ಯಾದಗಿರಿ: ದೋರನಹಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ, ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಸಿಎಂಗೆ ಮನವಿ
ಮೇಲ್ನೋಟಕ್ಕೆ ಪೊಲೀಸರ ನಡೆ ತಪ್ಪು ಎಂಬುದು ಕಣ್ಣಿಗೆ ಕಾಣುವಂತಿದೆ. ಅಲ್ಲದೇ ಪ್ರಭಾವಿಗಳ ಪರ ವಕಾಲತ್ತು ಮಾಡಿದಂತೆ ಇದೆ. ಇದು ಖಂಡನೀಯ ಮತ್ತು ಅಮಾನುಷವಾಗಿರುತ್ತದೆ. ಕಾನೂನು ವಿರುದ್ಧವಾಗಿರುತ್ತದೆ. ಆದ್ದರಿಂದ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದರು.
ಯಾದಗಿರಿ(ಡಿ.21): ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಸಂಭವಿಸಿದ ಸಿಲಿಂಡರ್ ಸ್ಫೋಟ ಕುರಿತು ದಾಖಲಾದ ಜಿಲ್ಲೆಯ ತಪರ ಪೊಲೀಸ್ ಠಾಣೆಯ ಕೆ.ನಂ: 30/2022 ದೂರಿನ ಪ್ರಕರಣವನ್ನು ಮರು ತನಿಖೆ (ನ್ಯಾಯಾಂಗ) ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿತು.
ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಭೇಟಿ ಮಾಡಿ ಸಮಸ್ಯೆ ವಿವರಿಸಿದ ರೈತ ಸೇನೆ ರಾಜ್ಯ ಉಪಾಧ್ಯಕ್ಷ ಲಕ್ಷ್ಮೇಕಾಂತ ಎ. ಪಾಟೀಲ್ ಮದ್ದರಕಿ, ಒಂದೇ ರೈತ ಕುಟುಂಬದ 15 ಜನ ರೈತರು ದಿ. 25-02-2022ರಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ತಾಲೂಕಿನ ದೋರನಹಳ್ಳಿ ಕ್ಯಾಂಪಿನಲ್ಲಿ ಸೀಮಂತ ಸಮಾರಂಭದಲ್ಲಿ ಇಂಡಿಯನ್ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮೃತಪಟ್ಟಿರುತ್ತಾರೆ. ಅದರಲ್ಲಿ 10 ಜನರಿಗೆ ಗಂಭೀರ ಗಾಯಗಳಾಗಿರುತ್ತವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹೇಬಗೌಡ ತಂದೆ ಬಸವಂತ್ರಾಯಗೌಡ ಇವರು ಸದರಿ ಇಂದಿನ ಗ್ಯಾಸ್ ಕಂಪನಿ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಲ್ಲಿಸಿದ ದೂರಿನನ್ವಯ ಪೊಲೀಸ್ ಠಾಣೆಯವರು ಶಹಾಪುರ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ಎಫ್‌ಐಆರ್ ಅನ್ನು ಸಲ್ಲಿಸಿರುತ್ತಾರೆ.
BIG3: ಸುರಪುರ ಸರ್ಕಾರಿ ಆಸ್ಪತ್ರೆಯ ಮೇಲೆ ಟವರ್: ಗರ್ಭಿಣಿಯರಿಗೆ ಶುರುವಾಗಿದೆ ಗಂಡಾಂತರ
ಆದರೆ, ತನಿಖಾ ಸಮಯದಲ್ಲಿ ಪೊಲೀಸರು ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ತನಿಖೆ ಮಾಡದೇ ಆರೋಪಿ: 1 ಮತ್ತು 2 ಹಾಗೂ ಡಿವಿಜನಲ್ ಮ್ಯಾನೇಜರ್ ಇಂಧನ ಗ್ಯಾಸ್ ಕಂಪನಿ ಬೆಳಗಾವಿಯ ಕೈಗೊಂಬೆಯಂತೆ ವರ್ತಿಸಿ, ಮೃತ ಕುಟುಂಬದ ವಾರಸುದಾರರಿಗೆ ಮತ್ತು ಗಾಯಾಳುಗಳಿಗೆ ಪರಿಹಾರದಿಂದ ತಪ್ಪಿಸಿಕೊಳ್ಳಲು ಸಿಲಿಂಡರ್ ಕಂಪನಿಯವರು ಹೇಳಿದಂತೆ ಕೇಳಿ ದೂರು ನೀಡಿದ ಸಾಹೇಬಗೌಡ ತಂದೆ ಬಸವಂತ್ರಾಯಗೌಡರವರ ವಿರುದ್ಧ ದೋಷರೂಪ ಪತ್ರವನ್ನು ಶಹಾಪುರ ನ್ಯಾಯಾಲಯದಲ್ಲಿ ಸಲ್ಲಿಸಿ ಘೋರ ಅಪಚಾರ ಮಾಡಿರುತ್ತಾರೆ ಆರೋಪಿಸಿದರು.
ಅದರಿಂದ ಮೇಲ್ನೋಟಕ್ಕೆ ಪೊಲೀಸರ ನಡೆ ತಪ್ಪು ಎಂಬುದು ಕಣ್ಣಿಗೆ ಕಾಣುವಂತಿದೆ. ಅಲ್ಲದೇ ಪ್ರಭಾವಿಗಳ ಪರ ವಕಾಲತ್ತು ಮಾಡಿದಂತೆ ಇದೆ. ಇದು ಖಂಡನೀಯ ಮತ್ತು ಅಮಾನುಷವಾಗಿರುತ್ತದೆ. ಕಾನೂನು ವಿರುದ್ಧವಾಗಿರುತ್ತದೆ. ಆದ್ದರಿಂದ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಗೃಹ ಸಚಿವರನ್ನು ಭೇಟಿ ಮಾಡಿ, ಇದೇ ಪ್ರಕರಣದ ಕುರಿತು ಮನವಿ ಪತ್ರವನ್ನು ಪ್ರತ್ಯೇಕವಾಗಿ ಸಲ್ಲಿಸಿ, ನ್ಯಾಯಾಂಗ ತನಿಖೆಗೆ ಸೂಚಿಸುವಂತೆ ಮನವಿ ಮಾಡಿದರು. ತಕ್ಷಣ ಸ್ಪಂದಿಸಿದ ಗೃಹ ಸಚಿವರು, ದೂರವಾಣಿ ಕರೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಎಂದು ಎಂದು ಲಕ್ಷ್ಮೇಕಾಂತ ಮದ್ದರಕಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜೇವರ್ಗಿ ಮಾಜಿ ಶಾಸಕ ದೊಡ್ಡಪ್ಪಗೌಡ ನರಿಬೋಳ, ಜಿಲ್ಲಾಧ್ಯಕ್ಷ ಆಣವೀರ ಹೆಬ್ಬಾಳ, ವಿದ್ಯಾರ್ಥಿ ಘಟಕ ಜಿಲಾಧ್ಯಕ್ಷ ಹಣಮಂತ ಇದ್ದರು.