Asianet Suvarna News Asianet Suvarna News

ಮೈಸೂರು ದಸರೆ: ಈ ಸಂಪ್ರದಾಯ ಇಲ್ಲದೇ ‘ನಾಡಹಬ್ಬ’ಕ್ಕೆ ಬೀಳಲಿದೆ ತೆರೆ

ವಿಶ್ವವಿಖ್ಯಾತ ಮೈಸೂರು ದಸರಾ ಈ ಬಾರಿ ಸರಳವಾಗಿ ನಡೆಯಲಿದ್ದು ಅಕ್ಟೋಬರ್ 26 ರಂದು ಮುಕ್ತಾಯವಾಗಲಿದೆ. 

Details About Mysuru Dasara 2020 Program snr
Author
Bengaluru, First Published Oct 25, 2020, 8:35 AM IST

ಅಂಶಿ ಪ್ರಸನ್ನಕುಮಾರ್‌

 ಮೈಸೂರು (ಅ.25):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಜಂಬೂ ಸವಾರಿ’ಯು ವಿಜಯದಶಮಿಯ ದಿನವಾದ ಸೋಮವಾರ (ಅ.26) ಜರುಗಲಿದ್ದು, ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ದಸರೆಯನ್ನು ಸರಳ, ಸಾಂಪ್ರದಾಯಿಕ ಹಾಗೂ ಸುರಕ್ಷಿತವಾಗಿ ಆಚರಿಸಲಾಗುತ್ತಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಐದನೇ ಬಾರಿ ದಸರಾ ಮೆರವಣಿಗೆಗೆ ಚಾಲನೆ ನೀಡುವ ಅವಕಾಶ ಸಿಕ್ಕಿದೆ. ಈ ಹಿಂದೆ 2008ರಲ್ಲಿ ಬಿಜೆಪಿ ಸರ್ಕಾರದ ನೇತೃತ್ವ ವಹಿಸಿ, ಸತತ ಮೂರು ಬಾರಿ ಜಂಬೂ ಸವಾರಿಗೆ ಚಾಲನೆ ನೀಡಿದ್ದರು. ನಂತರ 2019 ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿ ಮೆರವಣಿಗೆ ಉದ್ಘಾಟಿಸಿದ್ದರು.

ದಸರಾ : ಮಾವುತರಿಗೆ ಭರ್ಜರಿ ಭೋಜನ ಬಡಿಸಿದ ಡಿಸಿ ರೋಹಿಣಿ ಸಿಂಧೂರಿ ...

ಅ.17 ರಂದು ಚಾಮುಂಡಿಬೆಟ್ಟದಲ್ಲಿ ಬೆಂಗಳೂರು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಡಾ.ಸಿ.ಎನ್‌.ಮಂಜುನಾಥ್‌ ದಸರಾಗೆ ಚಾಲನೆ ನೀಡಿದ್ದರು. ಆದರೆ, ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ದಸರಾವನ್ನು ಚಾಮುಂಡಿಬೆಟ್ಟಹಾಗೂ ಅರಮನೆ ಅಂಗಳಕ್ಕೆ ಸೀಮಿತಗೊಳಿಸಿರುವುದರಿಂದ ಹಿಂದಿನ ವರ್ಷಗಳಂತೆ ದೇಶ- ವಿದೇಶಗಳ ಪ್ರವಾಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿಲ್ಲ. ಆದರೆ, ಕೋವಿಡ್‌ ಲಾಕ್‌ಡೌನ್‌ ತೆರವುಗೊಳಿಸಿದ ನಂತರದ ದಿನಗಳನ್ನು ಗಮನಿಸಿದರೆ ಪ್ರವಾಸಿಗರ ಸಂಖ್ಯೆ ಅಲ್ಪಮಟ್ಟಿಗೆ ಹೆಚ್ಚಿದೆ. ಅವರಿಗಿರುವ ಏಕೈಕ ಆಕರ್ಷಣೆ ಎಂದರೇ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಜಗಮಗಿಸುತ್ತಿರುವ ವಿದ್ಯುತ್‌ ದೀಪಾಲಂಕಾರ.

ಸ್ಥಳೀಯರು ಕೂಡ ನಗರದ ಹೃದಯ ಭಾಗಕ್ಕೆ ಧಾವಿಸಿ, ದೀಪಾಲಂಕಾರವನ್ನು ಕಣ್ತುಂಬಿಕೊಳ್ಳತೊಡಗಿದ್ದಾರೆ. ಇದರಿಂದಾಗಿ ಅರಮನೆ ಸುತ್ತಮುತ್ತಲಿನ ರಸ್ತೆಗಳು, ಚಾಮರಾಜ ಜೋಡಿ ರಸ್ತೆ, ಗ್ರಾಮಾಂತರ ಬಸ್‌ ನಿಲ್ದಾಣ, ಹಾರ್ಡಿಂಜ್‌ ವೃತ್ತ, ರಾಮಸ್ವಾಮಿ ವೃತ್ತ, ಜೆಎಲ್‌ಬಿ ರಸ್ತೆ ಮತ್ತಿತರ ಕಡೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ.

ಈ ಬಾರಿ ಮೆರವಣಿಗೆ ಅರಮನೆ ಅಂಗಳಕ್ಕೆ ಸೀಮಿತವಾಗಿರುವುದರಿಂದ ಅರಮನೆ ವೈಭವ ಹಾಗೂ ಕೊರೋನಾ ವಾರಿಯರ್‌ ಸ್ತಬ್ಧ ಚಿತ್ರಗಲು ಮಾತ್ರ ಇರಲಿದೆ. ಇದಲ್ಲದೇ ಸೀಮಿತ ಕಲಾ ತಂಡಗಳು ಭಾಗವಹಿಸಲಿವೆ. ತಾಂತ್ರಿಕ ಸಮಿತಿ ಸಲಹೆಯಂತೆ 300 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಸಿಎಂ ಯಡಿಯೂರಪ್ಪ ಚಾಲನೆ:  ಸೋಮವಾರ ಮಧ್ಯಾಹ್ನ 2.59 ರಿಂದ 3.20 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿಧ್ವಜಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪೂಜೆ ಸಲ್ಲಿಸುವರು. ನಂತರ ಮಧ್ಯಾಹ್ನ 3.40 ರಿಂದ 4.15 ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಅರಮನೆಯ ಒಳಾವರಣದ ವಿಶೇಷ ವೇದಿಕೆಯಲ್ಲಿ ನಿಂತು, ಗಜರಾಜ ’ಅಭಿಮನ್ಯು’ ಹೊರಲಿರುವ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿರುವ ನಾಡಿನ ಅಧಿದೇವತೆ ಶ್ರೀಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವರು. ‘ಕಾವೇರಿ’ ಹಾಗೂ ‘ವಿಜಯ’ ‘ಕುಮ್ಕಿ’ ಆನೆಗಳಾಗಿ ಸಾಗಲಿವೆ.

ಈ ಸಂದರ್ಭದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ಮೇಯರ್‌ ತಸ್ನೀಂ, ಶಾಸಕ ಎಸ್‌.ಎ.ರಾಮದಾಸ್‌ ಉಪಸ್ಥಿತರಿರುವರು. ಅರಮನೆ ಆವರಣದಲ್ಲಿ ಅತಿ ಗಣ್ಯರು, ಗಣ್ಯರು, ಆಹ್ವಾನಿತರಿಗೆ ಮಾತ್ರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ನಂದಿಧ್ವಜ, ವೀರಗಾಸೆ, ನಾದಸ್ವರ, ಕಲಾ ತಂಡಗಳು ಹಾಗೂ ಎರಡು ಸ್ತಬ್ಧ ಚಿತ್ರಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

3ನೇ ಬಾರಿ ಅರಮನೆ ಆವರಣಕ್ಕೆ ಸೀಮಿತ: ಪ್ರತಿ ವರ್ಷ ಜಂಬೂ ಸವಾರಿಯು ಅರಮನೆಯಿಂದ ಆರಂಭವಾಗಿ ಐದು ಕಿ.ಮೀ ಸಾಗಿ ಪಂಜಿನ ಕವಾಯತು ನಡೆಯುವ ಬನ್ನಿಮಂಟಪದಲ್ಲಿ ಅಂತ್ಯವಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಮೆರವಣಿಗೆ ಅರಮನೆ ಆವರ್ಣಕ್ಕೆ ಮಾತ್ರ ಸೀಮಿತವಾಗಲಿದೆ. ಇದಕ್ಕೂ ಮುನ್ನ 1994 ರಲ್ಲಿ ಸೂರತ್‌ ಪ್ಲೇಗ್‌ ಕಾಣಿಸಿಕೊಂಡಿತ್ತು. ಹೀಗಾಗಿ ಆ ವರ್ಷ ಜಂಬೂ ಸವಾರಿಯನ್ನು ಅರಮನೆ ಆವರಣಕ್ಕೆ ಸೀಮಿತ ಮಾಡಲಾಗಿತ್ತು. ನಂತರ 2002ರಲ್ಲಿ ಕಾಡುಗಳ್ಳ ವೀರಪ್ಪನ್‌ನಿಂದ ಮಾಜಿ ಸಚಿವ ಎಚ್‌.ನಾಗಪ್ಪ ಅಪಹರಣ, ಬರ ಹಾಗೂ ಕಾವೇರಿ ಸಮಸ್ಯೆ ಹಿನ್ನೆಲೆಯಲ್ಲಿ ಜಂಬೂ ಸವಾರಿಯನ್ನು ಅರಮನೆ ಆವರಣಕ್ಕೆ ಸೀಮಿತ ಮಾಡಲಾಗಿತ್ತು.

Follow Us:
Download App:
  • android
  • ios