Asianet Suvarna News Asianet Suvarna News

ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಗೆ ಮನವಿ

ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ, ತೆಂಗು ಮತ್ತು ಅದರ ಉಪ ಉತ್ಪನ್ನಗಳ ಮಾರುಕಟ್ಟೆಗೆ ಪ್ರೋತ್ಸಾಹ, ಸರ್ಕಾರಿ ಹಾಸ್ಟೆಲ್, ಬಿಸಿಯೂಟದಲ್ಲಿ ಕೊಬ್ಬರಿ ಎಣ್ಣೆ ಬಳಕೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ವತಿಯಿಂದ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

Demand to Scientific Support Price for Coconut  snr
Author
First Published Nov 22, 2023, 8:21 AM IST

  ತುಮಕೂರು :  ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ, ತೆಂಗು ಮತ್ತು ಅದರ ಉಪ ಉತ್ಪನ್ನಗಳ ಮಾರುಕಟ್ಟೆಗೆ ಪ್ರೋತ್ಸಾಹ, ಸರ್ಕಾರಿ ಹಾಸ್ಟೆಲ್, ಬಿಸಿಯೂಟದಲ್ಲಿ ಕೊಬ್ಬರಿ ಎಣ್ಣೆ ಬಳಕೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಭಾರತೀಯ ಕಿಸಾನ್ ಸಂಘ-ಕರ್ನಾಟಕ ಪ್ರದೇಶ ವತಿಯಿಂದ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಹೊರಟ ಭಾರತೀಯ ಕಿಸಾನ್ ಸಂಘದ ಪಾದಯಾತ್ರೆ, ಬಿ.ಎಚ್. ರಸ್ತೆ ಮೂಲಕ ಟೌನ್‌ಹಾಲ್ ತಲುಪಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿದರು. ನಂತರ ಅಶೋಕ ರಸ್ತೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಬೆಳ್ಳಾವೆ ಶ್ರೀಕಾರದೇಶ್ವರ ಮಠದ ಶ್ರೀಕಾರದ ವೀರಬಸವ ಶ್ರೀಗಳು, ಕೊಬ್ಬರಿ ತುಮಕೂರು ಸೇರಿದಂತೆ ಮಧ್ಯ ಕರ್ನಾಟಕದ 12 ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆ, ಕಳೆದ ವರ್ಷ ಕ್ವಿಂಟಲ್‌ಗೆ 18 ಸಾವಿರ ಇದ್ದ ಬೆಲೆ, ಈ ವರ್ಷ 8 ಸಾವಿರಕ್ಕೆ ಕುಸಿದಿದೆ. ಸರ್ಕಾರ ನೀಡುತ್ತಿರುವ 11,730 ರು. ಬೆಂಬಲ ಬೆಲೆ ಯಾವುದಕ್ಕೂ ಸಾಲದಾಗಿದೆ. ಕೊಬ್ಬರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡಲೇ ಕೊಬ್ಬರಿ ಬೆಲೆ ಹೆಚ್ಚಿಸಬೇಕು. ಸರ್ಕಾರ ನಡೆಸುವ ಹಾಸ್ಟೆಲ್‌ಗಳು, ಮಧ್ಯಾಹ್ನದ ಬಿಸಿಯೂಟದಲ್ಲಿ ಕೊಬ್ಬರಿ ಎಣ್ಣೆಯನ್ನು ಬಳಸುವ ಮೂಲಕ ಕೊಬ್ಬರಿಗೆ ಪ್ರೋತ್ಸಾಹ ನೀಡಬೇಕು. ಅಡುಗೆಗೆ ಕಲಬೆರಕೆ ಎಣ್ಣೆ ಬಳಸುವ ಬದಲು ನೈಸರ್ಗಿಕ ವಿಧಾನದಿಂದ ತೆಗೆದ ಕೊಬ್ಬರಿ ಎಣ್ಣೆ ಬಳಕೆ ಮಾಡುವುದರಿಂದ ರೈತರಿಗೂ ಉತ್ತಮ ಬೆಲೆ ಸಿಗಲಿದೆ. ಜನರನ್ನು ಸಹ ರೋಗದಿಂದ ಮುಕ್ತಗೊಳಿಸಬಹುದು. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕೆಂದು ಒತ್ತಾಯಿಸಿದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಸರ್ಕಾರವೇ ನಿಗದಿಪಡಿಸಿದ ಕೃಷಿ ಬೆಲೆ ಆಯೋಗ ಕ್ವಿಂಟಲ್ ಕೊಬ್ಬರಿಗೆ 16,750 ರು. ಖರ್ಚಾಗುತ್ತದೆ ಎಂದು ವರದಿ ನೀಡಿದ್ದರೂ ಪ್ರಸ್ತುತ ಸರ್ಕಾರ ನೀಡುತ್ತಿರುವ ಬೆಂಬಲ ಬೆಲೆ ಅದಕ್ಕಿಂತಲೂ ಕಡಿಮೆ ಇದೆ. ಕೊಬ್ಬರಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕೆಂಬುದು ಆಗ್ರಹವಾಗಿದೆ. ಕೂಡಲೇ ಕೊಬ್ಬರಿ ಖರೀದಿ ಕೇಂದ್ರ ತೆರೆದು, ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಆರಂಭಿಸಿದರೆ ರೈತರಿಗೆ ಹೆಚ್ಚಿನ ಆದಾಯ ಸಿಗಲಿದೆ ಎಂದರು.

ಶ್ರೀವಿಭವ ವಿದ್ಯಾ ದೇಶಿಕೇಂದ್ರ ಸ್ವಾಮೀಜಿ, ಇತ್ತೀಚಿನ ದಿನಗಳಲ್ಲಿ ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಯುವಜನರು ಅದರಿಂದ ವಿಮುಖರಾಗುತ್ತಿದ್ದಾರೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ರೈತರ ನೆರವಿಗೆ ಬರಬೇಕು. ಕೊಬ್ಬರಿ ಎಣ್ಣೆ ಮನುಷ್ಯನಿಗೆ ಅತ್ಯಂತ ಅವಶ್ಯಕ. ಎಲ್ಲರೂ ಕೊಬ್ಬರಿ ಬಳಸುವಂತೆ ಪ್ರೋತ್ಸಾಹಿಸಬೇಕು ಎಂದರು.

ಪಾದಯಾತ್ರೆಯಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ಕಾರ್ಯದರ್ಶಿ ಶ್ರೀಧರ್, ಪ್ರಾಂತ ಕಾರ್ಯದರ್ಶಿ ಸಂತೋಷ್, ಗಂಗಾಧರಸ್ವಾಮಿ, ಜಿಲ್ಲಾ ಕೋಶಾಧ್ಯಕ್ಷ ಮಹಾಲಿಂಗಪ್ಪ, ಜಿಲ್ಲಾ ಪ್ರಮುಖ ನವೀನ್ ಸದಾಶಿವಯ್ಯ, ಜಿಲ್ಲಾ ಉಪಾಧ್ಯಕ್ಷ ಡಾ.ಮೋಹನ್, ತಾಲೂಕು ಅಧ್ಯಕ್ಷರಾದ ಸಿದ್ದಲಿಂಗಪ್ಪ, ಶಿವನಂಜಪ್ಪ, ಆನಂದ್, ಹೇಮಣ್ಣ, ಚಂದ್ರಶೇಖರ್, ಜಗದೀಶ್, ಕುಮಾರ್, ಪ್ರವೀಣ್, ಮನೋಹರ್, ದಿನೇಶ್ ಪುಟ್ಟಸ್ವಾಮಿ, ನಾರಾಯಣಸ್ವಾಮಿ ಇದ್ದರು.

ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಲಿ

 ತಿಪಟೂರು: ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಕೇಂದ್ರ ಸರ್ಕಾರ ರು. 11750  ಬೆಂಬಲ ಬೆಲೆ ನೀಡಿದ್ದರೂ, ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ರು. 8 ಸಾವಿರಕ್ಕೆ ತೀವ್ರ ಕುಸಿತ ಕಂಡಿರುವುದರಿಂದ ಕೂಡಲೆ ಕೇಂದ್ರ ಸರ್ಕಾರ ನಫೆಡ್ ಖರೀದಿ ಕೇಂದ್ರ ತೆರೆಯುವ ಮೂಲಕ ಸಂಕಷ್ಟದಲ್ಲಿರುವ ರೈತರಿಂದ ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸಬೇಕೆಂದು ಕಾಂಗ್ರೆಸ್ ಸೇವಾ ದಳದ ರಾಜ್ಯ ಕಾರ್ಯದರ್ಶಿ ಮಾದೀಹಳ್ಳಿ ಉಮೇಶ್ ಒತ್ತಾಯಿಸಿದ್ದಾರೆ.

ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ, ಬೆಂಬಲ ಬೆಲೆಗಿಂತ ಕಡಿಮೆಯಾದ ತಕ್ಷಣ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನಫೆಡ್ ಮೂಲಕ ಖರೀದಿ ಕೇಂದ್ರ ತೆರೆದು ತಾನು ನೀಡಿರುವ ಬೆಂಬಲ ಬೆಲೆಗೆ ರೈತರಿಂದ ಕೊಬ್ಬರಿ ಖರೀದಿಸಬೇಕೆಂಬ ನಿಯಮವಿದೆ. ಆದರೆ, ಕಳೆದ ಒಂದು ವರ್ಷದಿಂದಲೂ ಕೊಬ್ಬರಿ ಬೆಲೆ ರು.೮೦೦೦ಕ್ಕೆ ತೀವ್ರ ಕುಸಿತ ಕಂಡು ಬೆಳೆಗಾರರು ಸಂಕಷ್ಟದಲ್ಲಿದ್ದರೂ ಬೆಂಬಲ ಬೆಲೆಗೆ ಕೊಬ್ಬರಿ ಖರೀದಿಸದಿರುವುದರಿಂದ ಬೆಳೆಗಾರರು ತೀವ್ರ ನಷ್ಟಕ್ಕೊಳಗಾಗಿದ್ದಾರೆ.

ಕೊಬ್ಬರಿ ಬೆಲೆ ತೀವ್ರ ಕುಸಿತ ಮನಗಂಡ ರಾಜ್ಯ ಸರ್ಕಾರ, ಕಳೆದ ವಿಧಾನಸಭಾ ಅಧಿವೇಶನದಲ್ಲಿ ನಫೆಡ್ ಮೂಲಕ ಬೆಂಬಲ ಬೆಲೆಗೆ ಕೊಬ್ಬರಿ ಮಾರುವ ರೈತರಿಗೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ೧೨೫೦ ರು. ಪ್ರೋತ್ಸಾಹ ಬೆಲೆ ನೀಡುವ ಘೋಷಣೆ ಮಾಡಿದೆಯಾದರೂ ನಫೆಡ್ ಖರೀದಿ ಕೇಂದ್ರಗಳು ಸಹ ಬಂದ್ ಆಗಿರುವುರಿಂದ ಕೊಬ್ಬರಿ ಬೆಳೆಗಾರರಿಗೆ ಈ ಪ್ರೋತ್ಸಾಹ ಬೆಲೆ ಸಿಗದೆ ತೀವ್ರ ಹತಾಶರಾಗಿದ್ದಾರೆ. ನಫೆಡ್ ಮೂಲಕ ರೈತರು ಕೊಬ್ಬರಿ ಮಾರಿದರೆ ಒಂದು ಕ್ವಿಂಟಾಲ್ ಕೊಬ್ಬರಿಗೆ ಬೆಂಬಲ ಬೆಲೆ ಹಾಗೂ ಪ್ರೋತ್ಸಾಹ ಬೆಲೆ ಎರಡೂ ಸೇರಿ ಒಟ್ಟು ಒಂದು ಕ್ವಿಂಟಾಲ್‌ಗೆ ರು. ೧೩ಸಾವಿರ ಬೆಲೆ ಸಿಗುತ್ತದೆ. ನಫೆಡ್ ಕೇಂದ್ರ ತೆರೆಯದ ಕಾರಣ ರೈತರು ಕೊಬ್ಬರಿಯನ್ನು ಕೇವಲ ರು. ೮ಸಾವಿರಕ್ಕೆ ಮಾರುವಂತಾಗಿದೆ. ಕೂಡಲೆ ರಾಜ್ಯದ ಸಂಸದರು ಕೊಬ್ಬರಿಯನ್ನು ಬೆಂಬಲ ಬೆಲೆಗೆ ಕೊಳ್ಳುವಂತೆ ಕೇಂದ್ರದ ಮೇಲೆ ಒತ್ತಡ ಹಾಕಿ ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ನೆರವಾಗಬೇಕೆಂದು ಮಾದೀಹಳ್ಳಿ ಉಮೇಶ್ ಒತ್ತಾಯಿಸಿದ್ದಾರೆ.

ರಾಜ್ಯಪಾಲರಿಗೆ ,ಮನವಿ

ತಿಪಟೂರು : ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಮತ್ತು ತೆಂಗು ಬೆಳೆಗಾರರ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ರಾಜ್ ಭವನ್ ಚಲೋ ಕಾರ್ಯಕ್ರಮದಲ್ಲಿ ತಿಪಟೂರಿನ ರೈತ ಮುಖಂಡರುಗಳು ಭಾಗವಹಿಸಿ ಕೇಂದ್ರ ಸರ್ಕಾರ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ 20 ಸಾವಿರ ರು. ಘೋಷಣೆ ಮಾಡಬೇಕು ಹಾಗೂ ರಾಜ್ಯ ಸರ್ಕಾರ 5 ಸಾವಿರ ರು. ಪ್ರೋತ್ಸಾಹ ಧನ ನೀಡಬೇಕೆಂದು ಒತ್ತಾಯಿಸಿ ರೈತರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು.

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಂಚಾಲಕ ಎಸ್.ಎನ್. ಸ್ವಾಮಿ ಮಾತನಾಡಿ, ದಿನದಿಂದ ದಿನಕ್ಕೆ ಕೊಬ್ಬರಿ ಬೆಲೆ ತೀವ್ರವಾಗಿ ಕುಸಿಯುತ್ತಿದೆ. ತೆಂಗು ಬೆಳೆಗಾರರು ಸಂಕಷ್ಟದಲ್ಲಿರುವ ಇಂದಿನ ಸಂದರ್ಭದಲ್ಲಿ ಅವರ ಸಮಸ್ಯೆಯನ್ನು ಮತ್ತು ಹಕ್ಕೊತ್ತಾಯಗಳನ್ನು ತಮ್ಮ ಗಮನಕ್ಕೆ ತರಲು ಸಂಯುಕ್ತ ಹೋರಾಟ ಕರ್ನಾಟಕ ಬಯಸುತ್ತದೆ ಎಂದರು.

Follow Us:
Download App:
  • android
  • ios