ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನ ವಿರೋಧಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಾತಿ ಆಧಾರದ ಮೇಲೆ ತೀರ್ಮಾನಿಸುವುದು ತಪ್ಪು ಎಂದು ಹೇಳಿದ ಅವರು, ಧರ್ಮಸ್ಥಳ ಪ್ರಕರಣದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.
ವಿಜಯಪುರ: ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ, ಗದಗಿನ ದಿಂಗಾಲೇಶ್ವರ ಸ್ವಾಮಿಜಿ ತಮ್ಮ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದಾರೆ. ಸ್ವಾಮಿಜಿ ಮಾತನಾಡುತ್ತಾ, “ಕೆಲವರು ಯಾವ ಉದ್ದೇಶಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಆದರೆ ಯಾವುದೇ ಕಾರ್ಯಕ್ರಮಕ್ಕೆ ಒಬ್ಬರನ್ನು ಆಹ್ವಾನಿಸಲು ಜಾತಿಯನ್ನು ಆಧಾರವಾಗಿಸಿಕೊಳ್ಳುವುದು ಸರಿಯಲ್ಲ. ನಮ್ಮ ದೇಶವು ವಿಭಿನ್ನತೆಯಲ್ಲಿ ಏಕತೆಯನ್ನು ಕಾಣುವ ಮಹಾನ್ ಪರಂಪರೆಯನ್ನು ಹೊಂದಿದೆ. ಆದ್ದರಿಂದ ಜಾತಿ, ಧರ್ಮದ ಆಧಾರದ ಮೇಲೆ ತೀರ್ಮಾನಿಸುವುದಕ್ಕಿಂತ, ಅವರ ಸಾಧನೆ ಹಾಗೂ ನೀತಿ-ನಿಯಮಗಳನ್ನು ಪರಿಗಣಿಸಬೇಕು,” ಎಂದು ಹೇಳಿದರು. ಅವರು ಇನ್ನೂ ಸ್ಪಷ್ಟಪಡಿಸುತ್ತಾ, “ಅನೇಕರ ಮುಸ್ಲಿಂ ಸಮುದಾಯದವರು ತಮ್ಮ ಕಾರ್ಯಕ್ರಮಗಳಿಗೆ ಹಿಂದೂ ಮುಖಂಡರನ್ನು ಆಹ್ವಾನಿಸಿ ಉದ್ಘಾಟನೆ ಮಾಡಿಸುತ್ತಾರೆ. ಹೀಗಿರುವಾಗ, ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದಕ್ಕೆ ವಿರೋಧಿಸುವುದು ಅರ್ಥಹೀನವಾಗಿದೆ,” ಎಂದರು.
ಧರ್ಮಸ್ಥಳ ಪ್ರಕರಣದ ಕುರಿತು ಪ್ರತಿಕ್ರಿಯೆ
ಧರ್ಮಸ್ಥಳದಲ್ಲಿ ನಡೆದಿರುವ ವಿವಾದಾತ್ಮಕ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ದಿಂಗಾಲೇಶ್ವರ ಸ್ವಾಮಿಜಿ, “ಪ್ರತಿ ಆರು ತಿಂಗಳಿಗೊಮ್ಮೆ ಒಬ್ಬ ಸನ್ಯಾಸಿಯನ್ನು ಅಥವಾ ಒಬ್ಬ ಧಾರ್ಮಿಕ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ಹಿಂದೆಯೂ ಇಂತಹ ಪ್ರಕರಣಗಳು ನಡೆದಿರುವುದನ್ನು ನಾವು ನೋಡಿದ್ದೇವೆ. ಅವರ ಹೆಸರುಗಳನ್ನು ನಾನು ಹೇಳಲು ಬಯಸುವುದಿಲ್ಲ, ಆದರೆ ಪ್ರತಿಯೊಂದು ಪ್ರಕರಣದಲ್ಲಿಯೂ ಅವರ ತೆಜೋವಧೆ ಮಾಡಲು ಪ್ರಯತ್ನ ನಡೆಯುತ್ತದೆ,” ಎಂದು ಅಭಿಪ್ರಾಯಪಟ್ಟರು.
ಸ್ವಾಮಿಜಿಯವರ ಪ್ರಕಾರ, ಸಮಾಜವು ಯಾವಾಗಲೂ ಒಂದು ಧಾರ್ಮಿಕ ಮುಖಂಡನ ಮೇಲೆ ಆರೋಪ ಕೇಳಿಬಂದರೆ ಅದನ್ನು ನೇರವಾಗಿ ನಂಬಬಾರದು. “ಸಮಾಜವು ತಾಳ್ಮೆಯಿಂದ ಸತ್ಯಾಸತ್ಯತೆಯನ್ನು ಅರಿಯಬೇಕು. ಏಕೆಂದರೆ ಇಂತಹ ಪ್ರಕರಣಗಳನ್ನು ಯಾರು ಎಬ್ಬಿಸುತ್ತಾರೆ ಎಂಬುದು ನಿಗೂಢ. ಒಮ್ಮೆ ಹೆಣ್ಣಿನ ಆರೋಪ, ಮತ್ತೊಮ್ಮೆ ಹಣದ ಆರೋಪ, ಮತ್ತೊಮ್ಮೆ ಕೊಲೆಯ ಆರೋಪ – ಹೀಗೆ ಧಾರ್ಮಿಕ ಮುಖಂಡರ ಪ್ರಭಾವ ಕುಗ್ಗಿಸುವ ನಿಟ್ಟಿನಲ್ಲಿ ನಾನಾ ರೀತಿಯ ಆರೋಪಗಳನ್ನು ಎಬ್ಬಿಸಲಾಗುತ್ತಿದೆ,” ಎಂದು ಹೇಳಿದರು.
ಧಾರ್ಮಿಕ ಮುಖಂಡರ ಪ್ರಾಬಲ್ಯದ ವಿರುದ್ಧದ ಚಟುವಟಿಕೆ
ಸ್ವಾಮಿಜಿ ಮತ್ತಷ್ಟು ಹೇಳುವುದಾಗಿ, “ಇಡೀ ವಿಶ್ವದಲ್ಲಿಯೇ ಭಾರತದ ಧಾರ್ಮಿಕ ಮುಖಂಡರು ಅತ್ಯಂತ ಪ್ರಭಲರು. ಅವರ ಪ್ರಾಬಲ್ಯವನ್ನು ಕುಂದಿಸುವ ಪ್ರಯತ್ನಗಳು ಸದಾ ನಡೆಯುತ್ತಿವೆ. ವಿವೇಕಾನಂದರು ಜೀವಂತವಾಗಿದ್ದಾಗಲೂ ಅವರ ವಿರುದ್ಧ ತೆಜೋವಧೆ ನಡೆಯಿತು. ಒಶೋ, ಬುದ್ಧ, ಬಸವಣ್ಣ, ಮಹಾವೀರ – ಇವರ ಕಾಲದಲ್ಲಿಯೂ ಇದೇ ರೀತಿಯ ಘಟನೆಗಳು ನಡೆದಿದ್ದವು. ಆದರೆ ಇತಿಹಾಸವೇ ಹೇಳುತ್ತದೆ – ಯಾರು ಎಷ್ಟೇ ತೆಜೋವಧೆ ಮಾಡಿದರೂ ಧಾರ್ಮಿಕ ವ್ಯವಸ್ಥೆಗಳು ಮುಂದು ವರಿಯುತ್ತವೆ, ಬೆಳೆಯುತ್ತವೆ, ಶಕ್ತಿಯಾಗುತ್ತವೆ,” ಎಂದು ಹೇಳಿದರು.
ವಿರೇಂದ್ರ ಹೆಗಡೆ ಕುರಿತು ಅಭಿಪ್ರಾಯ
ಕೊನೆಗೆ ಸ್ವಾಮಿಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗಡೆ ಕುರಿತು ತಮ್ಮ ಆತ್ಮೀಯ ಭಾವನೆಯನ್ನು ಹಂಚಿಕೊಂಡು, “ಅವರೊಂದಿಗೆ ನನಗೆ ಆತ್ಮೀಯತೆ ಇದೆ. ಒಳ್ಳೆಯ ಸಂಬಂಧವಿದೆ. ನ್ಯಾಯ ಬದ್ಧರಾಗಿರುವವರಿಗೆ ನ್ಯಾಯ ಸಿಗಬೇಕು. ಯಾರು ಸತ್ಯದ ಹಾದಿಯಲ್ಲಿ ಇರುತ್ತಾರೋ, ಅವರಿಗೆ ನ್ಯಾಯ ದೊರಕುವುದು ಖಚಿತ,” ಎಂದು ಅಭಿಪ್ರಾಯಪಟ್ಟರು.
