ಮಳೆಗೆ ಬಿದ್ದಿರೋ ಮನೆ ಕಟ್ಟಿಕೊಳ್ಳೋ ಹಾಗಿಲ್ಲ; ಸ್ಥಳಾಂತರವೂ ಮಾಡುತ್ತಿಲ್ಲ: ಪಟ್ಟದಕಲ್ಲು ಗ್ರಾಮಸ್ಥರ ಗೋಳು ಕೇಳೋರಿಲ್ಲ!
- ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಗ್ರಾಮದ 800ಕ್ಕೂ ಅಧಿಕ ಮನೆಗಳ ಸ್ಥಳಾಂತರ ಕೂಗು!
- ಪುರಾತತ್ವ ಇಲಾಖೆಯ ನಿಯಾಮಾವಳಿಗಳಿಂದ ಪಟ್ಟದಕಲ್ಲು ಗ್ರಾಮದ ಜನತೆ ಸಂಕಷ್ಟ. ಸ್ಥಳಾಂತರಕ್ಕೆ ಒತ್ತಾಯ.
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ಬಾಗಲಕೋಟೆ (ನ.12): ಇದು ಬಾದಾಮಿ ಚಾಲುಕ್ಯರ ಐತಿಹಾಸಿಕ ತಾಣಗಳಲ್ಲೊಂದಾದ ಪಟ್ಟದಕಲ್ಲು ಗ್ರಾಮ, ಈ ಗ್ರಾಮದಲ್ಲಿ ಇರೋ ಜನ್ರು ತಮ್ಮೂರಿನ ಸಾಂಸ್ಕೃತಿಕ ಹಿರಿಮೆ ಬಗ್ಗೆ ಹೆಮ್ಮೆಪಡ್ತಾರೆ, ಆದ್ರೆ ಪಟ್ಟದಕಲ್ಲು ಗ್ರಾಮದಲ್ಲಿ ಆಗ್ತಿರೋ ಸಮಸ್ಯೆಗಳಿಂದ ನಲುಗಿ ಇದೀಗ ತಮ್ಮನ್ನ ಈ ಊರಿನಿಂದ ಸ್ಥಳಾಂತರ ಮಾಡಿದ್ರೆ ಸಾಕಪ್ಪ ಅನ್ನೋ ಪರಿಸ್ಥಿತಿಗೆ ಗ್ರಾಮಸ್ಥರು ಬಂದಿದ್ದಾರೆ. ಅದ್ಯಾಕೆ ಹೀಗೆ ಅಂತೀರಾ? ಈ ಕುರಿತ ವರದಿ ಇಲ್ಲಿದೆ.
ಎಲ್ಲಿ ನೋಡಿದ್ರೂ ಕಣ್ಣು ಕೋರೈಸುವಂತಹ ಚಾಲುಕ್ಯರ ಸಾಂಸ್ಕೃತಿಕ ಕಲಾ ದೇಗುಲಗಳು, ಇತ್ತ ಮಳೆ ಮತ್ತು ಪ್ರವಾಹದಿಂದ ಗ್ರಾಮದಲ್ಲಿ ಬಿದ್ದು ಹೋಗಿರೋ ಮನೆಗಳು, ಮನೆ ಎದುರು ಮನೆಗಳನ್ನ ದುರಸ್ಥಿ ಮಾಡಿಕೊಳ್ಳಲಾಗದೆ ಅತಂತ್ರವಾಗಿ ನಿಂತಿರೋ ಜನ್ರು. ಅಂದಹಾಗೆ ಇಂಥದೊಂದು ದೃಶ್ಯ ಕಂಡು ಬಂದಿರೋದು ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಗ್ರಾಮದಲ್ಲಿ.
ಬಾಗಲಕೋಟೆ: ಐತಿಹಾಸಿಕ ಸ್ಮಾರಕ ಬಳಿಯ ಮನೆಗಳ ಸ್ಥಳಾಂತರ ಶೀಘ್ರ
ಹೌದು. ಮಲಪ್ರಭಾ ನದಿಗೆ ಹೊಂದಿಕೊಂಡಿರೋ ಈ ಗ್ರಾಮದಲ್ಲಿ 800ಕ್ಕೂ ಅಧಿಕ ಮನೆಗಳಿದ್ದು, ಬಾದಾಮಿ ಚಾಲುಕ್ಯರ ಸಾಂಸ್ಕೃತಿಕ ಪರಂಪರೆ ಸಾರುವ ಅನೇಕ ದೇಗುಲಗಳ ಸಮುಚ್ಚಯ ಇಲ್ಲಿವೆ. ಇವುಗಳ ಮಧ್ಯೆ ಮಲಪ್ರಭಾ ನದಿಗೆ 2007, 2009, 2019 ಸೇರಿದಂತೆ ಕೆಲವು ಬಾರಿ ಪ್ರವಾಹ ಬಂದು ಪಟ್ಟದಕಲ್ಲು ಗ್ರಾಮವೇ ಜಲಾವೃತವಾಗಿತ್ತು. ಹೀಗಾಗಿ ನೆರೆಗೆ ಮನೆ ಮಠ ಕಳೆದುಕೊಂಡು ಅತಂತ್ರವಾಗಿದ್ದ ಗ್ರಾಮದ ಜನರು ಪುನರ್ವಸತಿಗಾಗಿ ಊರು ಬಿಟ್ಟು ಹೋದ್ರೆ, ಇನ್ನು ಕೆಲವರು ದೇಗುಲಗಳನ್ನೇ ಏರಿ ಕುಳಿತಿದ್ದ ಘಟನೆ ನಡೆದ ಉದಾಹರಣೆಗಳಿವೆ. ಸಾಕಷ್ಟು ಬಾರಿ ಜಲಸಂಕಷ್ಟ ಎದುರಿಸಿರೋ ಪಟ್ಟದಕಲ್ಲು ಗ್ರಾಮಸ್ಥರು ನಮ್ಮನ್ನ ಸಂಪೂರ್ಣ ಸ್ಥಳಾಂತರ ಮಾಡಿ ಎಂದು ಗೋಗರೆಯುತ್ತಿದ್ದಾರೆ. ಆದ್ರೆ ಯಾವುದೇ ಸರ್ಕಾರ ಬಂದ್ರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಅಂತಾರೆ ಗ್ರಾಮಸ್ಥ ಮುತ್ತಪ್ಪ.
ಹಳೆ ಮನೆಗಳ ದುರಸ್ಥಿ ಇಲ್ಲ, ಹೊಸ ಮನೆಗಳನ್ನ ಕಟ್ಟೋ ಹಾಗಿಲ್ಲ!
ಇನ್ನು ಇಷ್ಟೆಲ್ಲಾ ಜಲಸಂಕಷ್ಟದ ಸಮಸ್ಯೆಯನ್ನ ಎದುರಿಸಿರೋ ಪಟ್ಟದಕಲ್ಲು ಗ್ರಾಮಸ್ಥರಿಗೆ ಮತ್ತೊಂದು ಸಮಸ್ಯೆಯಾಗಿರೋದು ಏನೆಂದರೆ, ಇವರ್ಯಾರು ಈಗಿನ ಮಳೆಯಿಂದ ಬಿದ್ದಿರೋ ಮನೆಗಳು ಮತ್ತು ಹಿಂದೆ ಪ್ರವಾಹದಿಂದ ಬಿದ್ದ ಮನೆಗಳನ್ನು ಕಟ್ಟಿಕೊಳ್ಳೋ ಹಾಗಿಲ್ಲ, ಹೊಸಮನೆಗಳನ್ನಂತೂ ಮೊದಲೇ ಕಟ್ಟೋ ಹಾಗಿಲ್ಲ. ಹೀಗಾಗಿ ಯಥಾಸ್ಥಿತಿಯಲ್ಲಿಯೇ ಮನೆಗಳಲ್ಲಿ ಇರಬೇಕಾದ ಅನಿವಾರ್ಯತೆ ಇದೆ.
ಈ ಮಧ್ಯೆ ಇಂತಹ ಪರಿಸ್ಥಿತಿಯಲ್ಲಿ ಕೆಲವೊಂದಿಷ್ಟು ಮನೆಗಳು ಪೂರ್ತಿ ಬಿದ್ದು ಹೋಗಿದ್ದವು. ಇನ್ನು ಕೆಲವು ಶಿಥಿಲಗೊಂಡಿದ್ದವು. ಆದರೆ ಈ ನಡುವೆ ತುರ್ತು ಕಾಲಕ್ಕೆಂದು ಸರಕಾರ 1 ಲಕ್ಷ ಪರಿಹಾರ ನೀಡಿದ್ರೂ ಸಹ ಮನೆಗಳನ್ನ ಮಾತ್ರ ದುರಸ್ಥಿ ಮಾಡಿಕೊಳ್ಳುವ ಹಾಗಿಲ್ಲ. ಯಾಕಂದ್ರೆ ಪುರಾತತ್ವ ಇಲಾಖೆಯಿಂದ ಯಾವುದೇ ರೀತಿ ಅನುಮತಿ ಇವರಿಗಿಲ್ಲ. ಏನಾದರೂ ಮಾಡಿದ್ರೆ ಇಲ್ಲಿನ ಕುಟುಂಬಗಳಿಗೆ ನೋಟಿಸ್ ನೀಡಲಾಗುತ್ತೆ. ಇದ್ರಿಂದ ಸಾಂಸ್ಕೃತಿಕ ಪರಂಪರೆಯನ್ನ ಸಾರುವ ಪಟ್ಟದಕಲ್ಲು ಗ್ರಾಮದಲ್ಲಿರೋ 800ಕ್ಕೂ ಅಧಿಕ ಕುಟುಂಬಗಳು ಇದೀಗ ಅತಂತ್ರವಾಗಿದ್ದು, ನಮ್ಮನ್ನು ಸಂಪೂರ್ಣ ಸ್ಥಳಾಂತರ ಮಾಡುವಂತೆ ಕುಟುಂಬಗಳು ಮನವಿ ಮಾಡಿಕೊಂಡಿದ್ದಾರೆ.
2023ರ ವಿಧಾನಸಭಾ ಎಲೆಕ್ಷನ್ ಬಹಿಷ್ಕರಿಸುವ ಚಿಂತನೆ:
ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲವಂತೆ, ಮೇಲಾಗಿ ಮತ್ತೆ ಪ್ರವಾಹ, ಮಳೆ ಬಂದರೆ ನಾವು ಮನೆಮಂದಿ ಸಮೇತ ಮನೆ ಸಾಮಾನುಗಳನ್ನ ತಲೆಯ ಮೇಲೆ ಹೊತ್ತು ಓಡಾಡಬೇಕಾಗುತ್ತದೆ. ಹೀಗಾಗಿ ಇದೇ ಪರಿಸ್ಥಿತಿ ಮುಂದುವರಿದಲ್ಲಿ 2023ರ ಚುನಾವಣೆಯನ್ನೇ ಬಹಿಷ್ಕರಿಸುವ ವಿಚಾರದಲ್ಲಿ ಗ್ರಾಮಸ್ಥರಿದ್ದು ಈಗಾಗಲೇ ಮೇಲಿಂದ ಮೇಲೆ ಸಭೆಗಳನ್ನು ಸಹ ನಡೆಸಿಕೊಂಡು ಬಂದಿದ್ದು, ಹೀಗಾಗಿ ಮುಂಬರುವ ಚುನಾವಣೆ ಬಹಿಷ್ಕರಿಸುವ ನಿಟ್ಟಿನಲ್ಲಿ ನಮ್ಮ ಊರಿನ ಹಿರಿಯರ ತೆಗೆದುಕೊಳ್ಳುವ ನಿರ್ಧಾರದಂತೆ ಮುನ್ನಡೆಯುತ್ತೇವೆ ಅಂತಾರೆ ಗ್ರಾಮದ ಯುವಕರು.
ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡುವುದು ಖಚಿತ: ಪ್ರಮೋದ್ ಮುತಾಲಿಕ್
ಒಟ್ಟಿನಲ್ಲಿ ಬಾದಾಮಿ ಚಾಲುಕ್ಯರ ಕಲಾ ಸಿರಿವಂತಿಕೆಯನ್ನ ಸಾರುವ ಐತಿಹಾಸಿಕ ಪಟ್ಟದಕಲ್ಲು ಗ್ರಾಮದಲ್ಲಿ ಈಗ ಸ್ಥಳಾಂತರ ಸಮಸ್ಯೆ ಎದುರಾಗಿದ್ದು, ಆದಷ್ಟು ಶೀಘ್ರವಾಗಿ ಸರ್ಕಾರ ಇವರನ್ನು ಸ್ಥಳಾಂತರ ಮಾಡಬೇಕು. ದೇಗುಲಗಳ ಸಂರಕ್ಷಣೆ ಜೊತೆಗೆ ಇನ್ನಷ್ಟು ಪ್ರವಾಸೋದ್ಯಮ ಅಭಿವೃದ್ದಿ ಮಾಡಲಿ ಅನ್ನೋದೆ ಎಲ್ಲರ ಆಶಯ..