ಕೇಂದ್ರ ಸರ್ಕಾರ 2022ರ ಜು. 1ರಿಂದ ಕಡ್ಡಾಯವಾಗಿ ಏಕಬಳಕೆ ಪ್ಲಾಸ್ಟಿಕ್‌ ನಿಷೇಧಿಸಿದೆ. ಆದರೆ ನಗರದ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ ಮಾರಾಟ ಹಾಗೂ ಬಳಕೆ ಮಾತ್ರ ನಿಂತಿಲ್ಲ. ಜುಲೈ ತಿಂಗಳೊಂದರಲ್ಲಿಯೇ ಪಾಲಿಕೆ ಅಧಿಕಾರಿಗಳು 103 ಬಾರಿ ಅಂಗಡಿಗಳ ಮೇಲೆ ದಾಳಿ ನಡೆಸಿ .4,47,900 ದಂಡ ವಿಧಿಸಿದೆ.

ಹುಬ್ಬಳ್ಳಿ (ಆ.3) : ಕೇಂದ್ರ ಸರ್ಕಾರ 2022ರ ಜು. 1ರಿಂದ ಕಡ್ಡಾಯವಾಗಿ ಏಕಬಳಕೆ ಪ್ಲಾಸ್ಟಿಕ್‌ ನಿಷೇಧಿಸಿದೆ. ಆದರೆ ನಗರದ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ ಮಾರಾಟ ಹಾಗೂ ಬಳಕೆ ಮಾತ್ರ ನಿಂತಿಲ್ಲ. ಜುಲೈ ತಿಂಗಳೊಂದರಲ್ಲಿಯೇ ಪಾಲಿಕೆ ಅಧಿಕಾರಿಗಳು 103 ಬಾರಿ ಅಂಗಡಿಗಳ ಮೇಲೆ ದಾಳಿ ನಡೆಸಿ .4,47,900 ದಂಡ ವಿಧಿಸುವ ಮೂಲಕ ಪ್ಲಾಸ್ಟಿಕ್‌ ಬಳಕೆ, ಮಾರಾಟ ಮಾಡುವವರಿಗೆ ಬಿಸಿ ಮುಟ್ಟಿಸಿದ್ದಾರೆ.

2022ರ ಜನವರಿಯಿಂದ ಜೂನ್‌ವರೆಗೆ ನಿಷೇಧಿತ ಪ್ಲಾಸ್ಟಿಕ್‌ ಬಳಕೆಗೆ ಸಂಬಂಧಿಸಿದಂತೆ .19,36,800 ದಂಡ ವಿಧಿಸಲಾಗಿದೆ. ಜುಲೈ ತಿಂಗಳಲ್ಲಿ ಒಟ್ಟು 527.89 ಟನ್‌ ನಿಷೇಧಿತ ಪ್ಲಾಸ್ಟಿಕ್‌ ವಶಪಡಿಸಿಕೊಂಡು .4,47,900 ದಂಡ ವಿಧಿಸುವ ಮೂಲಕ ಪ್ಲಾಸ್ಟಿಕ್‌ಗೆ ಅಂಟಿಕೊಂಡಿದ್ದ ವ್ಯಾಪಾರಿಗಳ ಮೇಲೆ ದಂಡದ ಪ್ರಯೋಗ ನಡೆಸಲಾಗಿದೆ. ಜು. 31ರಂದು ಕಾರವಾರ ರಸ್ತೆಯ ದಾಲಮಿಲ್‌ ಹತ್ತಿರದ ಗೋದಾಮುವೊಂದಕ್ಕೆ ದಾಳಿ ನಡೆಸಿ 6 ಟನ್‌ ಪ್ಲಾಸ್ಟಿಕ್‌ ವಶಪಡಿಸಿಕೊಳ್ಳಲಾಗಿದೆ.

ಮನೆಯಿಂದಾನೇ ಶುರುವಾಗಲಿ ಪರಿಸರ ರಕ್ಷಣೆ, ಆಗಲಿ ಪ್ಲಾಸ್ಟಿಕ್ ಬ್ಯಾನ್

ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಕುರಿತು ಸಾರ್ವಜನಿಕರು, ಕಿರಾಣಿ, ಹಣ್ಣು, ಹೋಟೆಲ್‌, ಮಾಂಸ, ಮದ್ಯ ಸೇರಿ ಬೀದಿಬದಿ ವ್ಯಾಪಾರಸ್ಥರಲ್ಲಿ ಪಾಲಿಕೆ ಅಧಿಕಾರಿಗಳು ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ. ಇದರ ನಡುವೆಯೂ ಹಲವು ವ್ಯಾಪಾರಿಗಳು ಪ್ಲಾಸ್ಟಿಕ್‌ ಬಳಕೆಯನ್ನೇ ನೆಚ್ಚಿಕೊಂಡಿದ್ದಾರೆ. ಇರುವಷ್ಟುದಿನ ಅಥವಾ ಸ್ಟಾಕ್‌ ಖಾಲಿಯಾಗುವ ವರೆಗೆ ಮಾರಾಟ ನಡೆಸಬೇಕು. ಮುಂದಿನದು ನೋಡಿದರಾಯಿತು ಎನ್ನುವುದು ವ್ಯಾಪಾರಿಗಳ ಮನಸ್ಥಿತಿಯಾಗಿದೆ.

ನಿಷೇಧಿತ ಪ್ಲಾಸ್ಟಿಕ್‌ ಬಳಕೆ, ಮಾರಾಟ ಕಾನೂನುಬಾಹಿರ, ಶಿಕ್ಷಾರ್ಹ ಅಪರಾಧವಾಗಿದೆ. ಆದರೆ ಕೆಲವು ವ್ಯಾಪಾರಸ್ಥರು ತಮ್ಮ ಲಾಭಕ್ಕಾಗಿ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ನ ಬೇರು ಗಟ್ಟಿಗೊಳಿಸಿದ್ದಾರೆ. ಇದಕ್ಕೆ ಹಲವು ಸಾರ್ವಜನಿಕರು ಅಂಟಿಕೊಂಡಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳು ಹೆಸರಿಗೆ ಮಾತ್ರ ಸಣ್ಣಪುಟ್ಟಹೋಟೆಲ್‌, ಬೇಕರಿ, ಬಟ್ಟೆ, ಕಿರಾಣಿ, ಬೀಡಿ ಅಂಗಡಿ ಮೇಲೆ ದಾಳಿ ಮಾಡಿ ದಂಡ ವಿಧಿಸುತ್ತಿದ್ದಾರೆ. ಆದರೆ ಇದನ್ನು ಹೊರತುಪಡಿಸಿ ಯಾವುದೇ ದೊಡ್ಡ ಪ್ರಮಾಣದ ಕ್ರಮಕೈಗೊಂಡಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿದೆ.

ಸಣ್ಣಪುಟ್ಟಅಂಗಡಿಗಳ ಮೇಲೆ ಪಾಲಿಕೆ ಅಧಿಕಾರಿಗಳ ತಂಡದೊಂದಿಗೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್‌ ಬಳಸದಂತೆ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ದಂಡವನ್ನು ವಿಧಿಸಲಾಗುತ್ತಿದೆ. ಪ್ಲಾಸ್ಟಿಕ್‌ ಸಂಗ್ರಹ ಮಾಡಿರುವ ಗೋದಾಮಿನ ಮೇಲೆಯೂ ದಾಳಿ ನಡೆಸಲಾಗುತ್ತಿದೆ. ಪ್ಲಾಸ್ಟಿಕ್‌ ಬಳಕೆ ಕುರಿತು ಜನಸಾಮಾನ್ಯರಲ್ಲಿ ಅರಿವು ಅಗತ್ಯವಾಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಬೊಜ್ಜು ಹೆಚ್ಚಾಗುತ್ತೆ

ಇನ್ನು ನಗರದಲ್ಲಿ ಸಂಗ್ರಹವಾಗುವ ಕಸದಲ್ಲಿ ಪ್ಲಾಸ್ಟಿಕ್‌ ಅಧಿಕ ಪಾಲು ಪಡೆದಿದೆ ಎನ್ನುವುದು ಆತಂಕಕಾರಿ ಸಂಗತಿಯಾಗಿದೆ. ಪಾಸ್ಟಿಕ್‌ಗೆ ಪರ್ಯಾಯವಾಗಿ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಕೈಚೀಲ ಒದಗಿಸಲು ಸರ್ಕಾರ ಕ್ರಮಕೈಗೊಂಡರೆ ಸರ್ಕಾರದ ಆದೇಶ ಪಾಲನೆಯಾಗಲಿದೆ. ಇಡೀ ಜೀವಸಂಕುಲಕ್ಕೆ ಹಾನಿಯಾಗಿರುವ ಪ್ಲಾಸ್ಟಿಕ್‌ ಬಳಕೆಯ ಸಂಪೂರ್ಣ ನಿಷೇಧಕ್ಕೆ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆ ಇನ್ನಷ್ಟುಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂಬುದು ಪ್ರಜ್ಞಾವಂತ ಸಾರ್ವಜನಿಕರ ಒತ್ತಾಯವಾಗಿದೆ.

ನಿಷೇಧಿತ ಪ್ಲಾಸ್ಟಿಕ್‌ ಬಳಕೆ, ಮಾರಾಟ, ಸಾಗಾಟ ಮಾಡದಂತೆ ಜುಲೈ ಮೊದಲ ವಾರದಲ್ಲಿ ದಂಡ ವಿಧಿಸದೆ ಸಾರ್ವಜನಿಕರು, ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸಲಾಗಿದೆ. ಪ್ಲಾಸ್ಟಿಕ್‌ ಬಳಕೆ, ಸಂಗ್ರಹ, ಮಾರಾಟ ಎಲ್ಲಿ ಕಂಡುಬಂದರೆ ದಂಡ ವಿಧಿಸಿ, ವಶಪಡಿಸಿಕೊಳ್ಳಲಾಗುತ್ತಿದೆ. ಪಾಲಿಕೆ ಅಧಿಕಾರಿಗಳ ತಂಡ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ.

ಡಾ. ಗೋಪಾಲಕೃಷ್ಣ ಬಿ., ಪಾಲಿಕೆ ಆಯುಕ್ತ

ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ವೇಳೆ ಎಲ್ಲಿಂದ ಪ್ಲಾಸ್ಟಿಕ್‌ ಸರಬರಾಜು ಆಗುತ್ತಿದೆ ಎನ್ನುವ ಮಾಹಿತಿ ಸಂಗ್ರಹದ ಕಾರ್ಯವು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್‌ ಸಂಗ್ರಹಿಸಿರುವ ದೊಡ್ಡ ದೊಡ್ಡ ಕಟ್ಟಡಗಳ ಮೇಲೆ ದಾಳಿ ನಡೆಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು.

ಮಲ್ಲಿಕಾರ್ಜುನ ಬಿ.ಎಂ., ಪಾಲಿಕೆ ಪರಿಸರ ಅಭಿಯಂತರ