ನಗರೀಕರಣದ ಮೂಲ ಸೆಲೆಯಿಂದ ಗ್ರಾಮೀಣ ಕಲೆ ನಾಶ
ನಗರೀಕರಣದ ಮೂಲ ಸೆಲೆಯ ಕಾರಣದಿಂದ ಗ್ರಾಮೀಣ ಪ್ರದೇಶದ ಕಲೆ, ಸಂಸ್ಕೃತಿ ನಶಿಸುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ತಿಳಿಸಿದರು.
ಮೈಸೂರು : ನಗರೀಕರಣದ ಮೂಲ ಸೆಲೆಯ ಕಾರಣದಿಂದ ಗ್ರಾಮೀಣ ಪ್ರದೇಶದ ಕಲೆ, ಸಂಸ್ಕೃತಿ ನಶಿಸುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ತಿಳಿಸಿದರು.
ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮೂಲ ಸಂಸ್ಕೃತಿ- ಕನ್ನಡ ಸಂಸ್ಕೃತಿ ಯೋಜನೆಯಲ್ಲಿ ಆಯೋಜಿಸಿದ್ದ 5 ಕಲಾ ಪ್ರಕಾರಗಳ ತರಬೇತಿ ಶಿಬಿರ ಸಮಾರೋಪದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಇಂದಿನ ಯುವ ಪೀಳಿಗೆ ಯಂತ್ರ ಮಾನವರಾಗುತ್ತಿದ್ದು, ಅವರನ್ನು ಮಂತ್ರ ಮಾನವರಾಗಿ ರೂಪಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಶ್ರದ್ಧೆ, ಭಕ್ತಿ ಹಾಗೂ ಕಲಿಯುವ ಬದ್ಧತೆ ಇದ್ದರೆ ಯಾರೂ ಬೇಕಾದರೂ ಕಲಾವಿದರಾಗಬಹುದು. ಇವತ್ತು ದರ್ಶಿನಿ ಹೋಟೆಲ್ ಸಂಸ್ಕೃತಿ ಹೆಚ್ಚಾಗುತ್ತಿದೆ. ಎಲ್ಲವನ್ನೂ ಬೇಗ ಬೇಗ ಕಲಿಯಬೇಕೆಂಬ ಧಾವಂತ. ಆದರೆ, ಉತ್ತಮ ಕಲಾವಿದರಾಗಲು ಸಂಸ್ಕೃತಿ ಮತ್ತು ಸಂಸ್ಕಾರ ಇರಬೇಕು. ಮುಖ್ಯವಾಗಿ ತಾಳ್ಮೆ ಇರಬೇಕು. ಇವುಗಳನ್ನು ಮೈಗೂಡಿಸಿಕೊಂಡರೆ ಆತ ಪರಿಪೂರ್ಣ ಕಲಾವಿದನಾಗಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ. ರೂಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜೆ. ಗೋವಿಂದರಾಜು, ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಡಾ. ನಂಜಯ್ಯ ಹೊಂಗನೂರು, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೂಲ ಸಂಸ್ಕೃತಿ- ಕನ್ನಡ ಸಂಸ್ಕೃತಿ ತರಬೇತಿ ಶಿಬಿರದ ವಿಭಾಗದ ಸಂಚಾಲಕ ಎಂ.ಎಸ್. ಪರಮಾನಂದ, ಜಿಲ್ಲಾ ಸಂಚಾಲಕರಾದ ಶರತ್ ಸತೀಶ್, ಡಾ.ಆರ್. ನಿಂಗರಾಜ್ ಮೊದಲಾದವರು ಇದ್ದರು.
ಶಿಬಿರಾರ್ಥಿಗಳಿಂದ ಕಲಾ ಪ್ರದರ್ಶನ
ಜಿಲ್ಲೆಯಾದ್ಯಂತ ಆಯ್ದ 50 ಶಿಬಿರಾರ್ಥಿಗಳಿಗೆ 20 ದಿನಗಳ ಕಾಲ ರಂಗಗೀತೆ, ಸೋಬಾನೆ ಪದ, ಸೋಮನ ಕುಣಿತ, ತಮಟೆ ನೃತ್ಯ ಮತ್ತು ತಂಬೂರಿ ಪದವನ್ನು ಕಲಿಸಲಾಗಿತ್ತು. ಶಿಬಿರಾರ್ಥಿಗಳು ಜಾನಪದ ಕಲೆಯನ್ನು ಪ್ರದರ್ಶಿಸುವ ಮೂಲಕ ಸಭಿಕರನ್ನು ರಂಜಿಸಿದರು.
ಮೊದಲಿಗೆ ಹಿರಿಯ ರಂಗಕರ್ಮಿ ವೈ.ಎಂ. ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಗಾಯಕ, ಗಾಯಕಿಯರು ವೃತ್ತಿ ರಂಗಭೂಮಿಯ ಗೀತೆಗಳನ್ನು ಪ್ರಸ್ತುಪಡಿಸಿದರು. ನಾಂದಿಗೀತೆಯೊಂದಿಗೆ ಗಾಯನ ಆರಂಭಗೊಂಡಿತು. ನರ್ತಿಸುತ್ತ ಸುಶ್ರಾವ್ಯವಾಗಿ ಹಾಡುತ್ತ ರಂಜಿಸಿದರು.
ಹಿರಿಯ ತಂಬೂರಿ ನೀಲಗಾರ ಕಲಾವಿದ ಡಾ. ಮೈಸೂರು ಗುರುರಾಜು ಅವರ ನೇತೃತ್ವದಲ್ಲಿ ಕಲಿತ ಶಿಬಿರಾರ್ಥಿಗಳು ತಾಳಬದ್ಧವಾಗಿ ತಾಂಬೂರಿ ಪದಗಳನ್ನು ಹಾಡಿದರು. ಹಿರಿಯ ಜಾನಪದ ಕಲಾವಿದ ಹೊನ್ನೇಗೌಡ ಅವರ ಮಾರ್ಗದರ್ಶನದಲ್ಲಿ ಹಲವು ಜನಪದಗಳನ್ನು ಶಿಬಿರಾರ್ಥಿಗಳು ಪ್ರಸ್ತುಪಡಿಸಿದರು. ಜಾನಪದ ಕಲಾವಿದ ದೇವರಾಜು ಮಾರ್ಗದರ್ಶನದಲ್ಲಿ ಸೋಮನೆ ಕುಣಿತ, ತಮಟೆ ನೃತ್ಯಕ್ಕೆ ನೆರೆದಿದ್ದವರು ನರ್ತಿಸಿದರು.