ಕೊಟ್ಟೂರು(ಫೆ.20): ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಗೆ ಹರಕೆ ಹೊತ್ತು ಭಕ್ತರು ಬುಧವಾರ ದೀಡ್ ನಮಸ್ಕಾರ ಸಲ್ಲಿಸಿದರು. ಅಸಂಖ್ಯಾತ ಭಕ್ತರು ಬೆಳಗ್ಗೆಯಿಂದ ನಿರಂತರ ದೀಡ್ ನಮಸ್ಕಾರ ಹಾಕುತ್ತಿರುವುದು ಕಂಡುಬಂತು. 

ಮಂಗಳವಾರ ನಡೆದ ಶ್ರೀ ಸ್ವಾಮಿಯ ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದ ಜನತೆ ಬುಧುವಾರವೂ ಸೇವೆಯಲ್ಲಿ ತೊಡಗಿದ್ದರು. ಸ್ವಾಮಿಯ ಹಿರೇಮಠದ ಬಳಿ ಭಾರಿ ಜನಜಂಗುಳಿ ಇತ್ತು. ಕೊಟ್ಟೂರೇಶ್ವರ ಸ್ವಾಮಿಯನ್ನು ಮನೆದೇವರನ್ನಾಗಿಸಿಕೊಂಡ ಭಕ್ತರು ಈ ಕೈಂಕರ್ಯವನ್ನು ಪ್ರತಿವರ್ಷ ನಡೆಸಿಕೊಂಡು ಬರುವಂತೆ ಈ ಬಾರಿಯೂ ನಡೆಸಿದರು. 

ಕೊಟ್ಟೂರೇಶ್ವರ ಜಾತ್ರೆ: ಹರಿಜನ ದೇವದಾಸಿ ಯುವತಿಯಿಂದ 5 ದಿನ ಉಪವಾಸ

ಈ ಪ್ರಕ್ರಿಯೆಯಲ್ಲಿ ವೃದ್ಧರು, ಮಕ್ಕಳು ಸಹ ಸೇರಿದ್ದಾರೆ. ಹರಿಜನರಂತೂ ಸರಣಿಯೋಪಾದಿಯಲ್ಲಿ ಈ ಬಗೆಯ ಸೇವೆ ಸಲ್ಲಿಸಿ ಕೊಟ್ಟೂರೇಶ್ವರ ಸ್ವಾಮಿಗೆ ಧನ್ಯತೆ ಸಮರ್ಪಿಸಿದರು ಮತ್ತು ರಥೋತ್ಸವದ ಮುಂಚಿನ 15 ದಿನಗಳಿಂದ ಮಾಂಸದೂಟ ಸೇವನೆ ಕೈಬಿಟ್ಟಿದ್ದ ಅವರು ರಥೋತ್ಸವದ ನಂತರದ ದಿನವಾದ ಬುಧವಾರ ದೀಡ್ ನಮಸ್ಕಾರದ ಸೇವೆ ಮುಗಿದ ಮೇಲೆ ಕರಿ ಆಚರಣೆಗೈದರು. 

ನೆಲವೇ ಪಾವನ: 

ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಮತ್ತು ಬೆಳ್ಳಿ ಪಲ್ಲಕ್ಕಿ ಉತ್ಸವ ಸಾಗಿದ ಕೊಟ್ಟೂರಿನ ರಸ್ತೆಗಳೆಲ್ಲ ಕೊಟ್ಟೂರೇಶ್ವರ ಸ್ವಾಮಿ ರಸ್ತೆ ಎಂಬ ಭಾವನೆ ವ್ಯಕ್ತಪಡಿಸಿ ಬುಧವಾರ ಭಕ್ತರು ನಿಂತ ನೆಲದಲ್ಲಿಯೇ ಕರ್ಪೂರ ಬೆಳಗಿ ನಮಸ್ಕರಿಸುತ್ತಿರುವುದು ಕಂಡುಬಂತು. ಅದೇ ರೀತಿ ಇತರ ಮಠಗಳಾದ ತೊಟ್ಟಿಲುಮಠ, ಗಚ್ಚಿನಮಠ, ಮೂರ‌್ಕಲ್ ಮಠದ ಬಳಿ ಭಕ್ತರು ವಿವಿಧ ಸೇವೆಗಳನ್ನು ಸಲ್ಲಿಸಿದರು. 

ಸಂಭ್ರಮದ ಕೊಟ್ಟೂರು ಸ್ವಾಮಿ ರಥೋತ್ಸವ: ದೇವದಾಸಿಯರಿಂದ ಆರತಿ, 6-7 ಲಕ್ಷ ಭಕ್ತರು ಭಾಗಿ

ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಎಚ್. ಪ್ರಕಾಶ್ ರಾವ್ ಈ ಸಂಬಂಧ ಮಾತನಾಡಿ, ಈ ಬಾರಿಯ ನೂತನ ರಥೋತ್ಸವ ಬಹು ಯಶಸ್ವಿಯಾಗಿ ನೆರವೇರಿತು. ಯಾವುದೇ ಬಗೆಯ ಗೊಂದಲವಿಲ್ಲದೆ ಸರಾಗವಾಗಿ ಜರುಗಿದ್ದು, ನಿಜಕ್ಕೂ ಹೆಮ್ಮೆ ಮೂಡಿಸಿದೆ. ನೂತನ ರಥ ನಿರ್ಮಾಣದ ಕಾರ್ಯದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು ಎಂದು ಹೇಳಿದರು.