ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್..!
ಒಂದು ಕಡೆ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚಲ್ಪಡುತ್ತಿದ್ದರೆ, ಕೊಡಗಿನಲ್ಲಿ ಪ್ರಾಥಮಿಕ ಶಾಲೆಯೊಂದರಲ್ಲಿ ಸ್ಮಾರ್ಟ್ ಕ್ಲಾಸ್ ಮಾಡುತ್ತಿದ್ದಾರೆ. ಧ್ವನಿ, ದೃಶ್ಯ ಮೂಲಕ ಎಲ್ಇಡಿ ಪರದೆಯಲ್ಲಿ ಮಕ್ಕಳಿಗೆ ಸ್ಮಾರ್ಟ್ ಶಿಕ್ಷಣ ನೀಡಲಾಗುತ್ತಿದೆ.
ಮಡಿಕೇರಿ(ಜ.24): ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮೈರಾಡ ಸಂಸ್ಥೆ ವತಿಯಿಂದ ನೆಕ್ಸ್ಟ್‌ಎಜುಕೇಶನ್ ಯೋಜನೆಯಡಿ ಸ್ಮಾರ್ಟ್ ಕ್ಲಾಸ್ ತರಗತಿ ಆರಂಭವಾಗಿದೆ. ಈ ಮೂಲಕ ಪಾಠ-ಪ್ರವಚನವನ್ನು ದೃಶ್ಯ ಮತ್ತು ಧ್ವನಿ ಮೂಲಕ ವಿದ್ಯಾರ್ಥಿಗಳಿಗೆ ಅತ್ಯಂತ ಸೂಕ್ಷ್ಮವಾಗಿ ಮತ್ತು ಸಮರ್ಪಕವಾಗಿ ಮನದಟ್ಟು ಮಾಡಲಾಗುತ್ತಿದೆ.
ಮೈರಾಡ ಸಂಸ್ಥೆಯು ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ 3.50 ಲಕ್ಷ ರು. ವೆಚ್ಚದಲ್ಲಿ ಡಿಜಿಟಲ್ ಮಾನಿಟರ್ ಕೂಡ ಒದಗಿಸಿದೆ. 2 ವರ್ಷದವರೆಗೂ ಈ ಸಂಸ್ಥೆ ವತಿಯಿಂದಲೇ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಶಿಕ್ಷಕರನ್ನು ವೇತನ ಸಹಿತ ಸಂಸ್ಥೆ ನೀಡಲಿದೆ ಎಂದು ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬಿ.ಶಿವರಾಮು ಮಾಹಿತಿ ನೀಡಿದ್ದಾರೆ.
ಅಕ್ರಮ ವಲಸಿಗರ ಪತ್ತೆಗೆ ಕೊಡಗು ಪೊಲೀಸ್ ಬೇಟೆ..!
ಸಿಬಿಎಸ್‌ಇ ಮತ್ತು ರಾಜ್ಯ ಶಿಕ್ಷಣದ ಎಲ್.ಕೆ.ಜಿ ಯಿಂದ 12ನೇ ತರಗತಿವರೆಗಿನ ಪಠ್ಯ ವಿಷಯಗಳಾದ ಕನ್ನಡ, ಇಂಗ್ಲಿಷ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನಗಳನ್ನು ನೆಕ್ಸ್ಟ್‌ಎಜುಕೇಶನ್ ಮೂಲಕ ವಿದ್ಯಾರ್ಥಿಗಳಿಗೆ ಬೋಧಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಈ ಉಪಕರಣಗಳ ಬಳಕೆಯ ಮೂಲಕ ವಿದ್ಯಾರ್ಥಿಗಳಿಗೆ ಹೇಗೆ ಶಿಕ್ಷಣ ನೀಡಬೇಕು ಎಂಬ ಬಗ್ಗೆ ಶಾಲೆಯ ಎಲ್ಲ ಶಿಕ್ಷಕರಿಗೂ ಮೈರಾಡ ಸಂಸ್ಥೆ ವತಿಯಿಂದ ತರಬೇತಿ ನೀಡಲಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮಾದರಿ ಶಾಲೆಯಾಗಿ ರೂಪುಗೊಳ್ಳುತ್ತಿದೆ. ಈಗಾಗಲೇ ಬಿ.ಎಲ್ ಸಂಸ್ಥೆ ವತಿಯಿಂದ 2.8 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅದರೊಂದಿಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತಾ ಮಾದರಿ ಶಾಲೆಯಾಗುತ್ತಿರುವುದು ಸಂತಸದ ವಿಚಾರ ಎಂದಿದ್ದಾರೆ.
ಬಸವನ ಪವಾಡ, ಪರೀಕ್ಷೆ ಮಾಡಿದ ಪೊಲೀಸ್‌ನನ್ನು ಬೀದಿಯಲ್ಲಿ ಅಟ್ಟಾಡಿಸಿದ ಬಸಪ್ಪ
ಹಿರಿಯ ವಿದ್ಯಾರ್ಥಿಗಳು ಸಹ ಶಾಲೆ ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆ. 20 ಸಾವಿರ ರು. ವೆಚ್ಚದಲ್ಲಿ ಧ್ವನಿವರ್ಧಕ ಮತ್ತು 50 ಸಾವಿರ ರು. ವೆಚ್ಚದಲ್ಲಿ ನಲಿ-ಕಲಿ ವಿಭಾಗಕ್ಕೆ ಬೆಂಚುಗಳನ್ನು ಒದಗಿಸುವ ಕಾರ್ಯ ಮಾಡಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕ ತಿಳಿಸಿದ್ದಾರೆ. ಒಟ್ಟಾರೆಯಾಗಿ ಸರ್ಕಾರಿ ಶಾಲೆ ಮಕ್ಕಳಿಗೆ ಎಲ್ಲ ಸೌಕರ್ಯ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದಿದ್ದಾರೆ.