ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದೇ ಬರುತ್ತದೆ. ರಾಜ್ಯದ ಎಲ್ಲಾ ಜಾತಿಯ ಜನರ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಬದ್ಧವಾದ ಮೀಸಲಾತಿ ಹಂಚಿಕೆ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದೇ ಬರುತ್ತದೆ. ರಾಜ್ಯದ ಎಲ್ಲಾ ಜಾತಿಯ ಜನರ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಬದ್ಧವಾದ ಮೀಸಲಾತಿ ಹಂಚಿಕೆ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಿತಿಯು ಪುರಭವನದ ಡಾ.ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನ ಬಚಾವೋ ದೇಶ್‌ ಬಚಾವೋ ಧರಣಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತವನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಸಂವಿಧಾನ ತಿದ್ದುಪಡಿ ಮಾಡಿ ನ್ಯಾಯಬದ್ಧವಾದ ಮೀಸಲು ಹಂಚಿಕೆ ಮಾಡುತ್ತೇವೆ ಎಂದು ತಿಳಿಸಿದರು.

ಯೋಜನೆಗಳಿಗೆ ಹಣ ನೀಡದೆ ಪ್ರಧಾನಿ ಮೋದಿ ದ್ರೋಹ: ಸಿದ್ದರಾಮಯ್ಯ

ಸಂವಿಧಾನ ವಿರೋಧಿಸಿದವರು ಮತ್ತು ಮಂಡಲ್‌ ಆಯೋಗ ವಿರೋಧಿಸಿ ರಥಯಾತ್ರೆ ಮಾಡಿದವರು ಮನುವಾದಿಗಳು, ಬಿಜೆಪಿಗರು. ಈಗ ಮೀಸಲು ಹಂಚಿಕೆಯಲ್ಲೂ ಗೊಂದಲ ಮಾಡಿ ಜನರಿಗೆ ಮಕ್ಮಲ್‌ ಟೋಪಿ ಹಾಕಿದ್ದಾರೆ. ಮುಸ್ಲಿಂ ಸಮುದಾಯಕ್ಕೆ 28 ವರ್ಷಗಳಿಂದ ಜಾರಿಯಲ್ಲಿದ್ದ ಮೀಸಲಾತಿಯನ್ನು ಕಿತ್ತು ಒಕ್ಕಲಿಗ, ಪಂಚಮಸಾಲಿಗೆ ಕೊಡಲಾಗಿದೆ. ಮುಸ್ಲಿಂರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಟ್ಟಿದ್ದು ಸಂವಿಧಾನ ಬಾಹಿರ ಎನ್ನುವ ಬಿಜೆಪಿ ನಾಯಕರು ಇಡಬ್ಲ್ಯೂಎಸ್‌ಗೆ ಯಾಕೇ ಸೇರಿಸಿದರಿ? ಅವರ ನಡೆಯಲ್ಲಿ ವೈರುಧ್ಯತೆ ಇದೆ. ದ್ವೇಷದ ರಾಜಕಾರಣ ಮಾಡಲು ಮುಸ್ಲಿಂರಿಂದ ಮೀಸಲಾತಿ ಕಸಿದಿದ್ದಾರೆ ಎಂದು ಅವರು ಕಿಡಿಕಾರಿದರು.

ಎಸ್ಸಿ, ಎಸ್ಟಿಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕೊಡಬೇಕೆಂದು ತೀರ್ಮಾನಿಸಿ ನ್ಯಾ. ನಾಗಮೋಹನ್‌ ದಾಸ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು. ಅವರ ವರದಿ ಸಲ್ಲಿಸುವ ಮುನ್ನವೇ ಸಮ್ಮಿಶ್ರ ಸರ್ಕಾರ ಪತನಗೊಂಡಿತು. ಸಮಿತಿಯು ಎಸ್ಸಿಗೆ ಶೇ.17, ಎಸ್ಟಿಗೆ ಶೇ.7 ಮೀಸಲಾತಿ ಕೊಡುವಂತೆ ಸಲಹೆ ನೀಡಿತು. ಆದರೆ, ಬಿಜೆಪಿ ಸರ್ಕಾರ ಮೂರೂವರೆ ವರ್ಷಗಳ ಕಾಲ ವರದಿಯನ್ನು ಕೊಳೆಯುಂತೆ ಮಾಡಿತು. ವಾಲ್ಮೀಕಿ ಸ್ವಾಮೀಜಿ 257 ದಿನಗಳ ಧರಣಿ ಮಾಡಿದರು. ಅಧಿವೇಶನದಲ್ಲಿ ನಿರಂತರವಾಗಿ ಒತ್ತಾಯ ಮಾಡಲಾಯಿತು. ಆಗ ಜಪ್ಪಯ್ಯ ಅಂದ್ರೂ ಬಿಜೆಪಿ ಸರ್ಕಾರ ಒಪ್ಪಲಿಲ್ಲ. ಈಗ ಚುನಾವಣೆ ಬಂದಿತೆಂದು ಮೀಸಲಾತಿ ಹಂಚಿಕೆ ಮಾಡಿದರು. ಇದಾಗಿ 4 ತಿಂಗಳು ಕಳೆದರೂ ಸಂವಿಧಾನ ತಿದ್ದುಪಡಿ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಿಲ್ಲ. ಮಾ.23 ರಂದು ಮುಖ್ಯ ಕಾರ್ಯದರ್ಶಿ ಮೂಲಕ ಪ್ರಾಸ್ತಾಪ ಕಳುಹಿಸಿದ್ದಾರೆ ಎಂದು ಅವರು ತಿಳಿಸಿದರು.

ಸುಪ್ರೀಂಕೋರ್ಚ್‌ ಮೀಸಲಾತಿ ಪ್ರಮಾಣ ಶೇ.50 ಹೆಚ್ಚಾಗಬಾರದೆಂದು ತೀರ್ಪು ನೀಡಿದೆ. ತಮಿಳುನಾಡಿನಲ್ಲಿ ಜಯಲಲಿತಾ ಸಂವಿಧಾನಕ್ಕೆ ತಿದ್ದುಪಡಿ ತಂದು ಶೇ.69 ಮೀಸಲಾತಿ ನೀಡಿದ್ದಾರೆ. ಈಗ ರಾಜ್ಯ ಸರ್ಕಾರವು ಮೀಸಲಾತಿ ಹೆಚ್ಚಿಸಿದೆ. ಇದು ಅನುಷ್ಠಾನಕ್ಕೆ ಬರಬೇಕಾದರೆ ಸಂವಿಧಾನ ತಿದ್ದುಪಡಿಯಾಗಬೇಕು. ಆದರೆ, ಸಂವಿಧಾನ ತಿದ್ದುಪಡಿ ಮಾಡುವಂತೆ ಹೇಳಿಲ್ಲ ಎಂದರು.

ಚುನಾವಣಾ ಕಸರತ್ತಿನ ನಡುವೆ ಆರ್‌ಸಿಬಿ ಪಂದ್ಯ ವೀಕ್ಷಿಸಿದ ಸಿದ್ದರಾಮಯ್ಯ!

ಇದು ಬಿಜೆಪಿಯವರ ದುರುದ್ದೇಶನಾ? ಸದುದ್ದೇಶನಾ? ಎಸ್ಸಿ, ಎಸ್ಟಿಗೆ ಮೀಸಲಾತಿ ಹೆಚ್ಚು ಮಾಡಿದ್ದನ್ನು ನಂಬಬೇಕಾ? ಡೋಂಗಿಗಳು, ಮಕ್ಮಲ್‌ ಟೋಪಿ ಹಾಕುತ್ತಿದ್ದಾರೆ. ಕ್ರಾಂತಿಕಾರದ ಕಾನೂನು ಮಾಡಿದ್ದೇವೆ ಎಂದು ಬೊಮ್ಮಾಯಿ ಬಳ್ಳಾರಿಯಲ್ಲಿ ದೊಡ್ಡ ಸಮಾವೇಶ ಮಾಡಿದ್ದಾರೆ. ಶ್ರೀರಾಮುಲು ಪೆದ್ದನಂತೆ ಭಾಷಣ ಮಾಡಿದ್ದಾನೆ ಎಂದು ಅವರು ವಾಗ್ದಾಳಿ ನಡೆಸಿದರು.

ಪಂಚಮಸಾಲಿ ಸಮುದಾಯದವರು 2ಎಗೆ ಸೇರಿಸುವಂತೆ ಒತ್ತಾಯಿಸಿದರು. ಒಕ್ಕಲಿಗರು ಶೇ.12 ಮೀಸಲಾತಿ ಕೊಡುವಂತೆ ಆಗ್ರಹಿಸಿದರು. ಆದರೆ, ಮುಸ್ಲಿಂರ ಮೀಸಲಾತಿ ಕಿತ್ತು ಹಂಚಿಕೆ ಮಾಡಿದ್ದಾರೆ. ಒಂದು ಸಮುದಾಯ ಮತ್ತೊಂದು ಸಮುದಾಯ ಕಿತ್ತಾಡಲೆಂದು ಹೀಗೆ ಮಾಡಿದ್ದಾರೆ. ಚುನಾವಣೆ ಹತ್ತಿರ ಬಂದಿದೆಯಂದು ಮೂಗಿಗೆ ತುಪ್ಪ ಸವರಿದ್ದಾರೆ. ಮೀಸಲು ಹಂಚಿಕೆಯಲ್ಲಿ ಗೊಂದಲ ಸೃಷ್ಟಿಸಿ ಜನರನ್ನು ಬಕ್ರಾ ಮಾಡಿದ್ದಾರೆ. ಅವರಿಗೆ ಮಾನ ಮರ್ಯಾದೆ ಇಲ್ಲ ಎಂದು ಹರಿಹಾಯ್ದರು.

ಸಿದ್ದರಾಮಯ್ಯರನ್ನ ಮೂಲೆ ಗುಂಪು ಮಾಡಲು ಕಾಂಗ್ರೆಸ್ ನಲ್ಲಿ ನಡೆದಿದ್ಯಾ ಹುನ್ನಾರ?

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕಾರ್ಯದರ್ಶಿ ರೊಜಿ ಜಾನ್‌, ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ, ಶಾಸಕರಾದ ಜಮೀರ್‌ ಅಹಮದ್‌ ಖಾನ್‌, ತನ್ವೀರ್‌ ಸೇಠ್‌, ಡಾ. ಯತೀಂದ್ರ ಸಿದ್ದರಾಮಯ್ಯ, ಡಾ.ಡಿ. ತಿಮ್ಮಯ್ಯ, ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ, ನಂಜನಗೂಡು ಕ್ಷೇತ್ರದ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ್‌, ಮಾಜಿ ಶಾಸಕರಾದ ವಾಸು, ಕಳಲೆ ಕೇಶವಮೂರ್ತಿ, ಎಂ.ಕೆ. ಸೋಮಶೇಖರ್‌, ಎ.ಆರ್‌. ಕೃಷ್ಣಮೂರ್ತಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌, ನಗರಾಧÜ್ಯಕ್ಷ ಆರ್‌. ಮೂರ್ತಿ, ಕೆಪಿಸಿಸಿ ಕಾರ್ಯದರ್ಶಿ ಚಂದ್ರಮೌಳಿ, ವಕ್ತಾರ ಎಂ. ಲಕ್ಷ್ಮಣ, ಮಾಜಿ ಮೇಯರ್‌ಗಳಾದ ಪುರುಷೋತ್ತಮ್‌, ಪುಷ್ಪಲತಾ ಚಿಕ್ಕಣ್ಣ, ಪಾಲಿಕೆ ಸದಸ್ಯರಾದ ಜೆ. ಗೋಪಿ, ಅಸ್ರತ್‌ವುಲ್ಲಾ ಖಾನ್‌, ಮುಖಂಡರಾದ ಬೀರಿಹುಂಡಿ ಬಸವಣ್ಣ, ಮಾವಿನಹಳ್ಳಿ ಸಿದ್ದೇಗೌಡ, ಸೂರಜ್‌ ಹೆಗಡೆ, ಸುಧೀಂದ್ರ, ಡಿ. ರವಿಶಂಕರ್‌, ಗುರುಪಾದಸ್ವಾಮಿ, ಕೆ. ಮರಿಗೌಡ, ಬಿ.ಎಂ. ರಾಮು, ಶಿವಪ್ರಸಾದ್‌, ಲತಾ ಸಿದ್ದಶೆಟ್ಟಿ, ವೀಣಾ ಮೊದಲಾದವರು ಇದ್ದರು.

ಡಬಲ್‌ ಎಂಜಿನ್‌ ಸರ್ಕಾರದಿಂದ ಡಬಲ್‌ ದ್ರೋಹ- ಸುರ್ಜೇವಾಲಾ

ಡಬಲ್‌ ಎಂಜಿನ್‌ ಸರ್ಕಾರ ರಾಜ್ಯದ ಜನತೆಗೆ ಡಬಲ್‌ ದ್ರೋಹ ಬಗೆದಿದೆ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಟೀಕಿಸಿದರು.

ಬಿಜೆಪಿ ಡಿಎನ್‌ಎದಲ್ಲಿ ಸಂವಿಧಾನ ವಿರೋಧಿ, ಮೀಸಲಾತಿ ವಿರೋಧಿ, ಬಡವರು, ಹಿಂದುಳಿದವರ ವಿರೋಧ ಇದೆ. ದಲಿತರ ನ್ಯಾಯ ಸಮ್ಮತ ಬೇಡಿಕೆ ಈಡೇರಿಸದೇ ಮುಗಿಸುವ ಪ್ರಯತ್ನ ಮಾಡುತ್ತಿದೆ. ಮೀಸಲಾತಿ ಹಂಚಿಕೆಯಲ್ಲಿ ಒಕ್ಕಲಿಗ ಮತ್ತು ಪಂಚಮಸಾಲಿ ಸಮಾಜಗಳಿಗೆ ನೇರವಾಗಿ ಅಪಮಾನ ಮಾಡಿದೆ ಎಂದು ಅವರು ದೂರಿದರು.

ಚುನಾವಣೆ ಸಮೀಪಿಸಿದಾಗ ಮೀಸಲಾತಿ ಹೆಚ್ಚಿಸಿತು. ಆದರೆ, ಕೇಂದ್ರಕ್ಕೆ ಪ್ರಸ್ತಾಪ ಕಳುಹಿಸಲು ಮರೆಯಿತು. ದಲಿತರ ಮೀಸಲು ಹೆಚ್ಚಳ ಕ್ರಮಬದ್ಧವಾಗಿಲ್ಲ. ಬಿಜೆಪಿ ಸರ್ಕಾರದ ಮೀಸಲು ಹಂಚಿಕೆಯೂ ನ್ಯಾಯಾಲಯದ ಮೆಟ್ಟಿಲು ಏರಿ, ಏನೂ ಸಿಗದಂತೆ ಮಾಡುವುದಾಗಿದೆ. ಪದೇ ಪದೇ ಸುಳ್ಳು ಹೇಳಿ ಸಮುದಾಯಗಳ ನಡುವೆ ಜಗಳಕ್ಕೆ ನಿಲ್ಲಿಸಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ನಾಯಕರ ನಡೆ, ನಿಲುವು, ನಿರ್ಧಾರಗಳು ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಮೀಸಲಾತಿ ಜಿಲೇಬಿಯಂತೆ ಹಂಚಿದ್ದಾರೆ. ದಲಿತರಲ್ಲೂ ಗೊಂದಲ ಸೃಷ್ಟಿಸಿದ್ದಾರೆ. ಸುಳ್ಳಿನ ಸುಳ್ಳು ಹೇಳಿ ಸತ್ಯ ಮಾಡಲು ಹೊರಟಿದ್ದಾರೆ.

- ಡಾ.ಎಚ್‌.ಸಿ. ಮಹದೇವಪ್ಪ, ಮಾಜಿ ಸಚಿವರು

ವೀರಪ್ಪ ಮೊಯ್ಲಿ ಸರ್ಕಾರ ಶೇ.6 ಮೀಸಲಾತಿ ಕೊಡುವಂತೆ ಶಿಫಾರಸು ಮಾಡಿತ್ತು. ತದನಂತರ ಜೆಡಿಎಸ್‌ ಸರ್ಕಾರದಲ್ಲಿ ಎಚ್‌.ಡಿ. ದೇವೇಗೌಡರು ಶೇ.4 ಮೀಸಲಾತಿ ಕೊಟ್ಟು, ಶೇ.2 ಕಡಿತಗೊಳಿಸಿದರು. ಈಗ ಬಿಜೆಪಿ ಸರ್ಕಾರ ಇದ್ದ ಮೀಸಲಾತಿ ಕಿತ್ತುಕೊಂಡಿದೆ. ಮೀಸಲಾತಿ ಹಂಚಿಕೆಯಲ್ಲಿ ಬಿಜೆಪಿ, ಜೆಡಿಎಸ್‌ ಪಕ್ಷಗಳು ಮುಸ್ಲಿಂರಿಗೆ ಅನ್ಯಾಯ ಮಾಡಿವೆ. ನ್ಯಾಯಾಲಯದ ಮೇಲೆ ನಂಬಿಕೆ ಇದ್ದು, ಹೋರಾಟ ಮಾಡುತ್ತೇವೆ.

- ಜಮೀರ್‌ ಅಹಮದ್‌ ಖಾನ್‌, ಶಾಸಕರು