ಸೋಮರಡ್ಡಿ ಅಳವಂಡಿ

ಕೊಪ್ಪಳ(ಜು.11):  ರಾಜ್ಯಾದ್ಯಂತ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಬಹುತೇಕ ಏರಿಯಾಗಳು ಸೀಲ್‌ಡೌನ್‌ ಆಗುತ್ತಿವೆ. ಜನರು ಮನೆಯಿಂದ ಆಚೆ ಬರುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಈ ಮಧ್ಯೆ ಸರ್ಕಾರ ಇಲಾಖಾ ಪರೀಕ್ಷಾ ದಿನಾಂಕ ನಿಗದಿ ಮಾಡಿ, ಪ್ರವೇಶ ಪತ್ರ ಕಳಿಸಿದ್ದು, ನೌಕರ ವಲಯದಲ್ಲಿ ಇದಕ್ಕೆ ವ್ಯಾಪಕ ಆಕ್ರೋಶ ಕೇಳಿಬಂದಿದೆ.

ರಾಜ್ಯಾದ್ಯಂತ ಸುಮಾರು 50 ಸಾವಿರಕ್ಕೂ ಅಧಿಕ ನೌಕರರು ಭಾಗವಹಿಸುವ ಇಲಾಖಾ ಪರೀಕ್ಷೆಯನ್ನು ಸರ್ಕಾರ ಜು. 17ರಂದು ನಿಗದಿ ಮಾಡಿದೆ. ಕಳದೆ ವರ್ಷ ಯಾವುದೇ ಸಂಕಷ್ಟ ಇಲ್ಲದಿದ್ದರೂ ಇಲಾಖಾ ಪರೀಕ್ಷೆ ನಡೆಸಿಯೇ ಇಲ್ಲ. ಆದರೆ, ಈ ವರ್ಷ ಅದ್ಯಾವ ತುರ್ತು ಅಗತ್ಯ ಮತ್ತು ಅನಿವಾರ್ಯತೆ ಇಲ್ಲದಿದ್ದರೂ ಪರೀಕ್ಷೆ ನಿಗದಿ ಮಾಡಿರುವುದು ನೌಕರರು ಮತ್ತು ನೌಕರರ ಕುಟುಂಬದವರ ಕೆಂಗಣ್ಣಿಗೆ ಗುರಿಯಾಗಿದೆ.

ಏಯ್.....ಡೆಡ್ಲಿ ಕೊರೋನಾ ನಿನೆಂಥಾ ಕ್ರೂರಿ....ಹುಟ್ಟಿದ ಮಗುನ ಮುಖ ನೋಡ್ಲಿಕ್ಕೆ ಬಿಡ್ಲಿಲ್ಲ

ಏನಿದು ಇಲಾಖಾ ಪರೀಕ್ಷೆ?

ಸರ್ಕಾರಿ ನೌಕರಿಗೆ ಸೇರಿದ ಮೇಲೆ ಇಲಾಖೆ ಪರೀಕ್ಷೆಯನ್ನು ಪಾಸಾಗಲೇಬೇಕು ಎನ್ನುವುದು ಕಡ್ಡಾಯ. ಹಾಗಂತ ಇದೇ ವರ್ಷವೇ ಆಗಬೇಕು ಎನ್ನುವ ಷರತ್ತು ಇಲ್ಲ. ಕೆಲವರು ನಾಲ್ಕಾರು ವರ್ಷವಾದರೂ ಇಲಾಖಾ ಪರೀಕ್ಷೆಯನ್ನು ಬರೆಯದವರು ಮತ್ತು ಪಾಸಾಗದವರು ಇದ್ದಾರೆ.

ನೇಮಕವಾದ ಇಲಾಖೆಯ ಮಾಹಿತಿಯ ಅರಿವು, ಸರ್ಕಾರದ ನಿಯಮಾವಳಿ, ಸಾರ್ವಜನಿಕ ಸೇವೆಗೆ ಇರುವ ನೌಕರರ ನಿಯಮಗಳು ಸೇರಿದಂತೆ ಮೊದಲಾದ ಸೇವಾ ವಲಯದ ಕುರಿತಾದ ಪರೀಕ್ಷೆ ಇದಾಗಿರುತ್ತದೆ. ಬಡ್ತಿ, ಪಿಪಿ ಡಿಕ್ಲರೇಶನ್‌ ಸೇರಿದಂತೆ ಮೊದಲಾದ ಕಾರಣಗಳಿಗಾಗಿ ಇಲಾಖಾ ಪರೀಕ್ಷೆಯನ್ನು ಪಾಸಾಗಬೇಕು. ಆದರೆ, ನೌಕರರಿಗೆ ಇದಕ್ಕಾಗಿ ಸಾಕಷ್ಟು ಕಾಲವಕಾಶವೂ ಇರುತ್ತದೆ. ಈ ಪರೀಕ್ಷೆ ಜಿಲ್ಲಾ ಕೇಂದ್ರದಲ್ಲಿಯೇ ಇರುವುದರಿಂದ ಜಿಲ್ಲೆಯ ವಿವಿಧ ಭಾಗಗಳ ಸರ್ಕಾರಿ ನೌಕರರು ಜಿಲ್ಲಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆಯಬೇಕು. ಗ್ರಾಮಾಂತರ, ತಾಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಸಂಚರಿಸುವ ಸಂದರ್ಭದಲ್ಲಿ ಕೊರೋನಾದ ಭಯ ಇದ್ದೇ ಇರುತ್ತದೆ.

ಅಗತ್ಯವೇನಿತ್ತು?

ನೌಕರರ ಸೇವೆ ಮುಂದುವರಿಸುವುದಕ್ಕೆ ಸೇರಿದಂತೆ ಸರ್ಕಾರದ ಯಾವುದೇ ನಿಯಮಗಳಿಗೆ ಇಲಾಖಾ ಪರೀಕ್ಷೆಯನ್ನು ಒಂದು ವರ್ಷ ಮುಂದೂಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಕಳೆದ ವರ್ಷ ಯಾವುದೇ ಕಾರಣವಿಲ್ಲದೆಯೇ ಮುಂದೂಡಲಾಗಿದೆ. ಹೀಗಿರುವಾಗ ಕೊರೋನಾ ಗಂಭೀರ ಸಮಸ್ಯೆಯ ನಡುವೆ ಇಲಾಖೆಯ ಪರೀಕ್ಷೆಯನ್ನು ನಡೆಸುವ ಔಚಿತ್ಯವಾದರೂ ಏನಿತ್ತು? ಸಮಸ್ಯೆ ಗಂಭೀರವಾಗಿದ್ದರೂ ನೌಕರರು ಸಂಘದ ಪದಾಧಿಕಾರಿಗಳು ಯಾಕೆ ಸರ್ಕಾರಕ್ಕೆ ಈ ಕುರಿತು ಮನವಿ ನೀಡುತ್ತಿಲ್ಲ? ತುರ್ತು ಅನಿವಾರ್ಯ ಇರುವುದನ್ನು ಮಾತ್ರ ನಡೆಸಬೇಕು ಎನ್ನುವ ಸರ್ಕಾರವೇ ಇಲಾಖಾ ಪರೀಕ್ಷೆಯನ್ನು ನಿಗದಿ ಮಾಡಿದ್ದು ಯಾಕೆ? ಇದೆಲ್ಲಕ್ಕೂ ಸರ್ಕಾರವೇ ಉತ್ತರ ನೀಡಬೇಕಾಗಿದೆ.

ಸುತ್ತ ಬೇಕು:

ಇಲಾಖಾ ಪರೀಕ್ಷೆಯನ್ನೇನೊ ಸರ್ಕಾರ ನಿಗದಿ ಮಾಡಿದೆ. ಕೆಲವರು ಬೇರೆ ಬೇರೆ ಕಡೆ ಬಂದಿದ್ದಾರೆ. ರಜೆಯ ಮೇಲೆ ಇದ್ದಾರೆ. ಕೆಲಸದ ಅತಿಯಾದ ಒತ್ತಡದಿಂದ ಅಭ್ಯಾಸ ಮಾಡಲು ಆಗಿಲ್ಲ. ಹೀಗಾಗಿ, ಮುಂದೂಡುವುದು ಉತ್ತಮ ಎನ್ನುವುದು ನೌಕರರ ವಲಯದಲ್ಲಿ ಕೇಳಿಬರುತ್ತಿರುವ ಮಾತು.

ಸರ್ಕಾರ ಈಗಾಗಲೇ ಇಲಾಖಾ ಪರೀಕ್ಷೆಯನ್ನು ಇದೇ 17ರಂದು ನಿಗದಿ ಮಾಡಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸಿ ಯಶಸ್ವಿಯಾಗಿರುವುದರಿಂದ ಇಲಾಖಾ ಪರೀಕ್ಷೆಯನ್ನು ನಡೆಸುವುದಕ್ಕೆ ಮುಂದಾಗಿರಬಹುದು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ ಅವರು ಹೇಳಿದ್ದಾರೆ.

ಕೊರೋನಾ ಸಂಕಷ್ಟದಲ್ಲಿ ನೌಕರರು ಅತಿಯಾದ ಕೆಲಸದ ಒತ್ತಡದಲ್ಲಿದ್ದಾರೆ. ಅಲ್ಲದೆ ಕೊರೋನಾ ಮಹಾಮಾರಿ ತೀವ್ರತೆಯನ್ನು ಪಡೆದಿದ್ದರಿಂದ ಆತಂಕ ಇದೆ. ಇಂಥ ಪರಿಸ್ಥಿತಿಯಲ್ಲಿ ತುರ್ತು ಅಗತ್ಯವೇ ಇಲ್ಲದ ಇಲಾಖಾ ಪರೀಕ್ಷೆಯನ್ನು ನಡೆಸುವುದಾದರೂ ಯಾಕೆ? ಎಂದು ಸರ್ಕಾರಿ ನೌಕರರೊಬ್ಬರು ತಿಳಿಸಿದ್ದಾರೆ.