ಪ್ರಕೃತಿ ನಾಶವೇ ಬರಗಾಲಕ್ಕೆ ಕಾರಣ: ಗುರುಪರದೇಶಿಕೇಂದ್ರ ಸ್ವಾಮೀಜಿ
ಪ್ರಕೃತಿಯ ನಾಶದಿಂದ ಉಂಟಾಗುತ್ತಿರುವ ಅಸಮತೋಲನ ಬರಗಾಲಕ್ಕೆ ಕಾರಣ. ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ನೀರಿಗಾಗಿ ಜನ-ಜಾನುವಾರು ಪರದಾಡುವಂತಾಗಿದ್ದು ಶ್ರೀ ಕ್ಷೇತ್ರದ ಆರಾಧ್ಯ ದೈವಗಳಾದ ರಂಗ-ಶಂಕರನ ಕೃಪೆಯಿಂದ ಆದಷ್ಟು ಬೇಗ ಮಳೆ ಬರುವ ಮೂಲಕ ಎಲ್ಲರ ದಾಹ ತೀರುವಂತಾಗಲಿ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಿಪಟೂರು : ಪ್ರಕೃತಿಯ ನಾಶದಿಂದ ಉಂಟಾಗುತ್ತಿರುವ ಅಸಮತೋಲನ ಬರಗಾಲಕ್ಕೆ ಕಾರಣ. ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ನೀರಿಗಾಗಿ ಜನ-ಜಾನುವಾರು ಪರದಾಡುವಂತಾಗಿದ್ದು ಶ್ರೀ ಕ್ಷೇತ್ರದ ಆರಾಧ್ಯ ದೈವಗಳಾದ ರಂಗ-ಶಂಕರನ ಕೃಪೆಯಿಂದ ಆದಷ್ಟು ಬೇಗ ಮಳೆ ಬರುವ ಮೂಲಕ ಎಲ್ಲರ ದಾಹ ತೀರುವಂತಾಗಲಿ ಎಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷರಾದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕೆರೆಗೋಡಿ-ರಂಗಾಪುರದಲ್ಲಿ ಶುಕ್ರವಾರ ನಡೆದ ಸುಕ್ಷೇತ್ರಾಧ್ಯಕ್ಷರಾದ ಶಿಕ್ಷಣ ಭೀಷ್ಮ, ತ್ರಿವಿಧ ದಾಸೋಹಿ, ನಡೆದಾಡುವ ಶಂಕರೇಶ್ವರ, ಅಭಿನವ ಸಿದ್ಧರಾಮ ಎಂದೇ ಪ್ರಖ್ಯಾತರಾದ ಏಳನೇ ಶ್ರೀ ಗುರುಪರ ದೇಶಿಕೇಂದ್ರ ಸ್ವಾಮೀಜಿ 71ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಸುಕ್ಷೇತ್ರದ ಹಿರಿಯ ವಿದ್ಯಾರ್ಥಿಗಳು ಹಾಗೂ ಭಕ್ತರು ಹಮ್ಮಿಕೊಂಡಿದ್ದ ಜನ್ಮ ವರ್ಧಂತಿ ಮಹೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮರ ಗಿಡ ಬೆಳೆಸುವ ಮೂಲಕ ಪರಿಸರ ರಕ್ಷಿಸಬೇಕಿದೆ. ಬರದಿಂದ ರೈತರು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುವಂತಾಗಿ ದ್ದು, ಸರ್ಕಾರಗಳು ಉತ್ತಮ ಯೋಜನೆ ಜಾರಿಗೆ ತರಬೇಕಾಗಿದೆ. ಕೆರೆಕಟ್ಟೆಗಳನ್ನು ಅಭಿವೃದ್ಧಿಗೊಳಿಸಿ ಲಭ್ಯವಿರುವ ಮೂಲಗ ಳಿಂದ ನೀರು ತುಂಬಿಸುವ ಕೆಲಸ ಮಾಡಬೇಕಿದೆ ಎಂದರು.
ಗೊಲ್ಲಹಳ್ಳಿ ಸಿದ್ಧಲಿಂಗೇಶ್ವರ ಮಹಾ ಮಠದ ಶ್ರೀ ವಿಭವ ವಿದ್ಯಾಶಂಕರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದೇಶದ ಎರಡು ಪರಂಪರೆಗಳಾದ ಕೃಷಿ ಮತ್ತು ಋಷಿ ಪರಂಪರೆ ಬಹಳ ಮುಖ್ಯ. ಇವತ್ತು ಋಷಿ ಪರಂಪರೆ ಜಗತ್ತಿಗೆ ಮಾರ್ಗದರ್ಶನ ಮಾಡುವಂತ್ತಾಗಿದ್ದು ಕೆರೆಗೋಡಿ ಶ್ರೀಗಳು ಸಹಸ್ರಾರು ಜನರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಶ್ರೀಗಳು ತಮಗಾಗಿ ಏನೂ ಮಾಡಿಕೊಳ್ಳದೆ ಸಹಸ್ರಾರು ಅನಾಥ ಮಕ್ಕಳಿಗೆ ವಿದ್ಯೆ, ಅನ್ನ ದಾಸೋಹ ನೀಡುತ್ತಿದ್ದಾರೆ. ತಮ್ಮ ವರ್ಧಂತಿ ಮಹೋತ್ಸವ ಮೂಲಕ ಜೀವನದ ಮೌಲ್ಯಗಳನ್ನು ಸಮಾಜಕ್ಕೆ ನೀಡುತ್ತಿದ್ದಾರೆ ಎಂದರು.
ಗೋಡೆಕೆರೆ ಶ್ರೀಮಠದ ಚರಪಟ್ಟಾಧ್ಯಕ್ಷರಾದ ಶ್ರೀ ಮೃತ್ಯುಂಜಯದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಚುನಾವಣಾ ನೀತಿ ಸಂಹಿತೆ ಇದ್ದರೂ ಶ್ರೀಗಳ ಜನ್ಮವರ್ಧಂತಿ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಶ್ರೀಗಳು ಕೃಷಿ, ರೈತರ ಒಡನಾಟದಲ್ಲಿ ಹೆಚ್ಚಿನ ಸಮಯ ಮೀಸಲಿಟ್ಟಿದ್ದರೂ ಅನಾಥ ಮಕ್ಕಳಿಗೆ ವಿದ್ಯೆ, ಅನ್ನಾಶ್ರಯ ನೀಡುವ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಮಾಡಾಳು ಶ್ರೀ ರುದ್ರಮುನಿ ಸ್ವಾಮೀಜಿ ಮಾತನಾಡಿ, ಶ್ರೀಗಳು ವರ್ಷಪೂರ್ತಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜೊತೆಗೆ ರೈತರ ಒಡನಾಟದಲ್ಲಿ ಇದ್ದಾರೆ. ಪರಿಸರ ರಕ್ಷಿಸುವ ಕಾರ್ಯದಲ್ಲಿ ಶ್ರೀಗಳು ಮುಂದಿದ್ದು ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದರು.
ಹಿರಿಯ ವಿದ್ಯಾರ್ಥಿ ಹಾಗೂ ಶ್ರೀ ಕ್ಷೇತ್ರಾಭಿಮಾನಿಗಳ ಸಂಘದ ಅಧ್ಯಕ್ಷರಾದ ಯು.ಕೆ. ಶಿವಪ್ಪ ಮಾತನಾಡಿ, ಶ್ರೀ ಮಠದಿಂದ ವಿದ್ಯೆ, ಅನ್ನಾಶ್ರಯ ಪಡೆದು ಇಂದು ಉತ್ತಮ ಜೀವನ ನಡೆಸುತ್ತಿದ್ದೇವೆ. ನಮ್ಮಂತಹ ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿಂದ ಶಿಕ್ಷಣ ಪಡೆದು ದೇಶ, ವಿದೇಶಗಳಲ್ಲಿ ಜೀವನ ಕಟ್ಟಿಕೊಂಡಿದ್ದಾರೆ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿದ್ವಾನ್ ಸಿದ್ದರಾಮಯ್ಯ ಮಾತನಾಡಿ, ತ್ರಿವಿಧ ದಾಸೋಹಿಗಳಾಗಿರುವ ಶ್ರೀಗಳು ಶ್ರೀಮಠದ ಅಭಿವೃದ್ಧಿಗೆ ಕಂಕಣಬದ್ಧರಾಗಿ ದುಡಿಯುತ್ತಿದ್ದಾರೆ. ಹಿರಿಯ ವಿದ್ಯಾರ್ಥಿಗಳು ಒಗ್ಗೂಡಿ ಶ್ರೀಮಠದ ಅಭಿವೃದ್ಧಿಗೆ ಸಹಕಾರ ನೀಡುವ ಮೂಲಕ ಅವರ ಕೈ ಬಲಪಡಿಸಬೇಕೆಂದರು.
ಸಾವಯವ ಸಂಘದ ಮಾಜಿ ಅಧ್ಯಕ್ಷ ಆನಂದ್, ಶಸಾಪ ತಾ. ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ ಮಾತನಾಡಿದರು. ಶ್ರೀಗಳ ಹುಟ್ಟುಹಬ್ಬದ ಪ್ರಯುಕ್ತ ಕ್ಷೇತ್ರಾಧಿದೈವರಾದ ಶ್ರೀ ಶಂಕರೇಶ್ವರಸ್ವಾಮಿಗೆ ವೈದಿಕ ರಾಜೋಪಚಾರ, ಶ್ರೀ ರಂಗನಾಥ ಸ್ವಾಮಿ ಸೇರಿದಂತೆ ಎಲ್ಲಾ ಗದ್ದುಗೆಗಗಳಲ್ಲಿ ವಿಶೇಷ ಪೂಜೆ, ಅಭಿಷೇಕ ನಡೆಯಿತು. ನಂತರ ಭಕ್ತರಿಂದ ಶ್ರೀಗಳ ಪಾದಪೂಜಾ ಕಾರ್ಯಕ್ರಮ ನಡೆಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ಗುರ್ತಿಸಿ ಸನ್ಮಾನಿಸಲಾಯಿತು.
ಹಿರಿಯ ವಿದ್ಯಾರ್ಥಿ ಹಾಗೂ ಶ್ರೀ ಕ್ಷೇತ್ರಾಭಿಮಾನಿಗಳ ಸಂಘದ ಉಪಾಧ್ಯಕ್ಷ ಯು.ಎಸ್. ಬಸವರಾಜು, ವಿದ್ಯ ಸಂಸ್ಥೆಯ ಶಂಕರಪ್ಪ, ನಿವೃತ್ತ ಶಿಕ್ಷಕರಾದ ಡಿ.ಎಚ್. ಗಂಗಣ್ಣ, ಶ್ರೀಮಠದ ವಿದ್ಯಾಸಂಸ್ಥೆಗಳ ಆಡಳಿತಾಧಿಕಾರಿ ಲೋಕೇಶ್, ಪ್ರಾಂಶುಪಾಲ ರಾದ ಭರತ್ ಸೇರಿದಂತೆ ಶಾಲಾ-ಕಾಲೇಜು ಸಿಬ್ಬಂದಿ, ಹಿರಿಯ ವಿದ್ಯಾರ್ಥಿಗಳು, ಭಕ್ತರು ಭಾಗವಹಿಸಿದ್ದರು.