Omicron Threat: ಧಾರವಾಡ ಜಿಲ್ಲೆಗೆ ಒಮಿಕ್ರೋನ್ ಪ್ರವೇಶ: ವೈರಸ್ ಆರ್ಭಟ ಎದುರಿಸಲು ಸಿದ್ಧತೆ
* ಧಾರವಾಡ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 100 ಹಾಸಿಗೆ ಗುರುತು
* ಅಗತ್ಯ ಔಷಧ ಉಪಕರಣ, ವೈದ್ಯಕೀಯ ಸೌಲಭ್ಯ
* ಮೊದಲ ಎರಡು ಅಲೆಯಲ್ಲಿ ಕೋವಿಡ್ ರೋಗಿಗಳಿಗೆ ಸಂಜೀವಿನಿಯಾಗಿ ಸೇವೆ ಕಲ್ಪಿಸಿದ ಕಿಮ್ಸ್
ಮಯೂರ ಹೆಗಡೆ
ಹುಬ್ಬಳ್ಳಿ(ಡಿ.22): ಜಿಲ್ಲೆಗೆ ಕೋವಿಡ್-19(Covid-19) ಒಮಿಕ್ರೋನ್ ಪ್ರವೇಶ ಆಗುತ್ತಿದ್ದಂತೆ ಜಿಲ್ಲಾ ಆರೋಗ್ಯ ಇಲಾಖೆ ಎಚ್ಚೆತ್ತಿದೆ. ಹೊಸ ರೂಪಾಂತರಿ ರೋಗ ತಗುಲಿದವರ ಚಿಕಿತ್ಸೆಗಾಗಿ ಮೊದಲ ಹಂತದಲ್ಲಿ ಸರ್ಕಾರಿ, ಖಾಸಗಿ ಆಸ್ಪತ್ರೆ ಸೇರಿ ಸುಮಾರು 100 ಹಾಸಿಗೆ ಗುರುತಿಸಿದೆ. ಕೆಲ ದಿನಗಳ ಮೊದಲು ಎಸ್‌ಡಿಎಂ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಕಾಣಿಸಿಕೊಂಡಿದ್ದ 306 ಸೋಂಕಿತರ ಪ್ರಕರಣ ಕೂಡ ಆತಂಕಕ್ಕೆ ಕಾರಣವಾಗಿತ್ತು. ಇದೀಗ 54 ವರ್ಷದ ಮಹಿಳೆ ಮೂಲಕ ಒಮಿಕ್ರೋನ್(Omicron) ಧಾರವಾಡಕ್ಕೆ(Dharwad) ಕಾಲಿಟ್ಟಿದೆ. ಮಹಿಳೆ(Woman) ಆರೋಗ್ಯದಿಂದ ಇದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಜನತೆಯಲ್ಲಿ ಆವರಿಸಿರುವ ಒಮಿಕ್ರೋನ್ ಆತಂಕ ನಿವಾರಣೆಗೆ ಜಿಲ್ಲಾಡಳಿತ ಮುಂದಾಗಿದೆ. ಜತೆಗೆ ಈವರೆಗೆ ಲಸಿಕಾರಣದಿಂದ(Vaccination) ದೂರ ಇರುವವರ ಪತ್ತೆ ಮಾಡಿ ಲಸಿಕೆ(Vaccine) ನೀಡಲು ಸೂಚಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಡಿಎಚ್‌ಒ ಯಶವಂತ ಮದೀನಕರ, ಹಿಂದಿನ ಎರಡು ಅಲೆಗೆ ಹೋಲಿಸಿದರೆ ಒಮಿಕ್ರೋನ್ ವೇಗವಾಗಿ ಹರಡಬಹುದು ಎಂದು ತಜ್ಞರು ತಿಳಿಸಿದ್ದಾರೆ. ಹೀಗಾಗಿ ಅಗತ್ಯ ಕ್ರಮ ವಹಿಸಿದ್ದೇವೆ. ಈಗಾಗಲೆ ನಮ್ಮಲ್ಲಿ ಅಗತ್ಯ ಹಾಸಿಗೆ, ವೈದ್ಯಕೀಯ ಸೌಲಭ್ಯಗಳಿವೆ. ಆಶಾ, ಅಂಗನವಾಡಿ ಸೇರಿ ಆರೋಗ್ಯ ಕಾರ್ಯಕರ್ತೆಯರು ನಿರಂತರವಾಗಿ ಮನೆಮನೆಗೆ ತೆರಳಿ ಆರೋಗ್ಯ, ಲಸಿಕಾಕರಣ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.
Covid 19 Variant: 200 ದಾಟಿದ ಒಮಿಕ್ರೋನ್: ಕೊರೋನಾ ಪಾಸಿಟಿವಿಟಿ ಶೇ.10 ದಾಟಿದರೆ ನಿರ್ಬಂಧ ಜಾರಿ!
ಒಮಿಕ್ರೋನ್ ಚಿಕಿತ್ಸೆಗಾಗಿ(Treatment) ಪ್ರಾಥಮಿಕವಾಗಿ ಹುಬ್ಬಳ್ಳಿಯ(Hubballi) ಕಿಮ್ಸ್‌ನಲ್ಲಿ(KIMS) 50, ಸುಚಿರಾಯು 30, ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ 10 ಸೇರಿ ಒಟ್ಟೂ100 ಹಾಸಿಗೆ ಗುರುತು ಮಾಡಿದ್ದೇವೆ. ಹೊಸ ಪ್ರಕರಣ ಕಂಡುಬಂದರೆ ಚಿಕಿತ್ಸೆಗೆ ಇಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂದೆ ಇನ್ನಷ್ಟುಆಸ್ಪತ್ರೆಗಳಲ್ಲಿ ಒಮಿಕ್ರೋನ್‌ಗಾಗಿ ಹಾಸಿಗೆ ನಿಗದಿ ಮಾಡಲಿದ್ದೇವೆ. ತಾಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಕಾನ್ಸನ್‌ಟ್ರೆಟರ್ ಇರುವುದರಿಂದ ಏಕಾಏಕಿ ತೊಂದರೆ ಎದುರಾಗುವ ಯಾವುದೆ ಸಾಧ್ಯತೆ ಇಲ್ಲ ಎಂದು ವಿವರಿಸಿದರು.
ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಕಿಮ್ಸ್‌ನಲ್ಲಿ ವೇದಾಂತ ಕಂಪನಿ ಮೇಕ್‌ಶಿಫ್ಟ್ ಅಡಿ ಕಿಮ್ಸ್‌ನಲ್ಲಿ 100 ಹಾಸಿಗೆಯ ಆಸ್ಪತ್ರೆ ನಿರ್ಮಿಸಿದೆ. ಇದರಲ್ಲಿ 80 ಆಕ್ಸಿಜನ್ ಬೆಡ್, 20 ಐಸಿಯು ಬೆಡ್‌ಗಳಿವೆ. 20 ಐಸಿಯು ಬೆಡ್ ಪೈಕಿ 10 ವೆಂಟಿಲೇಟರ್ ಬೆಡ್‌ಗಳು ಸೇರಿವೆ. ಒಮಿಕ್ರೋನ್ ರೋಗಿಗಳು ಬಂದರೆ ಅವರಿಗೆ ಇಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಅದಕ್ಕೂ ಮೀರಿದರೆ 350 ಬೆಡ್‌ಗಳ ತಾಯಿ ಮಗು ಆಸ್ಪತ್ರೆಯಲ್ಲಿ ದಾಖಲಿಸಲಿದ್ದೇವೆ ಎಂದರು ಎಂದು ತಿಳಿಸಿದರು.
ಮೊದಲ ಎರಡು ಅಲೆಯಲ್ಲಿ ಕಿಮ್ಸ್ ಕೋವಿಡ್ ರೋಗಿಗಳಿಗೆ ಸಂಜೀವಿನಿಯಾಗಿ ಸೇವೆ ಕಲ್ಪಿಸಿದೆ. ಒಮಿಕ್ರೋನ್ ಎದುರಿಸಲು ಆಸ್ಪತ್ರೆ ಸಜ್ಜಾಗಿದೆ. ಅಗತ್ಯ ವೈದ್ಯಕೀಯ ಸಿಬ್ಬಂದಿ ಇದ್ದಾರೆ. ಕಿಮ್ಸ್‌ನಲ್ಲಿ ಯಾವುದೇ ಕೊರತೆ ಇಲ್ಲ ಎಂದರು.
ಆಕ್ಸಿಜನ್ ಎಷ್ಟಿದೆ?:
ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ 6 ಸಾವಿರ ಲೀ. ಸಾಮರ್ಥ್ಯದ ಕೇಂದ್ರೀಕೃತ ಆಕ್ಸಿಜನ್(Oxygen) (ಎಲ್‌ಎಂಒ) ಪೂರೈಕೆ ಘಟಕ ಇದೆ. ಕಿಮ್ಸ್‌ನಲ್ಲಿ 40ಟನ್ ಆಕ್ಸಿಜನ್ ಸಂಗ್ರಹ ಸಾಮರ್ಥ್ಯದ ಘಟಕವಿದೆ. ಜತೆಗೆ ಎಲ್‌ಆ್ಯಂಡ್‌ಟಿ ಕಂಪನಿಯಿಂದ ಧಾರವಾಡ ಸಿವಿಲ್ ಆಸ್ಪತ್ರೆ, ಕಿಮ್ಸ್‌ನಲ್ಲಿ 1ಟನ್ ಎಲ್‌ಎಂಒ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ. ನವಲಗುಂದ ತಾಲೂಕಲ್ಲಿ ದೇಶಪಾಂಡೆ ಫೌಂಡೇಶನ್ ಪ್ರತಿ ನಿಮಿಷಕ್ಕೆ 280 ಲೀ. ಆಕ್ಸಿಜನ್ ಉತ್ಪಾದಿಸುವ ಘಟಕ ಸ್ಥಾಪಿಸಿದೆ. ಜತೆಗೆ ಕುಂದಗೋಳ, ಕಲಘಟಗಿ ತಾಲೂಕಿನಲ್ಲೂ ಆಕ್ಸಿಜನ್ ಉತ್ಪಾದನಾ ಘಟಕಗಳಿವೆ.
ಸೌಲಭ್ಯ ಸಾಕೆ?:
ಮೊದಲ ಹಾಗೂ ಎರಡನೇ ಅಲೆಗಿಂತಲೂ ವೇಗವಾಗಿ ಒಮಿಕ್ರೋನ್ ಹರಡುವ ಕಾರಣ ಈಗಿರುವಷ್ಟುಸೌಲಭ್ಯ ಸಾಕೆ ಎಂಬ ಪ್ರಶ್ನೆಯೂ ಇದೆ. ಗಂಭೀರ ಸ್ವರೂಪದ್ದು ಎಂಬ ವರದಿಯೂ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡದೆ ಅಗತ್ಯ ಕ್ರಮ ವಹಿಸಲಿ ಎಂಬುದು ಜನತೆಯ ಒತ್ತಾಯ. ಹುಬ್ಬಳ್ಳಿ ಕಿಮ್ಸ್ ಮೇಲೆ ಜಿಲ್ಲೆ ಮಾತ್ರವಲ್ಲದೆ, ಹಾವೇರಿ, ಗದಗ, ಉತ್ತರಕನ್ನಡ, ಬಳ್ಳಾರಿ, ದಾವಣಗೆರೆ ಸೇರಿ 7-8 ಜಿಲ್ಲೆಗಳ ಜನ ಅವಲಂಬಿತರಾಗಿರುವ ಕಾರಣ ಈಗಲೆ ಎಚ್ಚೆತ್ತು ಕ್ರಮ ಕೈಗೊಳ್ಳಲಿ ಎಂಬ ಒತ್ತಾಯ ಕೇಳಿಬಂದಿದೆ.
Covid Vaccine: 'ಕೋವಿಡ್ ಇದ್ರೂ ಮಕ್ಕಳಿಗೆ ಸದ್ಯ ಲಸಿಕೆ ಬೇಡ'
ಕೋವಿಡ್ ಬೆಡ್ ಸೌಲಭ್ಯ ಎಷ್ಟಿದೆ?
ಆಕ್ಸಿಜನ್ ಬೆಡ್ 2500
ಐಸಿಯು 600+ ವೆಂಟಿಲೇಟರ್ಸ್ 185
ಜಿಲ್ಲೆಯಲ್ಲಿ ಏಕಕಾಲಕ್ಕೆ 4ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟುಸೌಲಭ್ಯ ಇದೆ. ಒಮಿಕ್ರೋನ್ ಎದುರಿಸಲು ಈಗಾಗಲೆ ಸುಮಾರು 100 ಹಾಸಿಗೆ ಗುರುತು ಮಾಡಿಕೊಂಡಿದ್ದೇವೆ. ಸಮಸ್ಯೆ ಎದುರಾಗದಂತೆ ನಿರ್ವಹಿಸಲಾಗುವುದು ಅಂತ ಧಾರವಾಡ ಡಿಎಚ್‌ಒ ಡಾ. ಯಶವಂತ ಮದೀನಕರ ತಿಳಿಸಿದ್ದಾರೆ.
ಕಿಮ್ಸ್‌ನಲ್ಲಿ ವೇದಾಂತದಿಂದ ನಿರ್ಮಿಸಿದ ಆಸ್ಪತ್ರೆಯಲ್ಲಿ ಒಮಿಕ್ರೋನ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು. ಆಕ್ಸಿಜನ್, ಐಸಿಯ, ವೆಂಟಿಲೇಟರ್ ಬೆಡ್ ಅಗತ್ಯದಷ್ಟಿದ್ದು, ಕೊರತೆ ಇಲ್ಲ ಅಂತ ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದ್ದಾರೆ.