ಸಾಯಿಬಾಬಾ ದೇವಸ್ಥಾನದ ತೆರವಿಗೆ ಮುಂದಾಗಿದ್ದ ಅಧಿಕಾರಿಗಳ ವಿರುದ್ಧ ಭಕ್ತರ ತೀವ್ರ ಆಕ್ರೋಶ ವ್ಯಕ್ತಡಿಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತೆರವು ಕಾರ್ಯವನ್ನು ಕೈಬಿಡಲಾಗಿದೆ. 

ಬೆಂಗಳೂರು (ಸೆ.22):  ಸುಪ್ರೀಂ ಕೋರ್ಟ್‌ ಆದೇಶದಂತೆ ಮಾಗಡಿ ರಸ್ತೆಯ ಸಾಯಿಬಾಬಾ ದೇವಸ್ಥಾನದ ತೆರವಿಗೆ ಮುಂದಾಗಿದ್ದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಭಕ್ತರ ತೀವ್ರ ಆಕ್ರೋಶ ವ್ಯಕ್ತಡಿಸಿದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ತೆರವು ಕಾರ್ಯವನ್ನು ಕೈಬಿಡಲಾಗಿದೆ.

2009ರಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸ್ಥಳದಲ್ಲಿರುವ ದೇವಸ್ಥಾನ, ಚರ್ಚ್, ಮಸೀದಿಗಳನ್ನು ಗುರುತಿಸಿ ತೆರವು ಮಾಡುವಂತೆ ಸುಪ್ರೀಂ ಕೋರ್ಟ್‌ ಆದೇಶ ನೀಡಿತ್ತು. ಆದೇಶದಂತೆ ನಗರದಲ್ಲಿ 43 ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳನ್ನು ಗುರುತಿಸಲಾಗಿತ್ತು. ಅದರಲ್ಲಿ ಮಾಗಡಿ ರಸ್ತೆಯ ಉದ್ಯಾನವನದಲ್ಲಿರುವ ಸಾಯಿಬಾಬ ದೇವಸ್ಥಾನವೂ ಒಂದಾಗಿತ್ತು.

ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಈ ಹಿಂದೆ ಅಕ್ರಮವಾಗಿ ನಿರ್ಮಾಣವಾಗಿರುವ 199.65 ಚದರ ಅಡಿ ಕಟ್ಟಡವನ್ನು ತೆರವಿಗೆ ದೇವಸ್ಥಾನದ ಆಡಳಿತ ಮಂಡಳಿಗೆ ನೋಟೀಸ್‌ ಜಾರಿ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ದೇವಸ್ಥಾನದ ಆಡಳಿತ ಮಂಡಳಿ ಸುಪ್ರೀಂ ಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಕೆ ಮಾಡಿದ್ದರು.

ಈ ನಡುವೆ ಶನಿವಾರ ಬಿಬಿಎಂಪಿ ಅಧಿಕಾರಿ ಪೊಲೀಸ್‌ ಭದ್ರತೆಯೊಂದಿಗೆ ದೇವಸ್ಥಾನದ ತೆರವಿಗೆ ಮುಂದಾಗಿದಾರು. ಈ ವೇಳೆ ದೇವಸ್ಥಾನದ ಭಕ್ತರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ತೆರವು ಕಾರ್ಯ ನಡೆಸದಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಪೊಲೀಸ್‌ ಭದ್ರತೆ ಹೆಚ್ಚಿಸಿ ಪ್ರತಿಭಟನಾಕಾರರ ಮನವೊಲಿಸುವುದಕ್ಕೆ ಹರಸಾಹಸ ಪಟ್ಟರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ.

ಎರಡು ದಿನ ಅವಕಾಶಕ್ಕೆ ಮನವಿ : ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗೋವಿಂದರಾಜನಗರ ವಿಭಾಗದ ಬಿಬಿಎಂಪಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಾಶ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಲರಾಮ್‌ ಅವರಿಗೆ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು, ಸುಪ್ರೀಂ ಕೋರ್ಟ್‌ಗೆ ದೇವಸ್ಥಾನದ ತೆರವು ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆ ಸೋಮವಾರ ನಡೆಯಲಿದೆ. ಅಲ್ಲಿಯವರೆಗೆ ದೇವಸ್ಥಾನ ತೆರವು ಮಾಡದಂತೆ ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಅಧಿಕಾರಿಗಳು ತಾತ್ಕಾಲಿಕವಾಗಿ ದೇವಸ್ಥಾನ ತೆರವು ಕಾರ್ಯವನ್ನು ಕೈಬಿಟ್ಟರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಳಗ್ಗೆ ಬೀಗ:ತೆರವು ಕಾರ್ಯಚರಣೆಗಾಗಿ ಶನಿವಾರ ದೇವಸ್ಥಾನದ ಗೇಟ್‌ಗೆ ಬೀಗ ಜಡಿದು ಭಕ್ತರ ಪ್ರವೇಶವನ್ನು ನಿರ್ಬಂಧಿಸಿದ್ದರು. ಈ ವೇಳೆ ಭಕ್ತರು ಹಾಗೂ ಪೊಲೀಸರ ನಡುವೆ ತೀವ್ರ ವಾಗ್ವಾದ ಉಂಟಾಗಿತ್ತು. ಮಧ್ಯಾಹ್ನದ ವೇಳೆಗೆ ಪರಿಸ್ಥಿತಿ ತಿಳಿಗೊಂಡ ಬಳಿಕ ಬಿಬಿಎಂಪಿ ಅಧಿಕಾರಿಗಳು ಗೇಟ್‌ ಬೀಗ ತೆಗೆದು ದೇವಸ್ಥಾನದ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು.