ಮೂಡುಬಿದಿರೆ(ಏ.21): ಕೊರೋನಾ ಲಾಕ್‌ಡೌನ್‌ ಸಂಕಷ್ಟದ ಸಂದರ್ಭ ನಿತ್ಯವೂ ನೂರಾರು ಮಂದಿಗೆ ಮಧ್ಯಾಹ್ನದ ಬಿಸಿಯೂಟವನ್ನು ಉಚಿತವಾಗಿ ಒದಗಿಸುವ ಮೂಲಕ ಮಂಗಳೂರು-ಮೂಡುಬಿದಿರೆ ಹೆದ್ದಾರಿಯಲ್ಲಿ ಗುರುಪುರದ ಕೈಕಂಬ ಪೇಟೆಯ ಹೊಟೇಲ್‌ ದೇವಿಪ್ರಸಾದ್‌ನ ರವಿ ಸಹೋದರರು ಮಾದರಿಯಾಗಿದ್ದಾರೆ.

ತೃಪ್ತಿಯಾಗುವಷ್ಟುಕರಾವಳಿಯ ಕುಚ್ಚಲು ಅನ್ನ, ಪಲ್ಯ, ಉಪ್ಪಿನ ಕಾಯಿ, ಸಾಂಬಾರ್‌ ಸಹಿತ ಅಪರಾಹ್ನದ ಬಿಸಿ ಭೋಜನವನ್ನು ಪ್ಯಾಕ್‌ ಮಾಡಿ ಹಸಿದವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಏರುಹಗಲು 11ರಿಂದ ಅಪರಾಹ್ನ 3ರ ತನಕ ಅನ್ನದಾನ ನಡೆಯುತ್ತದೆ. ನಿರ್ಗತಿಕರು, ಕೂಲಿ ಕಾರ್ಮಿಕರ ಜತೆಗೆ, ಪೊಲೀಸರು, ಅಧಿಕಾರಿವರ್ಗ, ಕೋವಿಡ್‌ 19 ತುರ್ತು ಸೇವೆಯಲ್ಲಿರುವವರು ಹೀಗೆ ದಿನವೊಂದಕ್ಕೆ 120-140 ಮಂದಿ ಈ ಬಿಸಿಯೂಟ ಸವಿಯುತ್ತಿದ್ದಾರೆ.

ಕೊರೋನಾ ಗೂಂಡಾಗಳಿಗೆ 2 ವರ್ಷ ಜೈಲು, ದಂಡ?: ಸುಗ್ರೀವಾಜ್ಞೆ ಜಾರಿಗೆ ನಿರ್ಧಾರ!

ರವಿಯವರು ಆರಂಭಿಸಿರುವ ಈ ಬಿಸಿಯೂಟ ಸೇವೆಗೆ ಈಗ ತಿಂಗಳು ತುಂಬುವುದರಲ್ಲಿದೆ. ಹಸಿದವರ ಬಗ್ಗೆ ವಿಶೇಷ ಕಾಳಜಿಯಿಂದ ಮೂರೂವರೆ ದಶಕಗಳ ಹಿಂದೆ ಕೈಕಂಬದಲ್ಲಿ ದಿ. ಆನಂದ ಅಮೀನ್‌ ಅವರು ಆರಂಭಿಸಿದ್ದ ಹೋಟೆಲ್‌ ದೇವಿ ಪ್ರಸಾದ್‌ ಮುನ್ನಡೆಸುತ್ತಿರುವ ಪುತ್ರ ರವಿ ಸಹೋದರ ರಾಜೇಶ್‌, ಹಿರಿಯಣ್ಣ ಕುಶಾಲ್‌ ಕುಮಾರ್‌, ಕಾಲೇಜು ವಿದ್ಯಾರ್ಥಿಗಳಾಗಿರುವ ಅಣ್ಣನ ಮಕ್ಕಳಾದ ಸಾಗರ್‌ ಸಂಜಯ್‌ ಜತೆ ಸೇರಿ ಅನ್ನದಾನದ ಈ ಸೇವೆಯಲ್ಲಿ ತೊಡಗಿದ್ದಾರೆ.

ಕೊರೋನಾ ವಾರಿಯರ್ಸ್‌ ಮೇಲೆ ಹಲ್ಲೆ ನಡೆಸೋರಿಗೆ ಗುಂಡಿಕ್ಕಿ ಎಂದ BJP ಶಾಸಕ

ಒತ್ತಾಯಕ್ಕೆ ಕಟ್ಟು ಬಿದ್ದು ಒಂದಿಬ್ಬರ ದೇಣಿಗೆ ಪಡೆದದ್ದು ಬಿಟ್ಟರೆ ಯಾವ ಅಪೇಕ್ಷೆಯೂ ಇಲ್ಲದೆ ಇದನ್ನೊಂದು ದೇಶ ಸೇವೆ ಎನ್ನುತ್ತಿರುವ ರವಿಯವರ ಈ ಮಹತ್ಕಾರ್ಯಕ್ಕೆ ತೆಂಗಿನ ಕಾಯಿ, ತರಕಾರಿಗಳನ್ನು ಹೊರೆಕಾಣಿಕೆಯಂತೆ ಹೋಟೆಲ್‌ ಹೊರಗಿಟ್ಟು ಹೋದವರೂ ಇದ್ದಾರೆ. ರವಿ ಸಂಪರ್ಕ ಸಂಖ್ಯೆ: 9845116567.