Asianet Suvarna News Asianet Suvarna News

ಬಲಗೊಳ್ಳಲಿ ಧಾರವಾಡ ಅಕಾಶವಾಣಿ ಸುದ್ದಿ ವಿಭಾಗ

ಇದೇ ನವೆಂಬರ್‌ 1ಕ್ಕೆ ಸತತವಾಗಿ 42 ವಸಂತ ಕಾಣುತ್ತಿರುವ ಧಾರವಾಡ ಆಕಾಶವಾಣಿಯ ‘ಪ್ರದೇಶ ಸಮಾಚಾರ’ ಅಬಾಧಿತವಾಗಿ ಮುಂದುವರೆಸಲಾಗುವುದು ಎಂದು ಶ್ರೋತೃಗಳ ಒತ್ತಡದ ಹಿನ್ನೆಲೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಘೋಷಿಸಿದ್ದಾರೆ.

dharati akashavani department should be strengthened rav
Author
First Published Oct 19, 2022, 12:31 PM IST

ಬಸವರಾಜ ಹಿರೇಮಠ

ಧಾರವಾಡ (ಅ.19) : ಇದೇ ನವೆಂಬರ್‌ 1ಕ್ಕೆ ಸತತವಾಗಿ 42 ವಸಂತ ಕಾಣುತ್ತಿರುವ ಧಾರವಾಡ ಆಕಾಶವಾಣಿಯ ‘ಪ್ರದೇಶ ಸಮಾಚಾರ’ ಅಬಾಧಿತವಾಗಿ ಮುಂದುವರೆಸಲಾಗುವುದು ಎಂದು ಶ್ರೋತೃಗಳ ಒತ್ತಡದ ಹಿನ್ನೆಲೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಘೋಷಿಸಿದ್ದಾರೆ. ಆದರೆ, ಆಕಾಶವಾಣಿಯ ‘ಸುದ್ದಿ ವಿಭಾಗ’ ಬಲಪಡಿಸುವ ಬಗ್ಗೆಯೂ ಕೇಂದ್ರ ಸರ್ಕಾರ ತುರ್ತು ಗಮನ ವಹಿಸಬೇಕೆಂಬುದು ಶೋತೃಗಳ ಆಗ್ರಹವಾಗಿದೆ.

2047ಕ್ಕೆ 32 ಟ್ರಿಲಿಯನ್‌ ಡಾಲರ್‌ ಮೌಲ್ಯದ ಆರ್ಥಿಕತೆ ಗುರಿ: ಪ್ರಲ್ಹಾದ್ ಜೋಶಿ

ನಾಲ್ಕು ತಿಂಗಳ ಹಿಂದಷ್ಟೇ ನಿತ್ಯ ಐದು ಬಾರಿ ಪ್ರಸಾರವಾಗುತ್ತಿದ್ದ ‘ಎಫ್‌ಎಂ’ ಸುದ್ದಿ ಸ್ಥಗಿತಗೊಳಿಸಲಾಗಿದೆ. ಇದೀಗ ‘ಆಕಾಶವಾಣಿ ಪ್ರದೇಶ ಸಮಾಚಾರ’ವನ್ನು ಬೆಂಗಳೂರಿಗೆ ವರ್ಗಾಯಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಆಕಾಶವಾಣಿ ಧಾರವಾಡ ಕೇಂದ್ರಕ್ಕೆ ಆಗಮಿಸಿ ಕೆಲಸ ಮಾಡಲು ಬೆಂಗಳೂರು ಮೂಲದ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸುದ್ದಿ ವಿಭಾಗ ಸಂಪೂರ್ಣ ಗುತ್ತಿಗೆದಾರರ ಮೇಲೆಯೇ ನಡೆಯುತ್ತಿದೆ. ಆಕಾಶವಾಣಿ ಉಪ ನಿರ್ದೇಶಕರಾದ ಟಿ.ಬಿ. ನಂಜುಂಡಸ್ವಾಮಿ ಬೆಂಗಳೂರಿನಲ್ಲಿದ್ದು ಧಾರವಾಡ ಕೇಂದ್ರವನ್ನು ಸಹ ಅಲ್ಲಿಂದಲೇ ನಿಭಾಯಿಬೇಕಾದ ಸ್ಥಿತಿಯಿದೆ. ಅನಿವಾರ‍್ಯವಾಗಿ ಆಕಾಶವಾಣಿ ಕಾರ್ಯಕ್ರಮಗಳ ಮುಖ್ಯಸ್ಥರೇ ಸುದ್ದಿ ವಿಭಾಗದ ಸಂಯೋಜಕರಾಗಿದ್ದಾರೆ. ಆದ್ದರಿಂದ ಈ ವಿಭಾಗಕ್ಕೆ ಪೂರ್ಣಾವಧಿ ಬಾತ್ಮಿದಾರರು (ವರದಿಗಾರರು), ಸುದ್ದಿ ಸಂಪಾದಕರು ಹಾಗೂ ಸಹಾಯಕ ಉಪ ನಿರ್ದೇಶಕರು ಅಗತ್ಯವಿದೆ ಎಂದು ಆಕಾಶವಾಣಿಯ ನಿವೃತ್ತ ಅಧಿಕಾರಿಯೊಬ್ಬರು ಆಗ್ರಹಿಸುತ್ತಾರೆ.

ಏತಕ್ಕಾಗಿ ಬೇಕು ಆಕಾಶವಾಣಿ:

ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿದರೆ ಧಾರವಾಡ ಆಕಾಶವಾಣಿಯಲ್ಲಿ ‘ಪ್ರದೇಶ ಸಮಾಚಾರ’ ಓದಲಾಗುತ್ತದೆ. ನಿತ್ಯ ಬೆಳಗ್ಗೆ 7.05ರಿಂದ ಹತ್ತು ನಿಮಿಷ ಪ್ರಸಾರವಾಗುವ ಈ ಪ್ರದೇಶ ಸಮಾಚಾರವು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ ಸೇರಿ 18 ಜಿಲ್ಲೆಗಳ ಧ್ವನಿಯಾಗಿದೆ. ಶ್ರೋತೃಗಳ ಸಂಶೋಧನಾ ವರದಿ ಪ್ರಕಾರ ರಾಜ್ಯದ 5.5 ಕೋಟಿ ಕೇಳುಗರನ್ನು ಈ ಸಮಾಚಾರ ಹೊಂದಿದೆ. ಆಕಾಶವಾಣಿಯ ಎಲ್ಲ ಜನಪ್ರಿಯ ಕಾರ್ಯಕ್ರಮಗಳ ಪೈಕಿ ಅತೀ ಹೆಚ್ಚು ಜನಪ್ರಿಯವಾಗಿರುವುದು ಈ ಪ್ರದೇಶ ಸಮಾಚಾರ. ಬೆಂಗಳೂರು ಸುದ್ದಿ ವಿಭಾಗದೊಂದಿಗೆ ಈ ಕೇಂದ್ರ ಸೇರಿಸಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಆಕಾಶವಾಣಿಯ ಅಧಿಕಾರಿಗಳು ಧಾರವಾಡಕ್ಕೆ ಆಗಮಿಸಿ ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿರುವುದರಿಂದಲೇ ಈ ರೀತಿಯಾಗುತ್ತಿದೆ ಎಂಬ ಆರೋಪಗಳೂ ಇವೆ.

ಈ ಭಾಗದ ಅಸ್ಮಿತೆ:

ಪ್ರದೇಶ ಸಮಾಚಾರವು ಈ ಭಾಗದ ಅಸ್ಮಿತೆ ಆಗಿದ್ದು ಇಲ್ಲಿನ ಜನರೊಂದಿಗೆ ಬೆರತು ಹೋಗಿದೆ. ಜಾನಪದ, ಶಾಸ್ತ್ರೀಯ ಸಂಗೀತ, ನಾಟಕ ಕಲಾವಿದರು ಸೇರಿದಂತೆ ಹಲವರಿಗೆ ವೇದಿಕೆಯಾಗಿಯೂ ಕಾರ್ಯ ನಿರ್ವಹಿಸುತ್ತಿದೆ. ಹೀಗಾಗಿ ಕೇಂದ್ರ ಸಚಿವರು ಪ್ರದೇಶ ಸಮಾಚಾರವನ್ನು ಇನ್ನೆಂದೂ ವರ್ಗ ಮಾಡುವ ಕುರಿತು ಮಾತನಾಡದೆ ಗಟ್ಟಿಗೊಳಿಸಲು ಮುಂದಾಗಬೇಕಿದೆ. ಜತೆಗೆ ಈ ವಿಭಾಗಕ್ಕೆ ಪೂರ್ಣಾವಧಿ ಸಿಬ್ಬಂದಿ ಒದಗಿಸುವ ಮೂಲಕ ವಿಭಾಗವನ್ನು ಸಮರ್ಥಗೊಳಿಸಬೇಕಿದೆ ಎಂದು ಶೋತೃಗಳು, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಆಗ್ರಹಿಸಿದ್ದಾರೆ.

ಮಕ್ಕಳಲ್ಲಿ ಗಣಿತದ ಆಸಕ್ತಿ ಮೂಡಿಸುವುದು ಅಗತ್ಯ; ಪ್ರಲ್ಹಾದ್ ಜೋಶಿ

ಏನೇನಾಗಬೇಕು

ಪ್ರದೇಶ ಸಮಾಚಾರವನ್ನು ಅಬಾಧಿತವಾಗಿ ನಡೆಸುವ ಮೂಲಕ ಸುದ್ದಿ ವಿಭಾಗವನ್ನು ಮತ್ತಷ್ಟುಗಟ್ಟಿಗೊಳಿಸಲು ಸಾಕಷ್ಟುಅವಕಾಶಗಳಿವೆ. ಪ್ರತಿ ಶನಿವಾರ ಸಂಜೆ 6.30 ರಿಂದ ಹತ್ತು ನಿಮಿಷ ಸಮಾಚಾರ ದರ್ಶನ ಹಾಗೂ ಪ್ರತಿ ಸೋಮವಾರ ಸಂಜೆ 6.25ಕ್ಕೆ ವಾರ್ತಾ ಪತ್ರ ಐದು ನಿಮಿಷ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತದೆ. ಈ ಭಾಗದ ಭಾಷೆ, ಅಭಿವೃದ್ಧಿ, ಯೋಜನೆಗಳ ಕುರಿತು ಪ್ರಸಾರ, ಪ್ರಚಾರ ಸೇರಿದಂತೆ ಸಂದರ್ಶನ, ಸಮೀಕ್ಷೆ, ಚರ್ಚೆ ಆಧಾರಿತ ಕಾರ್ಯಕ್ರಮಗಳು, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ‍್ಯಕ್ರಮಗಳ ಬಗ್ಗೆ ಶೋತೃಗಳಿಗೆ ಮಾಹಿತಿ ಒದಗಿಸಲು ಸಮಾಚಾರ ದರ್ಶನ 10ರಿಂದ 20 ನಿಮಿಷಕ್ಕೆ ಹಾಗೂ ವಾರ್ತಾ ಪತ್ರ 5ರಿಂದ 10 ನಿಮಿಷಕ್ಕೆ ಹೆಚ್ಚಿಸಬೇಕು. ಜತೆಗೆ ಈ ಮೊದಲಿದ್ದ ಐದೂ ಎಫ್‌ಎಂ ಸುದ್ದಿಗಳನ್ನು ಪುನಃ ಆರಂಭಿಸಬೇಕು ಎಂಬ ಆಗ್ರಹವಿದೆ.

Follow Us:
Download App:
  • android
  • ios