KarnatakaBudget2023: ರಾಮನಗರ ಜಿಲ್ಲೆಯ ಜನರ ತುಟಿಗೆ ತುಪ್ಪ, ಕೊನೆಗೂ ಗೆದ್ದ ಡಿಕೆ ಸಹೋದರರು..!
ರಾಮನಗರ ಜಿಲ್ಲೆಯಿಂದ ಆಯ್ಕೆಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರಾದ ಇಕ್ಬಾಲ್ ಹುಸೇನ್, ಬಾಲಕೃಷ್ಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ರವರ ಬಗ್ಗೆ ಅಪಾರವಾದ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಅವರೂ ಕೂಡ ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಯೋಜನೆಗಳ ಪ್ರಸ್ತಾವವನ್ನು ಸರ್ಕಾರಕ್ಕೆ ನೀಡಿದ್ದರು. ಆದರೆ, ಇವರ ಪ್ರಸ್ತಾವನೆಗೆ ಸರ್ಕಾರ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದಿರುವುದು ಬಜೆಟ್‌ನಿಂದ ಬಹಿರಂಗಗೊಂಡಿದೆ.
ಎಂ.ಅಫ್ರೋಜ್ ಖಾನ್
ರಾಮನಗರ(ಜು.08): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ಆಯವ್ಯಯದಲ್ಲಿ ರೇಷ್ಮೆನಗರಿ ರಾಮನಗರ ಜಿಲ್ಲೆಯ ಜನರನ್ನು ನಿರಾಸೆಗೊಳಿಸದೆ ಸಮಾಧಾನ ಪಡಿಸುವ ಕೊಡುಗೆಗಳನ್ನು ನೀಡಿ ತುಟಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ.
ಜಿಲ್ಲೆಯಿಂದ ಆಯ್ಕೆಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕರಾದ ಇಕ್ಬಾಲ್ ಹುಸೇನ್, ಬಾಲಕೃಷ್ಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ರವರ ಬಗ್ಗೆ ಅಪಾರವಾದ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಅವರೂ ಕೂಡ ಜಿಲ್ಲೆಯಲ್ಲಿ ಆಗಬೇಕಿರುವ ಅಭಿವೃದ್ಧಿ ಯೋಜನೆಗಳ ಪ್ರಸ್ತಾವವನ್ನು ಸರ್ಕಾರಕ್ಕೆ ನೀಡಿದ್ದರು. ಆದರೆ, ಇವರ ಪ್ರಸ್ತಾವನೆಗೆ ಸರ್ಕಾರ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದಿರುವುದು ಬಜೆಟ್‌ನಿಂದ ಬಹಿರಂಗಗೊಂಡಿದೆ. ಕಾಂಗ್ರೆಸ್ ಶಾಸಕರು ತಮ್ಮದೇ ಸರ್ಕಾರದ ಮೇಲೆ ಒತ್ತಡ ಹೇರಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿಸುವಲ್ಲಿ ಹಾಗೂ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಮರು ಜೀವ ಕೊಡಿಸುವಲ್ಲಿ ಎಡವಿರುವುದು ಸ್ಪಷ್ಟವಾಗಿದೆ.
ಬಿಜೆಪಿ ಸರ್ಕಾರದ 10 ಯೋಜನೆಗೆ ತಡೆ, ಉಚಿತ ಗ್ಯಾರೆಂಟಿ ಜೊತೆ ಹೊಸ ಕಾರ್ಯಕ್ರಮ ಘೋಷಣೆ!
ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹಿಂದಿನ ಸರ್ಕಾರಗಳಲ್ಲಿ ಸಿಗಬೇಕಾದ ನ್ಯಾಯ ಸಿಗದ ಕಾರಣ ಜನರ ನಿರೀಕ್ಷೆಗಳೆಲ್ಲವೂ ಹುಸಿಯಾಗಿದ್ದವು. ನಮ್ಮ ಜಿಲ್ಲೆಯವರೇ ಉಪಮುಖ್ಯಮಂತ್ರಿ ಆಗಿರುವ ಕಾರಣ ಬಂಪರ್ ಕೊಡುಗೆ ಸಿಗುತ್ತದೆ ಎಂಬ ನಿರೀಕ್ಷೆಗಳು ಬೆಟ್ಟದಷ್ಟುಮೂಡಿದ್ದವು.ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡಿಸಿದ ಬಜೆಟ್‌ನಲ್ಲಿ ಬಹುತೇಕ ನಿರೀಕ್ಷೆಗಳು ಹುಸಿಯಾಗಿವೆ. ರಾಜಧಾನಿಗೆ ಸನಿಹದಲ್ಲಿಯೇ ರಾಮನಗರ ಇದ್ದರೂ ಪ್ರಗತಿಯನ್ನೇ ಕಾಣದೆ ಅಭಿವೃದ್ಧಿಯಿಂದ ವಂಚಿತವಾಗಿದೆ. ಆದರೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ರವರು ಅಭಿವೃದ್ಧಿಯಲ್ಲಿ ಜಿಲ್ಲೆಗೆ ಸಿಗಬೇಕಾದ ನ್ಯಾಯವನ್ನು ದಕ್ಕಿಸುವಲ್ಲಿ ವಿಫಲರಾಗಿದ್ದಾರೆ.
ಎತ್ತಿನಹೊಳೆ, ಮೇಕೆದಾಟು ಪ್ರಸ್ತಾಪಕ್ಕೆ ಸೀಮಿತ:
ಎತ್ತಿನಹೊಳೆ ಮತ್ತು ಮೇಕೆದಾಟು ಯೋಜನೆ ಸಂಪ್ರದಾಯದಂತೆ ಮತ್ತೊಮ್ಮೆ ಬಜೆಟ್‌ನಲ್ಲಿ ಪ್ರಸ್ತಾಪವಾಗಿದೆ. ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ನೀರಾವರಿ ಸೌಲಭ್ಯ ಸಿಗುವ ನಿರೀಕ್ಷೆಯಿದೆ. ಇನ್ನು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಅರಣ್ಯೀಕರಣಕ್ಕೆ ಅಗತ್ಯವಿರುವ ಭೂ ಪರಿಹಾರ ನೀಡುವುದು ಹಾಗೂ ಕೇಂದ್ರದ ಅನುಮೋದನೆ ಪಡೆಯುವುದಕ್ಕೆ ಸೀಮಿತಗೊಂಡಿದೆ. ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಮಹತ್ವದ ಘೋಷಣೆ ಆಗಿಲ್ಲ.
ಕೊನೆಗೂ ಗೆದ್ದ ಡಿಕೆ ಸಹೋದರರು:
ಕಳೆದ 5 ವರ್ಷಗಳಿಂದ ಸ್ವಕ್ಷೇತ್ರ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಲು ನಡೆಸಿದ ಹೋರಾಟದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಸಫಲಗೊಂಡಿದ್ದಾರೆ. 2018 ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಕನಕಪುರ ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದಾಗ ಕನಕಪುರದಲ್ಲಿ ಮೆಡಿಕಲ… ಕಾಲೇಜು ನಿರ್ಮಾಣ ಮಾಡಿಸುವ ಸಂಬಂಧ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದರು.
ಆನಂತರ 2018ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಮೆಡಿಕಲ್ ಕಾಲೇಜು ಘೋಷಣೆ ಮಾಡಿಸಿದ್ದರು. ಆದರೆ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರುತ್ತಿದ್ದಂತೆ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆಗೊಂಡಿತ್ತು. ಇದೀಗ ಮತ್ತೆ ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ಪಡೆದುಕೊಂಡು ಡಿಕೆ ಸಹೋದರರು ಹಿಡಿದ ಹಠ ಬಿಡದೆ ಸಾಧಿಸಿದ್ದಾರೆ.
ಆದರೀಗ ಕನಕಪುರಕ್ಕಾಗಿಯೇ ಹೊಸದಾಗಿ ಮೆಡಿಕಲ್ ಕಾಲೇಜು ಘೋಷಣೆ ಮಾಡಲಾಗಿದೆಯೋ ಅಥವಾ ರಾಮನಗರದಲ್ಲಿ ನಿರ್ಮಾಣವಾಗಲಿರುವ ರಾಜೀವ್‌ಗಾಂಧಿ ಆರೋಗ್ಯ ವಿವಿಯಲ್ಲಿನ ಉದ್ದೇಶಿತ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡಲಾಗುತ್ತಿದೆಯೋ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲವಾಗಿದೆ.
ಜಾನಪದ ಲೋಕಕ್ಕೆ ಆರ್ಥಿಕ ನೆರವು:
ಜಾನಪದ ವಸ್ತುಗಳು ಮತ್ತು ಕಲೆಯನ್ನು ಸಂರಕ್ಷಣೆ ಮಾಡುತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ಡಾ.ಎಚ್.ಎಲ….ನಾಗೇಗೌಡರ ಕನಸ್ಸಿನ ಕೂಸಾದ ಜಾನಪದ ಲೋಕವು ಆರ್ಥಿಕವಾಗಿ ಸಂಕಷ್ಟವನ್ನು ಎದುರಿಸುತ್ತಿತ್ತು. ಸರ್ಕಾರ ಈ ಬಾರಿ ಬಜೆಟ್‌ನಲ್ಲಿ 2 ಕೋಟಿ ಆರ್ಥಿಕ ನೆರವು ಘೋಷಿಸಿದೆ. ಇದರೊಂದಿಗೆ ಸಂಕಷ್ಟದಲ್ಲಿರುವ ಜಾನಪದ ಲೋಕ ಕಾಯಕಲ್ಪ ಪಡೆದುಕೊಂಡು ಮತ್ತಷ್ಟುಜನಾಕರ್ಷಣೀಯಗೊಳ್ಳಲು ಸಹಕಾರಿಯಾಗಲಿದೆ.
ಅಲ್ಪಸಂಖ್ಯಾತ ಯುವಜನರಿಗೆ ಕೌಶಲ್ಯ ತರಬೇತಿ ನೀಡಲು ಅಲ್ಪಸಂಖ್ಯಾತ ಕೌಶಲ್ಯ ಕೇಂದ್ರ ಹಾಗೂ ಮಾನವ - ಕಾಡಾನೆ ಸಂಘರ್ಷವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಮನಗರದಲ್ಲಿ ಆನೆ ಕಾರ್ಯಪಡೆ ರಚಿಸುವ ಘೋಷಣೆಯಾಗಿದೆ. ಉಳಿದಂತೆ ಜಿಲ್ಲೆಯ ನಿರೀಕ್ಷೆಗಳು ಹಾಗೂ ಬಿಜೆಪಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ರಾಮದೇವರ ಬೆಟ್ಟದಲ್ಲಿ ಅಯೋಧ್ಯೆ ಮಾದರಿ ರಾಮಮಂದಿರ ನಿರ್ಮಾಣ ಸೇರಿದಂತೆ ಪ್ರಮುಖ ಯೋಜನೆಗಳು ಕೋಕ್ ಪಡೆದಿವೆ.
Karnataka Budget 2023: ಗೂಬೆ ಕೂರಿಸುವ, ಜನರ ತಲೆ ಮೇಲೆ ಹೂವ ಇಡೋ ಬಜೆಟ್: ಎಚ್‌ಡಿಕೆ ರಿಯಾಕ್ಷನ್
ರಾಜ್ಯ ಆಯವ್ಯಯದಲ್ಲಿ ರೇಷ್ಮೆನಗರಿ ರಾಮನಗರ ಜಿಲ್ಲೆಗೆ ದಕ್ಕಿದ್ದು ಏನೇನು ?
1.ಎತ್ತಿನಹೊಳೆ ಯೋಜನೆಯನ್ನು ಹಿಂದಿನ ಸರ್ಕಾರ ಸಕಾಲದಲ್ಲಿ ಪೂರ್ಣಗೊಳಿಸದ ಕಾರಣ ದರ ಹೆಚ್ಚಳಗೊಂಡು ಈ ಯೋಜನೆಯು 23,252 ಕೋಟಿ ರು. ಮೊತ್ತಕ್ಕೆ ಪರಿಷ್ಕೃತಗೊಂಡಿದೆ. ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮವಹಿಸಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಆದ್ಯತೆ ಮೇಲೆ ಕ್ರಮ ತೆಗೆದುಕೊಳ್ಳುವುದು.
2.ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ವಿವರವಾದ ಯೋಜನಾ ವರದಿ ಹಾಗೂ ಪರಿಸರ ತೀರುವಳಿ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರವಾಗಿ ತೀರುವಳಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅರಣ್ಯೀಕರಣದ ಪರಿಹಾರಕ್ಕೆ ಅಗತ್ಯವಿರುವ ಭೂಮಿಯನ್ನು ಗುರುತಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಗಳನ್ನು ಜರುಗಿಸಲು ಆದ್ಯತೆ ಮೇರೆಗೆ ಕ್ರಮ ವಹಿಸಲಾಗುವುದು.
3.ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಕನಕಪುರ ತಾಲೂಕಿನಲ್ಲಿ ಒಂದು ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಾಗುವುದು.
4.ರಾಮನಗರ, ಬೆಳಗಾವಿ, ದಾವಣಗೆರೆ, ಕಲ್ಬುರ್ಗಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಯುವಜನರಿಗೆ ಕೌಶಲ್ಯ ತರಬೇತಿಯನ್ನು 4 ಕೋಟಿ ರು.ವೆಚ್ಚದಲ್ಲಿ ಪ್ರಾರಂಭಿಸುವುದು.
5.ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು ಮತ್ತು ಯುವ ಪೀಳಿಗೆಗೆ ಪರಿಚಯಿಸಲು ಪ್ರಮುಖ ಪಾತ್ರ ವಹಿಸುತ್ತಿರುವ ರಾಮನಗರ ಜಿಲ್ಲೆಯ ಜಾನಪದ ಲೋಕಕ್ಕೆ 2 ಕೋಟಿ ರು. ಅನುದಾನ ನೀಡುವುದು.
6.ಮಾನವ - ಕಾಡಾನೆ ಸಂಘರ್ಷವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಈಗಾಗಲೇ ಮೈಸೂರು, ಮಂಡ್ಯ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ್ಲಿಲ ಆನೆ ಕಾರ್ಯಪಡೆಯನ್ನು ರಚಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ರಾಮನಗರ ಮತ್ತು ಬನ್ನೇರುಘಟ್ಟದಲ್ಲಿ ಎರಡು ಹೊಸ ಆನೆ ಕಾರ್ಯಪಡೆಗಳನ್ನು ರಚಿಸಲಾಗುವುದು.
7. ರಾಮನಗರದ ಬಿಡದಿಯಲ್ಲಿ ಮಹಿಳೆಯರಿಗಾಗಿ ಪ್ರಾದೇಶಿಕ ವಾಹನ ಚಾಲನಾ ತರಬೇತಿ ಕೇಂದ್ರ ಸ್ಥಾಪನೆಗೆ 5 ಕೋಟಿ ರು. ಸಹಾಯಧನ