ಬೀದರ್‌(ಜು.24): ಕೋವಿಡ್‌-19 ಲಾಕ್‌ಡೌನ್‌ ಸಂದರ್ಭದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಪ್ರತಿಯೊಂದು ಮಗು ಸಹ ತಮ್ಮ ದಿನನಿತ್ಯದ ಓದು-ಬರಹ ಅಭ್ಯಾಸದಲ್ಲಿ, ವಿಜ್ಞಾನ ಚಟುವಟಿಕೆಗಳಲ್ಲಿ ಹಿಂದುಳಿಯಬಾರದು ಎಂದು ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ತಿಳಿಸಿದ್ದಾರೆ.

ಸಮಗ್ರ ಶಿಕ್ಷಣ ಕರ್ನಾಟಕ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಗಸ್ತ್ಯ ಕೋರ ವಿಜ್ಞಾನ ಚಟುವಟಿಕಾ ಕೇಂದ್ರ ಬೀದರ್‌ ವತಿಯಿಂದ ಫೇಸ್‌ಬುಕ್‌ ಮುಖಾಂತರ ನೇರ ಸಂದರ್ಶನದಲ್ಲಿ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ, ಪ್ರಶ್ನಾರ್ಥಕ ಮನೋಭಾವ, ಸೃಜನಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಅಗಸ್ತ್ಯ ಸಂಸ್ಥೆ ತುಂಬಾ ಒಳ್ಳೆಯ ರೀತಿಯಲ್ಲಿ ಅಚ್ಚುಕಟ್ಟಾಗಿ ತನ್ನ ಕಾರ್ಯ ನಿರ್ವಹಿಸಿದೆ. ಇದರಿಂದ ಮಕ್ಕಳಲ್ಲಿ ಉತ್ಸಾಹ, ಹೊಸ ಚೈತನ್ಯ ಮೂಡಿಸುವಲ್ಲಿ ಅಗಸ್ತ್ಯ ಸ್ವಯಂ ಸೇವಕರು ಮಾಡಿರುವ ಕಾರ್ಯ ಶ್ಲಾಘಿಸಿದರು. 

ರಾಜಕೀಯಕ್ಕೆ ‘ಕರ್ನಾಟಕ ಸಿಂಗಂ‘ ಅಣ್ಣಾಮಲೈ ಪ್ರವೇಶ!

ಮಕ್ಕಳಿಗೆ ಭಾರತದ ಸಂವಿಧಾನ ಅಧ್ಯಯನದ ಬಗ್ಗೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ತಿಳಿಸಿಕೊಡುವಂತೆ ಆಯೋಜಕರನ್ನು ಕೋರಿದರಲ್ಲದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸಾದ ಆತ್ಮನಿರ್ಭರ-ಭಾರತ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವಂತೆ ಅಣ್ಣಾಮಲೈ ಸೂಚಿಸಿದರು.

ಈ ಸಂದರ್ಭದಲ್ಲಿ ಸ್ವಯಂ ಸೇವಕರು ಕೇಳಿರುವ ಜೀವನದಲ್ಲಿ ತಮ್ಮ ಗುರಿಯನ್ನು ಯಾವ ರೀತಿ ಸಾ​ಧಿಸಬೇಕು ಮತ್ತು ವ್ಯಕ್ತಿತ್ವ ವಿಕಸನದ ಕುರಿತ ಹಾಗೂ ಹಲವಾರು ವಿಷಯಗಳ ಎಲ್ಲಾ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರಿಸಿದರು. ಉತ್ತರ ಕರ್ನಾಟಕದ ಜನತೆ ವಿಶಾಲ ಹೃದಯದವರು ಎಂದು ಕೊಂಡಾಡಿದರು. 

ಈ ವೇಳೆ ಸೋಶಿಯಲ್‌ ಮಿಡಿಯಾ ಸದಸ್ಯ ನಿಖೀಲ ಗೌಡ ಹಾಗೂ ಅಗಸ್ತ್ಯ ಕೋರ್‌ ವಿಜ್ಞಾನ ಚಟುವಟಿಕಾ ಕೇಂದ್ರದ ಪ್ರಾದೇಶಿಕ ಮುಖ್ಯಸ್ಥೆ ಗೀತಾ ಪಾಟೀಲ, ಬೀದರ್‌ ಕೋರ್‌ ವಿಜ್ಞಾನ ಚಟುವಟಿಕಾ ಕೇಂದ್ರದ ಮುಖ್ಯಸ್ಥ ಬಾಬುರಾವ್‌ ಎನ್‌.ಎಸ್‌. ಮತ್ತು ಬೀದರ್‌ ತಾಲೂಕಿನ ಸುಮಾರು 70 ಸ್ವಯಂ ಸೇವಕರು ಹಾಗೂ ಡಿಜಿಟಲ್‌ ಕ್ಯಾಂಪ್‌ ನ 250 ಕ್ಕೂ ಹೆಚ್ಚು ಮಕ್ಕಳು ಉಪಸ್ಥಿತರಿದ್ದರು.