ಅರಕಲಗೂಡು (ಸೆ.16):  ಅರಕಲಗೂಡು ಪಪಂ ಎಂಜಿನಿಯರ್‌ ಎಸ್‌.ಆರ್‌.ಕವಿತಾ ಅವರ ವರ್ಗಾವಣೆಯ ಹಿಂದೆ ಅನ್ಯ ಕ್ಷೇತ್ರದ ಅನರ್ಹ ಶಾಸಕರೊಬ್ಬರ ಪ್ರಭಾವ ಇರುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಇಂತಹ ವಿಷಯಗಳನ್ನು ಸಹಿಸದ ಶಾಸಕ ಎ.ಟಿ.ರಾಮಸ್ವಾಮಿ ಈವರೆಗೂ ಮೌನಕ್ಕೆ ಶರಣಾಗಿರುವ ಬಗ್ಗೆಯೂ ವ್ಯಾಪಕ ಚರ್ಚೆ ನಡೆದಿದೆ.

ಸ್ವತಃ ತಮ್ಮದೇ ಪಕ್ಷದ ವರಿಷ್ಠ ಎಚ್‌.ಡಿ.ರೇವಣ್ಣ ಅವರು ಅರಕಲಗೂಡು ಕ್ಷೇತ್ರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದ್ದ ಸಂದರ್ಭದಲ್ಲಿ ಮುನಿಸಿಕೊಂಡು ದೇವೇಗೌಡರ ಬಳಿ ಗುಟುರು ಹಾಕಿದ್ದ ಶಾಸಕರು, ಇಂದು ಬೇರೆಯೇ ಪಕ್ಷದ ಶಾಸಕರೊಬ್ಬರು ಹಸ್ತಕ್ಷೇಪ ನಡೆಸಿ ವರ್ಗಾವಣೆ ಮಾಡಿದ್ದಾಗ್ಯೂ ಮೌನ ಮುರಿಯದ ಬಗ್ಗೆ ಅವರದೇ ಪಕ್ಷದೊಳಗೆ ಚರ್ಚೆಗಳು ಆರಂಭಗೊಂಡಿವೆ.

ಶಾಸಕ ರಾಮಸ್ವಾಮಿ ಯಾವುದೇ ಕೆಲಸ ಮಾಡಿದರೂ ಲೆಕ್ಕಾಚಾರವಿಲ್ಲದೇ ಮಾಡುವುದಿಲ್ಲ. ಅಷ್ಟೇ ಏಕೆ? ಸುಮ್ಮ ಸುಮ್ಮನೆ ಮಾತನಾಡುವವರೂ ಅಲ್ಲ. ಆದ್ದರಿಂದ ಈ ಮೌನದ ಹಿಂದೆ ಬೇರೆಯೇ ಲೆಕ್ಕಾಚಾರವಿದೆ ಎಂಬ ಮಾತುಗಳು ತಮ್ಮದೇ ಪಕ್ಷದ ಮುಖಂಡರಿಂದ ಕೇಳಿಬರುತ್ತಿವೆ.

ಅವುಗಳಲ್ಲಿ ಮುಂಬರುವ ಪಪಂ ಅನ್ನು ತಮ್ಮ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ನೊಂದಿಗಿನ ಮೈತ್ರಿ ಮುರಿದು ಬಿದ್ದು, ಸರ್ಕಾರವೇ ಪತನವಾಗಿದ್ದರೂ, ಕ್ಷೇತ್ರದ ಸ್ಥಳೀಯ ಸಂಸ್ಥೆಯನ್ನು ತನ್ನ ಪ್ರಭಲ ರಾಜಕೀಯ ವಿರೋಧಿಯ ವಿರುದ್ಧ ತಮ್ಮದಾಗಿಸಿಕೊಳ್ಳುವ ಲೆಕ್ಕಾಚಾರವಿದೆ. ಎಂಜಿನಿಯರ್‌ ಕವಿತಾ ಮತ್ತು ಕಾಂಗ್ರೆಸ್‌ ಮುಖಂಡನ ನಡುವೆ ಇರುವ ಶೀಥಲ ಸಮರದ ನಡುವೆ ಎಂಜಿನಿಯರ್‌ ಕವಿತಾ ಅವರನ್ನು ಬಿಟ್ಟುಕೊಟ್ಟು, ಪಪಂನಲ್ಲಿ ಕಾಂಗ್ರೆಸ್‌ ಬೆಂಬಲದೊಂದಿಗೆ ತಮ್ಮ ಪಕ್ಷದ ಪ್ರಭುತ್ವ ಪಡೆಯುವ ಚಿಂತನೆ ಇದೆ ಎನ್ನಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಮ್ಮದೇ ಪಕ್ಷದಲ್ಲಿರುವ ಕೆಲ ಗುತ್ತಿಗೆದಾರರ ಹಿತ ಕಾಯದ ಎಂಜಿನಿಯರ್‌ ವಿರುದ್ಧ ಅವರದೇ ಪಕ್ಷದ ಕಾರ್ಯಕರ್ತರ ಒತ್ತಡವೂ ಇದಕ್ಕೆ ಕಾರಣವಿದ್ದು, ಈ ಹಿಂದೆ ಸಚಿವರೊಬ್ಬರ ಅನುಯಾಯಿಗಳು ಕಳಪೆ ಕಾಮಗಾರಿ ನಿರ್ವಹಿಸಿದ್ದರು ಎಂಬ ಕಾರಣಕ್ಕೆ ಬಿಲ್‌ ಮಾಡದೇ ಸಚಿವರ ಬೆಂಬಲಿಗರ ಕೆಂಗಣ್ಣಿಗೂ ಗುರಿಯಾಗಿದ್ದು ಈಗ ಇತಿಹಾಸ.