ಬೆಂಗಳೂರು [ನ.30]:  ಅಪರಾಧ ಪ್ರಕರಣದಲ್ಲಿ ಜಪ್ತಿಯಾಗಿದ್ದ ಡಿಟೋನೆಟರ್‌ಗಳನ್ನು ಪರೀಕ್ಷಿಸುವಾಗ ಅವು ಆಕಸ್ಮಿಕವಾಗಿ ಸ್ಫೋಟಗೊಂಡು ಐವರು ವೈಜ್ಞಾನಿಕ ಅಧಿಕಾರಿಗಳು ಸೇರಿದಂತೆ ಏಳು ಮಂದಿ ಗಾಯಗೊಂಡಿರುವ ಘಟನೆ ಮಡಿವಾಳದಲ್ಲಿರುವ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್‌) ಶುಕ್ರವಾರ ನಡೆದಿದೆ.

ಎಫ್‌ಎಸ್‌ಎಲ್‌ನ ವೈಜ್ಞಾನಿಕ ಅಧಿಕಾರಿಗಳಾದ ಶ್ರೀನಾಥ್‌, ನವ್ಯಾ, ವಿಶ್ವನಾಥ್‌, ವಿಷ್ಣು ವಲ್ಲಭ ಹಾಗೂ ದಲಾಯತ್‌ಗಳಾದ ನೇತ್ರಾವತಿ, ಆಂಥೋಣಿ ಪ್ರಭು ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಾಳುಗಳ ಪೈಕಿ ಶ್ರೀನಾಥ್‌ ಅವರ ಎಡಗೈ ಬೆರಳುಗಳು ತುಂಡಾಗಿವೆ. ನವ್ಯಾ ಅವರ ಕಿವಿ ಮತ್ತು ಎಡ ಕಣ್ಣು ಹಾಗೂ ಪ್ರಭು ಅವರ ತಲೆಗೆ ತೀವ್ರ ಸ್ವರೂಪದ ಗಾಯವಾಗಿವೆ. ಆದರೆ ವೈದ್ಯಕೀಯ ಚಿಕಿತ್ಸೆಗೆ ಗಾಯಾಳುಗಳು ಸ್ಪಂದಿಸುತ್ತಿದ್ದು, ಪ್ರಾಣಾಪಾಯದಿಂದ ಸುರಕ್ಷಿತವಾಗಿದ್ದಾರೆ ಎಂದು ಆಯುಕ್ತ ಭಾಸ್ಕರ್‌ ರಾವ್‌ ತಿಳಿಸಿದ್ದಾರೆ.

ಎಫ್‌ಎಸ್‌ಎಲ್‌ನ ಕೆಮಿಸ್ಟ್ರಿ ಲ್ಯಾಬ್‌ನಲ್ಲಿ ಸ್ಫೋಟಕ ವಸ್ತುಗಳ ಪರಿಶೀಲನೆಯಲ್ಲಿ ತಜ್ಞರು ತೊಡಗಿದ್ದರು. ಆ ವೇಳೆ ತಾಂತ್ರಿಕ ದೋಷದಿಂದ ಸ್ಫೋಟವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

2018ರಲ್ಲಿ ರಾಯಚೂರು ನಗರದ ಪಶ್ಚಿಮ ಠಾಣಾ ವ್ಯಾಪ್ತಿಯಲ್ಲಿ ಡಿಟೋನೆಟರ್‌ ಸ್ಫೋಟಗೊಂಡು ಮಹಿಳೆಯೊಬ್ಬರು ಮೃತಪ್ಟಟಿದ್ದರು. ಈ ಪ್ರಕರಣದಲ್ಲಿ ಜಪ್ತಿಯಾಗಿದ್ದ ಏಳು ಡಿಟೋನೆಟರ್‌ಗಳನ್ನು ಪರಿಶೀಲನೆ ಸಲುವಾಗಿ ಎಫ್‌ಎಸ್‌ಎಲ್‌ಗೆ ಪೊಲೀಸರು ರವಾನಿಸಿದ್ದರು. ಕಳೆದ ಐದು ದಿನಗಳಿಂದ ಕೆಮಿಸ್ಟ್ರಿ ಲ್ಯಾಬ್‌ನಲ್ಲಿ ಹಿರಿಯ ವೈಜ್ಞಾನಿಕ ಅಧಿಕಾರಿ ಶ್ರೀನಾಥ್‌ ನೇತೃತ್ವದ ತಜ್ಞರ ತಂಡವು, ಅವುಗಳ ಪರೀಕ್ಷೆಯಲ್ಲಿ ತೊಡಗಿತ್ತು.

ಎಂದಿನಂತೆ ಶುಕ್ರವಾರ ಸಹ ಮಧ್ಯಾಹ್ನ 3 ಗಂಟೆ ಸುಮಾರಿಗೆ ತಜ್ಞರ ತಂಡವು ಸ್ಫೋಟಕದ ವಿಶ್ಲೇಷಣೆಯಲ್ಲಿ ನಿರತರಾಗಿದ್ದಾಗ ಆಕಸ್ಮಿಕವಾಗಿ ಸಿಡಿದಿದೆ. ಪರೀಕ್ಷಾ ಹಂತದ ನಿರ್ವಹಣೆಯಲ್ಲಿ ರಾಸಾಯನಿಕ ವಸ್ತು ಬಳಸುವಾಗ ತಾಂತ್ರಿಕ ತೊಂದರೆ ಕಾಣಿಸಿಕೊಂಡು ದುರಂತ ಸಂಭವಿಸಿದೆ. ಈ ವೇಳೆ ಲ್ಯಾಬ್‌ನಲ್ಲಿದ್ದ 9 ಮಂದಿ ಪೈಕಿ ಏಳು ಜನರು ಗಾಯಗೊಂಡಿದ್ದಾರೆ. ತಕ್ಷಣವೇ ಎಫ್‌ಎಸ್‌ಎಲ್‌ ಅಧಿಕಾರಿಗಳು, ಅಗ್ನಿಶಾಮಕ ದಳದ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಆಗ್ನಿಶಾಮಕ ದಳದ ಸಿಬ್ಬಂದಿ, ದ್ರಾವಣ ಸಿಂಪಡಿಸಿ ಇತರ ಕೆಮಿಕಲ್‌ಗಳು ಸ್ಫೋಟಗೊಳ್ಳದಂತೆ ಎಚ್ಚರಿಕೆ ವಹಿಸಿದರು. ಗಾಯಾಳುಗಳನ್ನು ಸಮೀಪ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಘಟನಾ ಸ್ಥಳಕ್ಕೆ ರಾಜ್ಯ ಅಪರಾಧ ಮತ್ತು ತಾಂತ್ರಿಕ ವಿಭಾಗದ ಎಡಿಜಿಪಿ ಡಾ.ಪರಮಶಿವಮೂರ್ತಿ, ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹಾಗೂ ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದರು ಪರಿಶೀಲಿಸಿದರು. ಈ ಘಟನೆ ಸಂಬಂಧ ಕೋರಮಂಗಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಟಿಎಟಿಪಿ ರಾಸಾಯನಿಕ ವಸ್ತು ಬಳಕೆ?

ಡಿಟೋನೆಟರ್‌ಗಳ ಪರೀಕ್ಷೆಗೆ ಪ್ರಯೋಗಾಲಯದಲ್ಲಿ ಟ್ರೈಯಾಸೆಟೋನ್‌ ಟ್ರಿಪೆರಾಕ್ಸೈಡ್‌(ಟಿಎಟಿಪಿ) ಎಂಬ ರಾಸಾಯನಿಕ ವಸ್ತುವನ್ನು ತಜ್ಞರು ಬಳಸಿದ್ದಾರೆ. ಆದರೆ ಈ ವೇಳೆ ಕೇವಲ 25 ಗ್ರಾಂ ಇದ್ದ ಟಿಎಟಿಪಿ ಅನ್ನು ಬಳಸುವಾಗ ತಾಂತ್ರಿಕ ತೊಂದರೆಯಿಂದ ಸ್ಫೋಟಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರಯೋಗಾಲಯದಲ್ಲಿ ಶ್ರೀನಾಥ್‌ ಅವರನ್ನು ಹೊರತುಪಡಿಸಿದರೆ ಉಳಿದ ಮೂವರು ಕಿರಿಯ ವೈಜ್ಞಾನಿಕ ಅಧಿಕಾರಿಗಳಾಗಿದ್ದರು. ಹೀಗಾಗಿ ರಾಸಾಯನಿಕ ವಸ್ತುವಿನ ನಿರ್ವಹಣೆಯಲ್ಲಿ ಉಂಟಾದ ಅಡಚರಣೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ನಿಷ್ಕ್ರೀಯಗೊಳಿಸದೆ ಪರೀಕ್ಷೆಗೆ ರವಾನೆ

ಸ್ಫೋಟ ಪ್ರಕರಣದಲ್ಲಿ ಸಂಗ್ರಹಿಸಿದ್ದ ಸ್ಫೋಟಕ ವಸ್ತುಗಳನ್ನು ಬಾಂಬ್‌ ನಿಷ್ಕ್ರೀಯ ದಳ ತಜ್ಞರಿಂದ ನಿಷ್ಕ್ರೀಯಗೊಳಿಸಿ ಬಳಿಕ ಪರೀಕ್ಷೆಗೆ ಎಫ್‌ಎಸ್‌ಎಲ್‌ಗೆ ಸ್ಥಳೀಯ ಪೊಲೀಸರು ಕಳುಹಿಸಬೇಕಿತ್ತು. ಆದರೆ ಜಪ್ತಿಯಾದ ಡಿಟೋನೇಟರ್‌ಗಳನ್ನು ನಿಷ್ಕ್ರೀಯಗೊಳಿಸದೆ ಪೊಲೀಸರು ಕಳುಹಿಸಿದ್ದರು. ಅವು ಸಿಡಿಯಲು ಇದೂ ಕಾರಣವಾಗಿದೆ ಎಂದು ತಿಳಿದು ಬಂದಿದೆ.