Asianet Suvarna News Asianet Suvarna News

ಕ್ವಿಂಟಲ್‌ ಕೊಬ್ಬರಿಗೆ 25000 ರು. ನೀಡಿ: ಕೋಡಿಹಳ್ಳಿ

ಕ್ವಿಂಟಲ್‌ ಕೊಬ್ಬರಿಗೆ 25 ಸಾವಿರ ರು. ಗಳ ಬೆಂಬಲ ಬೆಲೆಯನ್ನು ಸರ್ಕಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಲಾಯಿತು

Demands For 25000 per quintal of Coconut : Kodihalli snr
Author
First Published Aug 12, 2023, 7:39 AM IST | Last Updated Aug 12, 2023, 7:39 AM IST

  ಶಿರಾ :  ರೈತರು ಬೆಳೆದ ಟೊಮೆಟೋ ಬೆಲೆ ಕಳೆದ ಹದಿನೈದು ದಿನಗಳಿಂದ ಹೆಚ್ಚಾಗಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೇಪಾಳ, ಮಯನ್ಮಾರ್‌ ದೇಶಗಳಿಂದ ಆಮದು ಮಾಡಿಕೊಳ್ಳಲು ಮುಂದಾಗಿದೆ. ಎಲ್ಲಾ ಸರ್ಕಾರಗಳು ಕೇವಲ ರೈತರ ಉತ್ಪನ್ನಗಳಿಗೆ ಮಾತ್ರ ಕಡಿಮೆ ಬೆಲೆ ಇರಬೇಕು ಎಂದು ಏಕೆ ಬಯಸುತ್ತೀರಿ. ರೈತರು ಬೆಳೆದ ಬೆಳೆಗಳಿಗೆ ಪರ್ಯಾಯವಾಗಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ನಿಮಗೆ ಜವಾಬ್ದಾರಿ ಇದೆಯೇ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಪ್ರಶ್ನಿಸಿದರು.

ಕ್ವಿಂಟಲ್‌ ಕೊಬ್ಬರಿಗೆ 25 ಸಾವಿರ ರು. ಗಳ ಬೆಂಬಲ ಬೆಲೆಯನ್ನು ಸರ್ಕಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು. ದೇಶದಲ್ಲಿ ಸಿಮೆಂಟ್‌ ಬೆಲೆ, ಕಬ್ಬಿಣದ ಬೆಲೆ ಹೆಚ್ಚಾಗಿದೆ. ಅವುಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಂಡು ಕಡಿಮೆ ಬೆಲೆಗೆ ನೀಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್‌ ಬೆಲೆಯನ್ನು ಎಲ್ಲಾ ಟ್ಯಾಕ್ಸ್‌ ತೆಗೆದು ಕಡಿಮೆ ಮಾಡಿ ಎಂದರು.

ತಿಪಟೂರು ಕೃಷಿ ಮಾರುಕಟ್ಟೆಯಲ್ಲಿ ಸುಮಾರು 18000 ರು. ಗಳಿಗೆ ಮಾರಾಟವಾಗುತ್ತಿದ್ದ ಕ್ವಿಂಟಲ್‌ ಕೊಬ್ಬರಿ ಕಳೆದ 8 ತಿಂಗಳಿಂದ ಬೆಲೆ ಕುಸಿಯುತ್ತ 8600 ರು.ಗಳಿಗೆ ತಲುಪಿದೆ. ಆದ್ದರಿಂದ ಸರ್ಕಾರ ಕೊಬ್ಬರಿಗೆ ಕ್ವಿಂಟಲ್‌ಗೆ 25000 ರು.ಗಳಿಗೆ ಹೆಚ್ಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಧನಂಜಯರಾಧ್ಯ ಮಾತನಾಡಿ, 2016ರಲ್ಲಿ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಪಾದಯಾತ್ರೆ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಅಂದು ಇದೇ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿತ್ತು. ಅಂದು ಭರವಸೆಯನ್ನು ಕೊಟ್ಟು ಸುಳ್ಳನ್ನು ಹೇಳಿದರು. ಉತ್ತಮ ಬೆಂಬಲ ಬೆಲೆ ಕೊಡಿಸುತ್ತೇವೆ. ಪಾದಯಾತ್ರೆಯನ್ನು ವಾಪಸ್ಸು ಪಡೆಯಿರಿ ಎಂದು ಹೇಳಿದರು. ಅಂದು ಸಹ ಟಿ.ಬಿ.ಜಯಚಂದ್ರ ಅವರು ಸಚಿವರಾಗಿದ್ದರು. ಅವರ ಮಾತುಗಳನ್ನು ಕೇಳಿ ನಾವು ವಾಪಸು ಪಡೆದಿದ್ದವು. ಪ್ರಸ್ತುತ ಸಂದರ್ಭದಲ್ಲೂ ಕೊಬ್ಬರಿ ಬೆಲೆ ಕುಸಿದಿದೆ. ಈಗ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ ಅವರು ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕೊಬ್ಬರಿಗೆ 25000 ರು. ಗಳ ಬೆಂಬಲ ಬೆಲೆಯನ್ನು ಕೊಡಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾ ಮೆರವಣಿಗೆ:

ರೈತ ಸಂಘದಿಂದ ನಗರದ ಅಂಬೇಡ್ಕರ್‌ ಸರ್ಕಲ್‌ನಿಂದ ಮುಖ್ಯ ರಸ್ತೆ, ಮೂಲಕ ಖಾಸಗಿ ಬಸ್‌ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ತಲುಪಿ ಗ್ರೇಡ್‌-2 ತಹಸೀಲ್ದಾರ್‌ ಮಂಜುನಾಥ್‌ ಅವರಿಗೆ ಮನವಿ ಸಲ್ಲಿಸಿದರು. ಕೊಬ್ಬರಿಗೆ ಬೆಂಬಲ ಬೆಲೆಗೆ ಒತ್ತಾಯಿಸಿ ಹಮ್ಮಿಕೊಂಡಿದ್ದ ಶಿರಾ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್‌, ಜಿಲ್ಲಾಧ್ಯಕ್ಷ ಆನಂದ್‌ ಪಟೇಲ್‌, ತಾಲೂಕು ರೈತ ಸಂಘದ ಅಧ್ಯಕ್ಷ ಸಣ್ಣದ್ಯಾಮೇಗೌಡ, ಕಾರ್ಯಾಧ್ಯಕ್ಷ ಜುಂಜಣ್ಣ, ಚಿಕ್ಕನಾಯಕನಹಳ್ಳಿ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನಯ್ಯ, ಕುದುರೆಕುಂಟೆ ಲಕ್ಕಣ್ಣ, ಕೃಷ್ಣಪ್ಪ, ಪರಮೇಶ್‌, ಬಂದಕುಂಟೆ ಪ್ರಭುದೇವ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios