Asianet Suvarna News Asianet Suvarna News

ಇಂದಿನಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ವ್ಯಾಕ್ಸಿನ್‌ ವಿತರಣೆ

* ಕೋವ್ಯಾಕ್ಸಿನ್‌ ಲಸಿಕೆಗೆ 1410 ಹಾಗೂ ಕೋವಿಶಿಲ್ಡ್‌ ಲಸಿಕೆಗೆ 780 ದರ ನಿಗದಿ 
* ಕೋವಿಡ್‌ ಲಕ್ಷಣವುಳ್ಳ ಮಕ್ಕಳಿಗೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ 
* ವಾತ್ಸಲ್ಯ ಕಾರ್ಯಕ್ರಮದ ಉದ್ದೇಶ ಅರಿತು ಕಾರ್ಯನಿರ್ವಹಿಸುವಂತೆ ಸೂಚನೆ

Distribution of Covid Vaccine in Private Hospitals from  July 17 th Haveri grg
Author
Bengaluru, First Published Jul 17, 2021, 1:18 PM IST

ಹಾವೇರಿ(ಜು.17): ಜಿಲ್ಲೆಯ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿತ ಶುಲ್ಕ ಪಾವತಿಸಿ ಕೋವಿಡ್‌ ಲಸಿಕೆ ಪಡೆಯುವ ವ್ಯವಸ್ಥೆಗೆ ಅನುಮತಿ ನೀಡಲಾಗಿದೆ. ಸಾರ್ವಜನಿಕರು ಜು. 17ರಿಂದ ಶುಲ್ಕ ಪಾವತಿಸಿ ಲಸಿಕೆ ಪಡೆಯಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ವಾತ್ಸಲ್ಯ ಮಕ್ಕಳ ಆರೋಗ್ಯ ತಪಾಸಣೆ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ಕೋವಿಡ್‌ ಲಸಿಕೆ ಉತ್ಪದನಾ ಕಂಪನಿಯಿಂದ ನೇರವಾಗಿ ಖರೀದಿ ಮಾಡಿ ಬಳಕೆ ಮಾಡಲು ಜಿಲ್ಲೆಯ ಐದು ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ನೀಡಲಾಗಿದೆ. ಕೋವ್ಯಾಕ್ಸಿನ್‌ ಲಸಿಕೆಗೆ 1410 ಹಾಗೂ ಕೋವಿಶೀಲ್ಡ್‌ ಲಸಿಕೆಗೆ 780 ದರ ನಿಗದಿ ಮಾಡಲಾಗಿದೆ. ಜಿಲ್ಲೆಯ ವೀರಾಪುರ ಆಸ್ಪತ್ರೆ, ಮಾಗಾವಿ ಆಸ್ಪತ್ರೆ, ಹೆಗ್ಗೇರಿ ಆಸ್ಪತ್ರೆ, ಓಂ ಆಸ್ಪತ್ರೆ ಹಾಗೂ ಸಾಯಿ ಆಸ್ಪತ್ರೆಗೆ ಲಸಿಕೆ ಹಾಕಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ನೇರವಾಗಿ ಕಂಪನಿಯಿಂದಲೇ ಹಣ ಪಾವತಿಸಿ ಲಸಿಕೆ ಖರೀದಿಸಿ ಸಾರ್ವಜನಿಕರಿಗೆ ಲಸಿಕೆ ನೀಡಲು ಮುಂದಾಗುವ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಿಗೆ ನಿಯಮಾನುಸಾರ ಅವಕಾಶ ನೀಡಲಾಗುವುದು. ಕೋವಿಡ್‌ ಲಸಿಕೆ ನೀಡಲು ಮುಂದಾಗುವ ಖಾಸಗಿ ಆಸ್ಪತ್ರೆಗಳು ಕನಿಷ್ಠ 18 ಹಾಸಿಗೆ ವ್ಯವಸ್ಥೆ, ಕೆಪಿಎಂ ಕಾಯ್ದೆಯಡಿ ನೋಂದಣಿ, ಕೋಲ್ಡ್‌ಚೈನ್‌ ವ್ಯವಸ್ಥೆ ಸೇರಿದಂತೆ ಹಲವು ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

ಕೊರೋನಾ ಲಸಿಕೆ ಜಾದೂ: ಪೂರ್ಣ ದೃಷ್ಟಿ ಕಳೆದುಕೊಂಡಿದ್ದ ಮಹಿಳೆಗೆ ಮತ್ತೆ ದೃಷ್ಟಿ!

ಮಕ್ಕಳ ತಪಾಸಣೆ:

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್‌ ಮಾತನಾಡಿ, ವಾತ್ಸಲ್ಯ ಯೋಜನೆಯಡಿ ಮೊದಲ ಸುತ್ತಿನ ತಪಾಸಣೆಯಲ್ಲಿ ಕೈಬಿಟ್ಟಹೋದ ಮಕ್ಕಳನ್ನು ಪುನಃ ಅಂಗನವಾಡಿ ಶಾಲೆಗಳಿಗೆ ಭೇಟಿ ತಪಾಸಣೆ ನಡೆಸಬೇಕು. ಈಗಾಗಲೇ ತಪಾಸಣೆ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಸೂಕ್ತ ಪೌಷ್ಟಿಕ ಆಹಾರ, ಔಷಧಿ, ನ್ಯೂಟ್ರಿಷಿಯನ್‌ ಪೌಡರ್‌ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿವಿಧ ಆರೋಗ್ಯ ಸಮಸ್ಯೆ, ನಿರೀಕ್ಷಿತ ಪ್ರಮಾಣದಲ್ಲಿ ಬೆಳವಣಿಗೆ ಇಲ್ಲದ ಮಕ್ಕಳನ್ನು ವರ್ಗವಾರು ವಿಂಗಡಿಸಿ ಸೂಕ್ತ ಚಿಕಿತ್ಸೆಗೆ ಕ್ರಮವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಡೇ ಕೇರ್‌ಗಳಲ್ಲಿ ಆ ಮಕ್ಕಳಿಗೆ ಮೊಟ್ಟೆ, ಪೌಷ್ಟಿಕ ಆಹಾರವನ್ನು ನೀಡಬೇಕು. ತೀವ್ರ ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು ಆಸ್ಪತ್ರೆಗಳಿಗೆ ದಾಖಲಿಸಬೇಕು. ಈ ಮಕ್ಕಳಿಗೆ ಆರೋಗ್ಯ ಸುರಕ್ಷಾ ಟ್ರಸ್ಟ್‌ ಯೋಜನೆಯಡಿ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವೇ ಎಂದು ಪರಿಶೀಲಿಸಿ ಅಗತ್ಯ ಕ್ರಮವಹಿಸಬೇಕು. ಕೋವಿಡ್‌ ಲಕ್ಷಣವುಳ್ಳ ಮಕ್ಕಳಿಗೆ ಈಗಾಗಲೇ ಚಿಕಿತ್ಸೆ ನೀಡಲಾಗಿದೆ. ಈ ಮಕ್ಕಳಲ್ಲಿ ಟಿಬಿ ತಪಾಸಣೆ ಕೈಗೊಳ್ಳಬೇಕು. ಗುರುತಿಸಲಾದ ಮಕ್ಕಳಿಗೆ ಸಪ್ಲಿಮೆಂಟರಿ ಔಷಧಿಗಳ ಖರೀದಿಗೆ ಕ್ರಮವಹಿಸಬೇಕು. ಶಿಶು ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ವಾತ್ಸಲ್ಯ ಕಾರ್ಯಕ್ರಮದ ಉದ್ದೇಶ ಅರಿತು ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಖಾಸಗಿ ಶಾಲಾ ಮಕ್ಕಳು ಸೇರಿದಂತೆ ಒಟ್ಟಾರೆ 4,07,373 ಮಕ್ಕಳ ಆರೋಗ್ಯ ತಪಾಸಣೆ ಎದುರು 3,14,361 ಮಕ್ಕಳ ತಪಾಸಣೆ ನಡೆಸಲಾಗಿದೆ. ಈ ಪೈಕಿ 17,230 ಮಕ್ಕಳಲ್ಲಿ ವಿವಿಧ ಆರೋಗ್ಯ ಸಮಸ್ಯೆ ಕಂಡುಬಂದಿದೆ ಎಂದು ಆರ್‌ಸಿಎಚ್‌ ಅಧಿಕಾರಿ ಡಾ.ಜಯಾನಂದ ಮಾಹಿತಿ ನೀಡಿದರು.

ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿಗಳಾದ ಶಿವಾನಂದ ಉಳ್ಳಾಗಡ್ಡಿ, ಅನ್ನಪೂರ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್‌.ಎಸ್‌. ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್‌. ಹಾವನೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಶ್ರೀನಿವಾಸ ಆಲದರ್ತಿ ಇತರರು ಇದ್ದರು.
 

Follow Us:
Download App:
  • android
  • ios