ಸುರೇಶ ಭೀ. ಬಾಳೋಜಿ 

ಸವದತ್ತಿ(ಫೆ.09): ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ವರ್ಷವಿಡೀ ಬರುವಂತ ಎಲ್ಲಾ ಹುಣ್ಣಿಮೆಗಳಿಗಿಂತಲೂ ತರಳಬಾಳು ಹುಣ್ಣಿಮೆ ದಿನದಂದು ವಿಶೇಷ ಜನಜಂಗುಳಿ ನೆರೆದಿರುತ್ತದೆ. ಉತ್ತರ ಕರ್ನಾಟಕದ ಹಲವಾರು ಪುಣ್ಯ ಕ್ಷೇತ್ರಗಳಲ್ಲಿ ನಡೆಯುವ ಜಾತ್ರೆಗಳಿಗಿಂತ ನಿರೀಕ್ಷೆಗೂ ಮೀರಿ ಭಕ್ತ ಸಮೂಹ ಇಲ್ಲಿ ಸೇರುವುದು ಒಂದು ವಿಶೇಷ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶ್ರೀಕ್ಷೇತ್ರ ವಿಶೇಷತೆಯೊಂದಿಗೆ ಜಗತ್ ಪ್ರಸಿದ್ಧ ಕ್ಷೇತ್ರವಾಗಿ ಹೊರಹೊಮ್ಮಿದೆ. ಏಳು ಕೊಳ್ಳದ ಯಲ್ಲಮ್ಮಾ ಎಂದು ಖ್ಯಾತ ನಾಮ ಹೊಂದಿರುವ ಈ ಕ್ಷೇತ್ರದ ಆದಿ ದೇವತೆಯಾದ ರೇಣುಕಾ ಮಾತೆಗೆ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹವಿದೆ. ಇಂದು ಕ್ಷೇತ್ರದಲ್ಲಿ ನಡೆ ಯುವ ಭಾರತ ಹುಣ್ಣಿಮೆಗೆ ಸಾಗರೋಪಾದಿಯಲ್ಲಿ ಜನ ಸಮೂಹ ಬರುತ್ತಿದ್ದು, ದೇವಸ್ಥಾನದ ಸುತ್ತಲಿನ ಗುಡ್ಡದ ಪ್ರದೇಶವೆಲ್ಲ ಕಿಕ್ಕಿರಿದು ಹೋಗಿದೆ. ಕಳೆದ ಅಮವಾಸ್ಯೆಯಿಂದ ಎತ್ತಿನ ಬಂಡಿ ಹಾಗೂ ವಾಹನಗಳಲ್ಲಿ ಮತ್ತು ಕಾಲ್ನಡಿಗೆಯಿಂದಲೂ ಸಹ ಸಾಕಷ್ಟು ಜನ ದೇವಸ್ಥಾನಕ್ಕೆ ಆಗಮಿಸಿದ್ದಾರೆ. 
ಶ್ರೀಕ್ಷೇತ್ರಕ್ಕೆ ರಾಜ್ಯ ಮತ್ತು ಅಕ್ಕಪಕ್ಕದ ಹೊರ ರಾಜ್ಯಗಳಿಂದಲೂ ಸಹ ಈ ಹುಣ್ಣಿಮೆಗೆ ಕುಟುಂಬ ಸಮೇತ ಜನರು ಆಗಮಿಸುತ್ತಾರೆ. ದೇವಿಗೆ ಪಡ್ಡಲಗಿ ತುಂಬಿಸಿ, ಕಾಯಿ ಒಡೆಸಿ, ಕರ್ಪೂರ ಹಚ್ಚಿ ತಾಯಿ ಕೃಪೆಗೆ ಪಾತ್ರರಾಗುತ್ತಾರೆ. ವರ್ಷವಿಡೀ ಈ ದೇವಸ್ಥಾನಕ್ಕೆ ಭಕ್ತರ ಆಗಮನವಾಗುತ್ತಿದ್ದರೂ ಭಾರತ ಹುಣ್ಣಿಮೆಯಲ್ಲಿ ಮಾತ್ರ ಅದು ಇಮ್ಮಡಿಗೊಳ್ಳುತ್ತದೆ. 

ಜೋಗುಳಬಾವಿ ಕ್ಷೇತ್ರ: 

ಗುಡ್ಡದ ಯಲ್ಲಮ್ಮನ ದರ್ಶನ ಪಡೆಯುವುದಕ್ಕಿಂತ ಮೊದಲು ಭಕ್ತರು ಈ ಕ್ಷೇತ್ರ ಇನ್ನೊಬ್ಬ ಆದಿ ದೇವತೆಯಾದ ಜೋಗುಳಬಾವಿಯ ಸತ್ಯಮ್ಮ ದೇವಿ ದರ್ಶನ ಪಡೆದುಕೊಳ್ಳುತ್ತಾರೆ. ಅನಾದಿ ಕಾಲದಿಂದಲೂ ಭಕ್ತ ಸಮೂಹದಿಂದ ನಡೆದು ಬಂದ ಪದ್ಧತಿ ಇದಾಗಿದೆ. ಮಲಪ್ರಭಾ ನದಿ ತೀರದಲ್ಲಿ ನೆಲೆಸಿರುವ ಜೋಗುಳ ಬಾವಿಯ ಮಾತೆ ಸತ್ಯಮ್ಮನಿಗೆ ವಿಶೇಷ ಮಹತ್ವವಿದೆ. ಲಕ್ಷಾಂತರ ಭಕ್ತರು ಈ ಕ್ಷೇತ್ರದ ಜೋಗುಳ ಭಾವಿಯಲ್ಲಿ ಪವಿತ್ರ ಸ್ನಾನ ಮಾಡಿ ಸತ್ಯೆಮ್ಮನ ದರ್ಶನ ಪಡೆದು ಕೃತಾರ್ಥರಾಗಿ ಗುಡ್ಡದ ಯಲ್ಲಮ್ಮನ ಕಡೆಗೆ ಸಾಗುತ್ತಾರೆ. 

ಪವಿತ್ರ ಎಣ್ಣೆಹೊಂಡ:

ಶ್ರೀಕ್ಷೇತ್ರದಲ್ಲಿನ ಎಣ್ಣೆಹೊಂ ಡದ ನೀರಿಗೆ ವಿಶೇಷ ಪಾವಿತ್ರ್ಯತೆ ಇದೆ. ಪ್ರತಿ ನಿತ್ಯ ಈ ಹೊಂಡದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ. ಭಾರತ ಹುಣ್ಣಿಮೆಯಂದು ಎಣ್ಣೆ ಹೊಂಡದಲ್ಲಿ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಮಾಡಿ ಗುಡ್ಡದ ಯಲ್ಲಮ್ಮನ ದರ್ಶನ ಭಾಗ್ಯ ಪಡೆ ಯುತ್ತಾರೆ. ಶ್ರೀಕ್ಷೇತ್ರದ ಗುಡ್ಡದ ಕಲ್ಲು ಪೊಟರೆಗಳಲ್ಲಿ ಹರಿದು ಬರುವ ನೀರು ಇಲ್ಲಿನ ಪವಿತ್ರ ಎಣ್ಣೆ ಹೊಂಡವನ್ನು ಸೇರುತ್ತದೆ. ಶುಭ್ರವಾದ ಸ್ವಚ್ಛ ಹಾಗೂ ಪವಿತ್ರವಾದಂತ ನೀರನ್ನು ಇಲ್ಲಿ ಕಾಣಬಹುದಾಗಿದೆ. ಇದರ ಪಕ್ಕದಲ್ಲಿ ಅರಿಷಿಣ ಹೊಂಡ ಮತ್ತು ಕುಂಕುಮ ಹೊಂಡಗಳೆಂದು ಇನ್ನೆರಡು ಹೊಂಡಗಳಿವೆ. 

ದೇವಿಗೆ ಪಡ್ಡಲಿಗೆ ಸಮರ್ಪಣೆ: 

ಭಾರತ ಹುಣ್ಣಿಮೆ ವಿಶೇಷವಾಗಿ ಪಡ್ಡಲಗಿಯನ್ನು ತುಂಬಿಸುವುದು ಸಂಪ್ರದಾಯ. ಈ ಹುಣ್ಣಿಮೆಯಲ್ಲಿ ದೇವಿಯ ಹೆಸರಿನಲ್ಲಿ ಕೆಲವು ಮನೆಯಲ್ಲಿಯೇ ಪಡ್ಡಲಿಗೆ ತುಂಬಿಸುವುದು ಕೆಲವೆಡೆ ಪದ್ಧತಿ ಇದ್ದರೂ ತರಳು ಬಾಳು ಹುಣ್ಣಿಮೆಯಂದು ಶ್ರೀಕ್ಷೇತ್ರಕ್ಕೆ ಆಗಮಿಸಿ ಪಡ್ಡಲಗಿಯನ್ನು ತುಂಬಿ ದೇವಿಯ ಆಶೀರ್ವಾದ ಪಡೆಯುವುದು ಲಕ್ಷಾಂತರ ಭಕ್ತರ ವಾಡಿಕೆ. ದೇವಸ್ಥಾನದ ಆವರಣದಲ್ಲಿ ಹೂರಣ ಗಡಬು, ಹೋಳಿಗೆ, ವಡೆ, ಬಾಣ, ರೊಟ್ಟಿ ಮುಂತಾದ ಪದಾರ್ಥಗಳನ್ನು ಮಾಡಿ ಪಡ್ಡಲಗಿ ತುಂಬುವ ಸಂಪ್ರದಾಯ ಅನಾದಿಕಾಲದಿಂದಲೂ ಇಲ್ಲಿ ಬೆಳೆದು ಬಂದಿದೆ. ಐದು ಜನ ಜೋಗುತಿಯರೊಂದಿಗೆ ಕರಿ ಕಂಬಳಿ ಹಾಸಿ ಕಲಶ ಕುಂಭ ಸ್ಥಾಪಿಸಿ, ಸುತ್ತಲೂ ಚೌರಿಗಳನ್ನು ಮತ್ತು ಪಡ್ಡಲಿಗೆಗಳನ್ನು ಇಟ್ಟು ಅದರಲ್ಲಿ ಎಲ್ಲ ಅಡಿಗೆ ಪದಾರ್ಥ ತುಂಬುತ್ತಾರೆ. ನಂತರ ಆರತಿ ಬೆಳಗುತ್ತ ದೇವಿಯ ನಾಮಸ್ಮರಣೆ ಮಾಡುತ್ತ ಭಂಡಾರವನ್ನು ಎರುಚುತ್ತಾ ದೇವಿಗೆ ಪಡ್ಡಲಿಗೆ ಸಮರ್ಪಿಸುತ್ತಾರೆ. ಯಲ್ಲಮ್ಮ ನಿನ್ನಾಲ್ಕು ಉಧೋ... ಉಧೋ... ಎನ್ನುತ್ತ ತಮ್ಮ ಕುಲದೇವರುಗಳನ್ನೆಲ್ಲಾ ನೆನೆದು ಪಡ್ಡಲಿಗೆಯನ್ನು ತುಂಬಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. 

ಸುಲಭ ಸಾರಿಗೆ ಸಂಚಾರಕ್ಕೆ ಅನುಕೂಲತೆ:

ದೇವಸ್ಥಾನಕ್ಕೆ ಆಗಮಿಸುವ ಭಕ್ತ ಸಮೂಹ ಹೆಚ್ಚಾದಂತೆ ಇಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತ ಸಾಗಿದೆ. ಅದಕ್ಕಾಗಿ ಪೊಲೀಸ್ ಇಲಾಖೆ ವಿಶೇಷವಾದಂತ ಕಾಳಜಿ ವಹಿಸಿ ಏಕ ಮುಖವಾದ ರಸ್ತೆಯ ಮಾರ್ಗ ಮಾಡಿ ವಾಹನಗಳು ಸುಗಮವಾಗಿ ಸಾಗಲು ಅನುಕೂಲಕರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದೇವಸ್ಥಾನ ವ್ಯವಸ್ಥಾಪನಾ ಸಮಿತಿಯವರು ಅವಶ್ಯಕತೆಗೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಸತತ ಪ್ರಯತ್ನದಲ್ಲಿದ್ದಾರೆ. ಕ್ಷೇತ್ರದ ತುಂಬ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಕುಡಿಯುವ ನೀರು ಮತ್ತು ಶೌಚಾಲಯಕ್ಕಾಗಿ ಹೆಚ್ಚಿನ ಒತ್ತು ನೀಡಿ ಭಕ್ತರಿಗೆ ಅನುಕೂಲತೆ ಕಲ್ಪಿಸಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ರವಿ ಕೊಟಾರಗಸ್ತಿ ಅವರು, ಶ್ರೀಕ್ಷೇತ್ರಕ್ಕೆ ಭಾರತ ಹುಣ್ಣಿಮೆ ಯಂದು ಒಮ್ಮೆಲೇ ಆಗ ಮಿಸುತ್ತಿರುವ ಭಕ್ತ ಸಮೂಹಕ್ಕೆ ಸಾಧ್ಯವಾದ ಮಟ್ಟಿಗೆ ಮೂಲಭೂತ ಸೌಕರ್ಯ ಒದಗಿಸುವ ಪ್ರಯತ್ನ ಮಾಡಲಾಗಿದೆ.ಭಕ್ತರು ಸಹಕಾರದಿಂದ ವರ್ತಿಸಿ ಸ್ವಚ್ಛತೆ ಕಡೆಗೆ ವಿಶೇಷ ಗಮನ ನೀಡಬೇಕು ಎಂದು ತಿಳಿಸಿದ್ದಾರೆ.