ಕೂಡಲಸಂಗಮ: ಸಂಕ್ರಾಂತಿ ಹಬ್ಬಕ್ಕೆ ಭಕ್ತರಿಗೆ ಸಿಗದ ಬಸವಣ್ಣನ ದರ್ಶನ

ಅಕ್ಟೋಬರ್‌ನಿಂದಲೇ ಆರಂಭಗೊಂಡಿರುವ ಕಾಮಗಾರಿ| ಕೆಲಸ ಮುಗಿಯಲು ಇನ್ನೂ 2 ತಿಂಗಳು ಬೇಕು| ಐಕ್ಯ ಮಂಟಪ ದುರಸ್ತಿ: ಭಕ್ತರಿಗೆ ಸಿಗದ ದರ್ಶನ| ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿರುವ ಕೂಡಲಸಂಗಮ|

Devotees not Get Darshan of Basavanna in Kudalasangama in Bagalkot District

ಈಶ್ವರ ಶೆಟ್ಟರ 

ಬಾಗಲಕೋಟೆ(ಜ.15): ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿನ ಬಸವಣ್ಣನವರ ಐಕ್ಯ ಸ್ಥಳದ ದರ್ಶನಕ್ಕೆ ಈ ವರ್ಷದ ಸಂಕ್ರಾಂತಿ ಸಂದರ್ಭದಲ್ಲಿ ಭಕ್ತರಿಗೆ ಅವಕಾಶವಿಲ್ಲವಾಗಿದೆ. ಐಕ್ಯ ಮಂಟಪದ ದುರಸ್ತಿ ಕಾರ್ಯ ಕೈಗೊಂಡಿರುವ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಕಾಮಗಾರಿ ಪೂರ್ಣಗೊಳ್ಳದ ಕಾರಣಕ್ಕೆ ಅವಕಾಶ ಸಿಗದೆ ಹೋಗಿರುವುದರಿಂದ ಭಕ್ತರಲ್ಲಿ ಸಹಜವಾಗಿ ಬೇಸರ ಮೂಡಿಸಿದೆ. 

ಲಿಂಗಾಯತ ಸಮುದಾಯದ ಧರ್ಮ ಸಂಸ್ಥಾಪಕ ಮಹಾಮಾನವತಾವಾದಿ ಬಸವಣ್ಣನವರ ಐಕ್ಯ ಮಂಟಪದ ದರ್ಶನಕ್ಕಾಗಿ ಸಾವಿರಾರು ಕಿಲೋ ಮೀಟರ್ ದೂರದಿಂದ ಬಂದ ಭಕ್ತರಿಗೆ ಐಕ್ಯ ಮಂಟಪದ ದರ್ಶನಕ್ಕೆ ಅವಕಾಶವಿಲ್ಲ ಎಂಬುವುದನ್ನು ಅರಿತ ನಂತರ ಬಸವಾಭಿಮಾನಿಗಳಲ್ಲಿ ನಿರಾಶೆ ಮನೆ ಮಾಡುತ್ತಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಸವಾಭಿಮಾನಿಗಳು ಅದರಲ್ಲೂ ಲಿಂಗಾಯತ ಧರ್ಮದ ಪ್ರತಿಪಾದಕರಾದ ಲಕ್ಷಾಂತರ ಭಕ್ತರು ಕೂಡಲಸಂಗಮವನ್ನು ಧರ್ಮ ಕ್ಷೇತ್ರವನ್ನಾಗಿ ಒಪ್ಪಿಕೊಂಡು ಬಸವಣ್ಣನವರನ್ನು ಧರ್ಮ ಗುರುವನ್ನಾಗಿ ಸ್ವೀಕರಿಸಿ ಅವರ ತತ್ವ ಅನುಷ್ಠಾನಗಳನ್ನು ಪಾಲಿಸುವವರು ಒಂದಿಲ್ಲ ಒಂದು ಕಾರಣಕ್ಕೆ ಕೂಡಲಸಂಗಮದ ಬಸವ ಐಕ್ಯ ಮಂಟಪದ ದರ್ಶನವನ್ನು ಪಡೆಯುವ ಪರಿಪಾಠ ಬೆಳೆಸಿಕೊಂಡಿದ್ದು, ಸದ್ಯ ಬಸವಣ್ಣನ ಐಕ್ಯ ಕ್ಷೇತ್ರದ ದರ್ಶನವಿಲ್ಲದೆ ತೆರಳುವುದೆಂದರೆ ಹೇಗೆ ಎಂಬ ಪ್ರಶ್ನೆ ಕೇಳುತ್ತಿದ್ದಾರೆ. 

ಕೂಡಲಸಂಗಮಕ್ಕೆ ಬರುತ್ತಿರುವ ಭಕ್ತರು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಕೈಗೊಂಡು ಸಂಗಮನಾಥನ ದರ್ಶನ ಕೈಗೊಂಡು ಮರಳುವ ಅನಿವಾರ್ಯತೆ ಬಂದಿದ್ದು ಐಕ್ಯ ಮಂಟಪದ ದರ್ಶನವನ್ನು ನಿರ್ಬಂಧಿಸಿದ ಫಲಕ ನೋಡಿ ಮರಳುತ್ತಿದ್ದಾರೆ. 

ಸಂಕ್ರಾಂತಿಗೆ ಭಕ್ತರ ದಂಡು: 

ಕೂಡಲಸಂಗಮದಲ್ಲಿ ಸಹಸ್ರಾರು ಭಕ್ತರು ಬರುವುದು ಜನವರಿ ತಿಂಗಳಲ್ಲಿಯೇ ಹೆಚ್ಚು. ಇದಕ್ಕೆ ಪ್ರಮುಖ ಕಾರಣ ಬಸವ ಧರ್ಮ ಪೀಠ ನಡೆಸಿಕೊಡುವ ಶರಣ ಮೇಳ ಒಂದಾದರೆ, ಲಿಂಗಾಯತ ಪಂಚಮಸಾಲಿ ಪೀಠದ ಕಾರ್ಯಕ್ರಮಗಳು ಸಹ ಇತ್ತೀಚಿನ ದಿನಗಳಲ್ಲಿ ಮಹತ್ವ ಪಡೆದುಕೊಳ್ಳುತ್ತಿವೆ. ಲಿಂಗೈಕ್ಯ ಲಿಂಗಾನಂದ ಶ್ರೀಗಳು ಹಾಗೂ ಮಾತೆ ಮಹಾದೇವಿ ಅವರು ಬದುಕಿನುದ್ದಕ್ಕೂ ಕೂಡಲಸಂಗಮದ ಅಭಿವೃದ್ಧಿ ಜೊತೆಗೆ ಕಳೆದ 33 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಶರಣ ಮೇಳದ ಪರಿಣಾಮ ಜ.10 ರಿಂದ 15 ರ ವರೆಗೆ ನಡೆಯುವ ಶರಣ ಮೇಳದಲ್ಲಿ ಪಾಲ್ಗೊಳ್ಳಲು ರಾಜ್ಯ, ನೆರೆ ರಾಜ್ಯದಿಂದ ಲಕ್ಷಾಂತರ ಭಕ್ತರು ಬರುತ್ತಿದ್ದು ಅವರಿಗೆ ಐಕ್ಯ ಮಂಟಪದ ದರ್ಶನ ಸಿಗದೆ ಹೋದರೆ ಸಹಜವಾಗಿ ಬೇಸರ ಹಾಗೂ ಅಸಮಾಧಾನ ವ್ಯಕ್ತವಾಗುತ್ತಿದೆ. 

ಸಮಾನತ್ವ ಮತ್ತು ಸಹೋದರತ್ವದ ಜೊತೆಗೆ ಜಾತಿ, ವರ್ಣ, ವರ್ಗ, ಭೇದವಿಲ್ಲದೆ ವಚನ ಸಾಹಿತ್ಯದ ಮೂಲಕ ಜನಸಾಮಾನ್ಯರ ಧ್ವನಿಯಾಗಿದ್ದ ಬಸವಣ್ಣನ ವರ ಐಕ್ಯ ಮಂಟಪದ ಕಾರ್ಯವನ್ನು ಈ ಸಂದರ್ಭದಲ್ಲಿ ಏಕೆ ಕೈಗೊಂಡಿದ್ದಾರೆ ಎಂದು ಭಕ್ತ ಸಮೂಹ ಕೇಳುತ್ತಿದೆ. 

ದುರಸ್ತಿಗೆ ಬೇಕು ಎರಡು ತಿಂಗಳು: 

ಐಕ್ಯ ಮಂಟಪಕ್ಕೆ ಧಕ್ಕೆ ಆಗುತ್ತಿದೆ. ಮಂಟಪದಲ್ಲಿ ಬಿರುಕು ಕಾಣಿಸಿಕೊಂಡ ಕಾರಣಕ್ಕೆ ಸರ್ಕಾರ ಪ್ರಾಧಿಕಾರದ ಮೂಲಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು ಅದು ಪೂರ್ಣ ಗೊಳ್ಳಬೇಕಾದರೆ ಕನಿಷ್ಠ ಎರಡು ತಿಂಗಳಾದರೂ ಬೇಕಾಗಬಹುದು ಎಂದು ಮೂಲಗಳು ತಿಳಿಸುತ್ತಿವೆ. 

ಕಳೆದ ಅ.15 ರಂದು ಐಕ್ಯ ಮಂಟಪದ ದುರಸ್ತಿ ಕಾಮಗಾರಿಯನ್ನು ಆರಂಭಿಸಲಾಗಿದ್ದು, 74,66 ಲಕ್ಷ ಗಳಿಗೆ ಎಸ್.ಆರ್.ಸೂಳಿಭಾವಿ ಎಂಬ ಗುತ್ತಿಗೆದಾರರು ಕೆಲಸ ನಡೆಸಲಾಗುತ್ತಿದ್ದು ಇನ್ನೂ ಎರಡು ತಿಂಗಳಾದರೂ ಕಾಮಗಾರಿ ಪೂರ್ಣಗೊಳ್ಳಲು ಸಮಯ ಬೇಕಾಗಬಹುದು. ಸದ್ಯ ಸಿವಿಲ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು ನಂತರ ಸುಣ್ಣ ಬಣ್ಣ ಮತ್ತು ನಂತರದ ಇತರೆ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರವೇ ಐಕ್ಯ ಮಂಟಪದ ದರ್ಶನಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿದೆ.

ಎಲ್‌ಇಡಿಯಲ್ಲಿ ವೀಕ್ಷಣೆ 

ಸಾಕಷ್ಟು ಪ್ರಮಾಣದಲ್ಲಿ ಭಕ್ತರು ಕೂಡಲಸಂಗಮಕ್ಕೆ ಬರುತ್ತಿದ್ದು ಐಕ್ಯ ಮಂಟಪದ ಕಾಮಗಾರಿ ಕಾರಣಕ್ಕೆ ಐಕ್ಯ ಮಂಟಪದ ವೀಕ್ಷಣೆಗೆ ಸಂಗಮನಾಥನ ಎದುರು ಎಲ್‌ಇಡಿ ಮೂಲಕ ಕಲ್ಪಿಸಲಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಸಹ ಮಾಡಲಾಗಿದೆ. ಜೊತೆಗೆ ದರ್ಶನಕ್ಕೆ ಅವಕಾಶವಿಲ್ಲ ಎಂಬ ನಾಮಫಲಕವನ್ನು ಸಹ ಹಾಕಲಾಗಿದೆ. ಒಟ್ಟಾರೆ ಭಕ್ತ ಸಮೂಹ ಸಾಮೂಹಿಕವಾಗಿ ಸೇರಿದ ಸಂದರ್ಭದಲ್ಲಿಯೇ ಬಸವಣ್ಣನ ದರ್ಶನ ಭಾಗ್ಯ ಇಲ್ಲದೆ ಮರಳಿ ತೆರಳುವುದೆಂದರೆ ಭಕ್ತರ ಪಾಲಿಗೆ ನೋವು ತರಿಸಿದ್ದಂತೂ ಸತ್ಯ.

ಈ ಬಗ್ಗೆ ಮಾತನಾಡಿದ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಆಯುಕ್ತೆ ರಾಜೇಶ್ವರಿ ಅಗಸರ ಅವರು, ಕಾಮಗಾರಿ ತ್ವರಿತಗತಿಯಿಂದ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಐಕ್ಯ ಮಂಟಪದ ದರ್ಶನದ ಅವಕಾಶವನ್ನು ಭಕ್ತರಿಗೆ ಕಲ್ಪಿಸಿದರೆ ಕಾಮಗಾರಿ ಪೂರ್ಣಗೊಳಿಸಲು ಮತ್ತಷ್ಟು ವಿಳಂಬವಾಗುವ ಕಾರಣಕ್ಕೆ ತಜ್ಞರ ಸೂಚನೆಯಂತೆ ಐಕ್ಯ ಮಂಟಪದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿಲ್ಲ ಎಂದು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios