ಮೂಡುಬಿದಿರೆ[ಸೆ.12]: ವಾಲ್ಪಾಡಿ- ಆನೆಗುಡ್ಡೆ, ಧರೆಗುಡ್ಡೆ ಹೀಗೆ ಎರಡು ಗ್ರಾಮಗಳ ಪರಿಸರದ ಸುಮಾರು 60 ಕುಟುಂಬಗಳಿಗೆ ಸಂಪರ್ಕ ಸೇತುವೆಯಾಗಿದ್ದ ಅರ್ಬಿ ಸೇತುವೆ ಕಳೆದ ಐದು ವರ್ಷಗಳ ಹಿಂದೆ ಕುಸಿದು ನೀರಿನಲ್ಲಿ ಕೊಚ್ಚಿ ಹೋಗಿದೆ. ಅಂದಿನಿಂದ ಇಂದಿನವರೆಗೂ ಸ್ಥಳೀಯರು ಸೇತುವೆಗಾಗಿ ಹೋರಾಡಿದ್ದೇ ಬಂತು. ಆದರೆ ಅವರ ಕನಸಿನ್ನೂ ನನಸಾಗಿಲ್ಲ.

ಗ್ರಾಮಸ್ಥರು, ಶಾಲಾ ಮಕ್ಕಳು ಹೀಗೆ ಅಗತ್ಯ ಕಾರ್ಯಗಳಿಗೆಂದು ಪೇಟೆಗೆ ಬರುವವರು ನಾಲ್ಕಾರು ಕಿ.ಮೀ ಸುತ್ತಾಡಿ ಓಡಾಡುವಂತಾಗಿರುವುದು ಸದ್ಯದ ಪರಿಸ್ಥಿತಿ. ಈ ನಡುವೆ ಸ್ಥಳೀಯ ದೈವದ ಗರಡಿಯೊಂದರ ಸೋಣದ ಕೋಲಕ್ಕೂ ಭಂಡಾರ ತರುವ ಅನಿವಾರ್ಯತೆಯಿಂದಾಗಿ ಭಜಕರು ಜೀವದ ಹಂಗು ತೊರೆದು ಹರಿವ ನೀರಿಗಿಳಿದು ದಾಟಬೇಕಾಗಿ ಬಂದಿರುವುದು ವಿಪರ್ಯಾಸ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಸೇತುವೆ ಕುಸಿದಾಗ ಪರಿಸರದ ಜನರು ಸೇತುವೆಯ ನಿರ್ಮಾಣ ಮಾಡಬೇಕೆಂದು ಜನಪ್ರತಿನಿಧಿಗಳ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಜಲಾನಯನ ಇಲಾಖೆಯವರು ಸಣ್ಣ ಕಾಮಗಾರಿಯನ್ನು ಮಾಡಿದ್ದರೂ ಅದೇ ವರ್ಷದ ಮಳೆಗೆ ಕೊಚ್ಚಿ ಹೋಗಿದೆ. ನಂತರ ಅಲ್ಲಿಯೇ ಜನರು ಸೇರಿ ಕಟ್ಟಪುಣಿಯನ್ನು ನಿರ್ಮಿಸಿದ್ದು, ಜೋರಾಗಿ ಮಳೆ ಬಂತೆಂದರೆ ಕಟ್ಟಪುಣಿಯ ಮೇಲೆಯೇ ನೀರು ಬೀಳುವುದರಿಂದ ಸಮಸ್ಯೆಯಾಗುತ್ತಿದೆ.

ಅಂದು ಶಾಸಕರಾಗಿದ್ದ ಕೆ.ಅಭಯಚಂದ್ರ ಅವರು ತಾತ್ಕಾಲಿಕವಾಗಿ ಸೇತುವೆಯನ್ನು ನಿರ್ಮಾಣ ಮಾಡಿ ಜನರ ಓಡಾಡಕ್ಕೆ ವ್ಯವಸ್ಥೆ ಮಾಡಬೇಕೆಂದು 10 ಲಕ್ಷದ ಅನುದಾನವನ್ನು ಇಟ್ಟಿದ್ದರು. ಆದರೆ ಅದು ಅನುದಾನ ಸಾಕಾಗಲ್ಲ. ತಮಗೆ ಕೋಟಿ ಯೋಜನೆಯ ಸೇತುವೆಯೇ ಬೇಕೆಂದು ಸ್ಥಳೀಯ ಕೆಲವು ರಾಜಕೀಯ ವ್ಯಕ್ತಿಗಳು ಗಲಾಟೆ ಮಾಡಿದ್ದರು. ಇದರಿಂದ ತಾತ್ಕಾಲಿಕ ನಿರ್ಮಾಣದ ಸೇತುವೆಯ ಕನಸೂ ನನಸಾಗಿಲ್ಲ. ನಂತರ ಎಂಪಿ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಶಾಸಕ ಉಮಾನಾಥ ಕೋಟ್ಯಾನ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಕೋಟಿಯ ಸೇತುವೆ ನಿರ್ಮಾಕ್ಕೆ ಸೈ ಎಂದಿದ್ದರೂ ಇನ್ನೂ ಕಾಲ ಕೂಡಿ ಬಂದಿಲ್ಲ.