Mandya: ರಾಜ್ಯ ಸರ್ಕಾರದ ವಿರುದ್ಧ ದಿನೇಶ್ ಗೂಳಿಗೌಡ ಆಕ್ರೋಶ
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣಗಳಿಗೆ ಹಾಗೂ ಗ್ರಾಮ ಪಂಚಾಯ್ತಿ ನೌಕರರ ಸೇವಾ ನಿಯಮಗಳಿಗೆ ರಾಜ್ಯ ಸರ್ಕಾರ ತಿದ್ದುಪಡಿ ತರುವುದರ ಮೂಲಕ ಗ್ರಾಪಂಗಳ ಅಸ್ತಿತ್ವಕ್ಕೆ ಧಕ್ಕೆ ತರಲು ಹೊರಟಿರುವುದನ್ನು ತಡೆಹಿಡಿಯಬೇಕೆಂದು ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.
ಮಂಡ್ಯ (ಅ.11) : ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣಗಳಿಗೆ ಹಾಗೂ ಗ್ರಾಮ ಪಂಚಾಯ್ತಿ ನೌಕರರ ಸೇವಾ ನಿಯಮಗಳಿಗೆ ರಾಜ್ಯ ಸರ್ಕಾರ ತಿದ್ದುಪಡಿ ತರುವುದರ ಮೂಲಕ ಗ್ರಾಪಂಗಳ ಅಸ್ತಿತ್ವಕ್ಕೆ ಧಕ್ಕೆ ತರಲು ಹೊರಟಿರುವುದನ್ನು ತಡೆಹಿಡಿಯಬೇಕೆಂದು ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ (Panchayat Raj) ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ, ಸಂವಿಧಾನದ ಆಶಯಗಳಿಗೆ ಹಾಗೂ ಗ್ರಾಮ ಪಂಚಾಯ್ತಿ (Village Panchayat) ವ್ಯವಸ್ಥೆಯ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಕೆಲವು ನಿರ್ಣಯಗಳನ್ನು ಸರ್ಕಾರ ಕೈಗೊಂಡಿರುವುದು ದುರದೃಷ್ಟಕರ ಸಂಗತಿ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದಿನ ಭಾರತದ ಪ್ರಧಾನ ಮಂತ್ರಿಗಳಾಗಿದ್ದ ರಾಜೀವ್ ಗಾಂಧಿ (Rajeev Gandhi) ಮತ್ತು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅಬ್ದುಲ್ ನಸೀರ್‌ಸಾಬ್ ಅವರ ಕನಸಿನ ಕೂಸು ಇಂದಿನ ಗ್ರಾಪಂ ವ್ಯವಸ್ಥೆ. ಅಂದು ಜನ ಸಾಮಾನ್ಯರ ಹಾಗೂ ಎಲ್ಲ ಸಮುದಾಯಗಳ ಜನರಿಗೆ ಅಧಿಕಾರ ವಿಕೇಂದ್ರಿಕರಣ ವ್ಯವಸ್ಥೆಯಡಿ ಅಧಿಕಾರ ನೀಡಬೇಕೆಂಬ ಆಶಯದೊಂದಿಗೆ ಇಡೀ ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ತರಲಾಗಿತ್ತು. ಪ್ರಜಾಪ್ರಭುತ್ವದ ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿಗಳ ಅಸ್ತಿತ್ವಕ್ಕೆ ಇಂದಿನ ಸರ್ಕಾರ ಧಕ್ಕೆ ಉಂಟು ಮಾಡಲು ಹೊರಟಿರುವುದು ವಿಷಾದನೀಯ ಎಂದು ಹೇಳಿದ್ದಾರೆ.
ಅಂದಿನ ಸರ್ಕಾರಗಳು ಯಾವ ಕಾರಣಕ್ಕಾಗಿ ಗ್ರಾಪಂ ವ್ಯವಸ್ಥೆಯನ್ನು ಜಾರಿಗೆ ತಂದಿತ್ತೋ ಅಂತಹ ವ್ಯವಸ್ಥೆಯನ್ನು ಇಂದು ದುರ್ಬಲಗೊಳಿಸುತ್ತಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ. ರಾಜ್ಯದ ಎಲ್ಲಾ ಗ್ರಾಪಂಗಳು ಸ್ಥಳೀಯ ಸರ್ಕಾರಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾಲಕ್ಕೆ ತಕ್ಕಂತೆ ಸಭೆಗಳನ್ನು ನಡೆಸಿ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಆಗಬೇಕಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಕ್ರಮ ಕೈಗೊಳ್ಳುತ್ತಿವೆ. ಆದರೂ, ರಾಜ್ಯ ಸರ್ಕಾರ ಗ್ರಾಪಂ ಅಧ್ಯಕ್ಷರ ಅಧಿಕಾರವನ್ನು ಮೊಟಕುಗೊಳಿಸಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಎಲ್ಲ ರೀತಿಯ ಆಧಿಕಾರಗಳನ್ನು ನೀಡಿರುವುದು ಇಡೀ ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಹಾಳು ಮಾಡಿದಂತಾಗುತ್ತದೆ ಎಂದಿದ್ದಾರೆ.
ರಾಜ್ಯ ಸರ್ಕಾರ 10 ಆಗಸ್ಟ್ 2022ರ ಸಭೆಯಲ್ಲಿ ಕೈಗೊಂಡಿರುವ ಹಲವು ನಿರ್ಣಯಗಳಿಂದ ಗ್ರಾಪಂ ಅಧಿಕಾರ ವ್ಯಾಪ್ತಿಯನ್ನು ಮೊಟಕುಗೊಳಿಸಿ ಅಧಿಕಾರಿಗಳ ಕೈಗೆ ನೀಡುವುದರಿಂದ ಅಧ್ಯಕ್ಷರಿಗೆ ಅವಮಾನ ಮಾಡಿದಂತಾಗುತ್ತದೆ. ಈ ಮೊದಲು ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಹಾಗೂ ಗ್ರಾಪಂ ಕಚೇರಿಗಳ ನಿರ್ವಹಣೆಯ ಬಗ್ಗೆ ಮುಖ್ಯ ಕಾರ್ಯನಿರ್ವಾಹಕ ಅಧ್ಯಕ್ಷರ ಗಮನಕ್ಕೆ ಹಾಗೂ ಸಭೆಯ ಮುಂದೆ ಮಂಡಿಸಿ ಅನುಮೋದನೆಯನ್ನು ಪಡೆದ ನಂತರ ಹಣಕಾಸು ಸೇರಿದಂತೆ ಇತರೆ ವ್ಯವಹಾರಗಳು ಸಭೆಯ ಮುಂದೆ ಮಂಡನೆಯಾಗಿ ಅನುಮೋದನೆ ಪಡೆಯಲಾಗುತ್ತಿತ್ತು ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ ಹೊಸದಾಗಿ ಗ್ರಾಪಂ ವ್ಯವಸ್ಥೆಗೆ ಧಕ್ಕೆ ತರುವಂತಹ ತಿದ್ದುಪಡಿಯನ್ನು ಹಿಂದಕ್ಕೆ ಪಡೆದು ಈ ಹಿಂದೆ ಇದ್ದಂತಹ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಸರ್ಕಾರದಿಂದ ಗ್ರಾಪಂ ಅಸ್ತಿತ್ವಕ್ಕೆ ಧಕ್ಕೆ: ದಿನೇಶ್ ಗೂಳಿಗೌಡ
- ಪ್ರಜಾಪ್ರಭುತ್ವ, ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ನಿರ್ಣಯ
- ಸ್ಥಳೀಯ ಸರ್ಕಾರಗಳಾಗಿ ಪಂಚಾಯ್ತಿಗಳು ಕಾರ್ಯನಿರ್ವಹಣೆ
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆ
ಸಭೆಯಲ್ಲಿ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದ, ಸಂವಿಧಾನದ ಆಶಯಗಳಿಗೆ ಹಾಗೂ ಗ್ರಾಮ ಪಂಚಾಯ್ತಿ ವ್ಯವಸ್ಥೆಯ ಅಸ್ತಿತ್ವಕ್ಕೆ ಧಕ್ಕೆ ತರುವಂತಹ ಕೆಲವು ನಿರ್ಣಯ
ನಿರ್ಣಯಗಳನ್ನು ಸರ್ಕಾರ ಕೈಗೊಂಡಿರುವುದು ದುರದೃಷ್ಟಕರ ಸಂಗತಿ