30 ಕೋಟಿ ಖರ್ಚಾದರೂ ಹಾವೇರಿಗೆ ನೀರು ಬರಲಿಲ್ಲ: ಸಚಿವ ಶಿವಾನಂದ ಪಾಟೀಲ್
ಕ್ರಿಯಾಯೋಜನೆ ಪ್ರಕಾರ ಖರ್ಚು ಆಗಿದೆಯೋ ಇಲ್ಲವೋ ಎಂಬುದರ ಕುರಿತು ವಿಸ್ತ್ರತ ವರದಿ ಕೊಡಿ, ಹಣ ಸರಿಯಾಗಿ ವಿನಿಯೋಗ ಆಗದಿದ್ದರೆ ನಿಮ್ಮಿಂದಲೇ ಹಣ ವಸೂಲಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಖಡಕ್ ಎಚ್ಚರಿಕೆ ನೀಡಿದ ಘಟನೆ ನಡೆಯಿತು.
ಹಾವೇರಿ (ಜು.04): ಹಾವೇರಿ ನಗರಕ್ಕೆ 24/7 ನೀರು ಸರಬರಾಜು ಮಾಡುವ ೩೩ ಕೋಟಿ ರು. ವೆಚ್ಚದ ಯೋಜನೆಗೆ ೨೦೧೪ರಲ್ಲೇ ಕಾರ್ಯಾದೇಶ ನೀಡಿ 30 ಕೋಟಿ ರು. ಖರ್ಚು ಮಾಡಿದ್ದರೂ ನೀರು ಕೊಡಲು ಆಗಿಲ್ಲ. 10 ವರ್ಷದಲ್ಲಿ ಒಂದು ಯೋಜನೆಯನ್ನು 14 ಬಾರಿ ವಿಸ್ತರಣೆ ಮಾಡಿದರೂ 21 ದಿನಕ್ಕೆ ನೀರು ಕೊಡುತ್ತಿದ್ದೀರಿ. ಕ್ರಿಯಾಯೋಜನೆ ಪ್ರಕಾರ ಖರ್ಚು ಆಗಿದೆಯೋ ಇಲ್ಲವೋ ಎಂಬುದರ ಕುರಿತು ವಿಸ್ತ್ರತ ವರದಿ ಕೊಡಿ, ಹಣ ಸರಿಯಾಗಿ ವಿನಿಯೋಗ ಆಗದಿದ್ದರೆ ನಿಮ್ಮಿಂದಲೇ ಹಣ ವಸೂಲಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಖಡಕ್ ಎಚ್ಚರಿಕೆ ನೀಡಿದ ಘಟನೆ ನಡೆಯಿತು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಯೋಜನೆಗಳ ಸ್ಥಿತಿಗತಿ ಕುರಿತು ಅ ಅಧಿಕಾರಿಗಳಿಂದ ಮಾಹಿತಿ ಪಡೆದರು. ಹಾವೇರಿ ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಯೋಜನೆಗೆ ಇನ್ನು ರು.೩ ಕೋಟಿ ವೆಚ್ಚ ಮಾಡಿದರೆ ಕಾಮಗಾರಿ ಪೂರ್ಣಗೊಳ್ಳಬೇಕು. ಆದರೆ ೨೧ ದಿನವಾದರೂ ನಗರಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಈವರೆಗೆ ೧೩ ಕೆಡಿಪಿ ಸಭೆಗಳಾದರೂ ಪ್ರಗತಿ ಪರಿಶೀಲನೆಯಾಗಿಲ್ಲವೇ? ರು.೩೦ ಕೋಟಿ ವೆಚ್ಚದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮಾಹಿತಿ ಇಲ್ಲ.
ಡಿ.ಕೆ.ಸುರೇಶ್ ಸೋಲಿಂದ ಕ್ಷೇತ್ರದ ಜನರಿಗೆ ಪಶ್ಚಾತ್ತಾಪ: ಶಾಸಕ ಎಚ್.ಸಿ.ಬಾಲಕೃಷ್ಣ
ಈಗಾಗಲೇ ನಗರಸಭೆ ಪೌರಾಯುಕ್ತರನ್ನು ಅಮಾನತು ಮಾಡಲು ಸೂಚನೆ ನೀಡಲಾಗಿದೆ. ಯಾವ ಅವಧಿಯಲ್ಲಿ ಯಾವ ಅಧಿಕಾರಿಗಳು ಕೆಲಸ ಮಾಡಿದ್ದಾರೆ ಹಾಗೂ ರು.೩೦ ಕೋಟಿ ವೆಚ್ಚದ ಕುರಿತು ೧೫ ದಿನದಲ್ಲಿ ವಿವರವಾದ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳಿಂದಲೇ ರು.೩೦ ಕೋಟಿ ವಸೂಲಿ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ೨೦೧೪ರಿಂದ ೨೦೧೮ರವರೆಗೆ ತಾವೇ ಇದ್ದೀರಿ ಈ ಕುರಿತು ತಾವು ಪ್ರಗತಿ ಪರಿಶೀಲನೆ ನಡೆಸಿಲ್ಲವೆ ಎಂದು ಶಾಸಕ ರುದ್ರಪ್ಪ ಲಮಾಣಿ ಅವರನ್ನು ಪ್ರಶ್ನಿಸಿದ ಅವರು, ಈ ಕುರಿತು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಳ್ಳಲು ತಿಳಿಸಿದರು.
ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರನ್ನಾಗಿ ಮಾಡಲಾಗುವುದು. ಕಾಮಗಾರಿಗಳ ಅನುಷ್ಠಾನ ಕುರಿತು ಪರಿಶೀಲನೆ ಕುರಿತು ಕೆಡಿಪಿ ಸಭೆ ಆಗಬೇಕಾ?, ಸಂಬಂಧಿಸಿದ ಗುತ್ತಿಗೆದಾರರಿಂದ ದಂಡ ವಸೂಲಿಮಾಡಿ ಅವರಿಗೆ ನೋಟಿಸ್ ನೀಡಿ ಶೀಘ್ರವಾಗಿ ಕಾಮಗಾರಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು. ಈಗ ನೀಡಿದ ಕಾಲಮಿತಿ ನಂತರ ಒಂದು ದಿನ ತಡವಾದರೂ ನಾನು ಕೇಳುವುದಿಲ್ಲ. ಡಿಸೆಂಬರ್ ನಂತರ ಒಂದು ಕುಡಿಯುವ ನೀರಿನ ಕಾಮಗಾರಿ ಯೋಜನೆ ಬಾಕಿ ಉಳಿಯಬಾರದು ಎಂದು ಸೂಚನೆ ನೀಡಿದರು.
ನೀರಾವರಿ ಯೋಜನೆಯ ನೀರೆತ್ತುವ ಕೆಲಸದ ಟ್ರಾನ್ಸಫಾರ್ಮರ್ ಸುಟ್ಟಿದ್ದರೂ ಹೆಸ್ಕಾಂ ಇಲಾಖೆ ಅಧಿಕಾರಿಗಳು ಈವರೆಗೆ ಏಕೆ ಕ್ರಮಕೈಗೊಂಡಿಲ್ಲ. ನೀರಾವರಿ ಕಾಮಗಾರಿ ಅನುಷ್ಠಾನದಲ್ಲಿ ಬೇಜವಾಬ್ದಾರಿ ಬಿಡಿ, ಕೂಡಲೇ ಹೊಸ ಟ್ರಾನ್ಸಫಾರ್ಮರ್ ತರಿಸಿ ಶೀಘ್ರವೇ ಕೆರೆ ತುಂಬಿಸುವ ಯೋಜನೆ ಆರಂಭಿಸಬೇಕು ಎಂದು ಸಚಿವರು ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡೆಂಘೀ ನಿಯಂತ್ರಣಕ್ಕೆ ಸೂಚನೆ: ಜಿಲ್ಲೆಯ ಡೆಂಘೀ ಪ್ರಕರಣಗಳ ಕುರಿತು ಮಾಹಿತಿ ಪಡೆದ ಸಚಿವರು, ಜಿಲ್ಲೆಯಲ್ಲಿ ಡೆಂಘೀ ಪ್ರಕರಣಗಳ ಕುರಿತು ಸರಿಯಾದ ಮಾಹಿತಿ ನೀಡಿ, ಡೆಂಘೀ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಜೊತೆಗೆ ಫಾಗಿಂಗ್ ವ್ಯವಸ್ಥೆ ಮಾಡಬೇಕು. ಆರೋಗ್ಯ ಇಲಾಖೆ ಜಂಟಿ ನಿರ್ದೇಶಕರು, ಉಪನಿರ್ದೇಶಕರು ಕಾಲಕಾಲಕ್ಕೆ ಜಿಲ್ಲೆಗೆ ಭೇಟಿ ನೀಡಿ, ಆಸ್ಪತ್ರೆ ಪರಿಸ್ಥಿತಿ ಪರಿಶೀಲನೆ ನಡೆಸಬೇಕು. ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ ನಾನು ಹಾಗೂ ಮುಖ್ಯಮಂತ್ರಿಗಳು ಭೇಟಿ ನೀಡಿ ಸೂಚನೆ ನೀಡಿದರೂ, ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ,
ಕೂಡಲೇ ಕಟ್ಟಡ ಪೂರ್ಣಗೊಳಿಸಲು ಕ್ರಮಕೈಗೊಳ್ಳಿ. ರು.೧೧ ಕೋಟಿ ಅನುದಾನ ನೀಡಿ ನೀವು ಕೆಲಸ ತಗೊಂಡಿಲ್ಲ. ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಕಾರ್ಯನಿರ್ವಾಹಕ ಅಭಿಯಂತರನನ್ನು ಅಮಾನತುಗೊಳಿಸಿ ಎಂದು ಸೂಚನೆ ನೀಡಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತದೆ ಎಂದು ಬಡವರು ಬರುತ್ತಾರೆ, ಅವರಿಗೆ ಉತ್ತಮ ಚಿಕಿತ್ಸೆ ನೀಡಿ, ಆಯುಷ್, ಯುನಾನಿ ಹಾಗೂ ಆಯುರ್ವೇದ ವಿಭಾಗಗಳ ವೈದ್ಯರನ್ನು ಬೇರೆಡೆಗೆ ಸ್ಥಳಾಂತರಿಸಿ. ಖಾಲಿ ಇರುವ ಜಾಗವನ್ನು ರೋಗಿಗಳ ಸೌಲಭ್ಯಕ್ಕೆ ಉಪಯೋಗಿಸಿಕೊಳ್ಳಿ. ಆಸ್ಪತ್ರೆಗೆ ಆವರಣದಲ್ಲಿರುವ ವಾಹನ ನಿಲುಗಡೆಯನ್ನು ಏಜೆನ್ಸಿಗೆ ನೀಡುವ ಮೂಲಕ ಆಸ್ಪತ್ರೆ ಹೊರಗಡೆ ಖಾಸಗಿ ಪ್ರದೇಶದಲ್ಲಿ ಮಾಡುವ ವ್ಯವಸ್ಥೆ ಮಾಡಿ ಎಂದು ಸೂಚನೆ ನೀಡಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಒತ್ತಡ ಕಡಿಮೆ ಮಾಡಲು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೊರತೆ ಇರುವ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಹೊರಗುತ್ತಿಗೆ ಮೂಲಕ ಭರ್ತಿಮಾಡಿಕೊಳ್ಳಿ ಅಥವಾ ಬೇರೆ ಖಾಲಿ ಇರುವ ಸಿಬ್ಬಂದಿಗಳನ್ನು ಅಲ್ಲಿಗೆ ನಿಯೋಜಿಸಿ ಸೇವೆ ಪಡೆಯುವಂತೆ ಹಾಗೂ ನರ್ಸಿಂಗ್ ಕಾಲೇಜ್‌ನ್ನು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸ್ಥಳಾಂತರಿಸಿ ಎಂದು ಸಲಹೆ ನೀಡಿದರು. ಜಿಲ್ಲೆಯಲ್ಲಿ ಮಾಡ್ಯುಲರ್ ಆಪರೇಷನ್ ಥೇಟರ್ ಸೌಲಭ್ಯವಿಲ್ಲ. ಸಾರ್ವಜನಿಕರು ಯಾವಾಗಲೂ ದಾವಣಗೆರೆ-ಹುಬ್ಬಳ್ಳಿ ಅವಲಂಬಿತರಾಗಿರಬೇಕಾ?
ರಾಹುಲ್ ಗಾಂಧಿಗೆ ಹಿಂದೂಗಳ ತಾಳ್ಮೆ ಪರೀಕ್ಷೆಯ ದುಸ್ಸಾಹಸ ಬೇಡ: ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ
ಮಾಡ್ಯುಲರ್ ಆಪರೇಷನ್ ಥೇಟರ್ ಸೌಲಭ್ಯಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಿ. ಜಿಲ್ಲಾ ಆಸ್ಪತ್ರೆಗೆ ಎಂ.ಐ.ಆರ್. ಸ್ಕ್ಯಾನಿಂಗ್ ಯಂತ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈವರೆಗೆ ಏನಾಗಿದೆ ಎಂದು ಮಾಹಿತಿ ನೀಡಿಲ್ಲ ಎಂದರು. ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಉಪಸ್ಥಿತರಿದ್ದರು.