ಹುಬ್ಬಳ್ಳಿ(ನ.25): ಅನರ್ಹ ಶಾಸಕರ ಭವಿಷ್ಯವನ್ನು ಜನತೆಯೇ ತೀರ್ಮಾನಿಸಲಿ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ ಎಂದು ನಾನು ಭಾವಿಸಿದ್ದೇನೆ. ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಅನರ್ಹರ ಪಕ್ಷಾಂತರ, ಅವಕಾಶವಾದಿ ರಾಜಕಾರಣ ಹಾಗೂ ಪ್ರಜಾಪ್ರಭುತ್ವದ ಬುನಾದಿ ಅಲುಗಾಡಿಸುವ ಉದ್ದೇಶಕ್ಕೆ ಜನತಾ ನ್ಯಾಯಾಲಯವೇ ತೀರ್ಪು ನೀಡಬೇಕಿದೆ ಎಂದು ಮಾಜಿ ಸ್ಪೀಕರ್‌ ರಮೇಶಕುಮಾರ್‌ ಅವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಆದೇಶ ಗೌರವಿಸುತ್ತೇನೆ. ಪಕ್ಷಾಂತರ ಕಾಯ್ದೆಯ ಅನುಸಾರ ನಾನು ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹ ಮಾಡಿದ್ದೇನೆ. ಅಲ್ಲದೆ ಅದೇ ಕಾಯ್ದೆಯ ಪ್ರಕಾರವೇ ಈ ವಿಧಾನ ಸಭೆ ಅವಧಿ ಮುಗಿಯವರೆಗೂ ಎಲ್ಲರನ್ನೂ ಅನರ್ಹ ಮಾಡಿದ್ದೆ. ಆದರೆ, ಸುಪ್ರೀಂ ಕೋರ್ಟ್‌ ತಾನು ಹಾಗೂ ಸ್ಪೀಕರ್‌ ರಮೇಶ ಕುಮಾರ ಅನರ್ಹರ ಭವಿಷ್ಯ ನಿರ್ಧರಿಸುವುದು ಬೇಡ, ಜನತೆಯೆ ನಿರ್ಧರಿಸಲಿ ಎಂಬ ಭಾವದಿಂದ ತೀರ್ಪು ನೀಡಿರಬಹುದು. ಹೀಗಾಗಿ ಉಪಚುನಾವಣೆಯಲ್ಲಿ ಜನತಾ ನ್ಯಾಯಾಲಯವು ಪಕ್ಷಾಂತರಿಗಳಿಗೆ, ಅವಕಾಶವಾದಿ ರಾಜಕಾರಣಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಪ್ರತಿಪಕ್ಷದಲ್ಲಿದ್ದಾಗ ಅವರ ರಾಜೀನಾಮೆಗೂ ನಮಗೂ ಸಂಬಂಧವಿಲ್ಲ ಎಂದ ಬಿಎಸ್‌ವೈ, ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಅವರ ತ್ಯಾಗದಿಂದಲೇ ನಾವು ಅಧಿಕಾರಕ್ಕೆ ಬಂದಿದ್ದೇವೆ. ಅವರನ್ನು ಗೆಲ್ಲಿಸಲು ಪಕ್ಷದ ಕಾರ್ಯಕರ್ತರು ಶ್ರಮವಹಿಸಿ ಎಂದರು. ಸಂವಿಧಾನಬದ್ಧವಾಗಿ ಮುಖ್ಯಮಂತ್ರಿಯಾದ ಇವರು ಅನರ್ಹರನ್ನ ಗೆಲ್ಲಿಸಿ ಮಂತ್ರಿ ಮಾಡುತ್ತೇವೆ ಎನ್ನುವುದು ಸವಿಂಧಾನಕ್ಕೆ ಮಾಡುವ ಅವಮಾನವಲ್ಲವೇ? ಇದು ಆಮೀಷವಲ್ಲವೆ? ಚುನಾವಣಾ ಆಯೋಗ ಸತ್ತಿದೆಯೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಿಎಂ ವಿರುದ್ಧ ದೂರು ನೀಡುವುದಿಲ್ಲ. ಅವರು ತಮ್ಮ ಅನುಭವದಲ್ಲಿ, ವಯಸ್ಸಿಗೆ ಅನುಗುಣವಾಗಿ ಮಾತನಾಡಬೇಕು ಎಂದು ಕೇಳಿಕೊಳ್ಳುತ್ತೇನೆ. ಮನುಷ್ಯರು ಮಾನಸ್ಥರಾಗಿ ಬದುಕಬೇಕು ಎನ್ನುವುದು ನನ್ನ ಭಾವನೆ. ಇಲ್ಲವಾದರೆ ಪ್ರಾಣಿ, ಪಕ್ಷಿಗಳಿಗಿಂತ ಕಡೆಯಾಗಿ ಬದುಕುತ್ತೇವೆ ಎಂದು ಪರೋಕ್ಷವಾಗಿ ಟಾಂಗ್‌ ನೀಡಿದರು.

ಮಹಾರಾಷ್ಟ್ರ ಚುನಾವಣೆಗೆ ಸಂಬಂಧಿಸಿ, ಅಲ್ಲಿನ ರಾಜ್ಯಪಾಲರು ತುಂಬಾ ಗೌರವಸ್ಥರು ಇರಬೇಕು ಎಂದು ಮಾರ್ಮಿಕವಾಗಿ ಕುಟುಕಿದ ರಮೇಶಕುಮಾರ, ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆಯದೆ ಹಿಂದಿನ ಕಾನೂನು ಬಳಸಿಕೊಂಡು ಅಲ್ಲಿ ಸರ್ಕಾರ ರಚಿಸಲಾಗಿದೆ. 56 ಇಂಚಿನ ಎದೆ ಉಬ್ಬಿಸಿಕೊಂಡು ದೇಶಪ್ರೇಮದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿಯವರ ಮೂಗಿನ ನೇರಕ್ಕೆ ರಾಜಕಾರಣ ಮಾಡಿದ್ದಾರೆ. ಸೋಮವಾರ ಸುಪ್ರೀಂ ಕೋರ್ಟ್‌ ಅಲ್ಲಿನ ಪ್ರಕರಣದ ಕುರಿತು ತೀರ್ಪು ನೀಡಿದ್ದು, ಅಲ್ಲಿವರೆಗೆ ಕಾಯಬೇಕಿದೆ ಎಂದರು.

ಮುಖರ್ಜಿ, ವಾಜಪೇಯಿ ತತ್ವಗಳಿಗೆ ವಿರುದ್ಧ

ಈ ಚುನಾವಣೆ ಅವಕಾಶವಾದಿ ರಾಜಕಾರಣಿಗಳಿಗೆ ಜನ ತಕ್ಕ ಪಾಠ ಕಲಿಸಬೇಕು. ಹಿಂದೆ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸೇರಿದಂತೆ ದೇಶದ ಎಲ್ಲ ಕಡೆ ಪಕ್ಷಾಂತರ ಮಾಡಿದವರಿಗೆ ಜನ ಬುದ್ಧಿ ಕಲಿಸಿದ್ದಾರೆ. ಇಲ್ಲಿಯೂ ಜನತೆ ಇಂಥವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು. ಕಾಂಗ್ರೆಸ್‌ನವರು ಸರಿಯಲ್ಲ ಎಂಬುದು ಬಿಜೆಪಿಗರ ಭಾವನೆ. ಆದರೆ, ಹಿಂದಿನ ಬಿಜೆಪಿ ನಾಯಕರಾದ ಶ್ಯಾಂ ಪ್ರಸಾದ ಮುಖರ್ಜಿ, ಅಟಲ್‌ ಬಿಹಾರಿ ವಾಜಪೇಯಿ ಅವರ ತತ್ವಗಳಿಗೆ ಇವರು ಶೇಕಡಾ ನೂರರಷ್ಟು ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.