ಹುಬ್ಬಳ್ಳಿಸೆ.16): ರಾಜ್ಯದ ಆರ್ಥಿಕ ಪರಿಸ್ಥಿತಿ ತಳಮಟ್ಟದಲ್ಲಿ ಇದ್ದರೂ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಜಿಎಸ್‌ಟಿ ಪಾಲನ್ನು ಕೇಳಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ. ಪ್ರಭಾವಿ ಸಚಿವ ಪ್ರಹ್ಲಾದ ಜೋಶಿ ರಾಜ್ಯದ ನಿಯೋಗದ ಮೂಲಕ ಪ್ರಧಾನಿ ಭೇಟಿಯಾಗಿ ಈ ಕುರಿತು ಒತ್ತಡ ತರಲು ಹಿಂದೇಟು ಹಾಕುತ್ತಿರುವುದು ಬೇಸರದ ಸಂಗತಿ ಎಂದು ಕೆಪಿಸಿಸಿ ‘ಆರೋಗ್ಯ ಹಸ್ತ’ ಅಭಿಯಾನದ ಅಧ್ಯಕ್ಷ ಎಸ್‌. ಧ್ರುವನಾರಾಯಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡೈವರ್ಟ್‌ ಆ್ಯಂಡ್‌ ರೂಲ್‌ನಲ್ಲಿ ಸಕ್ರಿಯವಾಗಿರುವ ಕೇಂದ್ರ ಸರ್ಕಾರವು ರಾಜ್ಯಕ್ಕೆ ಜಿಎಸ್‌ಟಿ ಪಾಲು ಕೊಡುವುದು ಬಿಟ್ಟು ಸಾಲ ತೆಗೆದುಕೊಳ್ಳಲು ಸೂಚಿಸುತ್ತದೆ. ಇದರ ಬಗ್ಗೆ ರಾಜ್ಯ ಸರ್ಕಾರ ಚಕಾರ ಎತ್ತುವುದಿಲ್ಲ. ನೆರೆ, ಬರದ ಪರಿಹಾರವನ್ನು ನೀಡುವಂತೆ ಸಿಎಂ ಬಿಎಸ್‌ವೈ ಬೇಡಿಕೊಂಡರೂ ಕೇಂದ್ರ ನೀಡಿಲ್ಲ. ಈ ಕುರಿತಂತೆ ಪ್ರಹ್ಲಾದ ಜೋಶಿ ಅವರು ಸಂಸದರ, ರಾಜ್ಯ ಸರ್ಕಾರದ ಒಂದು ನಿಯೋಗ ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರದಿಂದ ಬರಬೇಕಾದ ತೆರಿಗೆ ಪಾಲನ್ನು ವಾಪಸ್‌ ಕೇಳಬೇಕಿತ್ತು. ಆದರೆ ಇವರೆಲ್ಲದ ಧ್ವನಿ ಕೇಳಿಬರುತ್ತಿಲ್ಲ ಎಂದರು.

ರಾಜ್ಯ ರಾಷ್ಟ್ರದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಸ್ಪತ್ರೆಯಲ್ಲಿ ಬೆಡ್‌, ಆಕ್ಸಿಜನ್‌ ಸಿಗದೆ ಜನತೆ ಸಾಯುತ್ತಿದ್ದಾರೆ. ಕೊರೋನಾ ನಿರ್ವಹಣೆಯಲ್ಲಿ ವಿಫಲವಾದ ಸರ್ಕಾರದಲ್ಲಿ ಯಾರು ಆರೋಗ್ಯ ಮಂತ್ರಿ ಎಂಬುದು ತಿಳಿಯುತ್ತಿಲ್ಲ. ಸಚಿವರಾದ ಶ್ರೀರಾಮುಲು, ಡಾ. ಸುಧಾಕರ, ಆರ್‌. ಅಶೋಕ, ಡಿಸಿಎಂ ಅಶ್ವತ್ಥ ನಾರಾಯಣ ಸೇರಿ ಎಲ್ಲರೂ ಕೊರೋನಾ ಕುರಿತು ಒಂದಷ್ಟುದಿನ ಮಾಹಿತಿ ನೀಡುತ್ತಾರೆ. ಅವರಲ್ಲಿ ತಾಳಮೇಳವಿಲ್ಲ. ಜನತೆಯ ಆರೋಗ್ಯ ಕಾಪಾಡುವುದಕ್ಕಿಂತ ಹಣ ಮಾಡುವ ಕಾರ್ಯ ಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹುಬ್ಬಳ್ಳಿ: ಶುಚಿ-ರುಚಿ ಕಳೆದುಕೊಂಡ ಇಂದಿರಾ ಕ್ಯಾಂಟೀನ್‌

ಸುದ್ದಿಗೋಷ್ಠಿಯಲ್ಲಿ ‘ಆರೋಗ್ಯ ಹಸ್ತ’ದ ಬೆಳಗಾವಿ ವಿಭಾಗದ ಸಂಚಾಲಕ ಸದಾನಂದ ಡಂಗನವರ, ಕಾಂಗ್ರೆಸ್‌ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ, ಮಾಜಿ ಸಂಸದ ಐ.ಜಿ. ಸನದಿ, ನಾಗರಾಜ ಗೌರಿ, ದೀಪಾ ಗೌರಿ, ಪ್ರಕಾಶಗೌಡ ಪಾಟೀಲ ಇತರರಿದ್ದರು.

ಆರೋಗ್ಯ ಹಸ್ತ ಶೇ. 30 ಪೂರ್ಣ

ಪಕ್ಷದಿಂದ ‘ಆರೋಗ್ಯ ಹಸ್ತ’ ಕಾರ್ಯಕ್ರಮ ಮೂಲಕ ಕೊರೋನಾ ವಿರುದ್ಧ ಹೋರಾಟ ನಿರಂತರವಾಗಿದೆ. ಮನೆಮನೆಗೆ ಭೇಟಿ, ಆರೋಗ್ಯ ತಪಾಸಣೆ ಸೇರಿ ವಿವಿಧ ಕಾರ್ಯಕ್ರಮ ನಡೆಯುತ್ತಿದೆ. ‘ಆರೋಗ್ಯ ಹಸ್ತ’ ಕಾರ್ಯಕ್ರಮವನ್ನು ಪಕ್ಷ ಸಂಘಟನೆಗಾಗಿ, ಮತ ಕೇಳಲು ಮಾಡಿಲ್ಲ. ಜನರ ಆರೋಗ್ಯದ ಕುರಿತ ಕಳಕಳಿಗೆ ಮಾಡಿದ್ದೇವೆ. 224 ವಿಧಾನಸಭಾ ಕ್ಷೇತ್ರ, 7800 ಗ್ರಾಪಂ, ತಾಪಂ, ನಗರ ಸ್ಥಳೀಯ ಸಂಸ್ಥೆ, 8500 ‘ಆರೋಗ್ಯ ಹಸ್ತ’ ಕಿಟ್‌ ವಿತರಣೆ ಮಾಡಲಾಗಿದೆ. ಒಂದಕ್ಕೆ 4500 ವೆಚ್ಚ ತಗಲಿದೆ. 15 ಸಾವಿರ ಕಾರ್ಯಕರ್ತರಿಗೆ ತರಬೇತಿ ನೀಡಿ ಕೊರೋನಾ ವಾರಿಯರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ರಾಜ್ಯದಲ್ಲಿ ಶೇ. 30 ರಷ್ಟು ತಲುಪಿದ್ದು, ಒಂದು ತಿಂಗಳಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಧ್ರುವನಾರಾಯಣ ತಿಳಿಸಿದರು.