ಬೆಂಗಳೂರು[ನ.29]:  ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ಪತ್ನಿ ಟಬು ದಿನೇಶ್‌ ಗುಂಡೂರಾವ್‌ ಅವರು ಗುರುವಾರ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಪರವಾಗಿ ಮತಯಾಚನೆ ನಡೆಸಿದರು.

ಗುರುವಾರ ಮೊದಲ ಬಾರಿಗೆ ಕ್ಷೇತ್ರದ ವಿವಿಧೆಡೆ ಕಾಂಗ್ರೆಸ್‌ ಅಭ್ಯರ್ಥಿ ರಿಜ್ವಾನ್‌ ಅರ್ಷದ್‌ ಪರ ಪ್ರಚಾರ ನಡೆಸಿದ ಅವರು, ರಿಜ್ವಾನ್‌ ಅರ್ಷದ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದು ಸೂಕ್ತವಾಗಿದೆ. ಅವರು ಕ್ಷೇತ್ರವನ್ನು ಚನ್ನಾಗಿ ಬಲ್ಲವರಾಗಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಅಲ್ಲದೆ, ನಾನು ಶಿವಾಜಿನಗರದಿಂದ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ ಕೇಳಿರಲಿಲ್ಲ. ಈ ಕ್ಷೇತ್ರಕ್ಕೆ ರಿಜ್ವಾನ್‌ ಅರ್ಷದ್‌ ಸೂಕ್ತ ಅಭ್ಯರ್ಥಿಯಾಗಿದ್ದು, ಅವರಿಗೆ ಪಕ್ಷ ಟಿಕೆಟ್‌ ಸಿಕ್ಕಿದ್ದು ಸರಿಯಾಗಿದೆ. ರಿಜ್ವಾನ್‌ ಅವರ ಪರ ಪ್ರಚಾರ ಮಾಡಿ ಹೆಚ್ಚಿನ ಮತ ಸೆಳೆಯುವ ಪ್ರಯತ್ನ ಮಾಡುತ್ತೇನೆ. ಇಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ವಾತಾವರಣವಿದೆ ಎಂದು ಈಗಾಗಲೇ ಪ್ರಚಾರದಲ್ಲಿ ತೊಡಗಿರುವ ಪಕ್ಷದ ಸ್ಥಳೀಯ ನಾಯಕರು ಹೇಳುತ್ತಿದ್ದಾರೆ. ನಾನು ಜಾತಿ ಆಧಾರಿತ ರಾಜಕೀಯ ಇಷ್ಟವಿಲ್ಲ. ಯಾವ ಜಾತಿ, ಧರ್ಮದವರಾದರೂ ಆಗಲಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಬಗೆಹರಿಸುವ ಕಡೆ ಗಮನ ಕೊಡಬೇಕು. ಅದೇ ನಿಜವಾದ ರಾಜಕೀಯ. ರಿಜ್ವಾನ್‌ ಅವರು ಗೆದ್ದು ಜನರ ಸಮಸ್ಯೆಗಳನ್ನು ಬಗೆಹರಿಸುವ ಹಾಗೂ ಅವರ ಭಾವನೆಗಳಿಗೆ ಸ್ಪಂಧಿಸುವ ಶಾಸಕರಾಗುತ್ತಾರೆ ಎಂದು ಟಬು ವಿಶ್ವಾಸ ವ್ಯಕ್ತಪಡಿಸಿದರು.

ದಿನೇಶ್‌ ಗುಂಡೂರಾವ್‌ ಅವರು ಕಷ್ಟಕಾಲದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ತೆಗೆದುಕೊಂಡು ನಿಭಾಯಿಸುತ್ತಿದ್ದಾರೆ. ಶಾಸಕರಾಗಿದ್ದರೂ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಜತೆಗೆ ಅಧ್ಯಕ್ಷ ಸ್ಥಾನವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಹೈಕಮಾಂಡ್‌ ನಿರ್ಧರಿಸಿದಾಗ ಕೆಪಿಸಿಸಿ ಅಧ್ಯಕ್ಷರು ತಾನಾಗಿಯೇ ಬದಲಾಗುತ್ತಾರೆ.

-ಟಬು ದಿನೇಶ್‌ ಗುಂಡೂರಾವ್‌.

ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು 9 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ