ಎರಡು ದಶಕಗಳಿಂದ ಮಠದಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗದೆ ಆಸ್ತಿ ಪರಭಾರೆಯೇ ಸಮಿತಿಯ ದೊಡ್ಡ ಸಾಧನೆಯಾಗಿದೆ ಎಂದು ಕಿಡಿಕಾರಿದ ಸ್ವಾಮೀಜಿ| ರಾಜ್ಯದಲ್ಲಿರುವ ಸಾವಿರಾರು ಮಠಗಳು ಮೂಲ ಆಸ್ತಿ ಕಳೆದುಕೊಂಡು ನಿರ್ಗತಿಕವಾಗಿವೆ| ದೊಡ್ಡ ದೊಡ್ಡ ಮಠಗಳು ಸಹ ಈಗ ಅನ್ನಪ್ರಸಾದ, ಶಿಕ್ಷಣ ನೀಡದಂತಹ ಸ್ಥಿತಿಗೆ ಬಂದಿವೆ|
ಧಾರವಾಡ(ಜ.13): ಪರಭಾರೆಯಾಗಿರುವ ಮೂರು ಸಾವಿರ ಮಠದ ಆಸ್ತಿಯನ್ನು ಮರಳಿ ಪಡೆಯುವ ವರೆಗೂ ವಿಶ್ರಮಿಸುವುದಿಲ್ಲ. ಆಸ್ತಿ ಮರಳಿಸದೆ ಹೋದಲ್ಲಿ ಕಾವಿ ಬಟ್ಟೆತೊರೆಯುವೆ ಎಂದು ಬಾಲೆ ಹೊಸೂರಿನ ದಿಂಗಾಲೇಶ್ವರ ಶ್ರೀ ಸವಾಲು ಹಾಕಿದ್ದಾರೆ.
ಇಲ್ಲಿಯ ಗಾಂಧಿ ನಗರ ಈಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಶ್ರೀಮಠದ ಭಕ್ತರ ಸಭೆಯಲ್ಲಿ ಮಾತನಾಡಿದ ಅವರು, ಎರಡು ದಶಕಗಳಿಂದ ಮಠದಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗದೆ ಆಸ್ತಿ ಪರಭಾರೆಯೇ ಸಮಿತಿಯ ದೊಡ್ಡ ಸಾಧನೆಯಾಗಿದೆ ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿರುವ ಸಾವಿರಾರು ಮಠಗಳು ಮೂಲ ಆಸ್ತಿ ಕಳೆದುಕೊಂಡು ನಿರ್ಗತಿಕವಾಗಿವೆ. ದೊಡ್ಡ ದೊಡ್ಡ ಮಠಗಳು ಸಹ ಈಗ ಅನ್ನಪ್ರಸಾದ, ಶಿಕ್ಷಣ ನೀಡದಂತಹ ಸ್ಥಿತಿಗೆ ಬಂದಿವೆ. ಆದ್ದರಿಂದ ಬರೀ ಮೂರು ಸಾವಿರ ಮಠವಲ್ಲ ರಾಜ್ಯದ ಯಾವುದೇ ಮಠ-ಮಾನ್ಯಗಳ ಆಸ್ತಿ ಪರಭಾರೆ ಮಾಡಬಾರದು ಎಂಬುದೇ ನಮ್ಮ ಹೋರಾಟದ ಉದ್ದೇಶ ಎಂದರು.
ಮೂರು ಸಾವಿರ ಮಠ ಆಸ್ತಿ ಪರಭಾರೆ ವಿರೋಧಿಸಿ ಈಗಾಗಲೇ ಅಲ್ಲಲ್ಲಿ ಭಕ್ತರ ಸಭೆ ಕರೆಯುತ್ತಿದ್ದು ಭಕ್ತರು ಸಹ ಸ್ವಾಗತ ಮಾಡುತ್ತಿದ್ದು ಇನ್ನೂ ಬಹುದೊಡ್ಡ ಚಳವಳಿ ಆಗಬೇಕಿದೆ. ಈಗಾಗಲೇ ಹುಬ್ಬಳ್ಳಿ-ಧಾರವಾಡದಲ್ಲಿ ಐದಾರು ಸಭೆಗಳನ್ನು ನಡೆಸಿದ್ದೇವೆ. ಇದು ಬಹುದೊಡ್ಡ ಆಂದೋಲನ ಆಗುವ ವರೆಗೂ ನಾಡಿನ ನಾಯಕರಾಗಲಿ, ಮಠದ ಆಡಳಿತ ಮಂಡಳಿಯಾಗಲಿ ಅಥವಾ ಭೂಮಿ ದಾನ ತೆಗೆದುಕೊಂಡವರಾಗಲಿ ಅವಕಾಶ ಕೊಡದೇ ಕಾದು ನೋಡುವ ತಂತ್ರ ಕೈ ಬಿಟ್ಟು ಶೀಘ್ರಗತಿಯಲ್ಲಿ ಮಠದ ಆಸ್ತಿ ಮರಳಿಸಬೇಕು ಎಂದರು.
ಮೂರುಸಾವಿರ ಮಠದ ರಕ್ಷಣೆಗೆ ಮುಂದಾಗಿದ್ದಕ್ಕೆ ಶ್ರೀಗಳಿಗೆಯೇ ಜೀವಬೆದರಿಕೆ..!
ಹೊಸೂರು, ಉಗರಗೋಳ ಮಠಗಳ ಸ್ವಾಮೀಜಿಗಳು, ಮೂರು ಸಾವಿರ ಮಠದ ಭಕ್ತರಾದ ಶಿವಾನಂದ ಅಂಬಡಗಟ್ಟಿ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಗುರುರರಾಜ ಹುಣಸಿಮರದ, ಈಶ್ವರ ಚಂದ್ರಹೊಸಮನಿ, ಸದಾನಂದ ಶಿವಳ್ಳಿ, ಎಂ.ಎಫ್. ಹಿರೇಮಠ, ಅರುಣಾ ಹಳ್ಳಿಕೇರಿ, ಸಿದ್ದಣ್ಣ ಕಂಬಾರ ಸ್ವಾಮೀಜಿ ಹೋರಾಟಕ್ಕೆ ಕೈ ಜೋಡಿಸುವುದಾಗಿ ತಿಳಿಸಿದರು.
ಮಠಗಳನ್ನು ಭಕ್ತರಿಗೆ ಬಿಟ್ಟುಕೊಡಿ
ಆಡಳಿತ, ವಿರೋಧ ಪಕ್ಷದ ರಾಜಕಾರಣಿಗಳೇ ಮಠದ ಸಮಿತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ನೇರವಾಗಿ ಆರೋಪ ಮಾಡುತ್ತಿದ್ದೇನೆ. ಇತ್ತೀಚೆಗೆ ಮಠ, ದೇವಸ್ಥಾನಗಳು ಭಕ್ತರ ಬದಲು ರಾಜಕಾರಣಿಗಳು ಕೈಯಲ್ಲಿವೆ. ಎಲ್ಲ ರಂಗಗಳಲ್ಲಿ ಪ್ರವೇಶ ಮಾಡಿದಂತೆ ಈಗ ದೇವಸ್ಥಾನಗಳಲ್ಲೂ ಅವರ ಪ್ರಭಾವ ಹೆಚ್ಚಿದೆ. ಎಲ್ಲಿಯ ವರೆಗೆ ಮಠದಿಂದ ರಾಜಕಾರಣಿಗಳು ಹೊರಗೆ ಹೋಗುವುದಿಲ್ಲವೋ ಅಲ್ಲಿಯ ವರೆಗೆ ಮಠಗಳ ಉದ್ಧಾರ ಸಾಧ್ಯವಿಲ್ಲ ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 13, 2021, 12:41 PM IST