Asianet Suvarna News Asianet Suvarna News

ಕಾಂಗ್ರೆಸ್ಸಿನಲ್ಲಿ ಮತ್ತೆ ಭಿನ್ನಮತ ಸ್ಫೋಟ..!

ಮೂರು ಬಣ​ಗ​ಳಿಗೆ ಡಿಕೆಶಿ ಪದ​ಗ್ರ​ಹ​ಣದ ದಿನ ಮತ್ತೊಂದು ಬಣ ಸೇರ್ಪ​ಡೆ| ಡಿ.ಕೆ. ಶಿವಕುಮಾರ ಪದಗ್ರಹಣ ಕಾರ್ಯಕ್ರಮ ಹೊತ್ತಿಗೆ ಮನೆಗೆ ಮತ್ತೊಂದು ಬಾಗಿಲು ಸೇರ್ಪ​ಡೆ​ಯಾ​ದಂತಾ​ಗಿ​ದೆ| 

Dissatisfaction in Congress Party Members in Harapanahalli
Author
Bengaluru, First Published Jul 5, 2020, 8:56 AM IST

ಬಿ.ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ(ಜು. 06): ಹಿಂದುಳಿದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಭದ್ರ ಕೋಟೆಯಾಗಿದ್ದ ಕಾಂಗ್ರೆಸ್‌ನಲ್ಲಿ ಕಳೆದ ಒಂದು ವರ್ಷದಿಂದ ಭಿನ್ನಮತ ಆರಂಭವಾಗಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿತ್ತು. ಆದರೆ, ಡಿ.ಕೆ. ಶಿವಕುಮಾರ ಪದಗ್ರಹಣ ಕಾರ್ಯಕ್ರಮ ಹೊತ್ತಿಗೆ ಮನೆಗೆ ಮತ್ತೊಂದು ಬಾಗಿಲು ಸೇರ್ಪ​ಡೆ​ಯಾ​ದಂತಾ​ಗಿ​ದೆ.

ಕಾಂಗ್ರೆಸ್‌ನಿಂದ ಏನೇ ಕಾರ್ಯಕ್ರಮಗಳು ನಡೆದರೂ ಕೆಪಿಸಿಸಿ ಕಾರ್ಯದರ್ಶಿ ಎಂ.ಪಿ. ಲತಾ, ಎಂ.ಪಿ. ವೀಣಾ ನೇತೃತ್ವದಲ್ಲಿ ಹಾಗೂ ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರ ನೇತೃತ್ವದಲ್ಲಿ ಹೀಗೆ ಮೂರು ವಿವಿಧ ಕಡೆ ಅವರವರ ಬೆಂಬಲಿಗರೊಂದಿಗೆ ಕಾರ್ಯಕ್ರಮಗಳು ಜರುಗುತ್ತಿದ್ದವು. ಆದರೆ, ಕೆಪಿಸಿಸಿಗೆ ನೂತನ ಸಾರಥಿಯಾಗಿ ನೇಮಕಗೊಂಡ ಡಿ.ಕೆ. ಶಿವಕುಮಾರ ಅವರು ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕ​ರಿ​ಸಿದ ಕಾರ್ಯಕ್ರಮವನ್ನು ಜೂಮ್‌ ಆ್ಯಪ್‌ ಮೂಲಕ ರಾಜ್ಯಾದ್ಯಂತ ಕಾರ್ಯಕರ್ತರು ವೀಕ್ಷಣೆ ಮಾಡಲು ಯೋಜನೆ ರೂಪಿಸಿದಾಗ ಹರಪನಹಳ್ಳಿ ಪಟ್ಟಣದಲ್ಲಿ ಮತ್ತೊಂದು ಹೊಸ ಬಣ ಹುಟ್ಟಿಕೊಂಡು ಒಟ್ಟು ನಾಲ್ಕು ಕಡೆ ಕಾರ್ಯಕ್ರಮ ಜರುಗಿತು.

ಕೊಟ್ಟೂರು: ಪರೀಕ್ಷೆಯನ್ನೇ ಮರೆತಿದ್ದ ವಿದ್ಯಾರ್ಥಿನಿ ಕರೆತಂದ ಉಪ ಪ್ರಾಚಾರ್ಯ!

ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಬೆಂಬಲಿಗರು ವೀಕ್ಷಕ ವಿಜಯಕುಮಾರ ಉಪಸ್ಥಿತಿಯಲ್ಲಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಒಂದು ಕಾರ್ಯಕ್ರಮ ಜರುಗಿತು. ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ. ಲತಾ ಅವರ ನೇತೃತ್ವದಲ್ಲಿ ಹಡಗಲಿ ರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿಯಲ್ಲಿ (ಎಂ.ಪಿ. ರವೀಂದ್ರ ಸ್ಥಾಪಿಸಿದ್ದ ಕಚೇರಿ) ಕಾರ್ಯಕರ್ತರು ಪದಗ್ರಹಣ ವೀಕ್ಷಣೆ ಮಾಡಿದರು. ಆಚಾರ ಬಡಾವಣೆಯ ಎಂ.ಪಿ. ಪ್ರಕಾಶ್‌ ಸಮಾಜಮುಖಿ ಟ್ರಸ್ಟ್‌ ಕಚೇರಿಯಲ್ಲಿ ಟ್ರಸ್ಟ್‌ ಅಧ್ಯಕ್ಷೆ ಎಂ.ಪಿ. ವೀಣಾ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪದಗ್ರಹಣ ಕಾರ್ಯಕ್ರಮ ವೀಕ್ಷಿಸಿದರು. ಇದೇ ಪ್ರಥಮ ಬಾರಿಗೆ ಪುರಸಭಾ ಸದಸ್ಯ ಗೊಂಗಡಿ ನಾಗರಾಜ ಅವರ ಕಾಂಪ್ಲೆಕ್ಸ್‌ನಲ್ಲಿ ಎನ್‌ ಎಸ್‌ಯುಐ ಘಟಕದ ಮುಂದಾಳತ್ವದಲ್ಲಿ ಪದಗ್ರಹಣ ಕಾರ್ಯಕ್ರಮವನ್ನು ಕಾಂಗ್ರೆಸ್‌ ಕಾರ್ಯಕರ್ತರು ವೀಕ್ಷಿಸಿದರು. ಹೀಗೆ ನಾಲ್ಕು ಕಡೆ ಡಿಕೆಶಿ ಪದಗ್ರಹಣ ವೀಕ್ಷಣೆ ಕಾರ್ಯಕ್ರಮ ಜರುಗಿತು.

ಎಸ್ಸಿ ಮೀಸಲಾತಿ ಇದ್ದ ಈ ಕ್ಷೇತ್ರ 2008ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಬದಲಾದ ಪ್ರಥಮ ಚುನಾವಣೆಯಲ್ಲಿ ಮುತ್ಸದ್ದಿ ರಾಜಕಾರಣಿ ದಿ. ಎಂ.ಪಿ. ಪ್ರಕಾಶ್‌ ಸೋಲುಂಡರು. 2013ರ ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸಿದ್ದ ದಿ. ಎಂ.ಪಿ. ಪ್ರಕಾಶ್‌ ಅವರ ಪುತ್ರ ದಿ. ಎಂ.ಪಿ. ರವೀಂದ್ರ ಅವರು ಗೆಲುವು ಸಾಧಿಸಿದರು. ನಂತರ 2018ರಲ್ಲಿ ಎಂ.ಪಿ.ರವೀಂದ್ರ ಅವರೂ ಸೋಲುಂಡರು. ಎಂ.ಪಿ. ರವೀಂದ್ರ ಸೋತ ಒಂದು ವರ್ಷದ ನಂತರ ಅನಾರೋಗ್ಯದಿಂದ ನಿಧನರಾದರು. ಎಂ.ಪಿ.ರವೀಂದ್ರ ಬಿಟ್ಟು ಹೋದ ಸಂಘಟನೆಯನ್ನು ಅದೇ ಕಚೇರಿಯಲ್ಲಿ ಅವರ ಹಿರಿಯ ಸಹೋದರಿ ಎಂ.ಪಿ. ಲತಾ ಮುಂದುವರಿಸಿದರು.

ಇನ್ನೊಬ್ಬ ಸಹೋದರಿ ಎಂ.ಪಿ. ವೀಣಾ ಅವರು ಎಂ.ಪಿ. ಪ್ರಕಾಶ್‌ ಸಮಾಜಮುಖಿ ಟ್ರಸ್ಟ್‌ ಹೆಸರಿನಲ್ಲಿ ಪಕ್ಷದ ಸಂಘಟನೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಪ್ರತ್ಯೇಕವಾಗಿ ಮಾಡುತ್ತ ಸಾಗಿದರು. 2019ರಲ್ಲಿ ಆಗಮಿಸಿದ ಪುರಸಭಾ ಚುನಾವಣೆಯಲ್ಲಿ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ನೇತೃತ್ವದಲ್ಲಿ ಪಕ್ಷ ಸಂಘಟನೆ ಆರಂಭವಾಯಿತು. ಆಗ ತಾಲೂಕಿನಲ್ಲಿ ಮನೆಯೊಂದು ಮೂರು ಬಾಗಿಲು ಎಂದು ಕಾಂಗ್ರೆಸ್‌ ಪಕ್ಷಕ್ಕೆ ನಾಮಕರಣವಾಯಿತು.
ಇದೀಗ ಡಿಕೆಶಿ ಪದಗ್ರಹಣ ಕಾರ್ಯಕ್ರಮ ವೀಕ್ಷಣೆ ಸಮಯಕ್ಕೆ ಎನ್‌ಎಸ್‌ಯುಐ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿ 4ನೇ ಬಣ ಉದ್ಭವವಾಯಿತು.

]ನಾನು ಕಟ್ಟಾ ಕಾಂಗ್ರೆಸ್ಸಿಗ. ಯಾರೂ ಒಂದು ಫೋನ್‌ ಮಾಡಲ್ಲ. ಯಾರು ಕರೆಯುತ್ತಾರೋ ಅವರ ಬಳಿ ಹೋಗಿ ಕೆಲಸ ಮಾಡುತ್ತೇನೆ. ಮುಂದೆ ಯಾರು ಪಕ್ಷದ ಟಿಕೆಟ್‌ ತರುತ್ತಾರೊ ಅವರ ಪರ ಕೆಲ​ಸ ಮಾಡುತ್ತೇವೆ. ಭಿನ್ನಮತ ಒಳ್ಳೆಯದಲ್ಲ, ಹೈಕಮಾಂಡ್‌ ಈ ಕಡೆ ಗಮನಹರಿಸಬೇಕು ಎಂದು ಹರಪನಹಳ್ಳಿ ಕಾಂಗ್ರೆಸ್‌ ಪುರಸಭಾ ಸದಸ್ಯ ಗೊಂಗಡಿ ನಾಗರಾಜ ಅವರು ಹೇಳಿದ್ದಾರೆ. 

ಭಿನ್ನಮತ ಇರುವುದು ನಿಜ. ಇದೇ ರೀತಿ ಹೋದರೆ ಮುಂದೆ ಸಮಸ್ಯೆಯಾಗುತ್ತದೆ. ಹೈಕಮಾಂಡ್‌ ಕೂಡಲೇ ಇತ್ತ ಗಮನ ಹರಿಸಿ ಯಾರಿಗಾದರೂ ಒಬ್ಬರಿಗೆ ಜವಾಬ್ದಾರಿ ಕೊಡಬೇಕು ಎಂದು ತಾಪಂ ಚಿಗಟೇರಿ ಕ್ಷೇತ್ರದ ಕಾಂಗ್ರೆಸ್‌ ಸದಸ್ಯ ಬಸವನಗೌಡ ಹೇಳಿದ್ದಾರೆ. 
 

Follow Us:
Download App:
  • android
  • ios