ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಜೆಪಿ ಶಾಸಕರೊಂದಿಗೆ ಹಳದಿ ಮಾರ್ಗ ಮೆಟ್ರೋದಲ್ಲಿ ಪ್ರಯಾಣಿಸಿ ಪರಿಶೀಲನೆ ನಡೆಸಿದರು. ಆಗಸ್ಟ್ 10 ರಂದು ಪ್ರಧಾನಿ ಮೋದಿ ಉದ್ಘಾಟಿಸುವ ನಿರೀಕ್ಷೆಯಿದೆ. ಈ ಮಾರ್ಗವು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರವರೆಗೆ ಚಾಲಕ ರಹಿತ ಸೇವೆ ನೀಡಲಿದೆ.

ಬೆಂಗಳೂರು: ಆಗಸ್ಟ್ 10 ರಂದು ಬಹುನಿರೀಕ್ಷಿತ ಆರ್.ವಿ.ರೋಡ್ ನಿಂದ‌ ಬೊಮ್ಮಸಂದ್ರ ಮೆಟ್ರೋ ಮಾರ್ಗ ಉದ್ಘಾಟನೆ ಹಿನ್ನೆಲೆ ಇಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆರ್.ವಿ.ರಸ್ತೆ ಯಿಂದ ಬೊಮ್ಮಸಂದ್ರ ಮಾರ್ಗ ಪರಿಶೀಲನೆ ನಡೆಸಿದರು. ಈ ಸಂದರ್ಭ ಬಿಜೆಪಿ ಶಾಸಕರಾದ ಸತೀಶ್ ರೆಡ್ಡಿ, ರಾಮಮೂರ್ತಿ ಸಾಥ್ ನೀಡಿದರು. ಶಾಸಕ ಎನ್.ಎ. ಹ್ಯಾರೀಸ್ ಹಾಗೂ ಎನ್. ಕೃಷ್ಣಪ್ಪ ಸಹ ಆಗಮಿಸಿ ಡಿಸಿಎಂಗೆ ಸಾಥ್ ನೀಡಿದರು. ಶಾಸಕರೊಂದಿಗೆ ಮೆಟ್ರೋ ಕಾರ್ನರ್ ಸೀಟ್ ನಲ್ಲಿ ಕುಳಿತು ಹಳದಿ ಮೆಟ್ರೋ ಮಾರ್ಗದಲ್ಲಿ ಡಿಕೆಶಿ ಪ್ರಯಾಣ ಬೆಳೆಸಿದರು. ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಬೊಮ್ಮಸಂದ್ರ ನಿಲ್ದಾಣದವರೆಗೆ ‘ನಮ್ಮ ಮೆಟ್ರೋ’ಯಲ್ಲಿ ಪ್ರಯಾಣಿಸುತ್ತಾ, ಹಳದಿ ಮಾರ್ಗದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಆಗಸ್ಟ್ 10 ರಂದು ಹಳದಿ ಮಾರ್ಗದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ನಿರೀಕ್ಷೆ ಇದ್ದರೂ, ಅವರ ಬರುವ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ಇಲ್ಲ. ವರ್ಚುವಲ್ ಮೂಲಕ ಮೋದಿ ಉದ್ಘಾಟನೆ ಮಾಡುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಡಿಸಿಎಂ ಸ್ವತಃ ಮಾರ್ಗ ಪರಿಶೀಲನೆ ನಡೆಸಿದರು.

ಹಳದಿ ಮಾರ್ಗದ ವೈಶಿಷ್ಟ್ಯಗಳು

  • ಒಟ್ಟು ಉದ್ದ: 19.15 ಕಿ.ಮೀ.
  • ಮಾರ್ಗ: ಆರ್.ವಿ. ರಸ್ತೆ – ಬೊಮ್ಮಸಂದ್ರ
  • ವೆಚ್ಚ: ₹5,056.99 ಕೋಟಿ
  • ನಿಲ್ದಾಣಗಳ ಸಂಖ್ಯೆ: 16
  • ಚಾಲಕ ರಹಿತ ಮೆಟ್ರೋ ರೈಲು (Driverless Metro) ಸೇವೆ
  • ಬೊಮ್ಮಸಂದ್ರವರೆಗೆ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮೂಲಕ ಸಂಪರ್ಕ
  • ಪ್ರತಿದಿನ ಸುಮಾರು 25,000 ಪ್ರಯಾಣಿಕರು ಪ್ರಯಾಣಿಸುವ ನಿರೀಕ್ಷೆ

ಹಳದಿ ಮಾರ್ಗದ ಕೇಂದ್ರ ಸುರಕ್ಷತಾ ತಪಾಸಣೆ ಈಗಾಗಲೇ ಯಶಸ್ವಿಯಾಗಿ ಪೂರ್ಣಗೊಂಡಿದೆ. ಆದರೆ ರೈಲುಗಳ ಕೊರತೆಯಿಂದ ಉದ್ಘಾಟನೆ ಹಲವು ತಿಂಗಳು ವಿಳಂಬವಾಗಿತ್ತು. ಈ ಮಾರ್ಗದ ಉದ್ಘಾಟನೆಯೊಂದಿಗೆ ದಕ್ಷಿಣ ಬೆಂಗಳೂರಿನ ಜನರ ಬಹುಕಾಲದ ಕನಸು ನನಸಾಗಲಿದೆ.

ಬೈಕ್‌ ಏರಿ ಮೇಲ್ ಸೇತುವೆ ಕಾಮಗಾರಿ ವೀಕ್ಷಣೆ

ಇದಕ್ಕೂ ಮುನ್ನ ಹೆಬ್ಬಾಳದಲ್ಲಿ ನಡೆಯುತ್ತಿರುವ ಮೇಲ್ ಸೇತುವೆ ಕಾಮಗಾರಿ ವೀಕ್ಷಣೆ ಮಾಡಿದರು. ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ವಿಸ್ತರಣಾ ಕಾಮಗಾರಿ ಇದಾಗಿದ್ದು, ಬಿಡಿಎ ವತಿಯಿಂದ ನಿರ್ಮಿಸುತ್ತಿರುವ ಮೇಲ್ಸೇತುವೆ ಇದಾಗಿದೆ. ಆಗಸ್ಟ್ 15 ರ ನಂತರ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಸಚಿವ ಬೈರತಿ ಸುರೇಶ್ ಕೂಡ ವೀಕ್ಷಣೆ ವೇಳೆ ಹಾಜರಾಗಿದ್ದರು. ಬೈಕ್ ಏರಿದ ಡಿಸಿಎಂ‌ ಡಿಕೆ ಶಿವಕುಮಾರ್ ಹಾಗೂ ಸಚಿವ ಬೈರತಿ ಸುರೇಶ್ ಕಾಮಗಾರಿ ಪರಿಶೀಲನೆ ನಡೆಸಿದರು. ಸುಮಾರು ಒಂದು 1050 ಮೀ ಉದ್ದ ಇರುವ ಮೇಲ್ಸೇತುವೆ ಇದಾಗಿದ್ದು, ಬೈಕ್ ಏರಿ ಮೇಲ್ಸೇತುವೆ ವೀಕ್ಷಿಸಿದರು.

Scroll to load tweet…