ರಾಮನಗರ [ಸೆ.04]:  ಇ ಡಿ ವಿಚಾರಣೆ ಮಾಡುವಾಗ ಮಾನವೀಯತೆಯನ್ನೇ ಕಳೆದುಕೊಳ್ಳುತ್ತಾರೆ ಎಂಬುದು ನನಗೆ ಗೊತ್ತಿರಲಿಲ್ಲ. ಡಿಕೆಶಿ ಅವರಿಗೆ ಮಾನಸಿಕವಾಗಿ ಚಿತ್ರ ಹಿಂಸೆ ನೀಡಿದ್ದಾರೆ‌.  ಗಾಣಕ್ಕೆ ಹಾಕಿ‌ ಅರೆದಿದ್ದಾರೆ ಎಂದು ಎಂಎಲ್ ಸಿ‌.ಎಂ.ಲಿಂಗಪ್ಪ ವಿಷಾಧಿಸಿದರು.

ಡಿಕೆಶಿ ಬಂಧನ ಹಿನ್ನೆಲೆ ರಾಮನಗರದಲ್ಲಿ ಇಂದು ನಡೆದ ಕಾಂಗ್ರೆಸ್-ಜೆಡಿಎಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಿಂಗಪ್ಪ ಇ ಡಿ‌ ವಿಚಾರಣೆ ವೇಳೆ ಡಿಕೆಶಿ ಅವರಿಗೆ  ಅನಾರೋಗ್ಯ ಸಮಸ್ಯೆ ಉಲ್ಬಣಿಸಿತ್ತು. ಹೀಗಿದ್ದರೂ, ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿ ನೀಡುವಂತೆ ವೈದ್ಯರ ಬಳಿ ಮನವಿ ಮಾಡಿತ್ತು. ಒಟ್ಟಿನಲ್ಲಿ ವಿಚಾರಣೆ ನೆಪದಲ್ಲಿ ಇ ಡಿ ಮತ್ತೊಬ್ಬರ ಸಾವಿಗೂ ಕಾರಣವಾಗುತ್ತದೆ ಎಂದರು.

ಕೆಟ್ಟದಾಗಿ‌ ನಮ್ಮ ಕಾನೂನುಗಳು ದುರ್ಬಳಕೆಯಾಗುತ್ತಿದೆ. ಡಿಕೆಶಿಗೆ ಊಟವನ್ನು ಸರಿಯಾಗಿ ನೀಡುತ್ತಿರಲಿಲ್ಲ. ಮಾನಸಿಕ ಸ್ಥಿತಿಯನ್ನು ಹಾಳು ಮಾಡುವ ರೀತಿ ಅವರ ವಿಚಾರಣೆ ನಡೆಸಲಾಗಿದೆ. ಬೆಳೆಯುತ್ತಿರುವ ನಾಯಕರ ಮೇಲೆ ಈ ರೀತಿ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದರು.   

ಬಿಜೆಪಿ ಮುಂದೆ ಯಾರೂ ಬೆಳೆಯುವಂತಿಲ್ಲ. ಒಟ್ಟಿನಲ್ಲಿ ಗುಜರಾತ್ ಕಾಂಗ್ರೆಸ್ ‌ಶಾಸಕರಿಗೆ ಡಿಕೆಶಿ ರಕ್ಷಣೆ ಹಾಗು ಆಶ್ರಯ ನೀಡಿದ್ದೆ ಇಂದಿನ ಅವರ ಈ ಸ್ಥಿತಿಗೆ ಕಾರಣವಾಗಿದೆ ಎಂದು ವಿಷಾಧಿಸಿದರು.

ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಬಾಲಕೃಷ್ಣ, ಡಿಕೆಶಿ ಅವರ ಪಾಲಿಗೆ ಕೋರ್ಟ್ ಇದೆ. ನಮಗೆ ನ್ಯಾಯ ದೊರೆಯಲಿದೆ. ಡಿಕೆಶಿ ಅವರಿಗೆ ಮನೋ ಸ್ಥೈರ್ಯ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ. ರಾಜಕೀಯದ ದೃಷ್ಟಿಯಿಂದ ಡಿಕೆಶಿ ಅವರ ಮೇಲೆ‌ ಇಲ್ಲ ಸಲ್ಲದ ಕೇಸ್ ಗಳನ್ನು ಹಾಕಿದ್ದಾರೆ. ಅವರಿಗೆ ನೈತಿಕ ಬೆಂಬಲ‌ ಸೂಚಿಸುವುದು ನಮ್ಮೆಲ್ಲರ ಕರ್ತವ್ಯ. ಅದನ್ನು ನಾವು ಮಾಡುತ್ತಿದ್ದೆವೆ ಎಂದು ಹೇಳಿದರು.

ಡಿಕೆಶಿ ಅವರು ಇಡಿಯ ಎಲ್ಲ ತನಿಖೆಗೂ ಸಹಕಾರ ನೀಡಿದ್ದಾರೆ. ಹೀಗಿದ್ದರೂ, ಅವರಿಗೆ ಹಬ್ಬದ ದಿನ ರಿಲಿಫ್ ನೀಡಿಲ್ಲ. ಹಿರಿಯರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿಲ್ಲ. ಇನ್ನು ಗುಜರಾತ್ ಶಾಸಕರನ್ನು ನಮ್ಮ ರಾಜ್ಯಕ್ಕೆ ಕರೆತರಲಾಗಿತ್ತು. ಅವರೆಲ್ಲರು ನಮ್ಮ ಕಾಂಗ್ರೆಸ್ ಶಾಸಕರು‌. ನಮ್ಮ ಪಕ್ಷ ಬಲ ಪಡಿಸಲು ಈ ಕೆಲಸ ಮಾಡಲಾಗಿತ್ತು. ಆದರೆ, ಇದಕ್ಕೆ ಪ್ರತಿಕಾರ ತೀರಿಸಲಾಗುತ್ತಿದೆ ಎಂದರು.   

ಗುರುವಾರ ಜಿಲ್ಲೆ ಬಂದ್ .!

ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಜಂಟಿಯಾಗಿ ಗುರುವಾರ ರಾಮನಗರ ಜಿಲ್ಲೆಯ ಬಂದ್ ಗೆ ಕರೆ ನೀಡಲಾಗಿದೆ. ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆವರೆಗೂ ಬಂದ್ ಆಚರಿಸಲಾಗುತ್ತದೆ. ಎರಡು ಪಕ್ಷಗಳ ವತಿಯಿಂದ ಬಂದ್ ಕರೆಯಲಾಗಿದೆ ಎಂದು ಇಲ್ಲಿ ಕಾಂಗ್ರೆಸ್ ಜೆಡಿಎಸ್ ಮುಖಂಡರು ತಿಳಿಸಿದರು.