ಕಾರವಾರ:(ಸೆ.23) ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಅರಬ್ಬಿ ಸಮುದ್ರದಲ್ಲಿ ಹೊರ ಜಿಲ್ಲೆ, ರಾಜ್ಯದ ಮೀನುಗಾರರು ಬುಲ್‌ಟ್ರಾಲ್‌ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಸ್ಥಳೀಯ ಮೀನುಗಾರರು ಅಸಮಾಧಾನ ಹೊರಹಾಕಿದ್ದಾರೆ.

ಹೊನ್ನಾವರ, ಕುಮಟಾ ಭಾಗದ ಅರಬ್ಬಿ ಸಮುದ್ರದಲ್ಲಿ ಭಾನುವಾರ ಮಲ್ಪೆ ನೋಂದಣಿಯ ಕೆಲವು ಬೋಟ್‌ಗಳು ಬುಲ್‌ಟ್ರಾಲ್‌ ಫಿಶಿಂಗ್‌ ನಡೆಸುತ್ತಿದ್ದು, ಸ್ಥಳೀಯ ಮೀನುಗಾರರು ವಿಡಿಯೋ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಈ ಹಿಂದೆ ಗೋವಾ ರಾಜ್ಯದ ನೋಂದಣಿ ಹೊಂದಿರುವ ಬೋಟ್‌ಗಳು ಲೈಟ್‌ ಹಾಗೂ ಬುಲ್‌ಟ್ರಾಲ್‌ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಕೂಡಾ ಸ್ಥಳೀಯ ಮೀನುಗಾರರು ವಿಡಿಯೋ ಚಿತ್ರಣ ಮಾಡಿದ್ದರು.

ಲೈಟ್‌ ಫಿಶಿಂಗ್‌ ಅವೈಜ್ಞಾನಿಕ ಎಂದು ಕೇಂದ್ರ ಸರ್ಕಾರವೇ ನಿಷೇಧಿಸಿದೆ. ಆದರೆ ಜಿಲ್ಲೆಯ ಅರಬ್ಬಿ ಸಮುದ್ರದಲ್ಲಿ ಮಾತ್ರ ಹೊರ ಜಿಲ್ಲೆ ಹಾಗೂ ರಾಜ್ಯದ ಮೀನುಗಾರರು ಈ ಎರಡೂ ಮೀನುಗಾರಿಕೆಯನ್ನು ನಡೆಸುತ್ತಿದ್ದಾರೆ. ಮಲ್ಪೆ, ಕೇರಳ, ವಾಸ್ಕೋ ಭಾಗಗಳಿಂದ ಬೋಟ್‌ ಮೂಲಕ ಇಲ್ಲಿಗೆ ಬಂದು ಅಕ್ರಮವಾಗಿ ಲೈಟ್‌ ಹಾಗೂ ಬುಲ್‌ಟ್ರಾಲ್‌ ಮೀನುಗಾರಿಕೆ ಮಾಡುತ್ತಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಲೈಟ್‌ ಹಾಗೂ ಟ್ರಾಲ್‌ ಫಿಶಿಂಗ್‌ ವೇಳೆ ಮರಿ ಮೀನು ಬಲೆಗೆ ಬೀಳುತ್ತವೆ. ಹೀಗಾಗಿ, ಮೀನಿನ ಸಂತತಿ ನಾಶವಾಗುತ್ತದೆ. ಇದರಿಂದ ಸಮುದ್ರದಲ್ಲಿ ಮೀನು ಸಿಗದೆ ಸಾಂಪ್ರದಾಯಿಕ, ನಾಡದೋಣಿ ಮೀನುಗಾರಿಕೆ ನಡೆಸುವ ಮೀನುಗಾರರು ಬೀದಿಗೆ ಬೀಳುತ್ತಾರೆ. ಸಾಂಪ್ರದಾಯಿಕ, ನಾಡದೋಣಿ ಮೀನುಗಾರರ ಹಾಗೂ ಮೀನುಗಳ ಹಿತದೃಷ್ಟಿಯಿಂದ ಲೈಟ್‌, ಟ್ರಾಲ್‌ ಫಿಶಿಂಗ್‌ ಮೀನುಗಾರಿಕೆ ನಿಷೇಧ ಮಾಡಬೇಕು ಎನ್ನುವುದು ಮೀನುಗಾರರ ಆಗ್ರಹವಾಗಿತ್ತು. ಅದರಂತೆ ಸರ್ಕಾರ ಕೂಡಾ ಈ ಎರಡೂ ಮೀನುಗಾರಿಕೆಯನ್ನು ನಿಷೇಧಿಸಿತ್ತು. ಆದರೆ, ಅಕ್ರಮವಾಗಿ ಸಮುದ್ರದಲ್ಲಿ ಹೊರ ರಾಜ್ಯ, ಜಿಲ್ಲೆಯ ಮೀನುಗಾರಿಕಾ ಬೋಟ್‌ಗಳಿಂದ ಲೈಟ್‌ ಹಾಗೂ ಟ್ರಾಲ್‌ ಮೀನುಗಾರಿಕೆ ನಡೆಯುತ್ತಿದೆ.

ಈ ಮೀನುಗಾರಿಕೆ ಮೀನು ಸಂತತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮರಿ ಮೀನುಗಳು ಬಲೆಗೆ ಬಿದ್ದು, ಸಂತತಿಯೇ ನಾಶವಾಗುತ್ತದೆ. ಮತ್ಸ್ಯ ಕ್ಷಾಮದಿಂದ ಈಗಾಗಲೇ ಸಾಂಪ್ರದಾಯಿಕ, ನಾಡದೋಣಿ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ರೀತಿ ಮುಂದುವರಿದರೆ ಸಮುದ್ರದಲ್ಲಿ ಮೀನು ಇಲ್ಲದಂತಾಗುತ್ತದೆ. ತನ್ಮೂಲಕ ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿರುವವರು ಬೀದಿಗೆ ಬೀಳುತ್ತಾರೆ ಎನ್ನುವುದು ಮೀನುಗಾರರ ಅಭಿಪ್ರಾಯಯಾಗಿದೆ. 

ಈ ಬಗ್ಗೆ ಮಾತನಾಡಿದ ಮೀನುಗಾರರ ಯುವ ಮುಖಂಡ  ವಿನಾಯಕ ಹರಿಕಂತ್ರ ಅವರು, ಬುಲ್‌ಟ್ರಾಲ್‌ ಹಾಗೂ ಲೈಟ್‌ ಫಿಶಿಂಗ್‌ನಿಂದ ಮರಿ ಮೀನುಗಳು ಸಾಯುತ್ತವೆ. ಹೀಗಾಗಿ, ಈ ಮೀನುಗಾರಿಕೆ ನಿಷೇಧಿಸುವಂತೆ ಆಗ್ರಹ ವ್ಯಕ್ತವಾಗಿದೆ. ಆದರೆ, ನಮ್ಮ ಜಿಲ್ಲೆಯ ಮೀನುಗಾರರು ಈ ಎರಡೂ ಮೀನುಗಾರಿಕೆ ಬಂದ್‌ ಮಾಡಿದ್ದರೂ ಹೊರ ರಾಜ್ಯದ, ಜಿಲ್ಲೆಯ ಮೀನುಗಾರರು ಇಲ್ಲಿಗೆ ಬಂದ್‌ ಲೈಟ್‌ ಮತ್ತು ಟ್ರಾಲ್‌ ಫಿಶಿಂಗ್‌ ನಡೆಸುತ್ತಿದ್ದಾರೆ. ಇಂತಹವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ಹೇಳಿದರು. 

ಇನ್ನೂ ಈ ಬಗ್ಗೆ ಮಾಹಿತಿ ನೀಡಿದ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಿ. ನಾಗರಾಜ ಅವರು, ಮಲ್ಪೆ ನೋಂದಣಿಯ ಬೋಟ್‌ಗಳಿಂದ ಹೊನ್ನಾವರ ಅರಬ್ಬಿ ಸಮುದ್ರದಲ್ಲಿ ಬುಲ್‌ಟ್ರಾಲ್‌ ಮೀನುಗಾರಿಕೆ ನಡೆಯುತ್ತಿರುವ ಬಗ್ಗೆ ದೂರು ಬಂದಿದೆ. ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಟ್ರಾಲ್‌ ಅಥವಾ ಲೈಟ್‌ ಫಿಶಿಂಗ್‌ ಯಾರೇ ಮಾಡಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. 

ಬೋಟ್‌ ಇಲ್ಲ


ಮೀನುಗಾರಿಕಾ ಇಲಾಖೆಗೆ ಸ್ವಂತ ಬೋಟ್‌ ಇಲ್ಲ. ಇದರಿಂದ ಕಡಲಿಗೆ ಇಳಿದು ಗಸ್ತು ತಿರುಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನಿಷೇಧಿತ ಮೀನುಗಾರಿಕೆ ನಡೆಯುತ್ತಿದೆ ಎನ್ನುವುದು ಮೀನುಗಾರರ ಆರೋಪವಾಗಿದೆ.

ಕೋಸ್ಟ್‌ ಗಾರ್ಡ್‌ ಅಥವಾ ಕೋಸ್ಟಲ್‌ ಸೆಕ್ಯೂರಿಟಿ ಪೊಲೀಸ್‌ ಇಲಾಖೆ ಬಳಿ ಇರುವ ಬೋಟ್‌ಗಳನ್ನು ಪಡೆದು ಗಸ್ತು ತಿರುಗಬೇಕು. ಅಥವಾ ಅವರಲ್ಲಿ ಗಸ್ತು ಮಾಡುವಂತೆ ಕೋರಬೇಕು. ಇದರಿಂದಾಗಿ ನಿಷೇಧಿತ ಮೀನುಗಾರಿಕೆ ತಡೆಯಲು ಮೀನುಗಾರಿಕಾ ಇಲಾಖೆಗೆ ಹಿನ್ನಡೆ ಆಗುತ್ತಿದೆ.