ಬಗರ್‌ಹುಕುಂ ಸಾಗುವಳಿ ಪತ್ರ ನೀಡುವಂತೆ ಆಗ್ರಹ
ಸರ್ಕಾರ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಂವಿಧಾನಕ್ಕೆ ವಿರುದ್ಧವಾಗಿ ಅರಣ್ಯ ಇಲಾಖೆ ಮೂಲಕ ನೋಟಿಸ್ ನೀಡಿ ಭೂಮಿಯಿಂದ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ತೀವ್ರ ಖಂಡನೀಯ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಹ ಕಾರ್ಯದರ್ಶಿ ಎನ್.ಎಲ್. ಭರತ್‌ರಾಜ್ ಆಕ್ರೋಶ ವ್ಯಕ್ತಪಡಿಸಿದರು.
ತಿಪಟೂರು : ಸರ್ಕಾರ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಂವಿಧಾನಕ್ಕೆ ವಿರುದ್ಧವಾಗಿ ಅರಣ್ಯ ಇಲಾಖೆ ಮೂಲಕ ನೋಟಿಸ್ ನೀಡಿ ಭೂಮಿಯಿಂದ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿರುವುದು ತೀವ್ರ ಖಂಡನೀಯ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಹ ಕಾರ್ಯದರ್ಶಿ ಎನ್.ಎಲ್. ಭರತ್‌ರಾಜ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸಿಂಗ್ರಿ ನಂಜಪ್ಪ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ೩೦-೪೦ ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ಎಲ್ಲಾ ರೈತರಿಗೆ ಸಾಗುವಳಿ ಪತ್ರ ನೀಡಬೇಕು. ಆದರೆ ರಾಜ್ಯ ಸರ್ಕಾರ ಸಂವಿಧಾನ ಬೋಧಿಸುತ್ತಾ ಬದುಕುವ ಹಕ್ಕಿನ ಭಾಗವನ್ನು ನಾಗರೀಕರಿಗೆ ಕೊಡದಿದ್ದರೆ ಸಂವಿಧಾನಕ್ಕೆ ಮಹತ್ವ ಬರುವುದಿಲ್ಲ. ಅರಣ್ಯ ಇಲಾಖೆ ರೈತರ ಬದುಕುವ ಹಕ್ಕನ್ನು ಉಲ್ಲಂಘನೆ ಮಾಡುತ್ತಿದೆ. ಆಹಾರ ಉತ್ಪಾದನೆ ಮಾಡುವುದು ಆದ್ಯತೆಯಾಗಬೇಕು. ಮೋದಿ ಸರ್ಕಾರ ಅಸ್ಸಾಂನಲ್ಲಿ ಪತಂಜಲಿ ಸಂಸ್ಥೆಗೆ, ಗೋದ್ರೇಜ್ ಕಂಪನಿಗೆ ತಾಳೆಬೆಳೆ ಬೆಳೆಯಲು ಒಂದು ಲಕ್ಷ ಹೆಕ್ಟೇರ್ ಭೂಮಿ ನೀಡಿದೆ. ಜಾಗತಿಕ ಬಂಡವಾಳ ಹೂಡಿಕೆದಾರರಿಗೆ ಐದು ಲಕ್ಷ ಎಕರೆ ಭೂಮಿಯನ್ನು ಭೂ ಬ್ಯಾಂಕ್ ಹೆಸರಿನಲ್ಲಿ ಮೀಸಲಿಟ್ಟು ಅವರಿಗೆ ಉಚಿತ ವಿದ್ಯುತ್, ನೀರು ನೀಡಲು ಮುಂದಾಗಿದೆ. ಆದರೆ ಬಡವರಿಗೆ ನಿವೇಶನಕ್ಕೆ ವ್ಯವಸಾಯ ಭೂಮಿ ಕೊಡದಿರುವ ಸರ್ಕಾರಗಳು ಕಂಪನಿ, ಕೃಷಿ ಹೆಸರಲ್ಲಿ ಅದಾನಿ, ಅಂಬಾನಿಗೆ ರೈತರ ಭೂಮಿಯನ್ನು ಧಾರೆ ಎರೆಯುತ್ತಿದೆ. ನೈಸ್ ರಸ್ತೆ, ವಿಮಾನ ನಿಲ್ದಾಣ, ಎಕ್ಸ್‌ಪ್ರೆಸ್ ಹೈವೆ ಹೆಸರಿನಲ್ಲಿ ರೈತರು ಭೂಮಿಯನ್ನು ಕಸಿದುಕೊಳ್ಳುತ್ತಿದ್ದು ಹೋರಾಟದಿಂದ ಮಾತ್ರವೇ ನಮ್ಮ ವಿಮೋಚನೆ ಸಾಧ್ಯವಾಗಿದ್ದು ಈ ನಿಟ್ಟಿನಲ್ಲಿ ರೈತರು ಜಾಗೃತರಾಗಬೇಕಿದೆ ಎಂದರು.
ರಾಜ್ಯ ರೈತ ಸಂಘದ ಜಯಾನಂದಯ್ಯ ಮಾತನಾಡಿ, ಸರ್ಕಾರ ಮಠ, ಮಾನ್ಯಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಸಾವಿರಾರು ಹೆಕ್ಟೇರ್ ಭೂಮಿಯನ್ನು ನೀಡುತ್ತಿದೆ. ಆದರೆ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡದೆ ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ ಎಂದರು.
ಸಮಾವೇಶದಲ್ಲಿ ರೈತ ಮುಖಂಡರುಗಳಾದ ಚನ್ನಬಸವಣ್ಣ, ಜಯಚಂದ್ರಶರ್ಮ, ಅಲ್ಲಾಭಕಾಶ್, ಸಿದ್ದಯ್ಯ, ಕೊಟ್ಟೂರಪ್ಪ, ಸಿದ್ದಬಸಪ್ಪ, ಗಂಗಮ್ಮ, ಎನ್.ಕೆ. ಸುಬ್ರಮಣ್ಯ, ಸಿ. ಅಜ್ಜಪ್ಪ, ಸುಧಾಕರ್, ರಾಜಮ್ಮ ಮತ್ತಿತರರಿದ್ದರು.