭಾಗವತ್‌ ಅವರು ತಬ್ಲಿಘಿ ಪ್ರಕರಣ ರಾಷ್ಟ್ರೀಯ ವಿಚಾರವಾಗಿದ್ದು, ಎಲ್ಲರೂ ಒಂದಾಗಿ ಹೋಗಬೇಕು ಎಂದು ಹೇಳಿದ್ದಾರೆ. ಆದರೆ ಡಿಕೆಶಿ ಮುಸಲ್ಮಾರನ್ನೇ ಎತ್ತಿಕಟ್ಟಿನಾವು ನಿಮ್ಮ ಪರವಾಗಿದ್ದೇವೆ ಎನ್ನುತ್ತಾರೆ. ತಾವು ಕೆಪಿಸಿಸಿ ಅಧ್ಯಕ್ಷ ಎಂಬುದನ್ನು ತೋರಿಸಿಕೊಳ್ಳಿ ಹೀರೆಲ್ಲ ಮಾತನಾಡುತ್ತಾರೆ. ಇವರನ್ನು ರಾಜ್ಯದ ಜನರು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದರು.

ಎಲ್ಲ ನಾಟಕದಲ್ಲೂ ಡಿಕೆಶಿ ವಿಫಲ

ರಾಜ್ಯದಿಂದ ಪಡಿತರ ಅಕ್ಕಿಯನ್ನು ಪಡೆದು ಕೇರಳದಲ್ಲಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ಆರೋಪ ಮಾಡಿದ್ದಾರೆ. ಕೆಪಿಸಿಸಿಗೆ ಅಧ್ಯಕ್ಷರಾಗಿ ಹೊಸದಾಗಿ ಆಯ್ಕೆಯಾಗಿರುವ ಅವರು ಸರಕಾರದ ವಿರುದ್ಧ ನಾನು ಏನೋ ಒಂದು ಮಾಡುತ್ತಿದ್ದೇನೆ ಎನ್ನುವುದನ್ನು ತೋರಿಸಿಕೊಳ್ಳುವುದಕ್ಕಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಡಿಕೆಶಿ ಎಲ್ಲ ನಾಟಕದಲ್ಲಿ ವಿಫಲವಾಗಿರುವಂತೆಯೇ ಈ ನಾಟಕದಲ್ಲೂ ವಿಫಲವಾಗುತ್ತಾರೆ ಎಂದು ಛೇಡಿಸಿದರು.

ಕೇಂದ್ರ ಸಚಿವರ ವಿರುದ್ದ ವಾಗ್ದಾಳಿ:

ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ಸಚಿವರ ವಿರುದ್ದವೇ ಈಶ್ವರಪ್ಪ ಕಿಡಿಕಾರಿದರು. ನರೇಗಾ ಶುರು ಮಾಡಿರುವ ವಿರುದ್ದ ಪ್ರಧಾನಿಗೆ ಕೇಂದ್ರ ಸಚಿವರು ದೂರು ಕೊಟ್ಟಿರುವ ಹಿನ್ನೆಲೆ ಗರಂ ಆದ ಈಶ್ವರಪ್ಪ ಕೇಂದ್ರ ಸಚಿವರು ಈ ಬಗ್ಗೆ ಪ್ರಧಾನಿ ಜೊತೆ ಚರ್ಚಿಸಲಿ. ಪ್ರಧಾನಿ ಸೂಚನೆ ಮೇರೆಗೆ ಪ್ರಾರಂಭಿಸಿರುವ ನರೇಗಾ ಕೆಲಸವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ಲಾಕ್‌ಡೌನ್‌ ಇರುವುದರಿಂದ ಕೂಲಿ ಕಾರ್ಮಿಕರಿಗೆ ತೊಂದರೆ ಆಗಬಾರದು ಎನ್ನುವ ದೃಷ್ಟಿಯಲ್ಲಿ ಅವರ ಕೈಗೆ ಕೆಲಸ ಕೊಡಲು ನರೇಗಾ ಕೆಲಸವನ್ನು ಆರಂಭಿಸಿದ್ದೇವೆ ಎಂದರು.

ಲಾಕ್‌ಡೌನ್‌ ಸಡಿಲಿಸಲಿ:

ಲಾಕ್‌ಡೌನ್‌ ಸಡಿಲ ಆಗಲೇಬೇಕಿದ್ದು, ಸೂಚನೆಗಳನ್ನು ಅನುಸರಿಸಿ ಲಾಕ್‌ಡೌನ್‌ ಸಡಿಲಗೊಳಿಸಿದರೆ ಯಾವುದೇ ತೊಂದರೆಯಾಗುವುದಿಲ್ಲ. ಜನರು ಎಷ್ಟುದಿನ ಎಂದು ಮನೆಗಳಲ್ಲಿ ಇರಲು ಸಾಧ್ಯವಾಗುತ್ತದೆ. ಕೊರೊನಾದಿಂದ ಪ್ರಪಂಚಕ್ಕೆ ತೊಂದರೆಯಿದೆ, ಶಿಸ್ತನ್ನು ನಿರ್ವಹಣೆ ಮಾಡಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಸಮಸ್ಯೆ ಕಡಿಮೆಯಾಗಿದೆ ಎಂದು ತಿಳಿಸಿದರು.

ಈಗಾಗಲೇ 2 ತಿಂಗಳಿಗೆ ಆಗುವಷ್ಟುಪಡಿತರ ನೀಡಲಾಗಿದ್ದು, ಮತ್ತೆ 3 ತಿಂಗಳಿಗೆ ಆಗುವಷ್ಟುನೀಡಲು ಕ್ರಮಕೈಗೊಳ್ಳಲಾಗುತ್ತಿದೆ. ಅಲ್ಲದೆ ಸಂಘಸಂಸ್ಥೆಗಳಿಂದಲೂ ಸಾಕಷ್ಟುನೆರವು ನೀಡಲಾಗುತ್ತಿದೆ, ಆದರೂ ಬೇರೆಯವರು ನೀಡುವುದರಲ್ಲಿ ಎಷ್ಟುದಿನ ಎಂದು ಕಾಲ ಹಾಕಲು ಸಾಧ್ಯ. ಸ್ವಾಭಿಮಾನದಿಂದ ಬದುಕಬೇಕು ಎನ್ನುವುದು ಜನರಲ್ಲಿ ಬಂದಿದೆ. ಆ ನಿಟ್ಟಿನಲ್ಲಿ ಲಾಕ್‌ಡೌನ್‌ ಸಡಿಲಗೊಳಿಸುವುದರಿಂದ ಜನರು ಶಿಸ್ತುಬದ್ಧ ಜೀವನವನ್ನು ಸ್ವಂತವಾಗಿ ದುಡಿದು ನಿರ್ವಹಿಸಿಕೊಳ್ಳುತ್ತಾರೆ ಎಂದರು.

ಜಮೀರ್‌ ತಿದ್ದಿಕೊಂಡಿದ್ದಾರೆ:

ಶಾಸಕ ಜಮೀರ್‌ ಅಹಮದ್‌ಖಾನ್‌ ಅವರು ಈ ಮೊದಲು ಮಾಡಿರುವುದು ತಪ್ಪು ಎಂದು ತಿಳಿದುಕೊಂಡಿದ್ದಾರೆ. ಹಾಗಾಗಿ ಮತ್ತೆ ಅದೇ ತಪ್ಪನ್ನು ಮಾಡಬಾರದು. ಆಶಾ ಕಾರ್ಯಕರ್ತೆಯರು ತಮ್ಮ ಜೀವವನ್ನೇ ಪಣಕ್ಕಿಟ್ಟು ಅನೇಕರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಮುಂದಾಗುತ್ತಿದ್ದಾಗ ಧರ್ಮ, ರಾಜಕಾರಣವನ್ನು ತಂದು ಗಲಭೆ ಮಾಡಿದ್ದರಿಂದಾಗಿ ಸಾಕಷ್ಟುತೊಂದರೆಯಾಗಿದೆ. ತಪ್ಪು ಮಾಡಿದವರಿಗೆ ಬುದ್ಧಿ ಹೇಳಬೇಕಾಗಿದೆ ಎಂದು ಸಲಹೆ ನೀಡಿದರು.