ಚುನಾವಣೆ ಬೆನ್ನಲ್ಲೇ ಶಾಸಕರೋರ್ವರ ಅನರ್ಹತೆ : ನೆಲದ ಕಾನೂನಿಗೆ ಸಿಕ್ಕ ಜಯ
2018ರ ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ನಕಲಿ ಬಾಂಡ್ ವಿತರಿಸಿ ಅಕ್ರಮವೆಸಗಿದ್ದ ಅಂದಿನ ಜೆಡಿಎಸ್ ಅಭ್ಯರ್ಥಿ ಹಾಗೂ ಹಾಲಿ ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಅವರ ಆಯ್ಕೆಯನ್ನು ನ್ಯಾಯಾಲಯ ಅಸಿಂಧುಗೊಳಿಸಿರುವುದು ಈ ನೆಲದ ಕಾನೂನಿಗೆ, ಧರ್ಮದ ಹೋರಾಟಕ್ಕೆ ದೊರೆತ ಗೆಲುವಾಗಿದೆ ಎಂದು ಮಾಜಿ ಶಾಸಕ ಬಿ.ಸುರೇಶ್‌ಗೌಡ ಹೇಳಿದರು.
ತುಮಕೂರು : 2018ರ ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ನಕಲಿ ಬಾಂಡ್ ವಿತರಿಸಿ ಅಕ್ರಮವೆಸಗಿದ್ದ ಅಂದಿನ ಜೆಡಿಎಸ್ ಅಭ್ಯರ್ಥಿ ಹಾಗೂ ಹಾಲಿ ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಅವರ ಆಯ್ಕೆಯನ್ನು ನ್ಯಾಯಾಲಯ ಅಸಿಂಧುಗೊಳಿಸಿರುವುದು ಈ ನೆಲದ ಕಾನೂನಿಗೆ, ಧರ್ಮದ ಹೋರಾಟಕ್ಕೆ ದೊರೆತ ಗೆಲುವಾಗಿದೆ ಎಂದು ಮಾಜಿ ಶಾಸಕ ಬಿ.ಸುರೇಶ್‌ಗೌಡ ಹೇಳಿದರು.
ಶ್ರೀರಾಮನವಮಿಯಂದು ಹೈಕೋರ್ಚ್ ನೀಡಿರುವ ಮಹತ್ವದ ತೀರ್ಪು ಸ್ವಾಗತಾರ್ಹ. ಈ ತೀರ್ಪು ಚುನಾವಣೆಯಲ್ಲಿ ಅಕ್ರಮ ಎಸಗುವವರಿಗೆ ಒಂದು ಸಂದೇಶ ರವಾನೆಯಾದಂತಾಗಿದೆ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಈಗಿನ ಶಾಸಕರು ಮತ್ತು ಅವರ ಹಿಂಬಾಲಕರು ದಿ ನ್ಯೂ ಇಂಡಿಯನ್ ಕಂಪೆನಿಯ ಬಾಂಡ್‌ಗಳನ್ನು ಖರೀದಿ ಮಾಡಿ ಅವುಗಳನ್ನು ನಕಲಿ ಮಾಡಿದ್ದರು. ಸುಮಾರು 16,500 ಮಕ್ಕಳಿಗೆ ಆರೋಗ್ಯ ವಿಮೆ ಮಾಡಿಸುವುದಾಗಿ ನಕಲಿ ಬಾಂಡ್‌ಗಳನ್ನು ವಿತರಿಸಿ ಅಕ್ರಮವೆಸಗಿದ್ದರು. ಆ ಸಂದರ್ಭದಲ್ಲಿ ಮಹಿಳಾ ಮುಖಂಡರಾದ ಗೌರಮ್ಮ ಎಂಬುವರು ಮಲ್ಲಸಂದ್ರದಲ್ಲಿ ನಕಲಿ ಬಾಂಡ್ ಹಂಚಿಕೆ ಮಾಡುತ್ತಿದ್ದಾಗ ಚುನಾವಣಾಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದರು. ಇದಾದ ಮೇಲೆ ಇನ್ಸೂರೆನ್ಸ್ ಕಂಪೆನಿಗೂ ದೂರು ನೀಡಿದ್ದೆವು. ಆಗ ವಿಮೆ ರದ್ದಾಗಿದ್ದವು. ಆದರೂ ಆ ಪಕ್ಷದ ಯುವ ಘಟಕದ ಹಿರೇ ಹಳ್ಳಿ ಮಹೇಶ್ ಹಾಗೂ ಗೌರಮ್ಮ ಅವರು ಪತ್ರಿಕಾಗೋಷ್ಠಿ ನಡೆಸಿ ನಕಲಿ ವಿಮೆ ಬಾಂಡ್ ಅಲ್ಲ ಎಂದು ಹೇಳಿಕೆ ನೀಡುವ ಮೂಲಕ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು ಎಂದು ಅವರು ದೂರಿದರು.
ಆರು ತಿಂಗಳಲ್ಲಿ ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿ ಪೂರ್ಣಗೊಳಿಸಬೇಕಿತ್ತು. ಆದರೆ ಮೂವರು ನ್ಯಾಯಾಧೀಶರುಗಳ ಬದಲಾವಣೆಯಿಂದ ತೀರ್ಪು ವಿಳಂಬವಾಯಿತು. ತದ ನಂತರ ಶಾಸಕರು ಇದನ್ನು ಪ್ರಶ್ನಿಸಿ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಚ್ ಮೆಟ್ಟಿಲೇರಿದರು. ಆದರೆ ನ್ಯಾಯಾಲಯ ಈ ಪ್ರಕರಣಕ್ಕೆ ತಡೆಯಾಜ್ಞೆ ನೀಡಲಿಲ್ಲ ಎಂದರು.
ನ್ಯಾಯಾಲಯದಲ್ಲಿ ಇವರು ಚುನಾವಣೆಯಲ್ಲಿ ಅಕ್ರಮ ಎಸಗಿರುವುದು ಸಾಬೀತಾಗಿದ್ದು, ಶ್ರೀರಾಮ ನವಮಿಯಂದೇ ಹೊರಬಂದಿರುವ ತೀರ್ಪು ಧರ್ಮಕ್ಕೆ ಸಿಕ್ಕ ಜಯವಾಗಿದೆ. ಚುನಾವಣೆಯಲ್ಲಿ ಅಕ್ರಮ ಎಸಗಿ ಗೆದ್ದರೆ ಅನರ್ಹತೆ ಕಟ್ಟಿಟ್ಟಬುತ್ತಿ ಎಂಬ ಸಂದೇಶವನ್ನು ಹೈಕೋರ್ಚ್ ತೀರ್ಪಿನ ರವಾನಿಸಿದೆ ಎಂದ ಅವರು, ಶಾಸಕ ಗೌರಿಶಂಕರ್ ಅವರಿಗೆ ಮೇಲ್ಮನವಿ ಸಲ್ಲಿಸಲು ಒಂದು ತಿಂಗಳವರೆಗೆ ಕಾಲಾವಕಾಶವನ್ನು ನ್ಯಾಯಾ ಲಯ ನೀಡಿದೆ. ನಾವು ಈಗಾಗಲೇ ಸುಪ್ರೀಂ ಕೋರ್ಚ್‌ಗೆ ಕೇವಿಯಟ್ ಅರ್ಜಿ ಸಲ್ಲಿಸಿದ್ದೇವೆ ಎಂದರು.
ನಕಲಿ ಬಾಂಡ್ ಹಂಚಿಕೆಗೆ ಸಹಕರಿಸಿದ್ದ ಶಾಸಕರ ಬೆಂಬಲಿಗರಾದ ಗೂಳೂರು ಗ್ರಾ.ಪಂ. ಸದಸ್ಯ ಕೃಷ್ಣೇಗೌಡ, ಗೂಳೂರು ಜಿ.ಪಂ.ಉಸ್ತುವಾರಿ ಪಾಲನೇತ್ರಯ್ಯ, ಸುನಂದಮ್ಮ, ಮಂಜುನಾಥ್ ಹಾಗೂ ರೇಣುಕಮ್ಮ ಎಂಬುವರನ್ನು ಸಹ ಹೈಕೋರ್ಚ್ ಅನರ್ಹಗೊಳಿಸಿ ತೀರ್ಪು ನೀಡಿದೆ ಎಂದು ಅವರು ಹೇಳಿದರು.
ಚುನಾವಣಾ ಅಕ್ರಮ ಎಸಗಿರುವುದು ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಕಪ್ಪುಚುಕ್ಕೆ ಆಗಿದೆ. ಮೋಸ ಮತ್ತು ಅಕ್ರಮದಿಂದ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದೇನೆ. ಈಗ ನ್ಯಾಯಕ್ಕೆ ಜಯ ಸಿಕ್ಕಿದೆ. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ. ಹೆಂಡ, ಮಾಂಸ, ಆಮಿಷದಿಂದ ಚುನಾವಣೆ ಗೆಲ್ಲಲ್ಲು ಆಗುವುದಿಲ್ಲ ಎನ್ನುವುದು ಈ ತೀರ್ಪಿನಿಂದ ಸ್ಪಷ್ಟವಾಗಿದೆ ಎಂದರು.
ಶಾಸಕ ಗೌರಿಶಂಕರ್ ಅನರ್ಹತೆಯನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ಮಾಡುವುದಾಗಿಯೂ ಸಹ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಮುಖಂಡರಾದ ವೈ.ಹೆಚ್.ಹುಚ್ಚಯ್ಯ, ಶಂಕರಣ್ಣ, ವಿಜಯಕುಮಾರ್, ರಾಮಚಂದ್ರಯ್ಯ, ಶಿವಕುಮಾರ್, ನರಸಿಂಹಮೂರ್ತಿ, ಸಿದ್ದೇಗೌಡ, ವೀರಣ್ಣ ಮತ್ತಿತರರು ಉಪಸ್ಥಿತರಿದ್ದರು.
ಹೈಕೋರ್ಚ್ ತೀರ್ಪುನ್ನು
ಸುಪ್ರೀಂ ಎತ್ತಿ ಹಿಡಿಯಲಿದೆ
ಶಾಸಕ ಗೌರಿಶಂಕರ್ ಅವರಿಗೆ ತಾತ್ಕಾಲಿಕ ತಡೆಯಾಜ್ಞೆ ಸಿಕ್ಕಿದೆ. ಮೂವತ್ತು ದಿನದೊಳಗೆ ಸುಪ್ರೀಂ ಕೋರ್ಚ್‌ಗೆ ಮೇಲ್ಮನವಿ ಸಲ್ಲಿಸಬೇಕು. ಆದರೆ ನಮಗೆ ಹೈಕೋರ್ಚ್ ತೀರ್ಪುನ್ನು ಸುಪ್ರೀಂ ಕೋರ್ಚ್ ಸಹ ಎತ್ತಿ ಹಿಡಿಯಲಿದೆ ಎಂಬ ವಿಶ್ವಾಸವಿದೆ ಎಂದ ಅವರು, ಒಂದು ತಿಂಗಳ ತಡೆಯಾಜ್ಞೆ ಇರುವುದರಿಂದ ಗೌರಿಶಂಕರ್ ಅವರು ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಹಾಕಲು ಅವಕಾಶವಿದೆ. ಒಂದು ವೇಳೆ ಈ ಅವಧಿಯಲ್ಲಿ ಸುಪ್ರೀಂ ಕೋರ್ಚ್ ಮೇಲ್ಮನವಿಯನ್ನು ಒಪ್ಪದೇ ಇದ್ದಲ್ಲಿ ಗೌರಿಶಂಕರ್ ಸಲ್ಲಿಸಿದ ನಾಮಪತ್ರ ಅರ್ಜಿಯೂ ಮಾನ್ಯತೆ ಕಳೆದುಕೊಳ್ಳಲಿದೆ ಎಂದು ಹೇಳಿದರು.