ಬೆಂಗಳೂರು: (ಸೆ. 21 ) ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿರುವ ದುಬಾರಿ ದಂಡವನ್ನು ಪರಿಷ್ಕರಿಸಿ ಶನಿವಾರ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ಸಾರಿಗೆ ಸಚಿವರೂ ಆದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ. 

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಚಾರ ನಿಯಮ ಉಲ್ಲಂಘನೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ದಂಡದ ಪ್ರಮಾಣದಿಂದ ಸಾರ್ವಜನಿಕರಿಗೆ ಹೊರೆಯಾಗುತ್ತಿದೆ ಎಂಬುದು ನಿಜ. ಜತೆಗೆ, ದಂಡ ಹೆಚ್ಚಿಸಿದ್ದರೂ ಸಂಚಾರಿ ನಿಯಮ ಉಲ್ಲಂಘನೆಗಳು ಕೂಡ ನಿಂತಿಲ್ಲ ಎಂಬುದೂ ಅಷ್ಟೇ ನಿಜ. ಹಾಗಾಗಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಎಷ್ಟು ಪ್ರಮಾಣದಲ್ಲಿ ದಂಡ ಇಳಿಕೆ ಮಾಡಬೇಕೆಂದು ನಿರ್ಧರಿಸಿದ್ದೇವೆ. ಈ ಪರಿಷ್ಕೃತ ದಂಡದ ಬಗ್ಗೆ ಶನಿವಾರ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ಹೇಳಿದರು.

ಇಂದಿನಿಂದ ಕುಡಿದು ವಾಹನ ಓಡಿಸಿದರೆ 10000 ರು.ದಂಡ

ಮದ್ಯಪಾನ ಮಾಡಿ ವಾಹನ ಚಲಾಯಿಸುವ ಪ್ರಕರಣದಲ್ಲಿ ಹಾಲಿ ಇರುವ ದಂಡ ಪ್ರಮಾಣವನ್ನು ಇಳಿಸುವುದಿಲ್ಲ. ಉಳಿದ ಪ್ರಕರಣಗಳಲ್ಲಿ ದಂಡ ಪರಿಷ್ಕರಿಸಲಾಗುವುದು. ದಂಡ ಪರಿಷ್ಕರಣೆಯಲ್ಲಿ ಬೇರೆ ರಾಜ್ಯದ ಮಾದರಿ ಅನುಸರಿಸುವುದಿಲ್ಲ. ಕರ್ನಾಟಕದ್ದೇ ಒಂದು ಮಾದರಿಯಾಗಲಿ ಎಂದು ತಿಳಿಸಿದರು. 

ವಾಹನ ಸವಾರರಿಗೆ ಗುಡ್‌ ನ್ಯೂಸ್: ಕರ್ನಾಟಕದಲ್ಲೂ ದುಬಾರಿ ದಂಡಕ್ಕೆ ಬ್ರೇಕ್?

ದಂಡ ಹೆಚ್ಚಳವನ್ನು ಈ ಸಂದರ್ಭದಲ್ಲಿ ಸಮರ್ಥಿಸಿಕೊಂಡ ಅವರು, ದಂಡ ಹೆಚ್ಚಳದ ಪ್ರಸ್ತಾವನೆ ಹಿಂದಿನ ಯುಪಿಎ ಸರ್ಕಾರದಲ್ಲೇ ಇತ್ತು. ಈಗ ಅದನ್ನು ಕೇಂದ್ರ ಸರ್ಕಾರ ಮತ್ತಷ್ಟು ಪರಿಷ್ಕರಿಸಿ ಜಾರಿಗೆ ತಂದಿದೆ ಎಂದರು.